ಹಿಂದಿ ಸಿನಿಮಾರಂಗದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ ಬಪ್ಪಿ ಲಹಿರಿ (69 ವರ್ಷ) ಇಂದು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಗಲಿದ್ದಾರೆ. 70, 80, 90ರ ದಶಕಗಳ ಅವರ ಸಂಗೀತ ಸಂಯೋಜನೆ ಮತ್ತು ಗಾಯನದ ನೂರಾರು ಹಾಡುಗಳು ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಾಗಿವೆ.

ಡಿಸ್ಕೋ ಡ್ಯಾನ್ಸರ್‌, ಚಲ್ತೇ ಚಲ್ತೇ, ಶರಾಬಿ, ನಮಕ್‌ ಹಲಾಲ್‌, ಡ್ಯಾನ್ಸ್‌ ಡ್ಯಾನ್ಸ್‌, ಕಮ್ಯಾಂಡೋ ಹಿಂದಿ ಚಿತ್ರಗಳ ಡಿಸ್ಕೋ ಮ್ಯೂಸಿಕ್‌ನೊಂದಿಗೆ ಬಪ್ಪಿ ಲಹಿರಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದವರು. ಕಳೆದ ವರ್ಷ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಅಂದಿನಿಂದ ಅವರ ಆರೋಗ್ಯದಲ್ಲಿ ಆಗಿಂದಾಗ್ಗೆ ಏರುಪೇರಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ.

‘ಬಪ್ಪಿ ದಾ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಬಪ್ಪಿ ಲಹಿರಿ ಕೊಲ್ಕೊತ್ತಾ ಮೂಲದವರು. ಪೋಷಕರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದವರು. ಅವರ ತಂದೆ ಅಪರೇಶ್‌ ಲಹಿರಿ ಮತ್ತು ತಾಯಿ ಬನ್ಸಾರಿ ಲಹಿರಿ ಖ್ಯಾತ ಗಾಯಕರು. ಬಪ್ಪಿ ಲಹಿರಿ ಅವರಿಗೆ ಪೋಷಕರೇ ಮೊದಲ ಸಂಗೀತ ಗುರುಗಳು. ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಕಿಶೋರ್‌ ಕುಮಾರ್‌ ದೂರದ ಸಂಬಂಧಿ. ತಮ್ಮ 19ನೇ ವಯಸ್ಸಿನಲ್ಲೇ ಬಪ್ಪಿ ಸಂಗೀತ ನಿರ್ದೇಶಕರಾದರು. ಅವರು ಸಂಗೀತ ಸಂಯೋಜಿಸಿದ ಮೊದಲ ಸಿನಿಮಾ ‘ದಾದು’ (1972, ಬೆಂಗಾಲಿ). ‘ನನ್ಹಾ ಶಿಖಾರಿ’ (1973) ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸಿದ ಅವರಿಗೆ ತಾಹೀರ್‌ ಹುಸೇನ್‌ ನಿರ್ದೇಶನದ ‘ಝಕ್ಮೀ’ (1975) ಸಿನಿಮಾ ಜನಪ್ರಿಯತೆ ತಂದುಕೊಟ್ಟಿತು. ಈ ಚಿತ್ರದೊಂದಿಗೆ ಅವರು ಗಾಯಕರಾಗಿಯೂ ಗುರುತಿಸಿಕೊಂಡರು.

“ನನ್ನ ಸಿನಿಮಾ ಜರ್ನೀ ಬಗ್ಗೆ ನನಗೆ ಹೆಮ್ಮೆಯಿದೆ. ಉದ್ಯಮದಲ್ಲಿನ ಪ್ರತಿಭಾವಂತರೊಂದಿಗೆ ಕೆಲಸ ಮಾಡಿದ್ದೇನೆ. ಮೇರು ನಟ ದಿಲೀಪ್‌ ಕುಮಾರ್‌ (ಧರಂ ಅಧಿಕಾರಿ) ಅವರಿಂದ ಈಗಿನ ಹೀರೋ ರಣವೀರ್‌ ಸಿಂಗ್‌ (ಗುಂಡೇ) ಅವರಿಗೆ ಸಂಗೀತ ಸಂಯೋಜಿಸಿದ್ದೇನೆ” ಎಂದಿದ್ದರು ಬಪ್ಪಿ ಲಹಿರಿ. ಪ್ರಮುಖವಾಗಿ ಹಿಂದಿ ಸಿನಿಮಾಗಳು ಸೇರಿದಂತೆ ಬೆಂಗಾಲಿ, ತೆಲುಗು, ತಮಿಳು, ಕನ್ನಡ ಮತ್ತು ಗುಜರಾಗಿ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಶರಾಬಿ’ ಚಿತ್ರದ ಅತ್ಯುತ್ತಮ ಸಂಗೀತಕ್ಕೆ ಅವರಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಲಭಿಸಿದ್ದು, 2018ರಲ್ಲಿ ಜೀವಮಾನ ಸಾಧನೆಗೆ ಫಿಲ್ಮ್‌ಫೇರ್‌ ಗೌರವ ಸಂದಿದೆ.

ಕನ್ನಡ ಸಿನಿಮಾ | ‘ಆಫ್ರಿಕಾದಲ್ಲಿ ಶೀಲಾ’, ‘ಕೃಷ್ಣ ನೀ ಬೇಗನೆ ಬಾರೋ’, ‘ಪೊಲೀಸ್‌ ಮತ್ತು ದಾದಾ’ ಕನ್ನಡ ಚಿತ್ರಗಳಿಗೆ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದಾರೆ. ಅವರ ಸಂಗೀತದಲ್ಲಿನ ‘ಕೃಷ್ಣ ನೀ ಬೇಗನೆ ಬಾರೋ’ ಚಿತ್ರದ ಎಲ್ಲಾ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗಿವೆ. ಈ ಸಿನಿಮಾ ‘ತೇನೆ ಮನಸುಲು’ ಶೀರ್ಷಿಕೆಯಡಿ ತೆಲುಗಿನಲ್ಲೂ ತಯಾರಾಗಿದೆ. ಕನ್ನಡ ಮತ್ತು ತೆಲುಗು ಎರಡೂ ಅವತರಣಿಕೆಗೆ ಬಪ್ಪಿ ಅವರ ಒಂದೇ ಟ್ಯೂನ್‌ಗಳು ಬಳಕೆಯಾಗಿವೆ. ಕನ್ನಡದಲ್ಲಿ ಚಿ.ಉದಯಶಂಕರ್‌ ಗೀತೆಗಳನ್ನು ರಚಿಸಿದ್ದರು. “ಎರಡೂ ಭಾಷೆಗಳಲ್ಲಿ ಸಿನಿಮಾ ಆಗಿದ್ದರಿಂದ ಜನಪ್ರಿಯ ಸಂಗೀತ ನಿರ್ದೇಶಕರು ಬೇಕೆಂದು ‘ಕೃಷ್ಣ ನೀ ಬೇಗನೆ ಬಾರೊ’ ಚಿತ್ರದ ನಿರ್ಮಾಪಕ ರಾಜೇಂದ್ರ ಸಿಂಗ್‌ ಬಾಬು ಅವರು ಬಪ್ಪಿ ಲಹರಿ ಅವರಿಂದ ಸಂಗೀತ ಮಾಡಿಸಿದ್ದರು. ಬಪ್ಪಿ ಸಂಗೀತದಲ್ಲಿ ನಮ್ಮ ಸಿನಿಮಾ ಮ್ಯೂಸಿಕಲ್‌ ಹಿಟ್‌ ಎನಿಸಿಕೊಂಡಿತು. ಈ ಹೊತ್ತಿಗೂ ಚಿತ್ರದ ಹಾಡುಗಳನ್ನು ಆಲಿಸಲು ಜನರು ಇಷ್ಟಪಡುತ್ತಾರೆ” ಎನ್ನುತ್ತಾರೆ ‘ಕೃಷ್ಣ ನೀ ಬೇಗನೆ ಬಾರೊ’ ಚಿತ್ರದ ನಿರ್ದೇಶಕ ಭಾರ್ಗವ.

Previous articleBIFFES 2022 – ಮಾರ್ಚ್‌ 3ರಿಂದ – 10ರವರೆಗೆ; 55 ರಾಷ್ಟ್ರಗಳ 200 ಸಿನಿಮಾಗಳ ಪ್ರದರ್ಶನ
Next articleಗಾಯಕ, ನಟ ಕಿಶೋರ್‌ ಕುಮಾರ್‌ ಜೊತೆ ನಟಿಸಿದ್ದರು ಬಪ್ಪಿ ಲಹರಿ

LEAVE A REPLY

Connect with

Please enter your comment!
Please enter your name here