13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾರ್ಚ್‌ 3ರಿಂದ 10ರವರೆಗೆ ನಡೆಯಲಿದೆ. ಐವತ್ತೈದು ರಾಷ್ಟ್ರಗಳ ಇನ್ನೂರು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ ಬೆಂಗಳೂರು ಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆಯ ಗೌರವದೊಂದಿಗೆ ನಡೆಯುತ್ತಿರುವುದು ವಿಶೇಷ.

ಕೋವಿಡ್‌ ಆತಂಕದಿಂದ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಂದೂಡಲ್ಪಟ್ಟಿತ್ತು. ಇದೀಗ ದಿನಾಂಕ ನಿಗಧಿಯಾಗಿದ್ದು ಮಾರ್ಚ್‌ 3ರಿಂದ 10ರವರೆಗೆ ಚಿತ್ರೋತ್ಸವ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರು ಚಿತ್ರೋತ್ಸವ ಕುರಿತಂತೆ ಇಂದು ಮಾಹಿತಿ ನೀಡಿದರು. “ಕೋವಿಡ್‌ನಿಂದ ಚಿತ್ರೋತ್ಸವ ಪೋಸ್ಟ್‌ಪೋನ್‌ ಆದಾಗಲೂ ನಮಗೆ ಒಮಿಕ್ರಾನ್‌ ಆತಂಕ ಇದ್ದೇ ಇತ್ತು. ಅದೃಷ್ಟಾವತಾಶ್‌ ಸೋಂಕು ಕಡಿಮೆಯಾಗಿ ಆತಂಕ ದೂರಾಗಿದೆ. ಚಿತ್ರೋತ್ಸವ ತಯಾರಿಗೆ ಸಿಕ್ಕ ಕಡಿಮೆ ಅವಧಿಯಲ್ಲೇ ಸಾಧ್ಯವಾದಷ್ಟು ಕೆಲಸ ಮಾಡಿ ಚಿತ್ರೋತ್ಸವಕ್ಕೆ ಸಜ್ಜಾಗಿದ್ದೇವೆ” ಎಂದರು ಸುನೀಲ್‌ ಪುರಾಣಿಕ್‌.

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಅಂತಾರಾಷ್ಟ್ರೀಯ ಮಾನ್ಯತೆಯೊಂದಿಗೆ ನಡೆಯುತ್ತಿರುವುದು ವಿಶೇಷ. ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ಫಿಲ್ಮ್‌ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ನ ನುರಿತ ಚಿತ್ರತಯಾರಕರ ಶಿಫಾರಸಿನ ಮೇರೆಗೆ BIFFES ಗೆ ಈ ಗೌರವ ಲಭಿಸಿದೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ 46ನೇ ಚಿತ್ರೋತ್ಸವ ಎನ್ನುವ ಹೆಗ್ಗಳಿಕೆಗೆ BIFFES ಪಾತ್ರವಾಗಿದೆ. ಇನ್ನು ಈ ಬಾರಿಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಎಚ್‌.ಎನ್‌.ನರಹರಿರಾವ್‌, ಸಂಯೋಜಕರಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಪಿ.ಶೇಷಾದ್ರಿ ಇದ್ದಾರೆ. ಸಲಹಾ ಸಮಿತಿಯಲ್ಲಿ ಹಿರಿಯ ಚಿತ್ರನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ರಾಜೇಂದ್ರಸಿಂಗ್‌ ಬಾಬು ಮತ್ತು ನಾಗಾಭರಣ ಹಾಗೂ ರಂಗಕರ್ಮಿ – ನಟ ಪ್ರಕಾಶ್‌ ಬೆಳವಾಡಿ, ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಇದ್ದಾರೆ.
ಈ ಬಾರಿಯ ಚಿತ್ರೋತ್ಸವದ ಹೈಲೈಟ್‌ ಈ ಕೆಳಕಂಡಂತಿವೆ.

 • ಮಾರ್ಚ್‌ 3ರಂದು GKVKಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರೋತ್ಸವ ಉದ್ಘಾಟಿಸುವರು.
 • ಮಾರ್ಚ್‌ 4ರಿಂದ 10ರವರೆಗೆ ರಾಜಾಜಿನಗರದ ಒರಾಯಿನ್‌ ಮಾಲ್‌ನಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಚಾಮರಾಜಪೇಟೆಯ ಕಲಾವಿದರ ಸಂಘದ ಆಡಿಟೋರಿಯಂ ಮತ್ತು ಸುಚಿತ್ರಾದಲ್ಲಿ ಆಯ್ದ ಕೆಲವು ಸಿನಿಮಾಗಳ ಪ್ರದರ್ಶನ
 • 55 ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ದಿನವೊಂದರಲ್ಲಿ 4 – 5 ಸಿನಿಮಾಗಳ ಪ್ರದರ್ಶನ
 • ಪ್ರತೀ ವರ್ಷದಂತೆ ಈ ಬಾರಿಯೂ ಏಷ್ಯಾ, ಭಾರತ ಮತ್ತು ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗಗಳಿರುತ್ತವೆ. ಕನ್ನಡ ಜನಪ್ರಿಯ – ಮನರಂಜನಾ ವಿಭಾಗ ಮತ್ತು ಸಮಕಾಲೀನ ವಿಶ್ವ ಸಿನಿಮಾ ವಿಭಾಗದಡಿ ಆಯ್ದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
 • ಕಂಟ್ರೀ ಫೋಕಸ್‌ – ಫ್ರಾನ್ಸ್‌ ಜೊತೆಗೆ ಮಾತುಕತೆ ನಡೆದಿದೆ. ಸ್ಟೇಟ್‌ ಫೋಕಸ್‌ – ಈಶಾನ್ಯ ರಾಜ್ಯಗಳ ಸಿನಿಮಾಗಳು.
 • ಸ್ವಾಂತಂತ್ರ್ಯದ 75ನೇ ವರ್ಷದ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಐದು ಸಿನಿಮಾಗಳ ಪ್ರದರ್ಶನ
 • ಸಿಂಹಾವಲೋಕನ (ರೆಟ್ರೋಸ್ಪೆಕ್ಟೀವ್‌) – ಪದ್ಮಶ್ರೀ ಪುರಸ್ಕೃತ ಪಂಚಭಾಷಾ ನಟಿ ಭಾರತಿ ವಿಷ್ಣವರ್ಧನ್‌
 • ತುಳು ಸಿನಿಮಾರಂಗಕ್ಕೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಳು ಸಿನಿಮಾ ಸಂಭ್ರಮಾಚರಣೆ
 • ಪುನೀತ್‌ ರಾಜಕುಮಾರ್‌, ಸಂಚಾರಿ ವಿಜಯ್‌ ಸೇರಿದಂತೆ ಅಗಲಿದ ಕಲಾವಿದರ ಸಿನಿಮಾಗಳ ಪ್ರದರ್ಶನ – ಸ್ಮರಣೆ.
 • ಮೇರು ಹಿಂದೂಸ್ತಾನಿ ಗಾಯಕ ಭೀಮಸೇನ್‌ ಜೋಷಿ, ಮೇರು ಚಿತ್ರನಿರ್ದೇಶಕ ಸತ್ಯಜಿತ್‌ ರೇ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ
 • ಸಿನಿಮಾ ತಯಾರಿಕೆ, ಚಿತ್ರಕಥೆ ರಚನೆ, ಸಂಗೀತ ಮತ್ತಿತರೆ ವಿಭಾಗಗಳ ಕುರಿತಾಗಿ ಮಾಸ್ಟರ್‌ ಕ್ಲಾಸ್‌ಗಳು
 • ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಮಾರೋಪ ಸಮಾರಂಭ

LEAVE A REPLY

Connect with

Please enter your comment!
Please enter your name here