2021ರಲ್ಲಿ ದಕ್ಷಿಣ ಭಾರತದ ಹಲವಾರು ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆಗಿವೆ. ಮತ್ತೆ ಕೆಲವು ಥಿಯೇಟರ್‌ನಲ್ಲಿ ತೆರೆಕಂಡು ನಂತರ ಓಟಿಟಿಗೆ ಬಂದಿವೆ. ಇವುಗಳ ಪೈಕಿ ನೋಡಲೇಬೇಕಾದ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಹತ್ತು ಸಿನಿಮಾಗಳಿವು.

ಭಾರತದ ಸಿನಿಮಾ ಸಂದರ್ಭದಲ್ಲಿ 2021ರಲ್ಲಿ ಹೆಚ್ಚು ಗಮನ ಸೆಳೆದದ್ದು ದಕ್ಷಿಣ ಭಾರತದ ಸಿನಿಮಾಗಳು ಎನ್ನುವುದು ವಿಶೇಷ. ಹಿಂದಿಯಲ್ಲೂ ಉತ್ತಮ ಚಿತ್ರಗಳು ತಯಾರಾಗಿವೆಯಾದರೂ ಗುಣಮಟ್ಟ ಮತ್ತು ಪ್ರಯೋಗದ ದೃಷ್ಟಿಯಿಂದ ದಕ್ಷಿಣದ್ದೇ ಮೇಲುಗೈ. ಕೋವಿಡ್‌ ಸಂಕಷ್ಟದಿಂದಾಗಿ ಇಲ್ಲಿನ ಬಹಳಷ್ಟು ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆದವು. ಈ ಬಾರಿ ಓಟಿಟಿಯನ್ನು ಫಾಲೋ ಮಾಡುವ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವಸ್ತು, ಪ್ರಯೋಗ, ಭಿನ್ನ ಕಥಾವಸ್ತುವಿನ ದೃಷ್ಟಿಯಿಂದ ಸಾಕಷ್ಟು ಸಿನಿಮಾಗಳನ್ನು ಹೆಸರಿಸಬಹುದು. ಈ ಪಟ್ಟಿಯಲ್ಲಿ ಆಯ್ದ ಹತ್ತು ಚಿತ್ರಗಳನ್ನು ಇಲ್ಲಿ ಗುರುತಿಸಲಾಗಿದೆ.

ಜೈಭೀಮ್‌ (ತಮಿಳು) : ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಖ್ಯಾತ ನಟ ಸೂರ್ಯ ನಿರ್ಮಿಸಿ, ನಟಿಸಿದ ಚಿತ್ರವನ್ನು ಟಿ.ಜೆ.ಜ್ಞಾನವೇಲ್‌ ನಿರ್ದೇಶಿಸಿದ್ದರು. ಚಿಕ್ಕ ಆರೋಪದ ಹಿನ್ನೆಲೆಯಲ್ಲಿ ಬುಡಕಟ್ಟು ಕುಟುಂಬದ ವ್ಯಕ್ತಿಯನ್ನು ಬಂಧಿಸುವ ವ್ಯವಸ್ಥೆ, ಪತಿಯನ್ನು ಬಿಡುಗಡೆಗೊಳಿಸಲು ಹೋರಾಟ ನಡೆಸುವ ಆತನ ಪತ್ನಿಯ ಕತೆ. ಮೂಲ ತಮಿಳು ಭಾಷೆಯಲ್ಲಿ ತಯಾರಾದ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್‌ ಆಗಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗೆ ವೀಕ್ಷಕರು ಹಾಗೂ ವಿಶ್ಲೇಷಕರಿಂದ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಯ್ತು.
ನಿರ್ದೇಶಕ : ಟಿ.ಜೆ.ಜ್ಞಾನವೇಲ್‌ | ಕಲಾವಿದರು : ಸೂರ್ಯ, ಲಿಜಿ ಮೋಲ್‌ ಜೋಸ್‌, ಮಣಿಕಂಠನ್‌ | ಪ್ಲಾಟ್‌ಫಾರ್ಮ್‌ : ಅಮೇಜಾನ್‌ ಪ್ರೈಂ ವೀಡಿಯೋ

ಪುಕ್ಸಟ್ಟೆ ಲೈಫು (ಕನ್ನಡ) : ಥಿಯೇಟರ್‌ನಲ್ಲಿ ತೆರೆಕಂಡಾಗ ಸಿನಿಮಾಗೆ ನಿರೀಕ್ಷಿಸಿದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರಚಾರದ ಕೊರತೆ ಮತ್ತು ಒಮ್ಮೆಗೇ ಹೆಚ್ಚು ಸಿನಿಮಾಗಳು ಥಿಯೇಟರ್‌ಗೆ ಬಂದಿದ್ದರಿಂದ ಈ ಚಿತ್ರಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿರಲಿಲ್ಲ. ಓಟಿಟಿಯಲ್ಲಿ ಸ್ಟ್ರೀಮ್‌ ಆದಾಗ ದೊಡ್ಡ ಸಂಖ್ಯೆಯಲ್ಲಿ ಜನರು ವೀಕ್ಷಿಸಿದರು. ಬೆಂಗಳೂರು ಮಹಾನಗರದ ಗಲ್ಲಿಯೊಂದರಲ್ಲಿ ವಾಸಿಸುವ ಬೀಗ ರಿಪೇರಿಯವನ ಬದುಕಿನ ಕತೆಯಿದು. ದುಷ್ಟ ಪೊಲೀಸರ ಕೈಗೆ ಸಿಲುಕಿಕೊಂಡ ನಂತರ ಅವನ ಬದುಕಿನಲ್ಲಾಗುವ ಪಲ್ಲಟಗಳು ಚಿತ್ರದ ವಸ್ತು. ನಿರ್ದೇಶಕ : ಅರವಿಂದ ಕುಪ್ಳೀಕರ್‌ | ಕಲಾವಿದರು : ಸಂಚಾರಿ ವಿಜಯ್‌, ಅಚ್ಯುತ್‌ ಕುಮಾರ್‌ | ಪ್ಲಾಟ್‌ಫಾರ್ಮ್‌ : ZEE5

ನಾಯಟ್ಟು (ಮಲಯಾಳಂ) : ಮೂವರು ಪೊಲೀಸ್‌ ಅಧಿಕಾರಿಗಳ ಸುತ್ತ ಹೆಣೆದ ಕತೆ. ರಾಜಕೀಯ ಕಾರಣಕ್ಕಾಗಿ ತಮ್ಮ ಮೇಲಧಿಕಾರಿಗಳ ಚಿತಾವಣೆಗೆ ದಾಳಗಳಾಗಬೇಕಾದ ಪರಿಸ್ಥಿತಿ ಅವರದು. ಭ್ರಷ್ಟ ಮತ್ತು ಪ್ರಾಮಾಣಿಕ ಎರಡೂ ರೀತಿಯ ಅಧಿಕಾರಿಗಳ ಬಗ್ಗೆ ಬೆಳಕು ಚೆಲ್ಲುವ ಥ್ರಿಲ್ಲರ್‌. ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಸ್ಪಷ್ಟವಾಗಿ ಬಿಡಿಸಿಡುವಲ್ಲಿ, ಪ್ರಾಮಾಣಿಕ ಅಧಿಕಾರಿಗಳು ತಮ್ಮದಲ್ಲದ ತಪ್ಪುಗಳಿಗೆ ಎದುರಿಸಬೇಕಾದ ಸಮಸ್ಯೆಗಳನ್ನು ನಿರ್ದೇಶಕರು ಪ್ರಭಾವಶಾಲಿಯಾಗಿ ನಿರೂಪಿಸಿದ್ದಾರೆ. ನಿರ್ದೇಶಕ : ಮಾರ್ಟಿನ್‌ ಪ್ರಕ್ಕಟ್‌ | ಕಲಾವಿದರು : ಕುಂಚಕೊ ಬೊಬಾನ್‌, ಜೋಜು ಜಾರ್ಜ್‌, ನಿಮಿಷಾ ಸಜಯನ್‌ | ಪ್ಲಾಟ್‌ಫಾರ್ಮ್‌ : ನೆಟ್‌ಫ್ಲಿಕ್ಸ್‌

ಸಿನಿಮಾ ಬಂಡಿ (ತೆಲುಗು) : ಡ್ರೈವರ್‌ಗೆ ತನ್ನ ಆಟೋರಿಕ್ಷಾದಲ್ಲಿ ದುಬಾರಿ ಕ್ಯಾಮೆರಾ ಸಿಗುತ್ತದೆ. ಅವನಿಗೆ ತನ್ನ ಹಳ್ಳಿಯ ಕುರಿತ ಒಂದು ಸಿನಿಮಾ ಮಾಡುವ ಆಸೆ ಮೂಡುತ್ತದೆ. ಈ ಮೂಲಕ ಬರಪೀಡಿತ ಗ್ರಾಮ, ಅಲ್ಲಿನ ಇನ್ನಿತರೆ ಸಮಸ್ಯೆಗಳನ್ನು ಹೊರಜಗತ್ತಿಗೆ ತಿಳಿಸುವುದು ಅವನ ಉದ್ದೇಶ. ಈ ವಿಶಿಷ್ಟ ಕಾನ್ಸೆಪ್ಟ್‌ ಚಿತ್ರವನ್ನು ಭಿನ್ನವಾಗಿಸಿದೆ. ತೆಲುಗು ಚಿತ್ರರಂಗದಲ್ಲಿ ಹೊಸದೊಂದು ಅಲೆ ಎಬ್ಬಿಸಿದ ತಣ್ಣನೆಯ ಪ್ರಯೋಗವಿದು. ನಿರ್ದೇಶಕ : ಪ್ರವೀಣ್‌ ಕಂಡ್ರೆಗುಲ | ಕಲಾವಿದರು : ವಿಕಾಸ್‌ ವಸಿಷ್ಠ, ಸಂದೀಪ್‌ ವಾರಣಾಸಿ, ರಾಗ್‌ ಮಯೂರ್‌ | ಪ್ಲಾಟ್‌ಫಾರ್ಮ್‌ : ನೆಟ್‌ಫ್ಲಿಕ್ಸ್‌

ಆರಕ್ಕಾರಿಯಂ (ಮಲಯಾಳಂ) : ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಯುವ ದಂಪತಿ ಗ್ರಾಮಕ್ಕೆ ಬರುತ್ತಾರೆ. ಆಕೆಯ ತಂದೆ ನಿವೃತ್ತ ಶಿಕ್ಷಕ. ಪುತ್ರಿ ತಾನು ತಿಳಿದುಕೊಂಡಂತೆ ತವರಿನ ಮನೆಯ ಪರಿಸ್ತಿತಿ ಇರುವುದಿಲ್ಲ. ಬದುಕಿನ ವಾಸ್ತವಗಳು ಒಂದೊಂದಾಗಿ ಅವರಿಗೆ ಮನವರಿಕೆಯಾಗುತ್ತಾ ಹೋಗುತ್ತವೆ. ಮಾವ – ಅಳಿಯನ ಆಪ್ತ ಸಂಬಂಧದ ಮೂಲಕ ಚಿತ್ರವನ್ನು ಕಟ್ಟುತ್ತಾ ಹೋಗುತ್ತಾರೆ ನಿರ್ದೇಶಕರು. ನಿರ್ದೇಶಕ : ಸನು ಜಾನ್‌ ವರ್ಗೀಸ್‌ | ಕಲಾವಿದರು : ಬಿಜು ಮೆನನ್‌, ಪಾರ್ವತಿ, ಷರಾಫುದ್ದೀನ್‌ | ಪ್ಲಾಟ್‌ಫಾರ್ಮ್‌ : ಅಮೇಜಾನ್‌ ಪ್ರೈಂ ವೀಡಿಯೋ

ಯುವರತ್ನ (ಕನ್ನಡ) : ಶಿಕ್ಷಣ ಖಾಸಗೀಕರಣದ ಸುತ್ತ ಹೆಣೆದ ಕತೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ರಾಜಕಾರಣಿಗಳು, ಶಿಕ್ಷಣ ವ್ಯವಸ್ಥೆಯಲ್ಲಿನ ನೇರ ರಾಜಕೀಯ ಸಂಬಂಧಗಳನ್ನು ಬಿಡಿಸಿಡುವ ಕಥಾವಸ್ತು. ನಾಯಕನಟ ಪುನೀತ್‌ ರಾಜಕುಮಾರ್‌ ಸ್ಕ್ರೀನ್‌ ಪ್ರಸೆನ್ಸ್‌ ಚಿತ್ರದ ಪ್ರಮುಖ ಆಕರ್ಷಣೆ. ಅವರ ಅಕಾಲಿಕವಾಗಿ ಅಗಲಿದ ನಂತರ ಅವರ ನೆನಪಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿದರು. ನಿರ್ದೇಶಕ : ಸಂತೋಷ್‌ ಆನಂದರಾಮ್‌ | ಕಲಾವಿದರು : ಪುನೀತ್‌ ರಾಜಕುಮಾರ್‌, ಸಯೇಶಾ ಸೈಗಲ್‌, ಪ್ರಕಾಶ್‌ ರೈ | ಪ್ಲಾಟ್‌ಫಾರ್ಮ್‌ : ಅಮೇಜಾನ್‌ ಪ್ರೈಂ ವೀಡಿಯೊ

ಮಂಡೇಲಾ (ತಮಿಳು) : ಹಳ್ಳಿಯ ಸಾಮಾನ್ಯ ಮನುಷ್ಯನೊಬ್ಬನ ಕತೆ. ತನಗೊಂದು ಅಸ್ತಿತ್ವವೇ ಇಲ್ಲದ ಆ ವ್ಯಕ್ತಿ ಹೊಟ್ಟೆಪಾಡಿಗೆ ಬೇರೆ ಬೇರೆ ಕೆಲಸಗಳನ್ನು ಮಾಡುವವ. ಕ್ಷೌರಿಕನೂ ಹೌದು. ಚುನಾವಣೆ ಸಂದರ್ಭದಲ್ಲಿ ಆತನ ವೋಟರ್‌ ಐಡಿಗೆ ಸಂಬಂಧಿಸಿದಂತೆ ನಡೆಯುವ ಡ್ರಾಮಾ ಚಿತ್ರದ ಕಥಾವಸ್ತು. ವಿಡಂಬನೆ, ತೆಳು ಹಾಸ್ಯದ ಸಿನಿಮಾ ಈ ಸಾಮಾನ್ಯ ವ್ಯಕ್ತಿಯ ರೂಪದಲ್ಲಿ ಚುನಾವಣೆ ವ್ಯವಸ್ಥೆಯನ್ನು ಅಣಕವಾಡುತ್ತದೆ. ನಿರ್ದೇಶನ: ಮಡೋನ್‌ ಅಶ್ವಿನ್‌ | ಕಲಾವಿದರು : ಯೋಗಿ ಬಾಬು, ಶೀಲಾ ರಾಜಕುಮಾರ್‌, ಸಂಗಿಲಿ ಮುರುಘನ್‌ | ಪ್ಲಾಟ್‌ಫಾರ್ಮ್‌ : ನೆಟ್‌ಫ್ಲಿಕ್ಸ್‌

ಪುಷ್ಪಕ ವಿಮಾನಂ (ತೆಲುಗು) : ಸರ್ಕಾರಿ ಶಾಲೆ ಶಿಕ್ಷಕನೊಬ್ಬನ ದಾಂಪತ್ಯ ಬದುಕಿನ ಕತೆ. ಆತ ದೊಡ್ಡ ಮಹತ್ವಾಕಾಂಕ್ಷಿ. ಆದರೆ ಮದುವೆಯಾದ ಪತ್ನಿಯಲ್ಲಿ ದೌರ್ಬಲ್ಯಗಳಿವೆ. ಇವುಗಳನ್ನು ಮುಚ್ಚಿಟ್ಟುಕೊಳ್ಳುವ ಹಾದಿಯಲ್ಲಿನ ಎಡವಟ್ಟುಗಳ ಕಾಮಿಡಿ – ಥ್ರಿಲ್ಲರ್‌ ಇದು. ತೀರಾ ವಿಶೇಷ ಚಿತ್ರವಲ್ಲದಿದ್ದರೂ ತಾಜಾತನದಿಂದಾಗಿ ಗಮನಸೆಳೆಯ ಪ್ರಯೋಗ. ನಿರ್ದೇಶಕ : ದಾಮೋದರ | ಕಲಾವಿದರು : ಆನಂದ್‌ ದೇವರಕೊಂಡ, ಗೀತ್‌ ಸೈನಿ, ಸಾನ್ವಿ ಮೆಗ್ಗಾನ್‌ | ಪ್ಲಾಟ್‌ಫಾರ್ಮ್‌ : ಆಹಾ ವೀಡಿಯೊ

ದಿ ಗ್ರೇಟ್‌ ಇಂಡಿಯನ್‌ ಕಿಚನ್‌ (ಮಲಯಾಳಂ) : ಅಡುಗೆ ಕೋಣೆಯ ಉಪಮೆಯೊಂದಿಗೆ ಗೃಹಿಣಿಯರ ಕಷ್ಟ-ಸುಖ, ನೋವು-ನಲಿವುಗಳನ್ನು ದಾಟಿಸಿದ ಅಪರೂಪದ ಪ್ರಯತ್ನ. ಪತ್ನಿಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಿ ನಡೆಸುವ ಮಾತುಕತೆ, ಇದರಿಂದ ಆಕೆಗಾಗುವ ಮಾನಸಿಕ ವೇದನೆ, ಮುಂದೆ ಕುಟುಂಬದ ಮೇಲಾಗುವ ಪರಿಣಾಮಗಳ ಚಿತ್ರಣ ಇಲ್ಲಿದೆ. ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಸಿನಿಮಾ. ನಿರ್ದೇಶನ : ಜೋ ಬೇಬಿ | ಕಲಾವಿದರು : ಸೂರಜ್‌, ನಿಮಿಷಾ ಸಜಯನ್‌ | ಪ್ಲಾಟ್‌ಫಾರ್ಮ್‌ : ಅಮೇಜಾನ್‌ ಪ್ರೈಂ ವೀಡಿಯೋ

ಕರ್ಣನ್‌ (ತಮಿಳು) : ದಕ್ಷಿಣ ತಮಿಳು ನಾಡಿನ ಕುಗ್ರಾಮವೊಂದರ ಉದಾಹರಣೆಯೊಂದಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತಿ ವ್ಯವಸ್ಥೆಯನ್ನು ಅಣಕ ಮಾಡುವ, ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಜನರು, ಈ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವ ದಿಟ್ಟ ಕತೆ. ತಮಿ ಳು ಚಿತ್ರರಂಗದ ಪ್ರಮುಖ ಪ್ರಯೋಗವಾಗಿ ಗಮನ ಸೆಳೆದ ಪ್ರಯೋಗ. ನಿರ್ದೇಶನ : ಮಾರಿ ಸೆಲ್ವರಾಜ್‌ | ಕಲಾವಿದರು : ಧನುಷ್‌, ಲಾಲ್‌, ರಿಜಿಷಾ ವಿಜಯನ್‌ | ಪ್ಲಾಟ್‌ಫಾರ್ಮ್‌ : ಅಮೆಜಾನ್‌ ಪ್ರೈಂ ವೀಡಿಯೋ

ನೋಡಬೇಕಾದ 2021ರ ಮತ್ತಷ್ಟು OTT ಸಿನಿಮಾಗಳು : ಸರ್ಪಟ್ಟ ಪರಾಂಬರೈ (ತಮಿಳು, ಅಮೇಜಾನ್‌ ಪ್ರೈಂ ವೀಡಿಯೋ), ಜೋಜಿ (ಮಲಯಾಳಂ, ಅಮೇಜಾನ್‌ ಪ್ರೈಂ ವೀಡಿಯೋ), ರತ್ನನ್‌ ಪ್ರಪಂಚ (ಕನ್ನಡ, ಅಮೇಜಾನ್‌ ಪ್ರೈಂ ವೀಡಿಯೋ), ಕಾಲ (ಮಲಯಾಳಂ, ಅಮೇಜಾನ್‌ ಪ್ರೈಂ ವೀಡಿಯೋ), ಜಾತಿ ರತ್ನಾಲು (ತೆಲುಗು, ಅಮೇಜಾನ್‌ ಪ್ರೈಂ ವೀಡಿಯೋ), ಆಪರೇಷನ್‌ ಜಾವಾ (ಮಲಯಾಳಂ, ಜೀ5)

LEAVE A REPLY

Connect with

Please enter your comment!
Please enter your name here