ಪ್ರಸ್ತುತ ಪ್ರಸಾರವಾಗುತ್ತಿರುವ ಪತ್ತೇದಾರಿ ಕತೆಗಳ ವೆಬ್ ಸರಣಿಗಳ ಪೈಕಿ ‘ಗೋರಾ’ ಭಿನ್ನವಾಗಿ ನಿಲ್ಲುತ್ತದೆ. ಪತ್ತೇದಾರ ಗೌರವ್ ಸೇನ್ ಯಾನೆ ಗೋರಾ ನಮ್ಮ ಎನ್. ನರಸಿಂಹಯ್ಯನವರ ಪತ್ತೇದಾರಿ ಪುರುಷೋತ್ತಮನ ನೆನಪು ತರುತ್ತಾನೆ. ವೇಗದ ಓದಿನ ಕಾದಂಬರಿಯ ಗುಣವಿರುವ ಈ ಸರಣಿ Hoichoiನಲ್ಲಿ ಸ್ಟ್ರೀಮ್ ಆಗುತ್ತಿದೆ.

ಆತ ಬರಹಗಾರ. ಮೇಜಿನ ಮೇಲೆ ಒಂದಷ್ಟು ಪುಸ್ತಕಗಳಿವೆ. ಎದುರಿಗೆ ಲ್ಯಾಪ್‌ಟಾಪ್‌ ಇಟ್ಟು ಬರೆಯುತ್ತಿರುವವನ ಕಣ್ಣು ತೂಗುತ್ತಿದೆ. ಕಾರಣ ಲ್ಯಾಪ್‌ಟಾಪಲ್ಲ. ಪಕ್ಕದಲ್ಲಿ ಇರುವ ವಿಸ್ಕಿ‌ ಗ್ಲಾಸು. ಅದು ಅವನ ಪ್ರತಿಕ್ರಿಯಾತ್ಮಕ ಶಕ್ತಿಯನ್ನು ಸಾಕಷ್ಟು ಕುಗ್ಗಿಸಿದೆ. ಇದಕ್ಕಿದ್ದಂತೆ ಪಕ್ಕದಲ್ಲಿರುವ ಗ್ಲಾಸಿನ ವಿಸ್ಕಿಯೊಳಗೆ ಒಂದೊಂದೆ ಕಲ್ಲು ಬಿದ್ದ ಸದ್ದು. ತಿರುಗಿ ನೋಡಿದರೆ ಅವು ಕಲ್ಲುಗಳಲ್ಲ, ಆತನ ಪೆನ್ನಿನ ನಿಬ್. ಮೂರು-ನಾಲ್ಕು ನಿಬ್ಬುಗಳು ತಳ ಸೇರಿದ ಮೇಲೆ ಬೀಳುವ ಒಂದೊಂದೇ‌ ಹಿನಿ ಶಾಯಿ‌ ವಿಸ್ಕಿಯ ಬಣ್ಣವನ್ನು ನಿಧಾನವಾಗಿ ಬದಲಾಯಿಸುತ್ತದೆ. ಮತ್ತಿನಲ್ಲಿ ತಿರುಗಿ ನೋಡುವ ಆತ ಅಲ್ಲೇ ಸ್ತಬ್ಧ. ಮರುದಿನ ನೋಡುವಾಗ ಕುರ್ಚಿಯ ಪಕ್ಕದಲ್ಲೇ ಆತನ ಹೆಣ. ಅವನ ಅಷ್ಟೂ ಹಲ್ಲುಗಳನ್ನು ಉದುರಿಸಿ ಆ ಜಾಗದಲ್ಲಿ ಪೆನ್ನಿನ ನಿಬ್ಬುಗಳನ್ನು ತುರುಕಲಾಗಿದೆ. ಇಂಥದ್ದೊಂದು ಆರಂಭಿಕ ದೃಶ್ಯದಿಂದ ಶುರುವಾಗುವ ಬಂಗಾಳಿ ವೆಬ್ ಸರಣಿ ‘ಗೋರಾ’ ಒಂದು ಡಿಟೆಕ್ಟಿವ್ ಥ್ರಿಲ್ಲರ್ ಎಂದು ಬೇರೆ ಹೇಳಬೇಕಿಲ್ಲ.

ಮರ್ಡರ್, ಡಿಟೆಕ್ಟಿವ್ ಥ್ರಿಲ್ಲರ್‌ನಂಥ ಕತೆಗಳಿಗೆ ಈಗ ಯಾವುದೇ ಬರವಿಲ್ಲ. ಆದರೆ ಅವುಗಳ ನಡುವೆ ‘ಗೋರಾ’ ಭಿನ್ನವಾಗಿ ನಿಲ್ಲುತ್ತದೆ. ಅಗಾಥಾ ಕ್ರಿಸ್ತಿಯ ಪೈರೋ, ಕಾನನ್ ದಾಯಲ್‌ನ ಶೆರ್ಲಾಕ್ ಹೋಮ್ಸ್‌ನಂತೆ ಇದು ಕೊಲೆಗಿಂತ ಹೆಚ್ಚು ಪತ್ತೇದಾರನ ಚಾಣಾಕ್ಷತೆ ಮೇಲೆ ಅವಲಂಬಿಸಿದ ಕತೆ. ಆದರೆ ಗೋರಾ ಆ ವಿದೇಶಿ ಪತ್ತೇದಾರನಂತೆ ಹ್ಯಾಟು-ಕೋಟು ಧರಿಸಿದ ಠಾಕಿಠೀಕಿನ ವ್ಯಕ್ತಿಯಲ್ಲ. ಇಲ್ಲಿ‌ನ ನಾಯಕ ಗೌರಬ್ ಸೇನ್ ಯಾನೆ ಗೋರಾ ನಮ್ಮ ಎನ್.ನರಸಿಂಹಯ್ಯನವರ ಪತ್ತೇದಾರಿ ಪುರುಷೋತ್ತಮನಂತೆ ನಿರುದ್ಯೋಗಿ ಖಾಸಗಿ ಪತ್ತೇದಾರ. ಪತ್ತೆ ಕಾರ್ಯದಲ್ಲಿ ಭಾರಿ ಚುರುಕು. ಆರೋಪಿಯ ಹುಡುಕಾಟಕ್ಕೆ ಪೊಲೀಸರೂ ಅವನ ಸಹಾಯ ನೆಚ್ಚಿಕೊಳ್ಳುತ್ತಾರೆ. ಪ್ರಕರಣಕ್ಕೆ ಗೋರಾ ಕೈ ಹಾಕಿದನೆಂದರೆ ಪೊಲೀಸರು ನಿಶ್ಚಿಂತೆಯಿಂದ ಮಲಗಬಹುದು. ಆದರೆ ಆತ ತನ್ನನ್ನು ತಾನೇ ಹೀರೋ ಅಂದುಕೊಳ್ಳುವವನಲ್ಲ. ನೋಡುವುದಕ್ಕೂ ಆತ ಗುಂಪಿನಲ್ಲಿ ಗುರುತಿಸುವುದಕ್ಕೇ ಸಾಧ್ಯವಾಗದ ಜನಸಾಮಾನ್ಯ. ರಿತ್ವಿಕ್ ಚಕ್ರವರ್ತಿ ಎಂಬ ನಟ ಗೋರಾನ ವಿಲಕ್ಷಣತೆ, ಆಗಾಗ ಹೆಸರುಗಳನ್ನು ಮರೆಯುವ ಗುಣ, ತಿಂದದ್ದನ್ನೂ ಅರ್ಧ ಗಂಟೆಯಲ್ಲಿ‌ ಮರೆತುಬಿಡುವ ಲಕ್ಷಣಗಳನ್ನು ಪರಿಣಾಮಕಾರಿ ಅಭಿನಯದ ಮೂಲಕ ಕಟ್ಟಿಕೊಟ್ಟಿದ್ದಾನೆ.

ಪತ್ತೇದಾರಿ ಕತೆಗಳಿಗೆ ಪಾತ್ರ ಪೋಷಣೆಯೇ ಬಹು ಮುಖ್ಯ ಎಂಬುದು ಎನ್.ನರಸಿಂಹಯ್ಯನವರ ಸೂತ್ರ. ಗೋರಾದ ಬರಹಗಾರ ನರಸಿಂಹಯ್ಯನವರ ಕಾದಂಬರಿ ಓದಿಯೇ ಸ್ಫೂರ್ತಿ ಪಡೆದಿದ್ದಾನೋ ಎಂಬ ಅನುಮಾನ ಬರುವ ಮಟ್ಟಕ್ಕೆ ‘ಗೋರಾ’ದ ಬರಹಗಾರ ಪಾತ್ರಗಳನ್ನು ಕಟ್ಟಿದ್ದಾನೆ. ಹಾಗಾಗಿ ಇಲ್ಲಿ ನಡೆಯುವ ಕೊಲೆಗಳ ಮೇಲೆ ಗಮನ ಕೇಂದ್ರೀಕರಿಸುವುದಕ್ಕಿಂತ ಹೆಚ್ಚು ಗೋರಾ ಹಾಗೂ ಆತನ ಸಹಾಯಕ-ಗೆಳೆಯನ ನಡುವಿನ ಒಡನಾಟ ಮುಖ್ಯವಾಗುತ್ತದೆ. ಹಾಗೂ ಅದೇ ಈ ಸರಣಿಗೆ ನೋಡಿಸಿಕೊಂಡು ಹೋಗುವ ಗುಣ ತುಂಬಿದೆ. ಸಾಯಂತನ್ ಘೋಶಾಲ್ ಎಂಬ ನಿರ್ದೇಶಕನಿಗೆ ಇಂಥ ಕತೆಯನ್ನು ವೇಗವಾಗಿ ಮುನ್ನಡೆಸುವುದು ಹೇಗೆ ಎಂಬ ಕಲೆಗಾರಿಕೆಯಿದೆ. ಅದು ಎಡಿಟಿಂಗ್‌ನ ಮೂಲಕ ಸೃಷ್ಟಿಸಿದ ವೇಗವಲ್ಲ, ಗೋರಾ ಮತ್ತವನ ಗೆಳೆಯನ ನಡುವೆ ಒಂದೇ ಜಾಗದಲ್ಲಿ ನಡೆಯುವ ಸಂಭಾಷಣೆಯ ದೃಶ್ಯಗಳೂ ಒಳಗಿನ ಸರಕಿನ ಕಾರಣದಿಂದ ವೇಗದ ಅನುಭವ ನೀಡುತ್ತದೆ.

ಈಗ ಬರುತ್ತಿರು‌ವ‌‌‌ ಕೆಲವು ಪತ್ತೇದಾರಿ ಸರಣಿಗಳಲ್ಲಿ ಪ್ರೇಕ್ಷಕನೂ‌ ಪತ್ತೇದಾರನಂತೆ ಸೂಕ್ಷ್ಮವಾಗಿ ಕತೆ ಗಮನಿಸುತ್ತಾ ಸಾಗಬೇಕು. ಕುತೂಹಲ ಹಸಿಯಾಗಿಡಲು ವೀಕ್ಷಕನನ್ನು ದಾರಿ ತಪ್ಪಿಸುವ ಸೂತ್ರಕ್ಕೆ ಜೋತುಬೀಳಲಾಗುತ್ತದೆ. ಆದರೆ ಗೋರಾದಲ್ಲಿ ಅಂಥ ಕಿರಿಕಿರಿಯೇ ಇಲ್ಲ. 20 ನಿಮಿಷಕ್ಕೇ ಮುಗಿದುಬಿಡುವ ಕಂತುಗಳು ವಿರಾಮದಲ್ಲಿ ನೋಡಿಸುತ್ತವೆ. ರೈಲು‌ ಬರುವವರೆಗೆ ನಿಲ್ದಾಣದಲ್ಲಿ ಕೂತು ನೋಡಿ, ರೈಲು ಬಂದಾಗ ಅರ್ಧಕ್ಕೇ ನೋಡುವುದು ನಿಲ್ಲಿಸಿ, ರೈಲಿನ ಸದ್ದು ಏಕತಾನತೆ ಅನಿಸಿದಾಗ ಮತ್ತೆ ಗೋರಾನ ಜತೆ ಕೂತರೂ ರಸಾಸ್ವಾದನೆಗೆ ಎಲ್ಲಿಯೂ ಭಂಗ ಬರುವುದಿಲ್ಲ.

ನಿರ್ಮಾಣ ವಿಚಾರದಲ್ಲಿ ತೀರಾ ಶ್ರೀಮಂತಿಕೆ ಪ್ರದರ್ಶನಕ್ಕೆ ಕೈ ಹಾಕಲಾಗಿಲ್ಲ. ಆದರೆ ನೋಡುವಿಕೆಯ ಅನುಭವ ಒಳಿತು ಮಾಡುವ ಕ್ಯಾಮರಾ ಹಾಗೂ ಲೈಟಿಂಗ್ ವಿಚಾರದಲ್ಲಿ ಎಲ್ಲಿಯೂ ರಾಜಿ‌ ಮಾಡಲಾಗಿಲ್ಲ. ಎಂಥಾ ರೋಚಕ ಕತೆಯಾದರೂ ಓದುವ ಹಾಳೆ ಚೆನ್ನಾಗಿಲ್ಲದಿದ್ದರೆ ಓದುವಿಕೆಗೆ ಧಕ್ಕೆ ತರುತ್ತದೆ. ಹಾಗೆಯೇ ಸಿನಿಮಾ ಅಥವಾ ಸರಣಿಗೆ ಕ್ಯಾಮರಾವೇ ಬಿಳಿಹಾಳೆ. ಮುಖ್ಯವಾಗಿ ಅದೇ ಸರಿಯಿಲ್ಲದಿದ್ದರೆ ಸಲೀಸಾಗಿ ನೋಡಲು ತೊಡಕಾಗುತ್ತದೆ. ಹೊಯ್ಚೊಯ್‌ ನಿರ್ಮಾಪಕರು ಬಹುತೇಕ ಎಲ್ಲಾ ನಿರ್ಮಾಣಗಳಲ್ಲೂ ಈ ಅಗತ್ಯ ಗುಣ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಆ ಒಟಿಟಿ ವೇದಿಕೆಯ ಒಳಗೆ ಒಮ್ಮೆ ಹೊಕ್ಕರೆ ಬಹುಬೇಗ ಕಚ್ಚಿಕೊಳ್ಳುತ್ತದೆ.

ನಡೆಯುವ ಕೊಲೆಯ ವಿಲಕ್ಷಣತೆಯ ಮೂಲಕ ಕಾಣದ ಕೊಲೆಗಾರನ ಮನಸ್ಥಿತಿ ತೋರಿಸುವಿಕೆ ಮೊದಲಿಗೆ ನಮ್ಮನ್ನು ಸರಣಿಯೊಳಗೆ ಎಳೆದುಕೊಳ್ಳುತ್ತದೆ. ನಂತರ ಗೋರಾನ ವ್ಯಕ್ತಿತ್ವ ಹಿಡಿದಿಡುತ್ತದೆ. ನಡುನಡುವೆ ಬರುವ ಪಾತ್ರಗಳು ಕತೆಯನ್ನು ಒಂದು ಬದಿಯಿಂದ ಪೋಷಿಸುತ್ತಾ ಸಾಗುತ್ತದೆ. ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುವ ಈಸಾ ಸಾಹಾ ತಾನು ಗಂಡನನ್ನು ಕೊಂದುಬಿಡುತ್ತೇನೆ ಎಂಬ ಭಯದಲ್ಲಿ ಗೋರಾನ ಸಲಹೆ ಪಡೆಯಲು ಬಂದಾಗ ಪ್ರೇಕ್ಷಕನ ದಿಕ್ಕುತಪ್ಪಿಸುವ ಯೋಜನೆ ಎಂದು ಮೇಲ್ನೋಟಕ್ಕೇ ಅನಿಸದಂತೆ ಜಾಗ್ರತೆ ವಹಿಸಿದ್ದರೆ ಒಳ್ಳೆಯದಿರುತ್ತಿತ್ತು. ಕೊನೆಗೆ ಎಲ್ಲಾ ಪಾತ್ರಗಳನ್ನೂ ಕೊಠಡಿಯಲ್ಲಿ ಕೂರಿಸಿ ನಡೆದ ಘಟನೆಗಳನ್ನು ವಾಚ್ಯವಾಗಿ ಪತ್ತೇದಾರ ವಿವರಿಸುವ ಹಂತದಲ್ಲಿ ಮಾತ್ರ ಕ್ಲೀಶೆ ಅನಿಸುತ್ತದೆ. ಆದರೆ ಒಂದು ವೇಗದ ಓದಿನ ಪತ್ತೇದಾರಿ ಕಾದಂಬರಿಯ ಅನುಭವ ನೀಡುವ ಈ ಸರಣಿಯಲ್ಲಿ ಅದನ್ನು ಮನ್ನಿಸಬಹುದು. ಹಿಂದಿ ಅವತರಣಿಕೆಯಲ್ಲೂ ಲಭ್ಯವಿರುವ ಕಾರಣ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಕೊನೆಯಲ್ಲಿ ಪತ್ತೇದಾರ ಗೌರಬ್ ಸೇನ್ ಕೊಲೆಗಾರನ ಎದುರು ನಿಂತು “ನಾವು ಇನ್ನು ಪರಸ್ಪರ ಭೇಟಿಯಾಗುವ ಸಂದರ್ಭವಿಲ್ಲ” ಎಂದು ಕೈ ಕುಲುಕುತ್ತಾನೆ. ಅವನ ಕೈಗೆ ಕೈ ಇಟ್ಟು “ನನಗೂ ಹಾಗೇ ಅನಿಸುತ್ತದೆ” ಎನ್ನುತ್ತಾನೆ ಆರೋಪಿ. ಅಲ್ಲಿಂದ ತೆರಳುವ ಗೋರಾ ಮತ್ತೆ ಅವನ ಖಾಸಗಿ ಕೆಲಸಗಳಿಗೆ ಮರಳುತ್ತಾನೆ. ಆಗ ಮತ್ತೊಮ್ಮೆ ನಮಗೆ ಪತ್ತೇದಾರಿ ಪುರುಷೋತ್ತಮ ನೆನಪಾಗುತ್ತಾನೆ.

Previous article‘Blonde’ ಟೀಸರ್‌; ನಟಿ ಮರ್ಲಿನ್‌ ಮನ್ರೋ ಕುರಿತ ನೆಟ್‌ಫ್ಲಿಕ್ಸ್‌ ಸಿನಿಮಾ
Next articleಸಮಾಜ ಕಂಟಕರ ವಿರುದ್ಧ ತಂದೆಯ ಹೋರಾಟ

LEAVE A REPLY

Connect with

Please enter your comment!
Please enter your name here