ಸಂಗೀತ ಸಂಯೋಜಕ ಹಂಸಲೇಖ ಅವರು ನಾಡಗೀತೆಯ ವಿಷಯದಲ್ಲಿ ಮೂರು ರೀತಿಯ ಪ್ರಯೋಗವನ್ನು ಹಮ್ಮಿಕೊಂಡಿದ್ದಾರೆ. ಇದರ ಮೊದಲನೇ ಪ್ರಯೋಗ ಇಲ್ಲಿದೆ.

ನಮ್ಮ ರಾಷ್ಟ್ರಗೀತೆಯ ನಂತರ ನಮ್ಮನ್ನು ರೋಮಾಂಚನಗೊಳಿಸುವ ತಾಕತ್ತು ಇರೋದು ನಮ್ಮ ನಾಡಗೀತೆಗೆ. ಇಂಥಹ ನಾಡಗೀತೆಯನ್ನು ಕರ್ನಾಟಕದ ಪ್ರಮುಖ ಸಭೆ ಸಮಾರಂಭಗಳಲ್ಲಿ ಹಾಡಿಸುವುದು ನಮ್ಮ ಸಂಪ್ರದಾಯ. ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಈ ನಾಡಗೀತೆ ಕನ್ನಡಿಗರಲ್ಲಿ ಭಾಷಾಭಿಮಾನ, ನಾಡಿನ ಬಗ್ಗೆ ಗೌರವ ಮೂಡಿಸುವ ಭಾವನಾತ್ಮಕ ವಿಷಯ. ಇತ್ತೀಚೆಗೆ ನಾಡಗೀತೆಯನ್ನು ಸಭೆ ಸಮಾರಂಭಗಳಲ್ಲಿ ಹಾಡಿಸುವುದು ಕಷ್ಟ. ಅದರ ಅವಧಿ ತೀರಾ ಹೆಚ್ಚಾಯಿತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸುಮಾರು ಆರೂವರೆಯಿಂದ, ಏಳು ನಿಮಿಷವಿದ್ದ ನಾಡಗೀತೆಯನ್ನು ಎರಡು ನಿಮಿಷ ಮೂವತ್ತು ಸೆಕೆಂಡುಗಳಿಗೆ ಇಳಿಸಲಾಗಿತ್ತು. ಈಗ ಅದೂ ದೀರ್ಘ ವಾಗಬಹುದು. ಅದಕ್ಕೆ ‘ಒಸಿ ತುಂಡಾಕಿ’ ಎಂದು ಥೇಟ್ ಕವಿರತ್ನ ಕಾಳಿದಾಸನ ಸ್ಟೈಲಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗಾಗಿ ಈ ಹಿನ್ನೆಲೆಯಲ್ಲಿ ನಾದಬ್ರಹ್ಮ ಹಂಸಲೇಖ ಅವರು ನಾಡಗೀತೆಯ ವಿಷಯದಲ್ಲಿ ಮೂರು ರೀತಿಯ ಪ್ರಯೋಗವನ್ನು ಹಮ್ಮಿಕೊಂಡಿದ್ದಾರೆ. ಆದರೆ ಹಂಸಲೇಖ ಅವರು ಮಾಡಿರುವ ಪ್ರಯೋಗ ಕೇವಲ ಗೀತೆಯ ಅವಧಿಗೆ ಸಂಬಂಧಪಟ್ಟಿದ್ದಲ್ಲ. ಇಲ್ಲಿ ಇನ್ನೂ ವಿಶೇಷಗಳಿವೆ. ಇದರ ಮೊದಲನೇ ಪ್ರಯೋಗವನ್ನು ಗಾಂಧಿಜಯಂತಿ ದಿನವಾದ ಅಕ್ಟೋಬರ್ 2ರಂದು ಬಿಟ್ಟಿದ್ದಾರೆ ಹಂಸಲೇಖ. ‘ಬಾಪು ಇವತ್ತಿಗೆ ನೀನು 152 ವರ್ಷದ ಪಾಪು’ ಎಂಬ ಒಕ್ಕಣೆಯೊಂದಿಗೆ ಹಂಸಲೇಖ ಈ ಪ್ರಯೋಗ ಮಾಡಿದ್ದಾರೆ. ಐದನಿ ಎಂಟರ್‌ಟೇನ್‌ಮೆಂಟ್‌ ಮೂಲಕ ಹೊರಬಂದಿರುವ ಈ ನಾಡಗೀತೆಯ ಪ್ರಾಯೋಗಿಕ ತುಣುಕು ಒಂದು ನಿಮಿಷ ನಲವತ್ತು ಸೆಕೆಂಡು. ನಾಡಗೀತೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಕೆಲವು ಬದಲಾವಣೆ ಮಾಡಲಾಗಿದೆ ಎಂಬುದನ್ನು ವಿಡಿಯೋದಲ್ಲಿ ಹೇಳಲಾಗಿದೆ. ಈ ಗೀತೆಯನ್ನು ಮೃತ್ಯುಂಜಯ ದೊಡ್ಡವಾಡ ಅವರು ಹಾಡಿದ್ದಾರೆ.

LEAVE A REPLY

Connect with

Please enter your comment!
Please enter your name here