ಭಾರತೀಯ ಸಿನಿಮಾರಂಗದ ಜನಪ್ರಿಯ ತಾರೆಗಳ ಪಟ್ಟಿಯಲ್ಲಿ ತೃಪ್ತಿ ದಿಮ್ರಿ ನಂಬರ್ 1 ಸ್ಥಾನ ಗಳಿಸಿಕೊಂಡಿದ್ದಾರೆ. 2024ರ ಜನಪ್ರಿಯ ತಾರೆಗಳ ಪಟ್ಟಿಯನ್ನು ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) ಬಿಡುಗಡೆ ಮಾಡಿದ್ದು, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಮೊದಲಾದವರನ್ನು ತೃಪ್ತಿ ದಿಮ್ರಿ ಹಿಂದಿಕ್ಕಿದ್ದಾರೆ.
ಖ್ವಾಲಾ, ಬುಲ್ ಬುಲ್, ಬ್ಯಾಡ್ ನ್ಯೂಜ್, ಲೈಲಾ ಮಜ್ನು, ಬೂಲ್ ಬುಲಯ್ಯಾ-3 ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ತೃಪ್ತಿ, ‘ಅನಿಮಲ್’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ‘ಅನಿಮಲ್’ ಸಿನಿಮಾದಲ್ಲಿನ ಬೋಲ್ಡ್ ಸೀನ್ಗಳಿಂದಾಗಿ ಅವರು ಸಿನಿಮಾ ಪ್ರಿಯರ ಹಾಟ್ ಫೇವರಿಟ್ ಆಗಿಬಿಟ್ಟರು. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ಮೂರನೇ ಸ್ಥಾನದಲ್ಲಿ ಇಶಾನ್ ಖಟ್ಟರ್, ನಾಲ್ಕನೇ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದಾರೆ.
29ರ ಹರೆಯದ ಇಶಾನ್ ಖಟ್ಟರ್ 2027ರಲ್ಲಿ ಬಿಯಾಂಡ್ ದಿ ಕ್ಲೌಡ್ಸ್, ಎ ಸುಟೇಬಲ್ ಬಾಯ್ (2020) ಸಿನಿಮಾದಲ್ಲಿನ ಪಾತ್ರಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಟಿ. ನೆಟ್ಫ್ಲಿಕ್ಸ್ ಸರಣಿ ‘ದಿ ಪರ್ಫೆಕ್ಟ್ ಕಪಲ್’ನಲ್ಲಿ ಇಶಾನ್, ನಿಕೋಲ್ ಕಿಡ್ಮನ್ ಜತೆಗೆ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ‘ದಢಕ್’ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಜತೆ ಇಶಾನ್ ನಟಿಸಿದ್ದರು.
ಐದನೇ ಸ್ಥಾನದಲ್ಲಿ ಶೋಭಿತಾ ಧೂಲಿಪಾಲ ಇದ್ದಾರೆ. ಡಿಸೆಂಬರ್ 4ರಂದು ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯರನ್ನು ವರಿಸಿದ್ದ ಶೋಭಿತಾ ಇಲ್ಲಿವರೆಗೆ 13 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಜ್ಯಾ, ಮಹರಾಜ್ , ವೇದಾ ಸಿನಿಮಾದಲ್ಲಿ ನಟಿಸಿ ಸಿನಿಪ್ರೇಕ್ಷಕರ ಮನಸ್ಸು ಗೆದ್ದ ನಟಿ ಶಾರ್ವರಿ 6ನೇ ಸ್ಥಾನದಲ್ಲಿದ್ದು, ಏಳನೇ ಸ್ಥಾನದಲ್ಲಿ ಐಶ್ವರ್ಯಾ ರೈ ಇದ್ದಾರೆ. ಎಂಟನೇ ಸ್ಥಾನದಲ್ಲಿ ಸಮಂತಾ ರುತ್ ಪ್ರಭು, 9ನೇ ಸ್ಥಾನದಲ್ಲಿ ಆಲಿಯಾ ಭಟ್, 10ನೇ ಸ್ಥಾನದಲ್ಲಿ ಪ್ರಭಾಸ್ ಇದ್ದಾರೆ. 2023ರಲ್ಲಿ ಶಾರುಖ್ ಖಾನ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮೊದಲ ಮೂರು ಸ್ಥಾನದಲ್ಲಿದ್ದರು. ಆದಾಗ್ಯೂ, ವಾರದ ರ್ಯಾಂಕಿಂಗ್ ನಲ್ಲಿ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಸ್ಥಾನ ಗಳಿಸಿಕೊಳ್ಳುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.