ಮೂರು ಕೊಲೆಗಳು, ಎರಡು ಕುಟುಂಬಗಳು, ಹಲವು ಪಾತ್ರಗಳ ನಡುವೆ ಒಂದಷ್ಟು ಗುಟ್ಟುಗಳು, ಹೇಳಲಾರದ ತೊಳಲಾಟಗಳು, ಮರೆಮಾಚಲೇಬೇಕಾದ ಇತಿಹಾಸಗಳಿರುವ ‘ಗಾಳಿವಾನ’, ವೆಬ್ ಸರಣಿಗೆ ಹೇಳಿ ಮಾಡಿಸಿದ ಸರಕು. ZEE5ನಲ್ಲಿ ಸ್ಟ್ರೀಂ ಆಗುತ್ತಿದೆ.

ಜಗತ್ತಿನ ಎಲ್ಲೆಡೆಯೂ ಕತೆಗಳಿವೆ. ಕೆಲವು ಕತೆಗಳಲ್ಲಿ ಪಾತ್ರಗಳು‌ ಮತ್ತು ಘಟನೆ ನಡೆಯುವ ಸ್ಥಳ ಬದಲಿಸಿದರೆ ಅವು‌ ನಮ್ಮದೇ ಮಣ್ಣಿನ ವಾಸನೆ ಇರುವ‌ ಕತೆಗಳಾಗುತ್ತವೆ. ವೆಬ್ ಸರಣಿಗಳಲ್ಲಿ ಇತ್ತೀಚೆಗೆ ಈ ಪರಿಪಾಠವನ್ನೂ ಕಾಣಬಹುದು. ಬಿಬಿಸಿ‌ ನಿರ್ಮಾಣದ ‘ಲೂಥರ್’ ಹಿಂದಿಗೆ ಅಜಯ್ ದೇವಗನ್ ಅಭಿನಯದ ‘ರುದ್ರಾ’ ಆಗಿ ಬಂತು. ಅದೇ ಬಿಬಿಸಿ ನಿರ್ಮಾಣದ ‘ವನ್ ಆಫ್ ಅಸ್’ ತೆಲುಗು ಭಾಷೆಗೆ ಬರುವಾಗ ‘ಗಾಳಿವಾನ’ ಆಗಿದೆ. ಬ್ರಿಟಿಷ್ ಕತೆ ತೆಲುಗಿಗೆ ಬರುವಾಗ ಸಂಪೂರ್ಣವಾಗಿ ತೆಲುಗಿನದ್ದೇ ಆದಂತೆ ಕಾಣುವುದು‌ ನಿರ್ಮಾಣದ ಕಾರಣದಿಂದ. ಮೂಲಕತೆ ಬರೆದ ಜಾಕ್ ಆ್ಯಂಡ್ ಹ್ಯಾರಿ ಹೆಸರು ಟೈಟಲ್ ಕಾರ್ಡಿನಲ್ಲಿ ಬರದಿದ್ದರೆ ಕತೆಯ ಮೂಲ ಹೊರದೇಶದಲ್ಲಿದೆ‌ ಎಂದು ನಂಬುವುದು‌‌ ಕಷ್ಟ.

‘ಗಾಳಿವಾನ’ ಒಂದು ಸಸ್ಪೆನ್ಸ್ ಥ್ರಿಲ್ಲರ್. ಅಜಯ್ ಮತ್ತು ಗೀತಾರ ಹೈಸ್ಕೂಲು ಪ್ರೇಮಕತೆ‌ ತೆರೆಯ ಮೇಲೆ ಬರುವಾಗ ಇದೊಂದು ರೊಮ್ಯಾಂಟಿಕ್ ಸರಣಿ ಎಂಬ ಭಾವ ಮೂಡುತ್ತದೆ. ಹೆಚ್ಚಿನ ಸಮಯ‌ ವ್ಯರ್ಥ ಮಾಡದೆ ಅವರ‌ ಮದುವೆಗೆ ಹೋಗುವಾಗ ಮುಂದಿನ‌ ಏಳೂ ಕಂತುಗಳು ಲವ್ ಸ್ಟೋರಿ ಅಂದುಕೊಳ್ಳಬೇಕು. ಆದರೆ ಮದುವೆಯ ರಾತ್ರಿಯೇ‌ ನಡೆಯುವ ಅವರಿಬ್ಬರ ಕೊಲೆ ಸರಣಿಗೆ ದೊಡ್ಡ ತಿರುವು ನೀಡುತ್ತದೆ.

ಮೊದಲ‌ ಅಧ್ಯಾಯದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಯಾವ ಭೂಮಿಕೆ ಸಿದ್ಧಪಡಿಸಬೇಕೋ ಅದನ್ನು ಸಿದ್ಧಪಡಿಸಿ ಪ್ರೇಕ್ಷಕರನ್ನು‌ ಕುತೂಹಲದ ಬಾವಿಗೆ ತಳ್ಳಿಬಿಡುತ್ತದೆ. ಕೊಲೆ ನಮ್ಮ ಕಣ್ಣೆದುರೇ‌ ನಡೆಯುವ ಕಾರಣ ಕೊಲೆಗಾರ‌ ಯಾರು ಎಂಬುದು‌ ಇಲ್ಲಿ ರಹಸ್ಯವೇನಲ್ಲ. ಅದೇ ಕೊಲೆಗಾರ ಅಜಯ್ ಮತ್ತು‌ ಗೀತಾಳ ಊರಿಗೇ ಬಂದು ಕಾರು ಅಪಘಾತವಾಗಿ ಕೊನೆಗೆ ಅವರ‌ ಮನೆಗೇ‌ ಸೇರಿಕೊಳ್ಳುವಂತೆ ಆಗುವುದು ಸನ್ನಿವೇಶಕ್ಕೆ ರೋಚಕತೆ‌ ತುಂಬುವಂಥದ್ದು. ಜೀವನ್ಮರಣದ ಸ್ಥಿತಿಯಲ್ಲಿರುವ ಆತನ ಶುಶ್ರೂಷೆ ‌ಮಾಡುವುದು ಅಜಯ್‌ನ ತಂಗಿ ಶ್ರಾವಣಿ, ಆಕೆ ವೈದ್ಯೆ. ಆದರೆ ಅವನ ಜೇಬಲ್ಲಿ‌ ಸಿಗುವ‌ ಪೋಟೋ ಹಾಗೂ ಟಿವಿ‌ ವಾರ್ತೆಯಲ್ಲಿ ಬರುವ ಸುದ್ದಿ ಅತನೇ ತನ್ನ ಅಣ್ಣನ ಕೊಲೆಗಾರ‌ ಎಂಬುದನ್ನು ಅವಳಿಗೆ ಮನವರಿಕೆ‌ ಮಾಡಿಕೊಡುತ್ತದೆ. ಹಾಗಾಗಿ ಮರುದಿನ ಆತನನ್ನು ಪೊಲೀಸರಿಗೆ ಒಪ್ಪಿಸುವುದು ಎಂದು ಎಲ್ಲರೂ ತೀರ್ಮಾನಿಸಿ ನಿದ್ರೆಗೆ ಜಾರುತ್ತಾರೆ. ಆದರೆ ಬೆಳಗ್ಗೆ ಎದ್ದಾಗ ಅವನೇ ಕೊಲೆಯಾಗಿದ್ದಾನೆ!

ಇಂಥ ‘ಗಾಳಿವಾನ’ದಲ್ಲಿ ಪ್ರತಿಯೊಬ್ಬರದ್ದೂ ವಿಚಿತ್ರ ಸನ್ನಿವೇಶ. ಎರಡನೇ ಎಪಿಸೋಡಿನಿಂದ ಆರರವರೆಗೆ ನಮಗೆ ಆ ಪಾತ್ರಗಳ ಸುತ್ತಮುತ್ತ ಹಾಗೂ ಅಂತರಾಳ ತಿಳಿಯಲು ಮೀಸಲು. ಪ್ರತಿಯೊಂದು ಪಾತ್ರದ ವಿವರವೂ ಬರುತ್ತಾ ಹೋದ ಹಾಗೆ ಕೊಲೆಗಾರನನ್ನು ಅಪರಾತ್ರಿ ಕೊಲ್ಲಲು‌ ಆಯಾ ಪಾತ್ರಗಳಿಗೆ ಇರುವ ಕಾರಣ ಬಿಚ್ಚಿಕೊಳ್ಳುತ್ತದೆ. ಆದರೆ ಎಲ್ಲರೂ ಸೇರಿ ಮಾಡಿದ ಕೊಲೆಯಲ್ಲವಾದ್ದರಿಂದ ಉಳಿದುಕೊಳ್ಳುವುದು ಸಸ್ಪೆನ್ಸ್. ಅಜಯ್‌ನ ತಂದೆ ಮಕ್ಕಳೆಲ್ಲ ಸಣ್ಣವರಿರುವಾಗಲೇ ಬಿಟ್ಟು ಹೋದವ. ಶ್ರಾವಣಿಯ ಅಣ್ಣನ ಹೆಂಡತಿಗೆ ಅದು ಎರಡನೇ ಮದುವೆ, ಮಗಳು ಯಾರ ಜತೆಗಿರಬೇಕು ಎಂಬ ಕಾನೂನು ಸಮರ ಮೊದಲ ಗಂಡನ ಜತೆ ನಡೆಯುತ್ತಿರುತ್ತದೆ. ಇತ್ತ ಶ್ರಾವಣಿಯ ಪ್ರೇಮಿ ಕಾಲುಗಳ ವಶ ಕಳೆದುಕೊಂಡು ಆಸ್ಪತ್ರೆ‌ ಸೇರಿರುತ್ತಾನೆ. ಗೀತಾಳ ತಂದೆ ಕೊಮರ್ರಾಜುವಿಗೆ ಪುತ್ರಿವಿಯೋಗದ ದುಃಖದ ನಡುವೆ ಮನೆಗೆ ಬಂದು ಸತ್ತವನ ಮರೆಮಾಚುವ ಚಿಂತೆ. ಕಾರಣ ಅವನ ಮಗ, ಆತ ರಾತ್ರಿ ಎದ್ದು ಹೋಗುವುದನ್ನು ನೋಡಿದ್ದೇನೆ ಎಂದು ಕೆಲಸದಾತ ಕೊಮರ್ರಾಜುವಿಗೆ ಹೇಳಿದ್ದಾನೆ. ಆ ತಿಳಿಸುವಿಕೆ ಕ್ರಮೇಣ ಬ್ಲ್ಯಾಕ್‌ಮೇಲ್ ರೂಪ ಪಡೆಯುತ್ತದೆ.

ವಿನಾಕಾರಣ ಒಬ್ಬೊಬ್ಬರ‌ ಮೇಲೆ ಸಂಶಯ ಮೂಡಿಸಲು ಹೆಣೆದ ಚಿತ್ರಕತೆಗೆ ಹೊರತಾಗಿ ಇರುವುದು ಈ ಸರಣಿಯ ಗೆಲುವು. ತೆರೆಗೆ ಬರುವ ಪ್ರತಿಯೊಂದು ಪಾತ್ರಕ್ಕೂ ಹಿನ್ನೆಲೆಯಿದೆ. ಮಿಗಿಲಾಗಿ ವಿಚಾರಣೆಗೆ ಬರುವ ಇನ್‌ಸ್ಪೆಕ್ಟರ್‌ ನಂದಿನಿ ಒಂದೆಡೆ ಡ್ರಗ್ ಪೆಡ್ಲಿಂಗಲ್ಲಿಯೂ ಶಾಮೀಲಾಗಿರುವುದು ಕತೆಗೆ ಮತ್ತೊಂದು ಆಯಾಮ ನೀಡಿದೆ. ಕ್ಯಾನ್ಸರ್ ಪೀಡಿತ ಮಗಳನ್ನು ಅಮ್ಮ ಮತ್ತು ಅಪ್ಪನ ಎರಡೂ ಸ್ಥಾನದಲ್ಲಿ ನಿಂತು ನೋಡಿಕೊಳ್ಳುವ‌ ಅವಳಿಗೆ ಬದುಕೂ‌ ಒಂದು ಸವಾಲು, ಮಗಳ ಚಿಕಿತ್ಸೆಗೆ ಹಣ ಹೊಂದಿಸಲೇಬೇಕು. ಆದರೆ ಇವಳಿಂದ ಡ್ರಗ್ಸ್‌ ಪಡೆದು ಸರಬರಾಜು ಮಾಡುವಾತ‌ ಸಿಕ್ಕಿಬಿದ್ದಾಗ ನಮ್ಮ ಮನಸ್ಸಿನಲ್ಲಿನ ಅನುಮಾನಗಳಿಗೆ ನೂರು ಹಾದಿ.

ಇಷ್ಟೆಲ್ಲ ಮಜಲುಗಳು ಇರುವಾಗ ಆ ಕೊಲೆಗಾರನನ್ನು ಕೊಂದವರು ಯಾರು? ಅಷ್ಟಕ್ಕೂ ಅಜಯ್ ಮತ್ತು‌ ಗೀತಾರನ್ನು ಆತ ಕೊಲೆ ಮಾಡಲು ಅವನಿಗೇನಿತ್ತು ಇರಾದೆ? ಅವನ ಕೈಯಲ್ಲಿ ಕೊಲೆ ಮಾಡಿಸಿದ ಆಗಂತುಕ ರಾತ್ರಿ ಬಂದು ಇವನನ್ನೂ ಕೊಂದನೇ? ಈ ಎರಡು ಕುಟುಂಬದವರೇ ಅದರಲ್ಲಿ ಶಾಮೀಲೇ? ಅಥವಾ ಅವರಲ್ಲಿ ಯಾರದೋ ಒಬ್ಬನ ಕೈವಾಡವೇ? ಆ ಎಲ್ಲ ಕುತೂಹಲಗಳಿಗೆ ಉತ್ತರ ಕೊಡುವುದು ಕೊನೆಯ‌ ಅಧ್ಯಾಯ.

ಹೆಚ್ಚಿನ ತೆಲುಗು ಸಿನಿಮಾಗಳಲ್ಲಿ ಕಾಣುವಂತೆ ಈ‌ ಸರಣಿಯಲ್ಲಿಯೂ ಓವರ್ ಆ್ಯಕ್ಟಿಂಗ್ ಎಂಬ ಅಂಶ ಎದ್ದು ಕಾಣುತ್ತದೆ. ದೃಶ್ಯಗಳಲ್ಲಿ ನಾಟಕೀಯತೆ ಇಲ್ಲದಿದ್ದರೆ ಸಾಮಾನ್ಯವಾಗಿ ತೆಲುಗು ಪ್ರೇಕ್ಷಕ ಇಷ್ಟಪಡುವುದಿಲ್ಲ. ಅಥವಾ ತೆಲುಗಿನಲ್ಲಿ‌ ನಿರ್ಮಾಣ ಮಾಡುವ ತಂಡಗಳಿಗೆ ಒಂದಿಷ್ಟು ‘ನಟನೆ’ ಎದ್ದು ಕಾಣದಿದ್ದರೆ ಸಮಾಧಾನ ಆಗುವುದಿಲ್ಲವೇನೋ. ಎಲ್ಲಾ ನಟ-ನಟಿಯರ ಪಾಲಿಗೂ ಅತಿ ಅಭಿನಯದ ಮಾತು ಸತ್ಯವಾದರೆ‌ ಸಾಯಿಕುಮಾರ್ ನಟನೆ ಮಾತ್ರ ಸಹಜತೆಯಿಂದ ಕೂಡಿದೆ‌ ಎಂದು ಅನಿಸುವುದು ಏಕೆ‌ ಎಂಥ ಥಟ್ಟನೆ ವಿಶ್ಲೇಷಿಸುವುದು‌ ಕಷ್ಟ. ಕೆಲವೆಡೆ ಸಂದರ್ಭಕ್ಕೆ ತಕ್ಕಂತೆ ಅತಿರೇಕದ ಭಾವಾಭಿವ್ಯಕ್ತಿ ಇದ್ದರೂ ಅದೂ ಅಸಹಜ‌ ಅನಿಸುವುದಿಲ್ಲ. ಬಹುಶಃ ತುಂಬಾ ಮಾಗಿದ ನಟರಿಗೆ ಅಂಥ ಸನ್ನಿವೇಶಗಳನ್ನು ಬ್ಯಾಲೆನ್ಸ್ ಮಾಡುವ ಕಲೆ‌ ಮೈಗೂಡಿರುತ್ತದೆ.

ಒಟ್ಟಿನಲ್ಲಿ ಮೂರು ಕೊಲೆಗಳು, ಎರಡು ಕುಟುಂಬಗಳು, ಹಲವು ಪಾತ್ರಗಳ ನಡುವೆ ಒಂದಷ್ಟು ಗುಟ್ಟುಗಳು, ಹೇಳಲಾರದ ತೊಳಲಾಟಗಳು, ಮರೆಮಾಚಲೇ ಬೇಕಾದ ಇತಿಹಾಸಗಳಿರುವ ‘ಗಾಳಿವಾನ’ ವೆಬ್ ಸರಣಿಗೆ ಹೇಳಿ ಮಾಡಿಸಿದ ಸರಕು. ಝೀ5ನಲ್ಲಿ ಸ್ಟ್ರೀಂ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here