ಕನ್ನಡ ಮೂಲದ ನಟಿ ನಭಾ ನಟೇಶ್ ‘ಸ್ವಯಂಭು’ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಅವರಿಗೆ ಭುಜದ ಮೂಳೆ ಮುರಿದಿತ್ತು. ಈ ಆಘಾತದಿಂದ ಚೇತರಿಸಿಕೊಂಡ ಅವರು ಮತ್ತೆ ಗಂಭೀರವಾಗಿ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.
2022ರಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ಕನ್ನಡ ಮೂಲ ನಟಿ ನಭಾ ನಟೇಶ್ ಅವರಿಗೆ ತೊಂದರೆಯಾಗಿತ್ತು. ಭುಜದ ಮೂಳೆ ಮುರಿದಿದ್ದರಿಂದ ಅವರು ಹಲವು ಬಾರಿ ಸರ್ಜರಿಗೊಳಗಾಗಿದ್ದರು. ನಿಧಾನವಾಗಿ ಚೇತರಿಸಿಕೊಂಡ ಅವರು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬೆಳ್ಳಿತೆರೆಗೆ ಮರಳಿದರು. ಇತ್ತೀಚೆಗಷ್ಟೇ ಅವರು ನಾಯಕಿಯಾಗಿ ನಟಿಸಿದ್ದ ‘ಡಾರ್ಲಿಂಗ್’ ತೆಲುಗು ಸಿನಿಮಾ ತೆರೆಕಂಡಿತ್ತು. ಹಲವು ಶೇಡ್ಗಳಿದ್ದ ಭಿನ್ನ ಪಾತ್ರದಲ್ಲಿ ನಟಿಸಿದ್ದ ನಭಾ ಸಿನಿಪ್ರಿಯರ ಮನ ಗೆದ್ದಿದ್ದರು. ಇದೀಗ ಅವರು ‘ಸ್ವಯಂಭು’ PAN ಇಂಡಿಯಾ ತೆಲುಗು ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿಖಿಲ್ ಸಿದ್ದಾರ್ಥ್ ಈ ಚಿತ್ರದ ಹೀರೋ. ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.
ಶಿವರಾಜಕುಮಾರ್ ಅಭಿನಯದ ‘ವಜ್ರಕಾಯ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದವರು ನಭಾ. ಆಗ ಅವರಿಗೆ 19 ವರ್ಷ. ಸ್ಯಾಂಡಲ್ವುಡ್ನಿಂದ ತೆಲುಗು ಚಿತ್ರರಂಗಕ್ಕೆ ಹೋದ ಅವರಿಗೆ ಅಲ್ಲಿ ದೊಡ್ಡ ಯಶಸ್ಸು ಸಿಕ್ಕಿತು. ‘ಇಸ್ಮಾರ್ಟ್’ ತೆಲುಗು ಸಿನಿಮಾದ ಭರ್ಜರಿ ಗೆಲುವಿನ ನಂತರ ಹಲವು ಉತ್ತಮ ಅವಕಾಶಗಳು ಅವರ ಪಾಲಾದವು. ಈ ಮಧ್ಯೆ ಕಾರು ಅಪಘಾತದಿಂದಾಗಿ ಅವರ ನಟನಾ ಬದುಕಿಗೆ ಹಿನ್ನಡೆಯಾಗಿತ್ತು. ಚೇತರಿಸಿಕೊಂಡು ತೆರೆಗೆ ಮರಳಿರುವ ಅವರು ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ಅವರ ಫೋಟೋಶೂಟ್ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ತೆಲುಗು ಚಿತ್ರಗಳ ಜೊತೆ ಕನ್ನಡದಲ್ಲೂ ಅವರು ಉತ್ತಮ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.