ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿಪ್ರಿಯರಿಗೆ ಮೆಚ್ಚುಗೆಯಾಗಿದ್ದ ಖ್ಯಾತ ತೆಲುಗು ನಟ ಚಂದ್ರಮೋಹನ್‌ ಅಗಲಿದ್ದಾರೆ. ಆರಂಭದಲ್ಲಿ ನಾಯಕನಟನಾಗಿ ಕಾಣಿಸಿಕೊಂಡ ಅವರು ಮುಂದೆ ಪೋಷಕ, ಹಾಸ್ಯ, ಖಳ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದರು. ಮೇರು ನಟನ ಅಗಲಿಕೆಗೆ ತೆಲುಗು ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಟ ಚಂದ್ರ ಮೋಹನ್ (78) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 9.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಚಂದ್ರ ಮೋಹನ್ (ಮಲ್ಲಂಪಲ್ಲಿ ಚಂದ್ರಶೇಖರ ರಾವ್) ಮೇ 23, 1945ರಂದು ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ಗ್ರಾಮದಲ್ಲಿ ಜನಿಸಿದರು. 1966 ರಲ್ಲಿ ‘ರಂಗುಲ ರತ್ನಂ’ ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆರಂಭದಲ್ಲಿ ನಾಯಕನಟನಾಗಿ ಕಾಣಿಸಿಕೊಂಡ ಅವರು ಮುಂದೆ ಪೋಷಕ, ಹಾಸ್ಯ, ಖಳ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ಮೂರು ತಲೆಮಾರಿನ ನಾಯಕನಟರ ಸಿನಿಮಾಗಳಲ್ಲಿ ಅಭಿನಯಿಸಿರುವ ಹೆಗ್ಗಳಿಕೆ ಅವರದು.

ಬೆಳ್ಳಿತೆರೆಗೆ ಪರಿಚಯವಾದ ‘ರಂಗುಲ ರತ್ನಂ’ ಚೊಚ್ಚಲ ಚಿತ್ರದಲ್ಲೇ ಉತ್ತಮ ನಟನೆಗಾಗಿ ಆಂಧ್ರಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿ ಪಡೆದರು. ‘ಸೀತಾಮಹಾಲಕ್ಷ್ಮಿ’ (1978), ‘ರಾಮ್ ರಾಬರ್ಟ್ ರಹೀಮ್’ (1980), ‘ರಾಧಾ ಕಲ್ಯಾಣಂ’ (1981), ‘ಎರಡು ರೇಲು ಆರು’ (1986), ‘ಚಂದಮಾಮ ರಾವೆ’ (1987) ಅವರು ನಾಯಕ ನಟನಾಗಿ ಅಭಿನಯಿಸಿದ ಸಿನಿಮಾಗಳು. ‘ಪದಹರೆಲ್ಲಾ ವಯಸು’ (1978) ಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ನಾಳೈ ನಮದೆ’ (1975) ತಮಿಳು ಚಿತ್ರದೊಂದಿಗೆ ಅವರು ಕಾಲಿವುಡ್‌ಗೂ ಪರಿಚಯವಾಗಿದ್ದರು. ಚಂದ್ರಮೋಹನ್‌, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೇರು ನಟನ ಅಗಲಿಕೆಗೆ ತೆಲುಗು ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here