ತೆಲುಗು ಚಿತ್ರರಂಗದ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ವದಂತಿಗಳಿದ್ದವು. ತಾವು ಇನ್ನು ಮುಂದೆ ಪತಿ-ಪತ್ನಿಯಲ್ಲ ಎಂದು ಇದೀಗ ಇಬ್ಬರೂ ಅಧಿಕೃತವಾಗಿ ಟ್ವಿಟರ್‌ ಮೂಲಕ ಹೇಳಿಕೊಂಡಿದ್ದಾರೆ.

ಟಾಲಿವುಡ್‌ನ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ಅವರ ವೈಯಕ್ತಿಕ ಬದುಕಿನ ಕುರಿತಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ವದಂತಿಗಳು ಹರಿದಾಡುತ್ತಿದ್ದವು. ಇದು ಶುರುವಾಗಿದ್ದು ನಟಿ ಸಮಂತಾ ತಮ್ಮ ಹೆಸರಿನ ಮುಂದಿದ್ದ ‘ಅಕ್ಕಿನೇನಿ’ ಸರ್‌ನೇಮ್‌ ತೆಗೆದಾಗ. ಇಬ್ಬರ ಮಧ್ಯೆ ವೈಮನಸ್ಸು ತಲೆದೋರಿದೆ, ಬೇರ್ಪಡುತ್ತಿದ್ದಾರೆ ಎನ್ನುವ ಹೇಳಿಕೆಗಳಿಗೆ ಇಬ್ಬರು ತಾರೆಯರು ಮುಗುಮ್ಮಾಗಿದ್ದರು. ಇಬ್ಬರ ಮಧ್ಯೆ ವೈಮನಸ್ಸು ತಿಳಿಗೊಂಡು ಸರಿಯಾದೀತು ಎಂದೂ ಟಾಲಿವುಡ್‌ ಉದ್ಯಮದ ಮಂದಿಯೂ ಮಾತನಾಡಿದ್ದರು. ಇದೀಗ ಇಬ್ಬರೂ ತಾವು ಇನ್ನು ಮುಂದೆ ಪತಿ-ಪತ್ನಿಯಲ್ಲ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಇಬ್ಬರೂ ಪರಸ್ಪರರ ಒಪ್ಪಿಗೆಯ ಮೇರೆಗೆ ಬೇರ್ಪಡುತ್ತಿದ್ದು, ತಮ್ಮ ಅಭಿಪ್ರಾಯ ಗೌರವಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

“ಸಾಕಷ್ಟು ಮಾತುಕತೆ, ಚರ್ಚೆಯ ನಂತರ ಸಮಂತಾ ಮತ್ತು ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ಕಳೆದೊಂದು ದಶಕದ ಸ್ನೇಹ ನಮ್ಮದು. ಬೇರೆಯಾದರೂ ಪರಸ್ಪರರ ಬಗ್ಗೆ ಗೌರವ ಹೊಂದಿ ನಮ್ಮ ವೃತ್ತಿ ಬದುಕಿನ ಬಗ್ಗೆ ಗಮನಹರಿಸುತ್ತೇವೆ. ಈ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮ ಅಭಿಪ್ರಾಯ ಗೌರವಿಸಬೇಕೆಂದು ಕೇಳಿಕೊಳ್ಳುತ್ತೇವೆ” ಎಂದು ಇಬ್ಬರೂ ಒಂದೇ ರೀತಿಯ ಸಂದೇಶವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ನಿರ್ಧಾರದೊಂದಿಗೆ ಅವರ ನಾಲ್ಕು ವರ್ಷಗಳ ದಾಂಪತ್ಯ ಕೊನೆಗೊಂಡಿದೆ. ತಮ್ಮ ನೆಚ್ಚಿನ ತಾರೆಯರ ನಿರ್ಧಾರದಿಂದ ಬೇಸರಗೊಂಡ ಹಲವಾರು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ತೋಡಿಕೊಂಡು ಸಂದೇಶಗಳನ್ನು ಹಾಕುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here