ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೀರೋ ಗಾಂಧೀಜಿ ಬದುಕು-ಸಾಧನೆ ಬೆಳ್ಳಿತೆರೆ ಮೇಲೆ ಹಲವು ರೀತಿ ಚಿತ್ರಣಗೊಂಡಿದೆ. ರಾಷ್ಟ್ರಪಿತನ ವೈಯಕ್ತಿಕ ಜೀವನವೂ ಕೆಲವು ಚಿತ್ರಗಳಿಗೆ ವಸ್ತು. ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಗಾಂಧೀಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಮಹಾತ್ಮಾ ಗಾಂಧೀಜಿ ಜೀವನಗಾಥೆ ಹೇಳಿದ ಮೊದಲ ಸಿನಿಮಾ ‘ಗಾಂಧಿ’ (1982). ರಿಚರ್ಡ್ ಅಟೆನ್‌ಬರೋ ನಿರ್ದೇಶನದಲ್ಲಿ ತಯಾರಾದ ಚಿತ್ರಕ್ಕೆ ದೊಡ್ಡ ಮನ್ನಣೆ ಸಿಕ್ಕಿತು. ಪಾತ್ರ, ವಸ್ತು ಮತ್ತು ಮೇಕಿಂಗ್‌ನಿಂದಲೂ ಮೆಚ್ಚುಗೆ ಗಳಿಸಿದ ಚಿತ್ರವಿದು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಗಾಂಧೀಜಿ ಹೋರಾಟ ಅತ್ಯಂತ ಸಮರ್ಪಕವಾಗಿ ತೆರೆಗೆ ಬಂದಿತ್ತು. ನಮ್ಮ ಸ್ವರಾಜ್ಯದ ಕಥೆಯನ್ನು ತೆರೆಗೆ ತಂದದ್ದು ಬ್ರಿಟಿಷ್‌ ನಿರ್ದೇಶಕ ರಿಚರ್ಡ್ ಅಟೆನ್‌ಬರೋ ಎನ್ನುವುದೇ ಸೋಜಿಗ. ಇಂಗ್ಲಿಷ್‌ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಮಹಾತ್ಮನ ಪಾತ್ರಕ್ಕೆ ಜೀವ ತುಂಬಿದ್ದ ಬ್ರಿಟಿಷ್ ನಟ ಬೆನ್ ಕಿಂಗ್‌ಸ್ಲೇ ಪ್ರತಿಷ್ಠಿತ ಆಸ್ಕರ್ ಪುರಸ್ಕಾರಕ್ಕೆ ಭಾಜನರಾದರು.ಮಹಾತ್ಮನ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಪೈಕಿ ಬೆನ್ ಅಭಿನಯಕ್ಕೆ ಹೆಚ್ಚಿನ ಅಂಕ ಕೊಡಲಾಗುತ್ತದೆ.

ಸುರೇಂದ್ರರಾಜನ್‌

ಸುರೇಂದ್ರ ರಾಜನ್‌ | ಗಾಂಧಿ ಪಾತ್ರದಲ್ಲಿ ಗಮನ ಸೆಳೆದ ಮತ್ತೊಬ್ಬ ಕಲಾವಿದ ಸುರೇಂದ್ರ ರಾಜನ್. ವೀರ್ ಸಾವರ್ಕರ್ (2001), ಲೆಜೆಂಡ್ ಆಪ್ ಭಗತ್ ಸಿಂಗ್ (2002), ನೇತಾಜಿ ಸುಭಾಷ್ ಚಂದ್ರ ಭೋಸ್ (2005) ಹಿಂದಿ ಚಿತ್ರಗಳಲ್ಲಿ ಅವರು ರಾಷ್ಟ್ರಪಿತನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ರಂಗಭೂಮಿ ಹಿನ್ನೆಲೆಯ ಈ ಕಲಾವಿದ ಪಾತ್ರದ ಔಚಿತ್ಯ ಅರಿತು ನಟಿಸಿದ್ದರು. ಇವರು ನಟಿಸಿದ ಚಿತ್ರಗಳಲ್ಲಿ ಮಹಾತ್ಮನ ಚಿತ್ರಣಕ್ಕೆ ಹೆಚ್ಚು ಅವಕಾಶ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಸಾವರ್ಕರ್‌, ಭೋಸ್‌, ಭಗತ್‌ಸಿಂಗ್‌ರಿಗೆ ಗಾಂಧೀಜಿ ಅವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಸಹಜವಾಗಿಯೇ ಈ ಸಿನಿಮಾಗಳಲ್ಲಿ ಮಹಾತ್ಮನ ಪಾತ್ರಕ್ಕೆ ಹಿನ್ನಡೆಯಾಗಿತ್ತು.

ರಜಿತ್ ಕಪೂರ್‌

ರಜಿತ್ ಕಪೂರ್‌ | ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ತಯಾರಾದ ಸಿನಿಮಾ ‘ಮೇಕಿಂಗ್ ಆಫ್ ಮಹಾತ್ಮಾ’ (1996). ಶ್ಯಾಂ ಬೆನಗಲ್ ಚಿತ್ರ ನಿರ್ದೇಶಿಸಿದ್ದರು. ಹಿಂದಿ ಅವತರಣಿಕೆಯ ಶೀರ್ಷಿಕೆ ‘ಗಾಂಧಿ ಸೆ ಮಹಾತ್ಮಾ ತಕ್’. ಬೆನಗಲ್‌ರ ಅಚ್ಚುಮೆಚ್ಚಿನ ನಟ ರಜಿತ್ ಕಪೂರ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರು. ಗಾಂಧೀಜಿ ಕುರಿತು ಭಿನ್ನ ನೆಲೆಯಲ್ಲಿ ಚಿತ್ರಿತವಾದ ಪ್ರಯೋಗವಿದು. ದಕ್ಷಿಣ ಆಫ್ರಿಕಾದಲ್ಲಿ ಅವರು ಬ್ಯಾರಿಸ್ಟರ್‌ ಆಗಿ ಕಾರ್ಯನಿರ್ವಹಿಸಿದ್ದ ಸಂದರ್ಭದ ಮೇಲೆ ಬೆಳಕು ಚೆಲ್ಲಲಾಗಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ಸಿನಿಮಾ ಸಂಸ್ಥೆಗಳು ಜಂಟಿಯಾಗಿ ಚಿತ್ರ ನಿರ್ಮಿಸಿದ್ದವು. ಫಾತಿಮಾ ಮೀರ್ ಅವರ ‘ಅಪ್ರೆಂಟಿಸ್‌ಶಿಪ್‌ ಆಫ್ ಎ ಮಹಾತ್ಮಾ’ ಕೃತಿ ಸಿನಿಮಾಗೆ ಸ್ಫೂರ್ತಿ. ಗಾಂಧೀಜಿಯಾಗಿ ರಜಿತ್ ಕಪೂರ್ ಪ್ರಭಾವಶಾಲಿ ಅಭಿನಯ ನೀಡಿದ್ದರು.

ಮೋಹನ್ ಗೋಖಲೆ

ಮೋಹನ್‌ ಗೋಖಲೆ | 2000ರ ನಂತರ ಭಾರತೀಯ ಸಿನಿಮಾ ತಂತ್ರಜ್ಞರು ಇತಿಹಾಸದ ಕಥೆಗಳತ್ತ ಹೊರಳಿದರು. ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿರುವುದಕ್ಕಿಂತ ಹೆಚ್ಚಿನದನ್ನು ತೆರೆ ಮೇಲೆ ತೋರಿಸುವ ಉದ್ದೇಶ ಅವರದಾಗಿತ್ತು. ಇದೇ ಅವಧಿಯಲ್ಲಿ ಚಿತ್ರಣಗೊಂಡ ಸಿನಿಮಾ ‘ಬಾಬಾಸಾಹೇಬ್ ಅಂಬೇಡ್ಕರ್’. ಜಬ್ಬರ್ ಪಟೇಲ್ ನಿರ್ದೇಶನದ ಸಿನಿಮಾ ಇಂಗ್ಲಿಷ್ ಭಾಷೆಯಲ್ಲಿ ತಯಾರಾಗಿತ್ತು. ಮಹಾತ್ಮನ ಉಪವಾಸ, ಸತ್ಯಾಗ್ರಹದ ಬಗ್ಗೆ ಚಿತ್ರದಲ್ಲಿ ಲೇವಡಿಯಿದೆ ಎಂದು ಕೆಲವರು ಆಕ್ಷೇಪಿಸಿದ್ದರು. ಅದ್ಧೂರಿ ವೆಚ್ಚದಲ್ಲಿ ತಯಾರಾದ ಚಿತ್ರ ಬಾಕ್‌ಸ್‌ ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ದಕ್ಷಿಣದ ಖ್ಯಾತ ನಟ ಮುಮ್ಮೂಟಿ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ (1999) ಸಂದಿತ್ತು. ಮೋಹನ್ ಗೋಖಲೆ ಗಾಂಧೀಜಿಯಾಗಿ ಕಾಣಿಸಿಕೊಂಡಿದ್ದರು.

ನಾಸಿರುದ್ದೀನ್ ಷಾ

ನಾಸಿರುದ್ದೀನ್‌ ಷಾ | ಕಮಲ ಹಾಸನ್ ನಟಿಸಿ ನಿರ್ಮಿಸಿ, ನಿರ್ದೇಶಿಸಿದ ‘ಹೇ ರಾಮ್’ (2000) ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿನಿಮಾ. ಭಾರತ – ಪಾಕಿಸ್ತಾನ ವಿಭಜನೆ ಮತ್ತು ಗಾಂಧೀಜಿ ಹತ್ಯೆ ಹಿನ್ನೆಲೆಯಲ್ಲಿ ಹೆಣೆದ ಅರೆ ಕಾಲ್ಪನಿಕ ಕಥೆ. ಹಿಂದಿ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಚಿತ್ರ ತಯಾರಾಗಿತ್ತು. ನಿರ್ದೇಶಕ ಕಮಲ್, ಗಾಂಧೀಜಿ ಪಾತ್ರಕ್ಕೆನಾಸಿರುದ್ದೀನ್ ಶಾ ಅವರನ್ನು ಆಯ್ಕೆ ಮಾಡಿದ್ದರು. ಶ್ರೇಷ್ಠ ನಟ ನಾಸಿರ್ ಅಪ್ಪಟ ಗುಜರಾತಿ ಉಚ್ಛಾರಣೆಯೊಂದಿಗೆ ತೆರೆ ಮೇಲೆ ಗಾಂಧಿಯನ್ನು ಸಾಕಾರಗೊಳಿಸಿದ್ದರು. ಈ ಚಿತ್ರದಲ್ಲಿ ಗಾಂಧೀಜಿ ಚಿತ್ರಣ ನೇತ್ಯಾತ್ಮಕವಾಗಿತ್ತು. ಸಿನಿಮಾ ತೆರೆಕಂಡಾಗ ದೇಶದ ಕೆಲವೆಡೆ ಪ್ರತಿಭಟನೆಗಳಾಗಿದ್ದವು. ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಂಡ ‘ಹೇ ರಾಮ್’ ಭಾರತದಲ್ಲಿ ಸೋತಿತ್ತು.

ದಿಲೀಪ್ ಪ್ರಭಾವಲ್ಕರ್‌

ದಿಲೀಪ್‌ ಪ್ರಭಾವಲ್ಕರ್‌ | ಗಾಂಧಿ ತತ್ವಾದರ್ಶಗಳಿಗೆ ಸಮಕಾಲೀನ ಟಚ್ ನೀಡಿದ ಸಿನಿಮಾ ‘ಲಗೇ ರಹೋ ಮುನ್ನಾಭಾಯ್’ (2006). ಜನಪ್ರಿಯತೆ ಮತ್ತು ಮನರಂಜನೆ ಎರಡೂ ವಿಭಾಗದಲ್ಲಿ ಗಾಂಧೀಜಿ ಪಾತ್ರ ಗೆದ್ದಿತ್ತು. ಮರಾಠಿ ನಟ ದಿಲೀಪ್ ಪ್ರಭಾವಲ್ಕರ್ ಈ ಪಾತ್ರದಲ್ಲಿದ್ದರು. ಆಧುನಿಕ ಜಗತ್ತಿಗೆ ಹೊಂದಿಕೆಯಾಗುವ ಗಾಂಧಿ ಮಾದರಿಗೆ ನಿರ್ದೇಶಕರು ‘ಗಾಂಧಿಗಿರಿ’ ಎಂದು ಹೆಸರಿಟ್ಟಿದ್ದರು. ಜನಪ್ರಿಯ ಮುನ್ನಾಭಾಯ್‌ ಸರಣಿಯ ಆ ಚಿತ್ರದಲ್ಲಿ ನಾಯಕ ಅಂಡರ್‌ವರ್ಲ್ಡ್‌ ಡಾನ್. ಮಹಾತ್ಮನ ಆತ್ಮದೊಂದಿಗೆ ಮಾತನಾಡುವ ಮುನ್ನಾಭಾಯ್ ಮಹಾತ್ಮನ ತತ್ವಗಳಿಗೆ ಮೊರೆ ಹೋಗುತ್ತಾನೆ. ಇವುಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾನೆ. ಚಿತ್ರಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರಿಂದೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಮತ್ತೊಂದೆಡೆ ವಿಚಾರವಾದಿಗಳು, ಗಾಂಧಿ ತತ್ವಗಳನ್ನು ಹಾಸ್ಯ ಮಾಡಲಾಗಿದೆ ಎಂದು ಟೀಕಿಸಿದ್ದರು.

ದರ್ಶನ್ ಝರಿವಾಲಾ

ದರ್ಶನ್‌ ಝರಿವಾಲಾ | ಗಾಂಧೀಜಿ ಕುಟುಂಬದ ಬಗ್ಗೆಬೆಳಕು ಚೆಲ್ಲಿದ ಸಿನಿಮಾ ‘ಗಾಂಧಿ ಮೈ ಫಾದರ್’ (2007). ಅನಿಲ್ ಕಪೂರ್ ನಿರ್ಮಾಣದ ಈ ಚಿತ್ರದ ಗಾಂಧಿ ಪಾತ್ರದಲ್ಲಿ ದರ್ಶನ್ ಜರಿವಾಲಾ ನಟಿಸಿದ್ದರು. ‘ರಾಷ್ಟ್ರಪಿತ’ನೆಂದು ಪೂಜಿಸಲ್ಪಟ್ಟವರು ಗಾಂಧಿ. ಆದರೆ ತಮ್ಮ ಪುತ್ರ ಹರಿಲಾಲ್ ಗಾಂಧಿಗೆ ಅವರು ಒಳ್ಳೆಯ ತಂದೆಯಾಗಲಿಲ್ಲ ಎನ್ನುವುದು ಚಿತ್ರದ ಕಥಾಹಂದರ. ಹರಿಲಾಲ್ ಬದುಕಿನ ಕಥೆಯ ‘ಹರಿಲಾಲ್ ಗಾಂಧಿ : ಎ ಲೈಫ್’ ಸಿನಿಮಾಗೆ ಸ್ಫೂರ್ತಿ. ಗಾಂಧೀಜಿಯಾಗಿ ಕಾಣಿಸಿಕೊಂಡಿದ್ದ ದರ್ಶನ್ ಜರಿವಾಲಾ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಾಂಧಿ ಪಾತ್ರಗಳಲ್ಲಿ ಹತ್ತಾರು ನಟರು ಕಾಣಿಸಿಕೊಂಡಿದ್ದರೂ ಬೆನ್‌ ಕಿಂಗ್‌ಸ್ಲೇ ಮತ್ತು ನಾಸಿರುದ್ದೀನ್‌ ಷಾ ಅವರು ಮಹಾತ್ಮನ ಪಾತ್ರಗಳಲ್ಲಿ ನೆನಪಾಗುತ್ತಾರೆ.

ರಿಚರ್ಡ್‌ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಬೆನ್‌ ಕಿಂಗ್‌ಸ್ಲೇ

LEAVE A REPLY

Connect with

Please enter your comment!
Please enter your name here