ದೇಶಪ್ರೇಮದ ಕಥಾಹಂದರದ ‘ನಮೋಭಾರತ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಮೇಶ್ ಎಸ್ ಪರವಿನಾಯ್ಕರ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿ, ನಟಿಸಿರುವ ಚಿತ್ರವಿದು. ಸಿನಿಮಾಗೆ ಸೆನ್ಸಾರ್ ಬೋರ್ಡ್‌ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಮಾರ್ಚ್‌ನಲ್ಲಿ ಸಿನಿಮಾ ತೆರೆಕಾಣಲಿದೆ.
ರಮೇಶ್ ಎಸ್ ಪರವಿನಾಯ್ಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ನಮೋ ಭಾರತ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದೇಶವನ್ನು ಕಾಯುವ ಸೈನಿಕರ ಜೀವನ, ಸೈನಿಕನೊಬ್ಬನ ಪ್ರೀತಿ, ಪ್ರೇಮದ ಕಥಾಹಂದರವನ್ನು ಹೇಳುವ ಚಿತ್ರ ಇದಾಗಿದೆ. ರಮೇಶ್ ಎಸ್ ಅವರು ಈ ಹಿಂದೆ ಸ್ವಚ್ಚ ಭಾರತದ ಬಗ್ಗೆ ಗಾಂಧೀಜಿ ಕಂಡಿದ್ದ ಕನಸನ್ನಿಟ್ಟುಕೊಂಡು ‘ಗಾಂಧಿ ಕನಸು’ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದರು. ರೈತನೊಬ್ಬನ ಮಗ ಸೇನೆಗೆ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಿಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ ಭಯೋತ್ಪಾದನೆಯ ಅನುಭವಗಳನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಕಾಶ್ಮೀರದಲ್ಲಿ ಕಾರ್ಯನಿರತನಾದ ಸೈನಿಕನಿಗೆ ತನ್ನ ತಂದೆ, ತಾಯಿ ಹಾಗೂ ತಾನು ಊರಿನಲ್ಲಿ ಪ್ರೀತಿಸಿದ ಹುಡುಗಿಯ ನೆನಪುಗಳು ಕಾಡುತ್ತಿರುತ್ತವೆ. ತಾನು ಕೆಲಸ ಮಾಡುತ್ತಿರುವ ಕಾಶ್ಮೀರ ಗಡಿಭಾಗದ ಯುವತಿಯೊಬ್ಬಳನ್ನು ಸಹ ನಾಯಕ ಪ್ರೀತಿಸುತ್ತಾನೆ. ಕೊನೆಗೆ ಅವನಿಗೆ ಯಾವ ಹುಡುಗಿ ಸಿಗುತ್ತಾಳೆ ಎನ್ನುವುದೇ ಕಥೆಯ ತಿರುಳು.
ಜಮ್ಮು ಕಾಶ್ಮೀರ, ಲಡಾಕ್ ಸೇರಿದಂತೆ, ಕರ್ನಾಟಕದ ಕೊಪ್ಪಳ, ಅಂಜನಾದ್ರಿ ಬೆಟ್ಟ, ಕೆ ಆರ್ ಎಸ್ ಡ್ಯಾಮ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ. Shree Chowdeshwari Films ಬ್ಯಾನರ್ ಅಡಿಯಲ್ಲಿ ರಮೇಶ್ ಎಸ್ ಪರವಿನಾಯ್ಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎ ಟಿ ರವೀಶ್ ಸಂಗೀತ, ಡಾ ದೊಡ್ಡರಂಗೇಗೌಡ, ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ವೀರೇಶ್ ಎಸ್ ಟಿ ವಿ, ಗೌರಿ ವೆಂಕಟೇಶ್ ಛಾಯಾಗ್ರಹಣ, ರುದ್ರೇಶ್ ನಾಗಸಂದ್ರ ಸಂಭಾಷಣೆ, ಹೈಟ್ ಮಂಜು, ನಾಗೇಶ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಬಾಲಿವುಡ್ ನಟಿ ಸೋನಾಲಿ ಪಂಡಿತ್ ಚಿತ್ರದ ನಾಯಕಿ. ಭವ್ಯ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್, ರವೀಂದ್ರ ಸಿಂಗ್ ಶರ್ಮಾ, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.