ಈ ಸಿನಿಮಾ ವೀಕ್ಷಿಸುವ ಮಧ್ಯಮವರ್ಗದ ಪ್ರೇಕ್ಷಕರಿಗೆ, ಇದು ತನ್ನದೇ ಬದುಕಿನಲ್ಲಿ ಎದುರಾಗಿದ್ದ ಸನ್ನಿವೇಶ ಎನಿಸುತ್ತದೆ. ಚಿತ್ರದಲ್ಲಿನ ಕೆಲವು ಸನ್ನಿವೇಶಗಳಿಗೆ ಸಾಂತ್ವನ ನೀಡುವ ಗುಣವಿದೆ. ‘ನರೈ ಎಳುದುಂ ಸುಯಸರಿದಂ’ ತಮಿಳು ಸಿನಿಮಾ SonyLIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಿನಿಮಾದ ಮೂಲ ಉದ್ದೇಶ ಮನರಂಜನೆಯೇ ಆದರೂ ಕೆಲವು ಸಿನಿಮಾಗಳು ರಂಜನೆಯಾಚೆಗೂ ಒಂದು ರೀತಿಯ ವಿಶೇಷ ಅನುಭವಗಳನ್ನು ನೀಡುತ್ತವೆ. ಮನಸ್ಸಿಗೆ ಮುದ ನೀಡುತ್ತವೆ. ಖುಷಿ ನೀಡುತ್ತಲೇ ನಿರಾಳತೆಯ ಅನುಭವದೊಂದಿಗೆ ಸಂತೈಸುತ್ತವೆ. ಅದೇ ಪಟ್ಟಿಗೆ ಸೇರುವಂತ ಒಂದೊಳ್ಳೆ ತಮಿಳು ಸಿನಿಮಾ ‘ನರೈ ಎಳುದುಂ ಸುಯಸರಿದಂ’.
ಈ ಸಿನಿಮಾದಲ್ಲಿ ಮನರಂಜನೆಯ ಅಂಶ ಮತ್ತು ಕಾಲಾವಧಿ ತುಸು ಕಡಿಮೆ ಅನಿಸಿದರೂ ಚಿತ್ರ ವೀಕ್ಷಿಸಿದ ಮಧ್ಯಮವರ್ಗದ ಪ್ರೇಕ್ಷಕರನಿಗೆ ಇದು ತನ್ನದೇ ಬದುಕಲ್ಲಿ ಎದುರಾಗಿದ್ದ ಸನ್ನಿವೇಶಗಳು ಎನಿಸುತ್ತದೆ. ಚಿತ್ರಕಥೆಯಲ್ಲಿ ಪಾತ್ರವೊಂದಕ್ಕೆ ಒಳಿತೋ, ಕೆಡುಕೋ ಆದಾಗ, ಅದು ನಮಗೇ ಆಗುತ್ತಿರುವ ಅನುಭವವನ್ನೂ ನೀಡಬಹುದು. ಏಕೆಂದರೆ ಈ ಚಿತ್ರದಲ್ಲಿನ ವಿಷಯ ನಮ್ಮ ಸುತ್ತಲೂ ಕಂಡು ಕೇಳಿ ಅನುಭವಿಸಿದ ಬದುಕಿನ ಘಟನೆಗಳು ಎನಿಸುತ್ತವೆ. ಕಥೆ ಪಾತ್ರ ಎಲ್ಲವೂ ನೈಜತೆಯಿಂದ ಕೂಡಿದ್ದು, ಭಿನ್ನ ವ್ಯಕ್ತಿತ್ವ ಮತ್ತು ವಯಸ್ಸಿನ ಇಬ್ಬರು ವ್ಯಕ್ತಿಗಳ ಆಕಸ್ಮಿಕ ಬೇಟಿಯ ನಂತರ ಹುಟ್ಟುವ ಸ್ನೇಹ ಸೌಹಾರ್ಧತೆ, ಕುಟುಂಬಗಳಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಾಗುವ ವಿಫಲತೆ ಜೊತೆಗೆ ಮನುಷ್ಯ ಸಂಬಂಧ ಮತ್ತು ಮಾನವೀಯ ಮೌಲ್ಯದ ಕುರಿತು ಮಾತನಾಡುತ್ತದೆ.
ಮಧ್ಯಮ ವರ್ಗದ ಕುಟುಂಬವೊಂದರ ಯಜಮಾನ ವೈದ್ಯನಾಥನ್. ಹತ್ತಾರು ವರ್ಷಗಳಿಂದ ನಿಷ್ಠಾವಂತ ಕೆಲಸಗಾರನಾಗಿ ಒಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತ ಸದಾ ಚಟುವಟಿಯಿಂದಿರುವಂತ ವ್ಯಕ್ತಿ. ನಿವೃತ್ತಿಗೆ ವರ್ಷವಿರುವಂತೆಯೇ ಸಂಸ್ಥೆಯು digitalisation ಆಗುತ್ತಿರುವ ಕಾರಣದಿಂದ ನಿವೃತ್ತಿ ಹೊಂದುವ ಸಂದರ್ಭ ಎದುರಾಗುತ್ತದೆ. ನಿವೃತ್ತಿ ಹೊಂದಿದ ನಂತರ ಕೆಲಸವಿಲ್ಲದೆ ಮನೆಯಲ್ಲಿ ಕೂರುವುದರಿಂದ ಮನೆಮಂದಿಯ ಮಾತುಳಿಂದಲೋ, ಅವರು ಹೇಳುವ ಸಣ್ಣ ಕೆಲಸಗಳಿಂದಲೋ ತನಗೆ ಮರ್ಯಾದೆ ಕಡಿಮೆಯಾಯ್ತು ಎಂದುಕೊಳ್ಳುತ್ತಾನೆ. ನಿತ್ಯ ರೂಢಿಯಾಗಿದ್ದ ಯಾಂತ್ರಿಕ ಬದುಕಿನ ಕೆಲ ವಿಷಯಗಳಿಂದ ದೂರಾಗಿ ಖಿನ್ನತೆಗೆ ಒಳಗಾಗಿ ಬಾರು ತಲುಪುತ್ತಾನೆ. ಕುಡಿದು ಬರುವಾಗ ಆಕಸ್ಮಿಕವಾಗಿ ನೆಡೆಯುವ ಘಟನೆಯೊಂದರಿಂದ ಚಿತ್ರದ ಮತ್ತೊಂದು ಪಾತ್ರ ಪರಿಚಯವಾಗುತ್ತದೆ.
ಆತ ಉದ್ಯೋಗ ಅರಸಿ ಹಳ್ಳಿಯಿಂದ ಮಹಾನಗರಕ್ಕೆ ಬಂದು ಕೆಲಸಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿ ಬಡ ಯುವಕ ಮಣಿಕಂಠನ್. ಇಬ್ಬರ ನಡುವೆ ವಿಶೇಷ ಸ್ನೇಹ ಸಂಬಂಧವೊಂದು ರೂಪುಗೊಳ್ಳುತ್ತದೆ. ಪರಸ್ಪರರು ಸಿಕ್ಕಾಗ ಕಷ್ಟ, ಸುಖ ಹಂಚಿಕೊಳ್ಳುತ್ತಾ, ಕಾಲ ಕಳೆಯುತ್ತಾ ಸರಿ-ತಪ್ಪುಗಳ ಬಗ್ಗೆ ಚರ್ಚಿಸುತ್ತಾರೆ. ಮಣಿಕಂಠನ್ಗೆ ಸಲಹೆ – ಸೂಚನೆ ಸಿಗುತ್ತದೆ. ಹೀಗೆ ಒಬ್ಬರಿಗೊಬ್ಬರು ಹುರಿದುಂಬಿಸುವಂತ ದೃಶ್ಯಗಳೊಂದಿಗೆ ಕಥೆ ಸಾಗುತ್ತದಾದರೂ ನಿರುದ್ಯೋಗಿ ಮಣಿಕಂಠನ್ಗೆ ಉದ್ಯೋಗ ದೊರೆತಿರುವುದಿಲ್ಲ. ನಿವೃತ್ತಿ ಹೊಂದಿ ಮನೆಯಲ್ಲಿರುವ ವೈದ್ಯನಾಥನ್ ದುಗುಡ ಅರ್ಥಮಾಡಿಕೊಳ್ಳುವವರಿಲ್ಲ. ಹೀಗೆ ಪರಿತಪಿಸುವ ಪಾತ್ರಗಳ ಪರಿಸ್ಥಿತಿ ಕೊನೆಗೆ ಏನಾಗುತ್ತದೆ ಎನ್ನುವುದು ಚಿತ್ರದ ಕಥಾಹಂದರ.
ಯಾವುದೇ ಮನುಷ್ಯ ಹತ್ತಾರು ದಶಕಗಳಿಂದ ರೂಢಿಸಿಕೊಂಡ ದಿನಚರಿಯನ್ನು ಬದಲಾಯಿಸಿಕೊಂಡು ಹೊಸದಕ್ಕೆ ಒಗ್ಗಿಕೊಳ್ಳಲು ನಡೆಸುವ ಪರದಾಟ, ಅಭಿವೃದ್ಧಿ, ಅಪ್ಗ್ರೇಡ್ ಹೆಸರಿನಲ್ಲಾಗಬಹುದಾದ ಅನಾನೂಕೂಲತೆಗಳು, ವ್ಯಕ್ತಿಗಳನ್ನು ಮೇಲ್ನೋಟದಲ್ಲೇ ಅಳೆಯುವಂತಹ ಮನಸ್ಥಿತಿ, ಬಡತನದಿಂದ ಎದುರಿಸಬೇಕಾದ ಅಪಮಾನ… ಇವುಗಳನ್ನು ನಿರ್ದೇಶಕರು ಮನಮಟ್ಟುವಂತೆ ಕಟ್ಟಿದ್ದಾರೆ. ಇಷ್ಟರ ನಡುವೆ ಸಂವೇದನಾಶೀಲ ಪ್ರೀತಿಯೂ ಎಳೆಯೂ ಚಿತ್ರದಲ್ಲಿದೆ.
ಇಲ್ಲಿ ನಿರ್ದೇಶಕ ಮಣಿಕಂಠನ್, ಸ್ವತಃ ತಾವೇ ನಿರುದ್ಯೋಗಿ ಯುವಕನ ಅದೇ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ವೈದ್ಯನಾಥನ್ ಪಾತ್ರದಲ್ಲಿ ಹಿರಿಯ ನಟ ಡೆಲ್ಲಿ ಗಣೇಶ್ ಪರಕಾಯ ಪ್ರವೇಶ ಮಾಡಿದ್ದಾರೆ. ಅಮೋಘ ಎನಿಸದಿದ್ದರೂ ಚಿತ್ರಕ್ಕೆ ಪೂರಕವಾದ ತಾಂತ್ರಿಕತೆ ಚಿತ್ರದಲ್ಲಿದೆ. ಟೇಬಲ್ ಮೇಲಿನ ಅರ್ಧದಷ್ಟು ಚಹಾ ತುಂಬಿದ ಗಾಜಿನ ಲೋಟ ತಿರುಗುವ ಸನ್ನಿವೇಶವೊಂದು ಚಿತ್ರದಲ್ಲಿದೆ. ಇದನ್ನು ನೋಡುತ್ತಾ ನಿಮ್ಮ ಮನಸ್ಸಿನಲ್ಲೂ ಕಂಪನಗಳು ಏಳಬಹುದು. ಪ್ರಮುಖ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಸಿನಿಮಾ ಪ್ರಸ್ತುತ SonyLIV ನಲ್ಲಿ ಸ್ಟ್ರೀಮ್ ಆಗುತ್ತಿದೆ.