ಇದು ಪ.ರಂಜಿತ್ ಅವರ Bold & Different attempt. ಇನ್ಯಾರೇ ನಿರ್ದೇಶಕ ಇಷ್ಟು ನೇರಾನೇರವಾಗಿ ವಿಷಯಗಳನ್ನು ಚರ್ಚಿಸಲು ಸಿದ್ಧನಿರಲಾರ. ‘ನಚ್ಚತ್ತಿರಮ್ ನಗರ್ಗಿರದು’ ತಮಿಳು ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಖಂಡಿತ ಈ ಸಿನಿಮಾ ಇನ್ನೊಂದು ಇಪ್ಪತ್ತು ಮೂವತ್ತು ವರ್ಷಗಳಾದ ಮೇಲೆ ನೋಡಿದರೆ ಜೀರ್ಣಿಸಿಕೊಳ್ಳಬಹುದು ಅನ್ನಿಸುವಂಥದ್ದು. ಅಷ್ಟು ಮುಂಗಡವಾಗಿ ಈಗಲೇ ತೆರೆಯ ಮೇಲೆ ತಂದಿದ್ದಾರೆ ಪ.ರಂಜಿತ್. ನೋಡುತ್ತ ನೋಡುತ್ತ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತ ಸಾಗಿದೆ. ‘ಮಕ್ಕಳು ಪ್ರೀತಿಗೆ ಬಿದ್ದಿದ್ದಾರೆ’ ಅಂತ ಗೊತ್ತಾದ ತಕ್ಷಣ ‘ಯಾವುದೋ ಅನಾಹುತವಾಯಿತು’ ಅಂತ‌ ಗಾಬರಿ ಬೀಳುವ ಪೋಷಕರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ಭಾರತ ಇನ್ನೂ ತಾನು ನಿಧಾನಕ್ಕೆ ತೆರೆದುಕೊಳ್ಳುತ್ತಿರುವ ಅನೇಕ ವಿಷಯಗಳನ್ನು ನೇರಾನೇರ ತೆರೆಗೆ ತಂದಿದ್ದಾರೆ. ಎಲ್ಲಿಯೂ ಅವರು ಕೆಲ ವಿಷಯಗಳನ್ನು ಹೇಳಲು ಹಿಂಜರಿಯುತ್ತಿದ್ದಾರೆ ಅಂತ ಅನ್ನಿಸುವುದೇ ಇಲ್ಲ.

ಒಂದು ರಂಗ ತಾಲೀಮಿನ ವಿಷಯವನ್ನು ಕಥೆಯ ಮುಖ್ಯ ಎಳೆಯನ್ನಾಗಿಟ್ಟುಕೊಂಡು ಅದರೊಳಗಿನ ಪಾತ್ರಗಳನ್ನು ಬಳಸಿಕೊಂಡು ತಾನು ಹೇಳಬೇಕೆಂದುಕೊಂಡಿರುವ ಅನೇಕ ವಿಷಯಗಳನ್ನು ಸಿನಿಮಾದುದ್ದಕ್ಕೂ ಹೇಳಿದ್ದಾರೆ. ನನಗೆ ಇಷ್ಟವಾಗಿದ್ದು ಅಂದರೆ ಎಲ್ಲಿಯೂ ಬೇಕಂತಲೇ ಆ ಕಥೆ ಆ ತಿರುವು ಪಡೆದುಕೊಳ್ಳುತ್ತಿದೆ ಅನ್ನಿಸುವುದಿಲ್ಲ. ಪಾತ್ರಗಳ ಸೃಷ್ಟಿ ಉದ್ದೇಶಪೂರ್ವಕವಾಗಿದೆ. ನಾಟಕದ ತಂಡದಲ್ಲಿ Gay, Lesbian , Transgender, ಅನ್ಯಭಾಷೆಯ,‌ ಅನ್ಯ ಧರ್ಮದ, ಬೇರೆ ಬಣ್ಣದ, ಬೇರೆ ಜಾತಿಯ, ಬೇರೆ ದೇಶದ ಎಲ್ಲ ಪಾತ್ರಗಳನ್ನು ತರುವುದರ ಮೂಲಕ ಅನೇಕ ಮುಖ್ಯವಾದ ವಿಷಯಗಳನ್ನು ಹೇಳುತ್ತಾರೆ. ಇಲ್ಲಿ ಒಂದು ಡೈಲಾಗಿನಲ್ಲಿ ಬಂದು ಹೋಗುವ ಒಂದು ವಿಷಯವನ್ನು ಗಂಟೆಗಟ್ಟಲೆ ಚರ್ಚಿಸಬಹುದು.

‘ಅಲ್ಲಾ…. ಎಷ್ಟಾದರೂ ಅವಳು ಅವನ ex. ಹಾಗಿರುವಾಗ ಅವನು‌ ಅವಳಿಗೆ ಕಿಸ್ ಕೊಟ್ಟಿದ್ದು ಅಷ್ಟೊಂದು ದೊಡ್ಡ ಅಪರಾಧವಾಯಿತಾ? ಅವಳು ಅವನ Ex ಆಗಿದ್ದರೇನಂತೆ? ಈಗಲೂ ಅವನು ಅವಳ boyfriend ಆಗಿದ್ದರೂ, ಅವಳ ಒಪ್ಪಿಗೆಯಿಲ್ಲ ಅಂದರೆ ಆತ ಕಿಸ್ ಮಾಡೋ ಆಗಿಲ್ಲ. ‘No means No’ ಆದರೂ ಅವಳು ಮಾಡಿದ್ದು ಸ್ವಲ್ಪ ಜಾಸ್ತಿ ಅನ್ನಿಸಿತಪ್ಪ! ನೋ….‌ ಹಾಗೇನಿಲ್ಲ. She is right!’

ಈ ಥರ ಬೆಣ್ಣೆ ಹಚ್ಚಿ ಹೇಳುವುದರ ಬದಲು ಅನೇಕ ವಿಷಯಗಳನ್ನು ನೇರಾನೇರ ಖಾರವಾಗಿಯೇ ಸರಿ ತಪ್ಪು‌ಅಂದರೇನೆಂದು ಹೇಳಲಾಗಿದೆ. ಯಾವುದಾದರೂ ವಿಷಯ ಸಿನಿಮಾ‌ ನೋಡುವಾಗ ಕೊಂಚ irritate ಮಾಡಿತು ಅನ್ನುವುದಾದರೆ ‘ಆ ವಿಷಯದ ಬಗ್ಗೆ ‌ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಬೇಕು’ ಅನ್ನುವುದಷ್ಟೇ ಅರ್ಥ.
ಸಂಗೀತದ ಥೀಮ್ ಕೂಡ ರಂಗಭೂಮಿಗೆ ಹೊಂದಿಕೊಳ್ಳುವಂತೆ ಇರುವುದರಿಂದ‌ ಹೊಸ ಅನುಭವ ಕೊಡುತ್ತದೆ. ಎಲ್ಲ ಕಲಾವಿದರದು ನೈಜ‌ ಅಭಿನಯ. ಒಂದಿಬ್ಬರನ್ನು ‌ಹೊರತುಪಡಿಸಿದರೆ ಉಳಿದವರೆಲ್ಲರೂ ಹೊಸಬರೇ.

ಸಿನಿಮಾ ಪೂರ್ತಿ ನಮ್ಮನ್ನು ಆವರಿಸಿಕೊಳ್ಳುವ ಪಾತ್ರವೆಂದರೆ Rene. ದುಶಾರಾ ವಿಜಯನ್ ಆ ಪಾತ್ರದಲ್ಲಿ ನಮ್ಮನ್ನು ಪೂರ್ತಿ ಆವರಿಸಿಕೊಳ್ಳುತ್ತಾರೆ. ಸಿನಿಮಾ ಮುಗಿಯುವಷ್ಟರ ಹೊತ್ತಿಗೆ ಆಕೆಯ ಪ್ರತಿ ಮುಖಭಾವಕ್ಕೂ, ಮಾತಿಗೂ, ವರ್ತನೆಗೂ ನಮಗೆ ಅರ್ಥ ಸಿಕ್ಕು ‘She is Perfect’ ಅನ್ನಿಸಲಾರಂಭಿಸುತ್ತಾಳೆ. That’s the beauty of that character.

ಖಂಡಿತವಾಗಿ ಇದೊಂದು ಪ.ರಂಜಿತ್ ಅವರ Bold & Different attempt. ಇನ್ಯಾರೇ ನಿರ್ದೇಶಕ ಇಷ್ಟು ನೇರಾನೇರವಾಗಿ ವಿಷಯಗಳನ್ನು ಚರ್ಚಿಸಲು ಸಿದ್ಧನಿರಲಾರ. ಸಿನಿಮಾದಿಂದ ಸಿನಿಮಾಗೆ ಆತ ಬೆಳೆಯುತ್ತಲೇ ಇದ್ದಾನೆ. ಪ್ರತಿ ಸಿನಿಮಾ ಬಂದಾಗ ಮುಂದಿನ ಸಿನಿಮಾ ಯಾವುದಿರಬಹುದು ಎನ್ನುವ ಕುತೂಹಲವನ್ನಂತೂ ಹುಟ್ಟಿ ಹಾಕಿಯೇ ತೀರುತ್ತಾನೆ.

LEAVE A REPLY

Connect with

Please enter your comment!
Please enter your name here