ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ಒಂಬತ್ತು ಎಪಿಸೋಡ್‌ಗಳ ನಕ್ಸಲ್‌ಬಾರಿ ಸರಣಿ ಎಲ್ಲಿಯೂ ಸೈದ್ಧಾಂತಿಕ ವೈಭವೀಕರಣ ಅಥವಾ ತುಚ್ಛೀಕರಣ ಮಾಡುವುದಿಲ್ಲ. ಯಾವುದೇ ಒಂದು ವರ್ಗವನ್ನು ತೃಪ್ತಿಪಡಿಸುವ ಸಾಹಸ ಇಲ್ಲಿಲ್ಲ.

ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಎಂಬ ಹಳ್ಳಿಯಲ್ಲಿ 1967ರಲ್ಲಿ ಭೂಮಾಲಿಕರ ವಿರುದ್ಧ ಭುಗಿಲೆದ್ದ‌ ಬಂಡಾಯ ಹಿಂಸಾತ್ಮಕ ರೂಪ ಪಡೆಯಿತು. ನಕ್ಸಲ್ ಬಾರಿ ಹೆಸರಿನ ಕಾರಣದಿಂದ ವ್ಯವಸ್ಥೆಯ ವಿರುದ್ಧ ವ್ಯವಸ್ಥಿತ ಬಂಡಾಯವೆದ್ದ ಆ ಗುಂಪಿನ ಸದಸ್ಯರು ನಕ್ಸಲೀಯರೆನಿಸಿಕೊಂಡರು. ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ಒಂಬತ್ತು ಕಂತುಗಳ ‘ನಕ್ಸಲ್‌ಬಾರಿ’ ಈ ಇತಿಹಾಸ ಹೇಳುವುದಿಲ್ಲ. ಬದಲಾಗಿ ಅಲ್ಲಿಂದ ಆರಂಭವಾದ ಚಟುವಟಿಕೆಯ ಇಂದಿನ ರೂಪವನ್ನು ತೋರಿಸುವ ಪ್ರಯತ್ನ ಮಾಡಿದೆ. ಸ್ವಾಭಾವಿಕವಾಗಿ ಓರ್ವ ಖಳನಾಯಕ ಮತ್ತು ಒಬ್ಬ ನಾಯಕನ ವ್ಯಾಪ್ತಿಯಿಂದ ಆಚೆಗಿರುವ ಕಥಾನಕವನ್ನು ಸಾಧ್ಯವಾಗಷ್ಟೂ ಮಟ್ಟಿಗೆ ನಾಯಕನ ಸುತ್ತ ಹೆಣೆದಿರುವ ಕಾರಣ ಒಳ್ಳೆಯ ವೆಬ್ ಸರಣಿಗೆ ಸಾಕಷ್ಟು ಸರಕು ಒದಗಿಸಿದೆ.

ಛತ್ತೀಸ್‌ಗಡಕ್ಕೆ ಅಂಟಿಕೊಂಡಿರುವ ಮಹಾರಾಷ್ಟ್ರದ ಗಡಿಜಿಲ್ಲೆ ಗಡ್ಚಿರೋಲಿಯಲ್ಲಿ ನಕ್ಸಲೀಯರು 2019ರಲ್ಲಿ ನೆಲಬಾಂಬ್ ಸ್ಪೋಟಿಸಿ ಹದಿನೈದು ಪೊಲೀಸರನ್ನು ಹತ್ಯೆಗೈದಿದ್ದರು. ಈ ಸರಣಿಗೆ ಅಡಿಪಾಯವಾಗಿ‌ ನಿಂತಿರುವುದು ಆ ನೈಜ ಘಟನೆ. ಸರಣಿಗೆ ಕುತೂಹಲಕಾರಿ ಆರಂಭವನ್ನೂ ಈ ದುರಂತ ಒದಗಿಸಿದೆ. ಆಡಳಿತದ ನಿರಂತರ ಕಾರ್ಯಾಚರಣೆಯ ತರುವಾಯವೂ ಐವತ್ತೈದು ವರ್ಷಗಳಲ್ಲಿ ನಕ್ಸಲ್ ಬಂಡುಕೋರರನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಿಲ್ಲ. ಏಕೆಂದರೆ ಅವರದು ಕಾಡುಮೇಡುಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ‌ ಮಾತ್ರ ಚಟುವಟಿಕೆಯಿಂದಿರುವ ಸಂಘಟನೆಯಲ್ಲ. ಆಡಳಿತ, ಪೊಲೀಸ್, ವಿಶ್ವವಿದ್ಯಾಲಯ ಹಾಗೂ ಎನ್‌ಜಿಒಗಳಲ್ಲೂ ನಕ್ಸಲ್ ಸಹಾನುಭೂತಿ ಉಳ್ಳವರಿಂದಾಗಿಯೇ ನಕ್ಸಲ್ ಚಟುವಟಿಕೆ ಜೀವಂತವಾಗಿದೆ ಎಂಬುದನ್ನು ‘ನಕ್ಸಲ್‌ಬಾರಿ’ ಕಟ್ಟಿಕೊಟ್ಟಿದೆ. ಈ ವಿಚಾರವನ್ನು ಕಮೆಂಟರಿ ರೂಪದಲ್ಲಿ ಹೇಳದೆ ಕತೆಯ ಒಳಗೆ ಹಾಸುಹೊಕ್ಕಿದಂತೆ ಬರೆದಿರುವುದು ಚಿತ್ರಕತೆಗಾರರಾದ ಪುಲ್ಕಿತ್ ರಿಷಿ‌ ಹಾಗೂ ಪ್ರಖರ್ ವಿಹಾನ್ ಹೆಚ್ಚುಗಾರಿಕೆ.

ನಕ್ಸಲ್ ಸಹಾನುಭೂತಿಯುಳ್ಳ ಪಾತ್ರಗಳು ಅಂಥದ್ದೊಂದು ಧೋರಣೆ ಹೊಂದಲು ಸಕಾರಣವನ್ನೂ ಕೊಟ್ಟಿರುವುದು ಉತ್ತಮ ಕತೆಗಾರಿಕೆಯ ಸೂತ್ರ. ಟಿವಿ ಚರ್ಚೆಗಳಲ್ಲಿ ಮಾತನಾಡುವ ಪರಿಸರವಾದಿಗಳ ದೊಡ್ಡ ದನಿಯ ಹಿಂದೆ ಸಣ್ಣದೊಂದು ವೈಯಕ್ತಿಕ ಹಿತಾಸಕ್ತಿ ಇರುತ್ತದೆ‌ ಎಂಬುದು ಸಹಜ ಅಭಿವ್ಯಕ್ತಿ. ಆದರೆ ಬುಡಕಟ್ಟು ಜನಾಂಗ ಮಾತ್ರ ಪೊಲೀಸರು, ರಾಜಕಾರಣಿಗಳು ಮತ್ತು ನಕ್ಸಲರು – ಈ ಮೂರೂ ವರ್ಗಗಳಿಂದ ಶೋಷಣೆಗೆ ಒಳಗಾಗುವ ಅಂಶ ವಾಸ್ತವಕ್ಕೆ ಹತ್ತಿರವಿದೆ. ಕಾಡಿನ ದೃಶ್ಯಗಳು ಸಾಕಷ್ಟಿದ್ದರೂ ‘ನಕ್ಸಲ್ ಬಾರಿ’ಗೆ ನೋಡಿಸಿಕೊಂಡು ಹೋಗುವ ಗುಣ ಕೊಡುವುದು ನಗರದ ಜತೆಗಿನ ನಕ್ಸಲರ ಸಂಪರ್ಕ. ಆದಾಗ್ಯೂ ಬರಹಗಾರರು ಇಲ್ಲೆಲ್ಲಿಯೂ ಸೈದ್ಧಾಂತಿಕ ವೈಭವೀಕರಣ ಅಥವಾ ತುಚ್ಛೀಕರಣ ಮಾಡದಿರುವುದು ಯಾವುದೇ ಒಂದು ವರ್ಗವನ್ನು ತೃಪ್ತಿಪಡಿಸಲು ಮಾಡಿದ ಸರಕು ಇದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಗರಪ್ರದೇಶ ಇಲ್ಲದಿದ್ದರೆ ಕ್ಯಾಮರಾ ಕಣ್ಣಿಗೆ ಕಾಡು ಏಕತಾನತೆ ತುಂಬುತ್ತಿತ್ತು.

ಉತ್ತಮ ನಟ ರಾಜೀವ್ ಖಂಡೇವಾಲ್ ಧರಿಸಿದ ಎಸ್‌ಟಿಎಫ್ ಏಜೆಂಟ್ ರಾಘವ್‌ ಪಾತ್ರ ಸರಣಿಯಲ್ಲಿ ಕೊನೆಯವರೆಗೂ ಆವರಿಸಿದೆ. ನಕ್ಸಲ್ ಕತೆಯ ಜತೆಜತೆಗೇ ರಾಘವ್ ಸುತ್ತಲಿನ ಕತೆ ಒಂದೆಡೆ ಪ್ರತ್ಯೇಕವಾಗಿ ಸಾಗುತ್ತದೆ. ದೂರದಲ್ಲೆಲ್ಲೋ ಎರಡೂ ಜತೆಯಾಗುತ್ತವೆ. ಈ ಪಾತ್ರದಲ್ಲಿ ರಾಜೀವ್ ಕೊಂಚವೇ ಎಡವಿದ್ದರೂ ಸರಣಿ ಹಾಳಾಗುತ್ತಿತ್ತು. ಕೇಟ್ಕಿ ಪಾತ್ರದಲ್ಲಿ ಟೀನಾ ದತ್ತಾ ಹಾಗೂ ಮಹಿಳಾ ನಕ್ಸಲ್ ಶ್ರೀಜಿತಾ ದೇ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪ್ರಮುಖ ಪಾತ್ರಧಾರಿಗಳೆಲ್ಲರೂ ತೂಗಿಸಿಕೊಂಡು ಹೋಗಿದ್ದಾರೆ. ಆದರೆ ಪೂರಕ ಪಾತ್ರಗಳ ಅಭಿನಯ ಕೆಲವೆಡೆ ಅತಿ ಅನಿಸಿದರೆ ಮತ್ತೆ ಕೆಲವೆಡೆ ಮಂದವಾಗಿರುವುದು ನೈಜತೆಗೆ ಧಕ್ಕೆ ತಂದಿದೆ. ವೃತ್ತಿಪರ ನಟರು ತಾವಾಗಿಯೇ ಅಭಿನಯಿಸುತ್ತಾರೆ. ಉಳಿದವರಿಂದ ನಟನೆ ಹೊರತೆಗೆಯುವ ಹೊಣೆಗಾರಿಗೆ ನಿರ್ದೇಶಕನದ್ದೇ ಆಗಿರುತ್ತದೆ.

ನಿರ್ದೇಶಕ ತನ್ನ ಕಾರ್ಯನಿರ್ವಹಣೆಯಲ್ಲಿ ಎಡವಿರುವುದಕ್ಕೆ ಸಾಕಷ್ಟು ಪುರಾವೆಗಳು ಸರಣಿಯುದ್ದಕ್ಕೂ ಇವೆ. ನದಿಗೆ ಅಡ್ಡವಾಗಿ ಹಗ್ಗಹಾಕಿ‌ ಅದನ್ನು ಹಿಡಿದು ದಾಟುವ ಪೊಲೀಸರನ್ನು ತೋರಿಸುವಾಗ ನೀರು ಮೊಣಕಾಲ ಕೆಳಗೆ ಇರುವುದನ್ನು ತೋರಿಸಿದರೆ ಅದಕ್ಕೆ ನಿರ್ದೇಶಕನೇ ಹೊಣೆ. ದಟ್ಟ ಕಾಡಿನ ಒಳಗೆ ನಕ್ಸಲರ ವಿರುದ್ಧ ನಡೆಯುವ ಆಪರೇಶನ್ನನ್ನು ಕಂಟ್ರೋಲ್ ರೂಮಲ್ಲಿ ಕೂತು 4K ಗುಣಮಟ್ಟದಲ್ಲಿ ನೋಡಲು ಸಾಧ್ಯವಾಗುತ್ತದೆ ಎಂಬುದು ನಂಬಲು‌ ಕಷ್ಟವಾಗುವ ವಿಚಾರ. ಜತೆಗೆ ವೆಬ್ ಸೀರೀಸ್ ಎಂದ ಕೂಡಲೇ ನಿರೂಪಣೆಯನ್ನು ತಿರುವು ಮುರುವು ಮಾಡಲೇಬೇಕಾಗಿಲ್ಲ. ಸಹಜವಾಗಿ ಉತ್ತಮವಾಗಿರುವ ಚಿತ್ರಕತೆಯನ್ನು ಬಹುತೇಕ ಕಡೆಗಳಲ್ಲಿ ನೇರ ನಿರೂಪಣೆಗೇ ಒಳಪಡಿಸಬಹುದಿತ್ತು. ಹಾಗೆ‌ ಮಾಡದಿರುವುದೇ ಮೊದಲ ಐದು ಅಧ್ಯಾಯಗಳಲ್ಲಿ ನೋಡುವ ಅನುಭೂತಿಗೆ ಅನಗತ್ಯ ಕಿರಿಕಿರಿ ತಂದೊಡ್ಡಿದೆ. ಇದಲ್ಲದೆ ಸಾಧಾರಣ ಅನಿಸುವ ಹಿನ್ನೆಲೆ ಸಂಗೀತ ಹಿನ್ನೆಲೆಯಲ್ಲೇ ಇದ್ದಿದ್ದರೆ ಅಷ್ಟಾಗಿ ತೊಂದರೆ ಕೊಡುತ್ತಿರಲಿಲ್ಲ. ಆದರೆ ಅದರ ಅತಿಯಾದ ಬಳಕೆ ಸಾಧಾರಣ ಗುಣಮಟ್ಟವನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತದೆ. ‘ಅಂತ್ಯ ಹೀ ಆರಂಭ್ ಹೇ’ ಎಂಬ ಸಾಲು ಅನಪೇಕ್ಷಿತ ಜಾಗಗಳಲ್ಲಿ ಬಂದು ದೃಶ್ಯಗಳನ್ನು ಹಾಳುಗೆಡವುವಲ್ಲಿ ಸಫಲವಾಗಿದೆ.

ಸರಣಿಯ ಮತ್ತೊಂದು ದೊಡ್ಡ ಸೋಲು ಛಾಯಾಗ್ರಹಣ. ರಾತ್ರಿಯ ದೃಶ್ಯಗಳೂ ಹಗಲಿನಂತೆಯೇ ಕಂಡರೆ ಸನ್ನಿವೇಶದ ಗಾಂಭೀರ್ಯವೇ ಹಾಳಾಗುತ್ತದೆ‌ ಎಂಬ ಅರಿವು ಕ್ಯಾಮರಾ ಹಿಡಿದ ಹರಿ ನಾಯರ್‌ಗೆ ಇದ್ದಂತಿಲ್ಲ. ನಿರ್ಮಾಣ ಅನುಕೂಲತೆಗಾಗಿ ಹಗಲು ಹೊತ್ತಲ್ಲೇ ಫಿಲ್ಟರ್‌ಗಳನ್ನು ಉಪಯೋಗಿಸಿ ರಾತ್ರಿಯಂತೆ ತೋರಿಸಬೇಕಾದ ಅನುವಾರ್ಯತೆ ಇದ್ದಿರಬಹುದು ಅಂದುಕೊಂಡರೂ ರಾತ್ರಿಯ ದೃಶ್ಯಗಳಲ್ಲಿ ಬೆಳ್ಳಗಿನ ಆಕಾಶ ತೋರಿಸುವ ಛಾಯಾಗ್ರಾಹಕ ಕ್ಷಮೆಗೆ ಅರ್ಹನಲ್ಲ. ಇಂಥ ಕೊರತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನೋಡಿದರೆ ‘ನಕ್ಸಲ್‌ಬಾರಿ’ ಅಡ್ಡಿಯಿಲ್ಲ. ಮಿಗಿಲಾಗಿ ಯಾವ ಎಪಿಸೋಡೂ ಅರ್ಧ ಗಂಟೆ ಮೀರುವುದಿಲ್ಲ, ಚಿತ್ರಕತೆಗೂ ವೇಗವಿರುವ ಕಾರಣ ಬೇಗಬೇಗ ನೋಡಿಸಿಕೊಂಡು ಸಾಗುತ್ತದೆ.

1 COMMENT

  1. ತುಂಬಾ ಸರಳ ಸುಂದರ ಬರಹ.
    ಲೇಖಕರ ಬರಹಗಳನ್ನು ಓದಿ , ನೋಡುವುದು ಬೇಡವೆಂದು ಎನಿಸಿದ್ದ ಒಂದೆರಡು ಸಿನಿಮಾಗಳನ್ನು ನೋಡುವಂತಾಯಿತು.

Leave a Reply to Shreyas Kukke Cancel reply

Connect with

Please enter your comment!
Please enter your name here