ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ ‘ರಥಾವರ’. ಈ ಚಿತ್ರದ ಮೂಲಕ ವಿಶಿಷ್ಟ ರೀತಿಯಲ್ಲಿ ಕಥೆ ಹೇಳಿ ನಿರ್ದೇಶನದಲ್ಲಿ ಗೆದ್ದವರು ಚಂದ್ರಶೇಖರ್ ಬಂಡಿಯಪ್ಪ. ಇಂತಹ ಟ್ರೆಂಡಿ ನಿರ್ದೇಶಕ ಈಗ ‘ದಿಯಾ’ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬರ್‌ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ.

‘ದಿಯಾ’ ಸಿನಿಮಾ ಹಿಟ್‌ ಆದ ಬಳಿಕ ಕನ್ನಡ ಚಿತ್ರರಂಗದಲ್ಲಿ ನಟ ಪೃಥ್ವಿ ಅಂಬರ್‌ಗೆ ಜನಪ್ರಿಯತೆ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ‘ದಿಯಾ’ ಚಿತ್ರದಲ್ಲಿ ಅವರ ನಟನೆಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಸಿನಿಮಾಗಳ ಜೊತೆಗೆ ಕರಾವಳಿಯ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ಪೃಥ್ವಿ ಈಗ ಖ್ಯಾತ ಸ್ಯಾಂಡಲ್‌ವುಡ್‌ ನಿರ್ದೇಶಕನ ಜೊತೆಗೆ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಹೌದು, 2015ರಲ್ಲಿ ತೆರೆಗೆ ಬಂದಿದ್ದ ‘ರಥಾವರ’ ಸಿನಿಮಾದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ ನಟ ಪೃಥ್ವಿ ಅಂಬರ್‌ಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಪ್ರತಿ ಸಿನಿಮಾದಲ್ಲೂ ಒಂದು ಹೊಸತನದೊಂದಿಗೆ ಬರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಸಲ ಫ್ಯಾಮಿಲಿ ಕಥೆ ಹೇಳಲು ಹೊರಟ್ಟಿದ್ದಾರೆ. ‘ರಥಾವರ’ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಅವತಾರದಲ್ಲಿ ಅಬ್ಬರಿಸಿದ್ದರು. ಬಾಕ್ಸಾಫೀಸ್‌ನಲ್ಲಿಯೂ ಈ ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡಿತ್ತು. ‘ಆನೆ ಪಟಾಕಿ’ ಸಿನಿಮಾದಲ್ಲಿ ಹಾಸ್ಯದ ಹೊಳೆ ಹರಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದ ಅವರು, ಬಳಿಕ ‘ರಥಾವರ’ ದಂತಹ ಕಲ್ಟ್‌ ಸಿನಿಮಾವನ್ನ ಕೊಟ್ಟು ಸ್ಟಾರ್‌ ನಿರ್ದೇಶಕರ ಪಟ್ಟಿಗೆ ಸೇರಿಕೊಂಡರು. ‘ತಾರಕಾಸುರ’ ಚಿತ್ರದಲ್ಲಿ ಬುಡಬುಡಿಕೆ ಜನಾಂಗದ ಆಚರಣಾ ಪದ್ಧತಿ ಬಗ್ಗೆ ಕಥೆ ಹೇಳಿದ್ದರು.

ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್‌ಗೆ ಹಾರಿದ ಚಂದ್ರಶೇಖರ್ ಬಂಡಿಯಪ್ಪ ‘ರೆಡ್ ಕಾಲರ್’ ಎಂಬ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ಕೆಲಸ ಮುಗಿಸಿದ ನಂತರ ಅವರು, ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರಕ್ಕೂ ಕಥೆ ಬರೆದಿದ್ದರು. ಈಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ಬರುತ್ತಿದಾರೆ. ಈ ಸಲ ಅವರು, ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here