ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಡ್ರಗ್ಸ್ ಆನ್ ಕ್ರ್ಯೂಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರಿಗೆ ಜಾಮೀನು ನಿರಾಕರಿಸಲಾಗಿದೆ.

ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಖಾನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಮಾದಕದ್ರವ್ಯ ನಿಯಂತ್ರಣ ಕಛೇರಿ ಹೇಳಿಕೆಯನ್ನು ಕೋರ್ಟ್ ಒಪ್ಪಿಕೊಂಡಿದ್ದು, ಮಾದಕ ದ್ರವ್ಯವನ್ನು ವಶಪಡಿಸಿಕೊಂಡ ಮೇಲೆ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲೇಬೇಕು ಎಂದಿದೆ. ಇತರ ಇಬ್ಬರು ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮೂನ್ಮೂನ್ ಧಮೆಚಾಟ್ ಅವರ ಜಾಮೀನು ಅರ್ಜಿಯನ್ನು ಸಹ ನ್ಯಾಯಾಲಯವು ತಿರಸ್ಕರಿಸಿದೆ. ಈ ಮೂವರೂ ಈಗ ಸೆಷನ್ಸ್ ನ್ಯಾಯಾಲಯದ ಎದುರು ಹಾಜರಾಗಬೇಕಿದೆ.

ಆರ್ಯನ್ ಖಾನ್ ಅವರ ಬಳಿ ಯಾವುದೇ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ ಎಂದು ಎನ್‌ಸಿಬಿ ಹೇಳಿದ್ದರೂ, ಈ ಆರೋಪಿಗಳನ್ನು ಈಗ ಮತ್ತೆ ಮುಂಬೈನ ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗುತ್ತಿದೆ. ಜಾಮೀನಿನ ವಿರುದ್ಧ ವಾದಿಸಿದ ಎನ್‌ಸಿಬಿ, ಆರ್ಯನ್ ಖಾನ್‌ನನ್ನು ಬಿಡುಗಡೆ ಮಾಡುವುದರಿಂದ ಪ್ರಕರಣಕ್ಕೆ ಹಾನಿಯಾಗಬಹುದು ಎಂದು ಹೇಳಿದೆ. ಅವರು ಸಾಕ್ಷ್ಯಗಳನ್ನು ತಿರುಚಬಹುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ. “ಅವರು ಪ್ರಭಾವಶಾಲಿ ವ್ಯಕ್ತಿಗಳು.ಹಾಗಾಗಿ, ಸಾಕ್ಷ್ಯವನ್ನು ತಿರುಚುವ ಅವಕಾಶ ಇರುತ್ತದೆ. ಯಾರೋ ಒಬ್ಬ ವ್ಯಕ್ತಿಯ ಬಳಿ ಸಣ್ಣ ಪ್ರಮಾಣದ ಡ್ರಗ್ಸ್ ಸಿಕ್ಕಿದ್ದಿದ್ದರೆ ಅದು ಬೇರೆ ವಿಷಯ. ಆದರೆ ನಮ್ಮ ಬಳಿ ಸಾಕಷ್ಟು ವಿಷಯ ಇದೆ. ಈ ಹಂತದಲ್ಲಿ ಜಾಮೀನಿನಂತಹ ರಕ್ಷಣೆ, ನಮ್ಮ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಹೇಳಿದ್ದಾರೆ. ತನ್ನ ಬಳಿ ಒಂದು ಗ್ರಾಮ್‌ನಷ್ಟು ಡ್ರಗ್ಸ್ ಕೂಡ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲಿದ್ದ ಮಾಹಿತಿ ಆಧರಿಸಿ ತನ್ನನ್ನು ಬಂಧಿಸಲಾಗಿದೆ ಎಂದು ಆರ್ಯನ್ ಖಾನ್ ತಮ್ಮ ವಕೀಲರ ಮೂಲಕ ಹೇಳಿದ್ದರೂ ಕೂಡ ಈಗ ನ್ಯಾಯಾಲಯ ಬೇಲ್ ನಿರಾಕರಿಸಿರುವುದರಿಂದ ಕನಿಷ್ಠ ಪಕ್ಷ ಸೋಮವಾರದವರೆಗೆ ಆರ್ಯನ್ ಖಾನ್ ಜೈಲಿನಲ್ಲೇ ಇರಬೇಕಾಗಿದೆ.

LEAVE A REPLY

Connect with

Please enter your comment!
Please enter your name here