ಓಂಪ್ರಕಾಶ್ ರಾವ್ ‘ಫೀನಿಕ್ಸ್’ ಚಿತ್ರದೊಂದಿಗೆ ಚಿತ್ರನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಮತ್ತು ಕೃತಿಕಾ ಲೋಬೊ ಚಿತ್ರದ ಮೂವರು ನಾಯಕಿಯರು. ಬೆಂಗಳೂರು, ಜರ್ಮನಿ, ಆಸ್ಟ್ರಿಯಾದಲ್ಲಿ ಚಿತ್ರೀಕರಣ ನಡೆಯಲಿದೆ.
ಆಕ್ಷನ್ ಸಿನಿಮಾಗಳ ನಿರ್ದೇಶಕ ಓಂಪ್ರಕಾಶ್ ರಾವ್ ಮರಳಿದ್ದಾರೆ. ನಾಯಕಿ ಪ್ರಧಾನ ಸಿನಿಮಾ ಎನ್ನುವುದು ಹೈಲೈಟ್. ನಿರ್ದೇಶನದ ಜೊತೆ ತಮ್ಮ ಶ್ರೀಗುರು ಚಿತ್ರಾಲಯ ಬ್ಯಾನರ್‌ನಡಿ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ ಓಂಪ್ರಕಾಶ್ ರಾವ್. ‘ಫೀನಿಕ್ಸ್ ನನ್ನ ನಿರ್ದೇಶನದ 49ನೇ ಚಿತ್ರ. ನಮ್ಮ ಸಂಸ್ಥೆ ನಿರ್ಮಾಣದ 4ನೇ ಚಿತ್ರ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿ ಇರಲಿವೆ’ ಎನ್ನುತ್ತಾರೆ ಓಂಪ್ರಕಾಶ್ ರಾವ್. ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಮತ್ತು ಕೃತಿಕಾ ಲೋಬೊ ನಟಿಸುತ್ತಿದ್ದಾರೆ.
ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ಚಿತ್ರದ ನಾಯಕನಟರು. ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ಇರಲಿದ್ದು, ಪ್ರದೀಪ್ ರಾವುತ್ ಖಳ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆಯಂತೆ. ಬೆಂಗಳೂರು, ಜರ್ಮನ್ ಹಾಗೂ ಆಷ್ಟ್ರಿಯಾದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ ನಿರ್ದೇಶಕರು. ಸುಬ್ರಹ್ಮಣಿ ಅವರು ಬರೆದಿರುವ ಕತೆಗೆ ನಿರ್ದೇಶಕರೇ ಚಿತ್ರಕಥೆ ಬರೆದಿದ್ದಾರೆ. ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಎಂ ಎಸ್ ರಮೇಶ್ ಸಂಭಾಷಣೆ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ವಿಜಯನ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.