ರೆಟ್ರೋ ಕತೆಗಳನ್ನು ತೆರೆಗೆ ಅಳವಡಿಸುವುದು ಒಂದು ರೀತಿ ಸವಾಲೇ ಹೌದು. ಪಾತ್ರಗಳ ಚಿತ್ರಣದ ಜೊತೆ ಕಾಸ್ಟ್ಯೂಮ್‌, ಕಲಾನಿರ್ದೇಶನ, ಹಿನ್ನೆಲೆ ಸಂಗೀತ ಸೇರಿದಂತೆ ತಾಂತ್ರಿಕ ವಿಷಯಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕಾಗದದ ಮೇಲೆ ರಚಿಸಿಕೊಂಡ ಚಿತ್ರಕಥೆ, ಚಿತ್ರಿಸುವಾಗ ಬೇರೇನೋ ಆಗುವ ಸಾಧ್ಯತೆಗಳು ಈ ಮಾದರಿಯಲ್ಲಿ ಹೆಚ್ಚೇ ಇರುತ್ತವೆ. ಕೆಲವು ಮಿತಿಗಳಿದ್ದಾಗ್ಯೂ ನಿರ್ದೇಶಕಿ ಸಿಂಧು ಯಶಸ್ವಿಯಾಗಿದ್ದಾರೆ.

ಅಕಾಲಿಕವಾಗಿ ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರು ಮೆಚ್ಚಿದ್ದ ಕತೆ ‘ಆಚಾರ್‌ & ಕೋ’. ಚಿತ್ರಕಥೆ ನರೇಟ್‌ ಮಾಡಿದ್ದ ಸಿಂಧು ಶ್ರೀನಿವಾಸಮೂರ್ತಿ ಅವರೇ ಸಿನಿಮಾ ನಿರ್ದೇಶಿಸಲಿ ಎಂದಿದ್ದರು ಅವರು. ಅಪ್ಪು ಓಕೆ ಮಾಡಿದ್ದ ಚಿತ್ರವನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ತೆರೆಗೆ ತಂದಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುವ, ಹೊಸ ಕಾನ್ಸೆಪ್ಟ್‌ಗಳಿಗೆ ಬಲ ನೀಡುವ ಸದುದ್ದೇಶದಿಂದ ಶುರುವಾದ ಸಂಸ್ಥೆ PRK ಎಂದಿದ್ದರು ಪುನೀತ್‌. ಅವರ ಆಶಯವನ್ನು ಈಡೇರಿಸುವಂತೆ ‘ಆಚಾರ್‌ & ಕೋ’ ಮೂಡಿಬಂದಿದೆ. ಬಜೆಟ್‌ ಮಿತಿಯಲ್ಲಿಯೂ ಭಿನ್ನ ಕತೆ, ನಿರೂಪಣೆಯೊಂದಿಗೆ ಚೆಂದದ ಸಿನಿಮಾ ಮಾಡಬಹುದು ಎನ್ನುವ ಸಿನಿಮಾಗಳ ಪಟ್ಟಿಗೆ ‘ಆಚಾರ್‌ & ಕೋ’ ಚಿತ್ರವನ್ನೂ ಸೇರ್ಪಡೆಗೊಳಿಸಬಹುದು.

ಇದು ಭಿನ್ನ ಕತೆ ಎನ್ನುವ ನಿರ್ದೇಶಕಿ, ನಿರ್ಮಾಪಕರ ಮಾತು ಅತಿಶಯೋಕ್ತಿ ಎಂದೇನೂ ಅನ್ನಿಸುವುದಿಲ್ಲ. ಏಕೆಂದರೆ ಚಿತ್ರದ ಕತೆ 60, 70ರ ಕಾಲಘಟ್ಟದ್ದು. ರೆಟ್ರೋ ಕತೆಗಳನ್ನು ತೆರೆಗೆ ಅಳವಡಿಸುವುದು ಒಂದು ರೀತಿ ಸವಾಲೇ ಹೌದು. ಪಾತ್ರಗಳ ಚಿತ್ರಣದ ಜೊತೆ ಕಾಸ್ಟ್ಯೂಮ್‌, ಕಲಾನಿರ್ದೇಶನ, ಹಿನ್ನೆಲೆ ಸಂಗೀತ ಸೇರಿದಂತೆ ತಾಂತ್ರಿಕ ವಿಷಯಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕಾಗದದ ಮೇಲೆ ರಚಿಸಿಕೊಂಡ ಚಿತ್ರಕಥೆ, ಚಿತ್ರಿಸುವಾಗ ಬೇರೇನೋ ಆಗುವ ಸಾಧ್ಯತೆಗಳು ಈ ಮಾದರಿಯಲ್ಲಿ ಹೆಚ್ಚೇ ಇರುತ್ತವೆ. ಕೆಲವು ಮಿತಿಗಳಿದ್ದಾಗ್ಯೂ ನಿರ್ದೇಶಕಿ ಸಿಂಧು ಈ ಸಿನಿಮಾದಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆ ನೋಡಿದರೆ ಚಿತ್ರದ ಕತೆ ತುಂಬಾ ವಿಸ್ತಾರವಾದ್ದೇನೂ ಅಲ್ಲ. ಮಧುಸೂಧನ್‌ ಆಚಾರ್‌ ಮತ್ತು ಸಾವಿತ್ರಿ ದಂಪತಿ ಹಾಗೂ ಅವರ ಹತ್ತು ಮಕ್ಕಳ ಕುಟುಂಬದ ಕತೆ. ಶಿಸ್ತು, ಸಂಪ್ರದಾಯಸ್ಥ ಮಧುಸೂಧನ್‌ ಆಚಾರ್‌ ಕುಟುಂಬದ ಏರಿಳಿತಗಳೇ ಕಥಾಹಂದರ. ಎಲ್ಲವೂ ಸಲೀಸಾಗಿ ನಡೆಯುತ್ತಿರುವಾಗ ಅಚಾನಕ್ಕಾಗಿ ಸಂಸಾರಕ್ಕೆ ಬಂದೆರಗುವ ಆಘಾತಗಳು, ಇದರಿಂದ ಮಕ್ಕಳು ಎದುರಿಸಬೇಕಾದ ಕಷ್ಟ, ಅಪಮಾನಗಳನ್ನು ಸರಳವಾಗಿ ನಿರೂಪಿಸಿದ್ದಾರೆ ನಿರ್ದೇಶಕಿ ಸಿಂಧು. ಅಂದಿನ ದಿನಗಳನ್ನು ನೋಡಿದ ಹಿರಿಯರಿಗೆ ಕತೆ ಸುಲಭವಾಗಿ ಕನೆಕ್ಟ್‌ ಆದರೆ, ಇಂದಿನವರು ಕುತೂಹಲದೊಂದಿಗೆ ಸಿನಿಮಾಗೆ ಮುಖಾಮುಖಿ ಆಗಬಹುದೇನೋ…

ಚಿತ್ರದಲ್ಲಿ ಮಿತಿಗಳೂ ಇವೆ. ಮುಖ್ಯಪಾತ್ರಗಳ ವಸ್ತ್ರವಿನ್ಯಾಸದ ಬಗ್ಗೆ ಮುತುವರ್ಜಿ ವಹಿಸಿರುವ ನಿರ್ದೇಶಕರು ಇತರೆ ಪಾತ್ರಗಳ ಬಗ್ಗೆ ಅಷ್ಟೊಂದು ಆಸ್ಥೆ ವಹಿಸಿದಂತಿಲ್ಲ. ಮದುವೆ ಸಮಾರಂಭ, ಬಸ್‌ ನಿಲ್ದಾಣದಲ್ಲಿ ಕಾಣಸಿಗುವ ಜನರ ನಡಾವಳಿ, ಕಾಸ್ಟ್ಯೂಮ್‌ ಕತೆಯ ವಾತಾವರಣಕ್ಕೆ ಹೊಂದಿಕೆಯಾಗುವುದಿಲ್ಲ. ಆರಂಭದಲ್ಲಿ ತೆರೆಯ ಮೇಲೆ ಕಾಣಿಸುವ ಮನೆಯ ಎಲ್ಲಾ ಮಕ್ಕಳು ಮುಂದೆ ಕತೆಯ ತಿರುವುಗಳಲ್ಲಿ ಕಣ್ಮರೆಯಾಗಿಬಿಡುತ್ತಾರೆ. ಇಂತಹ ತಾಂತ್ರಿಕ ಮಿತಿಗಳ ಹೊರತಾಗಿಯೂ ಸದಭಿರುಚಿಯ ಚಿತ್ರವಾಗಿ ‘ಆಚಾರ್‌ & ಕೋ’ ಇಷ್ಟವಾಗುತ್ತದೆ.

ಆಚಾರ್‌ ಕುಟುಂಬದ ಮಕ್ಕಳ ಪಾತ್ರಧಾರಿಗಳೆಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಮೊದಲು ಮುಂಗೋಪಿಯಾಗಿ, ಮಂದೆ ಹಳಿ ತಪ್ಪಿದ ಸಂಸಾರವನ್ನು ಜವಾಬ್ದಾರಿಯಿಂದ ನಿಭಾಯಿಸುವ ಮಗಳು ಸುಮ ಪಾತ್ರದ ಚಿತ್ರಣ ಚೆನ್ನಾಗಿದೆ. ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅವರೇ ಈ ಪಾತ್ರ ನಿರ್ವಹಿಸಿದ್ದು, ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ನಟ ಅಶೋಕ್‌ ಮತ್ತು ನಟಿ ಸುಧಾ ಬೆಳವಾಡಿ ಸಮಚಿತ್ತದ ನಟನೆಯ ಮೂಲಕ ಚಿತ್ರದ ತೂಕ ಹೆಚ್ಚಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಹಾಗೂ ರೆಟ್ರೋ ಕಾಲಘಟ್ಟಕ್ಕೆ ಅಗತ್ಯವಿರುವ ತಾಂತ್ರಿಕ ನೆರವು ನೀಡಿದ ಎಲ್ಲಾ ತಂತ್ರಜ್ಞರಿಗೂ ಅಭಿನಂದನೆ ಸಲ್ಲಬೇಕು. ಪ್ರೇಕ್ಷಕರು ಈ ಸಿನಿಮಾ ವೀಕ್ಷಿಸುತ್ತಾ ಆರೇಳು ದಶಕಗಳ ಹಿಂದಿನ ರೆಟ್ರೋ ದಿನಗಳನ್ನು ಕಣ್ತುಂಬಿಕೊಳ್ಳಬಹುದು.

LEAVE A REPLY

Connect with

Please enter your comment!
Please enter your name here