ಯೋಗೇಶ್‌ ಮಾಸ್ಟರ್‌ ಅಭಿನಯಿಸಿರುವ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಜಂಕಾರ್‌ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಠಾಗೂರರ ‘Once There was a King’ ಕಾದಂಬರಿ ಆಧರಿಸಿದ ಪ್ರಯೋಗವಿದು. ಚಿತ್ರದಲ್ಲಿ ಯೋಗೇಶ್‌ ಮಾಸ್ಟರ್‌ ಅವರು 24 ಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎನ್ನುವುದು ವಿಶೇಷ.

‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಚಿತ್ರವು ಡಿಜಿಟಲ್ ಪ್ಲಾಟ್‌ಫಾರ್ಮ್ ಜಂಕಾರ್ ಮ್ಯೂಸಿಕ್ ಮೂವೀಸ್‌ನಲ್ಲಿ ಬಿಡುಗಡೆಯಾಗಿದೆ. ಒಬ್ಬ ಕಲಾವಿದ, ಇಪ್ಪತ್ನಾಲ್ಕು ಪಾತ್ರಗಳು, ನಾಲ್ಕು ಹಾಡುಗಳು, ಹನ್ನೆರಡು ಪ್ರಾಸಂಗಿಕ ಹಾಡುಗಳನ್ನು ಹೊಂದಿರುವ ಚಿತ್ರವಿದು. ರಾಷ್ಟ್ರಕವಿ ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧಾರಿತ ಚಿತ್ರವು ಒಂದು ವಿಶ್ವಮಟ್ಟದ ರಂಗಭೂಮಿ ಅನುಭವದ ಸಿನಿಮಾ. ರಂಗಕರ್ಮಿ, ಲೇಖಕ ಯೋಗೇಶ್‌ ಮಾಸ್ಟರ್‌ ಅವರು ಠಾಗೂರರ ‘Once There was a King’ ಕಾದಂಬರಿಯನ್ನು ದಶಕಗಳ ಹಿಂದೆ ರಂಗರೂಪಕ್ಕೆ ತಂದು ಏಕವ್ಯಕ್ತಿ ಪ್ರದರ್ಶನದ ಪ್ರಯೋಗ ನಡೆಸಿದ್ದರು. ನಿರ್ದೇಶಕ ಸಂತೋಷ್‌ ಕೊಡಂಕೇರಿ ಅವರು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಶೀರ್ಷಿಕೆಯಡಿ ಈ ರಂಗಪ್ರಯೋಗವನ್ನು ಬೆಳ್ಳಿತೆರೆಗೆ ಅಳವಡಿಸಿದ್ದಾರೆ.

ದೃಷ್ಟಿ ಮೀಡಿಯಾ ಸಂಸ್ಥೆ ಈ ಪ್ರಯೋಗವನ್ನು ರಂಗಭೂಮಿಯಿಂದ ಚಲನಚಿತ್ರ ಮಾಧ್ಯಮಕ್ಕೆ ತರುವ ಸಾಹಸಕ್ಕೆ ಕೈಜೋಡಿಸಿದೆ. ‘ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಯಿತು. ಮೇಕಪ್ ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರೆ ರಂಗಪ್ರಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ ಇದಾಗಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ, ನಿರ್ಮಾಪಕ ಸಂತೋಷ್‌ ಕೊಡಂಕೇರಿ.

LEAVE A REPLY

Connect with

Please enter your comment!
Please enter your name here