ಸಂತೋಷ್‌ ಕೊಡೆಂಕೇರಿ ವಿನ್ಯಾಸ, ನಿರ್ಮಾಣ ಮತ್ತು ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರ ಕತೆಯನ್ನು ಆಧರಿಸಿದ ಪ್ರಯೋಗ. ನಟ, ಲೇಖಕ ಯೋಗೇಶ್‌ ಮಾಸ್ಟರ್‌ ಚಿತ್ರದಲ್ಲಿ 24 ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸಂತೋಷ್‌ ಕೊಡೆಂಕೇರಿ ವಿನ್ಯಾಸ ಮಾಡಿ ನಿರ್ಮಿಸಿ, ನಿರ್ದೇಶಿಸಿರುವ ಸಿನಿಮಾ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’. ಇಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಅತಿ ಕಡಿಮೆ ಸಂಖ್ಯೆಯ ತಂತ್ರಜ್ಞರು ಮತ್ತು ಯೋಗೇಶ್‌ಮಾಸ್ಟರ್‌ ಒಬ್ಬರೇ ನಟಿಸಿದ ಸಿನಿಮಾ. ಸಿನಿಮಾದಲ್ಲಿ ಅವರು ನಟನಾಗಿ 24 ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತ ಸಂಯೋಜನೆಯ ಹೊಣೆಯೂ ಅವರದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರ ‘ಹಂಗ್ರೀ ಸ್ಟೋನ್ಸ್‌’ ಕಥಾಸಂಕಲನದಲ್ಲಿ ‘ಒನ್ಸ್‌ ದೇರ್‌ ವಾಸ್‌ ಎ ಕಿಂಗ್‌’ ಶೀರ್ಷಿಕೆಯ ಕತೆಯಿದೆ.

ಇಪ್ಪತ್ತೈದು ವರ್ಷಗಳ ಹಿಂದೆ ಯೋಗೇಶ್‌ ಮಾಸ್ಟರ್‌ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ನಂತರ ಅವರೇ ಈ ಕತೆಯನ್ನು ಸುಮಾರು ಒಂದೂಕಾಲು ಗಂಟೆಯ ಅವಧಿಯ ನಾಟಕವನ್ನಾಗಿ ರಂಗಕ್ಕೆ ಅಳವಡಿಸಿದ್ದರಂತೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ನಾಟಕವಾಗಿತ್ತು ಇದು. ಮುಂದೆ ಯೋಗೇಶ್‌ ಮಾಸ್ಟರ್‌ ಈ ಕತೆಯನ್ನು ಒನ್‌ಮ್ಯಾನ್‌ ಶೋ ಮಾಡಿದ್ದರಂತೆ. ಇದಕ್ಕೆ ಹರಿಕಥೆ ಮಾದರಿ ಪ್ರೇರಣೆ. ರಂಗಭೂಮಿ ವೇದಿಕೆಯ ಮೇಲಿನ ಪರಿಕರಗಳನ್ನು ಬಳಕೆ ಮಾಡಿಕೊಂಡು ರೂಪುಗೊಂಡ ಇದು ವಿಶಿಷ್ಟ ಪ್ರಯೋಗವಾಯ್ತು. ಅದೇ ಈಗ ಸಿನಿಮಾ ಆಗಿದೆ.

“ಕೋವಿಡ್‌ ಸೆಕೆಂಡ್‌ ಲಾಕ್‌ಡೌನ್‌ನಲ್ಲಿ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಆಯ್ತು. ನನ್ನ ಪ್ರಕಾರ ಒಬ್ಬನೇ ಕಲಾವಿದ 24 ಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಜಗತ್ತಿನ ಮೊದಲ ಸಿನಿಮಾ ಇದು. ನಾಟಕವೊಂದನ್ನು ವಿಶ್ಯುಯಲ್‌ ಆಗಿ ಕಟ್ಟುವ ಪ್ರಯತ್ನವಿದು. ಯೋಗೇಶ್‌ ಮಾಸ್ಟರ್‌ ಅವರ ಪರ್ಫಾರ್ಮೆನ್ಸ್‌ ಸಿನಿಮಾದ ಆತ್ಮ” ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಸಂತೋಷ್‌ ಕೊಡಂಕೇರಿ. ಹತ್ತಾರು ಡಾಕ್ಯುಮೆಂಟರಿ, ಜಾಹೀರಾತುಗಳನ್ನು ರೂಪಿಸಿರುವ ಅನುಭವಿ ಅವರು. ಹಾಗಾಗಿ ಇಂಥದ್ದೊಂದು ಪ್ರಯೋಗವನ್ನು ವಿನ್ಯಾಸ ಮಾಡಿ ಎಕ್ಸಿಗ್ಯೂಟ್‌ ಮಾಡಲು ಸಾಧ್ಯವಾಗಿದೆ. ‘ಹೋಮ್‌ಸ್ಟೇ’ ಕನ್ನಡ ಮತ್ತು ಹಿಂದಿ ದ್ವಿಭಾಷಾ ಚಿತ್ರದೊಂದಿಗೆ ಅವರು ಬೆಳ್ಳಿತೆರೆ ಪ್ರವೇಶಿಸಿದರು. ಈ ಸಿನಿಮಾ ‘ಧಿಗಿಲ್‌’ ಶೀರ್ಷಿಕೆಯಡಿ ತಮಿಳಿನಲ್ಲೂ ತೆರೆಕಂಡಿದೆ.

ನಟ ಯೋಗೇಶ್‌ ಮಾಸ್ಟರ್‌ ಸಿನಿಮಾ ಪ್ರವೇಶಿಸಿ ಹಲವು ವರ್ಷಗಳೇ ಆಗಿವೆ. ‘ಆನಂದವನ’, ‘ಕ್ಷಮೆಯಿರಲಿ’, ‘ಮರಳಿ ಮನೆಗೆ’ ಚಿತ್ರಗಳನ್ನು ಮಾಡಿದ್ದರು. ‘ಕೊನೆಯ ಅಂಕ’, ‘ಅಮ್ಮು’ ಚಿತ್ರೀಕರಣ ಹಂತದಲ್ಲಿವೆ. ಈ ಮಧ್ಯೆ ಆಗಿದ್ದು ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’. “ಮೂಲ ಕತೆಯಲ್ಲಿ ರವೀಂದ್ರನಾಥ ಟ್ಯಾಗೋರರು ಮಾತನಾಡುತ್ತಾ ಹೋಗುತ್ತಾರೆ. ನಾನು ಮಾಡಿಕೊಂಡ ಕತೆಯಲ್ಲಿ ಕಥಾಲೇಖಕನು ಟ್ಯಾಗೋರರ ಜೊತೆ ಇಂಟರ್ಯಾಕ್ಟ್‌ ಮಾಡುತ್ತಾ ಹೋಗುತ್ತಾನೆ. ಇಲ್ಲಿ ನಾನು ರಾಜ, ರಾಣಿ, ಬಾಲಕ, ರಾಜಕುಮಾರಿ, ಅಜ್ಜಿ, ಕತೆಗಾರ… ಹೀಗೆ ಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಇದೊಂದು ವಿಶ್ಯುಯೆಲ್‌ ಥಿಯೇಟ್ರಿಕಲ್‌ ಎಕ್ಸ್‌ಪೆರಿಮೆಂಟ್‌” ಎನ್ನುತ್ತಾರೆ ಯೋಗೇಶ್‌ಮಾಸ್ಟರ್‌. ಚಿಂತನ್‌ ವಿಕಾಸ್‌ ಹಿನ್ನೆಲೆ ಸಂಗೀತ, ಜೀವನ್‌ಗೌಡ ಛಾಯಾಗ್ರಹಣ, ಬಿ.ಆರ್‌.ಛಾಯಾ ಮತ್ತು ಚಿಂತನ್‌ ವಿಕಾಸ್‌ ಹಿನ್ನೆಲೆ ಗಾಯನ ಚಿತ್ರಕ್ಕಿದೆ. ಮುಂದಿನ ಕೆಲವು ದಿನಗಳಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಲಿದೆ.

LEAVE A REPLY

Connect with

Please enter your comment!
Please enter your name here