ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಬೋಸ್ನಿಯ ಭಾಷೆಯ ಈ ಚಲನಚಿತ್ರ ಯುದ್ಧ ಸಂದರ್ಭದ ಕಹಿ ಸತ್ಯಗಳನ್ನು, ಸಂಕಟಗಳನ್ನು ಹಸಿಹಸಿಯಾಗಿ ತೆರೆದಿಟ್ಟಿದೆ. ಬೋಸ್ನಿಯಾದ ಸಿನಿಮೋದ್ಯಮ ಸಂಸ್ಥೆಗಳು ಮತ್ತು ಬಲ ಪಂಥೀಯರ ವ್ಯಾಪಕ ವಿರೋಧ ಮತ್ತು ನಿರ್ಬಂಧದ ನಡುವೆಯೂ ಚಿತ್ರ ಯಶಸ್ಸು ಕಂಡಿತ್ತು. ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದ್ದ ಈ ಚಿತ್ರವನ್ನು ಈಗ ಅಲ್ಲಿಂದ ತೆಗೆಯಲಾಗಿದೆ.

ಈ ಹೊತ್ತಿನಲ್ಲಿ ವರ್ತಮಾನದ ಅವಲೋಕನಕ್ಕೆ ನೋಡಲೇಬೇಕಾದ ಚಿತ್ರ ‘Where Are You Going, Aida?’. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಬೋಸ್ನಿಯ ಭಾಷೆಯ ಈ ಚಲನಚಿತ್ರ ಯುದ್ಧ ಸಂದರ್ಭದ ಕಹಿ ಸತ್ಯಗಳನ್ನು, ಸಂಕಟಗಳನ್ನು ಹಸಿಹಸಿಯಾಗಿ ತೆರೆದಿಟ್ಟಿದೆ. ಸೋವಿಯತ್ ಒಕ್ಕೂಟದಿಂದ ಬೇರ್ಪಡೆಗೊಂಡ ರಾಷ್ಟ್ರಗಳ ನಡುವೆ ಪರಸ್ಪರ ಬಡಿದಾಟ, ಬಂಡುಕೋರರ ಅತಿಕ್ರಮಣ, ಸಾಮ್ರಾಜ್ಯ ವಿಸ್ತರಣೆಯ ಭಾಗವಾಗಿ ಆಗಾಗ್ಯೆ ಸಂಭವಿಸುವ ಯುದ್ಧಗಳು ಆ ಭಾಗದ ನಾಗರಿಕರನ್ನು ಕಾಡುತ್ತಲೇ ಇರುತ್ತವೆ. ಈಗ ಕಳೆದ ಕೆಲವು ದಿನಗಳಿಂದ ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸುತ್ತಿರುವ ಯುದ್ದದ ಭೀಕರತೆ, ಅದರ ಪರಿಣಾಮವಾಗಿ ದೈನಂದಿನ ಬದುಕು ಅಸ್ತುವ್ಯಸ್ತವಾಗಿ, ಜನತೆ ಆಹಾರಕ್ಕಾಗಿ, ರಕ್ಷಣೆಗಾಗಿ ಪರದಾಡುತ್ತಿದ್ದಾರೆ. ಜೀವ ಉಳಿದರೆ ಸಾಕೆಂದು ಅಕ್ಕಪಕ್ಕದ ದೇಶಗಳ ಗಡಿಗೆ ಧಾವಿಸುತ್ತಿದ್ದಾರೆ. ಅನಿಶ್ಚಿತತೆ, ಅಭದ್ರತೆಯ ಸುಳಿಯಲ್ಲಿ ಭಾರತೀಯ ವಿದ್ಯಾರ್ಥಿಗಳು ಕೂಡ ಸಿಲುಕಿದ್ದಾರೆ. ಇಂತಹುದೇ ಸನ್ನಿವೇಶವನ್ನು ನೆನಪಿಸುವ 1995ರ ಸರ್ಬಿಯಾ ಮತ್ತು ಬೋಸ್ನಿಯಾ ನಡುವಣ ಸಂಘರ್ಷದಲ್ಲಿ ಛಿದ್ರವಾದ ಸಾಮಾನ್ಯ ನಾಗರಿಕರ ದುಖ, ದುಮ್ಮಾನಗಳನ್ನು ತೆರೆದಿಡುವ ವಾಸ್ತವದ ಕಥನವೇ ‘Where Are You Going, Aida?’

ಬೋಸ್ನಿಯಾ ಮತ್ತು ಸೆರ್ಬಿಯನ್ನರ ನಡುವೆ ಸೈದ್ಧಾಂತಿಕ, ರಾಜಕೀಯ ಮತ್ತು ಐತಿಹಾಸಿಕ ಸಂಗತಿಗಳಿಗೆ ಪ್ರತಿಕಾರ ಪಡೆಯುವ ಸಲುವಾಗಿ ಆಗಾಗ್ಯೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಹೀಗೆ 1992-95ರಲ್ಲಿ ಜರುಗಿದ ವಾಸ್ತವ ಘಟನೆಗಳನ್ನು ಆಧರಿಸಿದ ಸಂಗತಿಗಳನ್ನು ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ ಬೋಸ್ನಿಯಾದ ನಿರ್ದೇಶಕಿ ಜಾಸ್ಮಿಲಾ ಝಾನಿಕ್. ಖಡಕ್ ಸಂಪ್ರದಾಯವಾದಿಗಳಾದ ಸೆರ್ಬಿಯನ್ನರು ಬೋಸ್ನಿಯಾದ ಮುಸಲ್ಮಾನರ ಮೇಲೆ ರಿವೇಂಜ್ ತೆಗೆದುಕೊಂಡ ಸಂದರ್ಭವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಕೆಲ ದೃಶ್ಯಗಳಲ್ಲಿ ನೈಜ ಘಟನೆಗಳನ್ನು ಯಥಾವತ್ತಾಗಿ ಮರುಸೃಷ್ಟಿಸಲಾಗಿದೆ. ಬೋಸ್ನಿಯಾದ ಸಿನಿಮೋದ್ಯಮ ಸಂಸ್ಥೆಗಳು ಮತ್ತು ಬಲ ಪಂಥೀಯರ ವ್ಯಾಪಕ ವಿರೋಧ ಮತ್ತು ನಿರ್ಬಂಧದ ನಡುವೆಯೂ ಚಿತ್ರ ಯಶಸ್ಸು ಕಂಡಿತ್ತು. ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದ್ದ ಈ ಚಿತ್ರವನ್ನು ಈಗ ಅಲ್ಲಿಂದ ತೆಗೆಯಲಾಗಿದೆ.

‘ವೇರ್ ಆರ್ ಯು ಗೋಯಿಂಗ್ ? ಐಡಾ’ ಚಲನಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು 35ಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದಿದೆ. ಸೆರಬಿಯನ್ನರ ಆಕ್ರಮಣಕ್ಕೆ ತುತ್ತಾಗಿ ಗಾಯಗೊಂಡವವರ ರಕ್ಷಣೆಗೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆ ಆಗಮಿಸುತ್ತದೆ. ಶಾಂತಿ ಪಡೆಯ ಯುಎನ್ ಬೇಸ್ ಡಚ್ ಕಮಾಂಡರ್ ಕರೆಮನ್ ಹಾಗೂ ಸೆರ್ಬಿಯಾದ ಜನರಲ್ ಮ್ಲಾಡಿಕ್ ನಡುವೆ ಭಾಷಾಂತರಕಾರ್ತಿಯಾಗಿ ಬರುವ ಜಾಸ್ನಾ ಡ್ಯುರಿಸಿ ಇಡೀ ಚಿತ್ರದ ಕೇಂದ್ರ ಬಿಂದುವಾಗಿದ್ದಾರೆ. ದುಗುಡ, ವಿಷಾಧ, ಅಸಹಾಯಕತೆ, ಧೈರ್ಯ, ಆತ್ಮವಿಶ್ವಾಸ ಎಲ್ಲವನ್ನೂ ಒಂದೇ ತೆಕ್ಕೆಗೆ ತೆಗೆದುಕೊಂಡು ಕಥಾನಾಯಕಿ ಜಾಸ್ನಾ ಡ್ಯುರಿಸಿ ಅತ್ಯುತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅತಿಕ್ರಮಣಕಾರರು ಹಾಗೂ ಶಾಂತಿಪಾಲನಾ ಪಡೆಯ ನಡುವೆ ಸಂವಹನಕಾರ್ತಿಯಾಗಿ ಕೆಲಸ ಮಾಡುತ್ತಲೇ ತನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ಹರ ಸಾಹಸ ಮಾಡುತ್ತಾರೆ. ಇದರಲ್ಲಿ ಅವರು ಯಶಸ್ವಿಯಾಗುತ್ತಾರೆಯೇ? ಅಂತಿಮವಾಗಿ ಏನಾಗುತ್ತದೆ ಎಂಬುದೇ ಕಥೆಯ ತಿರುಳು.

ನಿರ್ದೇಶಕಿ ಜಾಸ್ಮಿಲಾ, ಕಥಾನಾಯಕಿಯ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರವನ್ನು ಕಟ್ಟಿ ಕೊಡುತ್ತಾರೆ. ಅಕ್ರಮಣಕಾರರ ನಿರ್ಧಯತೆ, ಜನಾಂಗೀಯ ದ್ವೇಷ, ಯುದ್ಧದ ತೀವ್ರತೆಗೆ ಸಿಲುಕಿದ ಜನ ಸಾಮಾನ್ಯರು ಗಡಿ ಭಾಗಗಳಿಗೆ ವಲಸೆ ಹೋಗುವುದು. ಆಹಾರಕ್ಕಾಗಿ ಪರದಾಡುವುದು, ಹೆಣ್ಣುಮಕ್ಕಳು, ಹಿರಿಯರ ಪರದಾಟ, ರಕ್ಷಣೆಗಾಗಿ ಯಾಚನೆ, ಅಸಹಾಯಕತೆ ಎಲ್ಲವನ್ನು ಎಳೆ ಎಳೆಯಾಗಿ ಚಿತ್ರಿಸಲಾಗಿದೆ. ತಪಾಸಣೆಯ ನೆಪದಲ್ಲಿ ಮಹಿಳೆಯನ್ನು ಶೋಷಿಸುವ, ದೌರ್ಜನ್ಯ ಎಸಗುವ ಸನ್ನಿವೇಶಗಳನ್ನು ಯಥಾವತ್ ಮರು ಸೃಷ್ಟಿಸಲಾಗಿದೆ. ರಕ್ಷಣೆಗೆ,, ಸಹಾಯಕ್ಕೆ ಬಂದ ಶಾಂತಿ ಪಾಲನೆ ಪಡೆ ತನ್ನ ಜೊತೆಯೇ ಕೆಲಸ ಮಾಡುವ ಸಂವಹನಾಕಾರ್ತಿಯ ಹಿತ ಕಾಯದೇ ಅಸಹಾಯಕತೆ ಪ್ರದರ್ಶಿಸಿ ಕೈ ಚೆಲ್ಲುವುದು, ಹಸಿದ ಜೀವಗಳಿಗೆ ಬನ್ನುಗಳನ್ನು ನಾಯಿಗೆ ಎಸೆದಂತೆ ಎಸೆಯುವುದು, ಗಂಡಸರನ್ನು ಬಂಧಿಸಿ ನಿರ್ಧಯವಾಗಿ ಕೊಂದು ಹಾಕುವ ದೃಶ್ಯಗಳು , ಅಮೃತಸರದಲ್ಲಿ ಜನರಲ್ ಡಯರ್ ನಡೆಸಿದ ಹತ್ಯಾಕಾಂಡವನ್ನು ನೆನಪಿಸುತ್ತದೆ. ಅಷ್ಟೇ ಅಲ್ಲ ಕ್ರೌರ್ಯದ ಪರಮಾವಧಿ ಜಗತ್ತಿನ ಎಲ್ಲೆಡೆಯೂ ಒಂದೇ ತೆರನಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ.

ರಾಷ್ಟ್ರಗಳಲ್ಲಿ ಸಂಭವಿಸುವ ಅರಾಜಕತೆ , ಅತಿಕ್ರಮಣ , ಬಂಡುಕೋರತನದ ಮೂಲ ಸದಾ ಕಾಲಕ್ಕೂ ಜನಾಂಗೀಯ ದ್ವೇಷ ಮತ್ತು ಸರ್ವಾಧಿಕಾರ ಹಂಬಲವೇ ಆಗಿರುತ್ತದೆ. ಈಗ ಉಕ್ರೇನ್ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣ ಕೂಡ ಇದಕ್ಕೆ ಹೊರತಾಗಿಲ್ಲ. ಅಂದಿನ ಬೋಸ್ನಿಯಾ-ಸೆರ್ಬಿಯಾ ಸಂಘರ್ಷದ ಸನ್ನಿವೇಶ ಮತ್ತು ಪರಿಣಾಮಗಳನ್ನು ರಷ್ಯಾ-ಉಕ್ರೇನ್ ಯುದ್ದ ನೆನಪಿಸುತ್ತಿದೆ. ಈ ನಿಟ್ಟಿನಲ್ಲಿ ನೋಡಲೇ ಬೇಕಾದ ಮತ್ತು ಸಾಂದರ್ಭಿಕವಾಗಿ ಸಂವಾದ ನಡೆಸಬಹುದಾದ ಚಿತ್ರವಾಗಿದೆ ‘Where Are You Going, Aida?’. ಮಾರ್ಚ್ 10 ವರೆಗೆ ನಡೆಯುವ ಸಿನಿಮೋತ್ಸವದಲ್ಲಿ ಮತ್ತೆ ಮತ್ತೆ ಬೇರೆ ಸ್ಕ್ರೀನ್ ಗಳಲ್ಲಿ ನೋಡಲು ಸಿಗಬಹುದು. ಸಾಧ್ಯವಾದರೆ ತಪ್ಪದೇ ನೋಡಿ.

Previous articleಟ್ರೈಲರ್‌ | ಅರುಣೋದಯ ಸಿಂಗ್‌ ‘ಅಪಹರಣ್‌ 2’; Voot Select ನಲ್ಲಿ ಮಾರ್ಚ್‌ 18ರಿಂದ
Next articleಟ್ರೈಲರ್‌ | ಯೋಗೇಶ್‌ ಮಾಸ್ಟರ್‌ ನಟನೆಯ ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’

LEAVE A REPLY

Connect with

Please enter your comment!
Please enter your name here