ನಿರ್ದೇಶಕ ಸುನಿ ಈ ಪ್ರೇಮ ಕಥೆಯ ಹಾದಿಯಲ್ಲಿ ಸಾಕಷ್ಟು ತಿರುವುಗಳನ್ನು ಇಟ್ಟು ಅದನ್ನೊಂದು ಆಸಕ್ತಿಕರ ಪ್ರಯಾಣವನ್ನಾಗಿಸಲು ಯತ್ನಿಸಿದ್ದಾರೆ. ಸಿನಿಮಾದ ಮೊದಲಾರ್ಧ ಚುರುಕಾಗಿದೆ, ಹಾಸ್ಯಮಯವಾಗಿದೆ. ಸಿನಿಮಾದ ಎರಡನೇ ಅರ್ಧದಲ್ಲಿ ಕತೆ ಹೆಚ್ಚು ಭಾವನಾತ್ಮಕ ಅಂಶಗಳನ್ನು ಸೇರಿಸಿಕೊಳ್ಳುತ್ತಾ ಹೋಗುತ್ತದೆ. ಒಂದಷ್ಟು ತಿರುವುಗಳು ಎದುರಾಗುತ್ತವೆ. ಅದುವರೆಗೆ ತೆಳುಹಾಸ್ಯದ ಹಾದಿಯಲ್ಲಿದ್ದ ನಾಯಕನ ಪ್ರೇಮ, ತೀವ್ರತೆ ಪಡೆದುಕೊಳ್ಳುತ್ತದೆ. ಹೀಗಾಗಿ, ಮೊದಲಾರ್ಧದಲ್ಲಿ ಗಂಭೀರ, ಸನ್ನಿವೇಶದೊಳಗೆ ನುಸುಳಿ ಕಚಗುಳಿ ಇಟ್ಟು ನಗಿಸಿದ ಹಾಸ್ಯ, ದ್ವಿತೀಯಾರ್ಧದಲ್ಲಿ ತೊಂದರೆ ಕೊಡುತ್ತದೆ.
‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ಯ ಅಚ್ಚ ಕನ್ನಡ ಅವತರಣಿಕೆ ಎನ್ನಬಹುದಾದ ಟೈಟಲ್ ಇಟ್ಟುಕೊಂಡಿರುವ ಸಿನಿಮಾ ‘ಒಂದು ಸರಳ ಪ್ರೇಮ ಕತೆ’. ಆದರೆ, ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾ ಮೂಲದಲ್ಲಿ ಸರಳವೇ ಆಗಿದ್ದರೂ, ತೆರೆಯ ಮೇಲೆ ಅನಾವಾರಣಗೊಳ್ಳುವ ರೀತಿ ಸರಳವಾಗೇನೂ ಇಲ್ಲ. ಒಂದು ವಾಕ್ಯದಲ್ಲಿ ಹೇಳುವುದಾದರೆ, ಅಂಗೈಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದರು ಎಂಬ ಗಾದೆ ಮಾತು ಇಲ್ಲಿ ಪ್ರೇಮ
ಕತೆಯಾಗಿದೆ.
ಅವಿಭಜಿತ ತುಂಬು ಕುಟುಂಬದ ಅತಿಶಯ್‌ಗೆ (ವಿನಯ್ ರಾಜಕುಮಾರ್) ಸಂಗೀತ ನಿರ್ದೇಶಕನಾಗುವ ಕನಸು. ಅದಕ್ಕಾಗಿ ಅಪ್ಪನ ಬಟ್ಟೆ ವ್ಯಾಪಾರ ಬಿಟ್ಟು ಸ್ಟುಡಿಯೋದಲ್ಲಿ ಕೆಲಸ ಮಾಡುವ ಅವನಿಗೆ ತನ್ನ ಬಾಳ ಸಂಗಾತಿಯ ಬಗ್ಗೆಯೂ ಒಂದು ರೊಮ್ಯಾಂಟಿಕ್ ಕನಸಿದೆ. ಅವಳ ದ್ವನಿಯೇ ತನ್ನ ಹೃದಯದ ಕೀಲಿ ಕೈ ಎಂದು ನಂಬಿರುವ ಅತಿಶಯ್ ತನ್ನ ಹೃದಯ ತಟ್ಟುವ ಅಂತಹ ದನಿಯ ಮಾಲೀಕಳಿಗಾಗಿ ಕಾಯುತ್ತಿರುತ್ತಾನೆ, ಅರಸುತ್ತಿರುತ್ತಾನೆ. ಅಚಾನಕ್ಕಾಗಿ ಅಂತಹ ದನಿಯೊಂದು ಕಿವಿಗೆ ಬಿದ್ದಾಗ, ಅದನ್ನು ಹಿಂಬಾಲಿಸಿ ಹೊರಡುತ್ತಾನೆ. ಅತಿಶಯ್‌ಗೆ ಆತನ ಆತ್ಮ ಸಂಗಾತಿ ದೊರೆತಳೇ, ಹೇಗೆ ದೊರೆತಳು ಎಂಬುದು ಸಿನಿಮಾದ ಕತೆ.
ಸುನಿ ಈ ಪ್ರೇಮ ಕಥೆಯ ಹಾದಿಯಲ್ಲಿ ಸಾಕಷ್ಟು ತಿರುವುಗಳನ್ನು ಇಟ್ಟು ಅದನ್ನೊಂದು ಆಸಕ್ತಿಕರ ಪ್ರಯಾಣವನ್ನಾಗಿಸಲು ಯತ್ನಿಸಿದ್ದಾರೆ. ಸಿನಿಮಾದ ಮೊದಲಾರ್ಧ ಚುರುಕಾಗಿದೆ, ಹಾಸ್ಯಮಯವಾಗಿದೆ. ಸುನಿ ಅವರ ವೈಶಿಷ್ಟ್ಯತೆಯಾದ ಒನ್ ಲೈನರ್‌ಗಳಿಂದ ತುಂಬಿದೆ. ಕತೆ ನಾಯಕನ ನಿರೂಪಣೆಯೊಂದಿಗೆ ಆರಂಭವಾಗಿ, ವಿವಿಧ ಪಾತ್ರಗಳನ್ನೂ ಅವನ ಮೂಲಕವೇ ಪರಿಚಯಿಸಲಾಗುತ್ತದೆ. ಆ ಪಾತ್ರಗಳು, ಬರುವ ಸನ್ನಿವೇಶಗಳು ಆಸಕ್ತಿದಾಯಕವಾಗಿವೆ ಮತ್ತು ಹೊಸತನದಿಂದ ತುಂಬಿವೆ. ಯೂಟ್ಯೂಬ್‌ನಲ್ಲಿ ಅಡುಗೆ ಮಾಡುವ ವೀಡಿಯೋ ಹಾಕಿ ತನ್ನ ಮಗನಿಗಿಂತ ಹೆಚ್ಚು ದುಡಿಯುವ ಅಜ್ಜಿ, ಸಾಧು ಕೋಕಿಲ ಆಗಿಯೇ ಕಾಣಿಸಿಕೊಂಡಿರುವ ಸಾಧು ಕೋಕಿಲ, ಸಂಗೀತದ ರಿಯಾಲಿಟಿ ಶೋಗಳು ಮತ್ತು ತಮ್ಮ ಹಿಂದಿನ ಸಿನಿಮಾದ ಪ್ರಮೋಷನ್ ಇವೆಂಟ್ ಅನ್ನು ಸಿನಿಮಾದೊಳಗೆ ಅವರು ತಂದಿರುವ ರೀತಿ ಇವೆಲ್ಲವೂ ಮನರಂಜಕವಾಗಿದೆ.
ಆದರೆ, ಸಿನಿಮಾದ ಎರಡನೇ ಅರ್ಧದಲ್ಲಿ ಕತೆ ಹೆಚ್ಚು ಭಾವನಾತ್ಮಕ ಅಂಶಗಳನ್ನು ಸೇರಿಸಿಕೊಳ್ಳುತ್ತಾ ಹೋಗುತ್ತದೆ. ಒಂದಷ್ಟು ತಿರುವುಗಳು ಎದುರಾಗುತ್ತವೆ. ಅದುವರೆಗೆ ತೆಳುಹಾಸ್ಯದ ಹಾದಿಯಲ್ಲಿದ್ದ ನಾಯಕನ ಪ್ರೇಮ, ತೀವ್ರತೆ ಪಡೆದುಕೊಳ್ಳುತ್ತದೆ. ಹೀಗಾಗಿ, ಮೊದಲಾರ್ಧದಲ್ಲಿ ಗಂಭೀರ, ಸನ್ನಿವೇಶದೊಳಗೆ ನುಸುಳಿ ಕಚಗುಳಿ ಇಟ್ಟು ನಗಿಸಿದ ಹಾಸ್ಯ, ದ್ವಿತೀಯಾರ್ಧದಲ್ಲಿ ತೊಂದರೆ ಕೊಡುತ್ತದೆ. ಭಾವನಾತ್ಮಕವಾಗಿದ್ದ ದೃಶ್ಯದ ಆಚೆ ಈಚೆ ಏಕಾಏಕಿ ಹಾಸ್ಯ ನುಗ್ಗಿ ಬಿಡುತ್ತದೆ. ಆದರೆ, ಅವು ಡಾರ್ಕ್ ಹ್ಯೂಮರ್ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಅಸಮರ್ಪಕ ಸಮಯದಲ್ಲಿ ಹಾಸ್ಯದ ಬಳಕೆಯಂತೆ ಕಾಣುತ್ತದೆ. ಹೀಗಾಗಿ, ಪ್ರೇಕ್ಷಕರಿಗೆ ಮೂಲ ದೃಶ್ಯದ ಭಾವ ತೀವ್ರತೆಗಳು ತಟ್ಟದೆ, ಹಾಸ್ಯವೂ ನಗು ತರಿಸದೆ ಗಲಿಬಿಲಿಯಾಗುತ್ತದೆ.
ಉದಾಹರಣೆಗೆ ತನ್ನ ಅಜ್ಜಿಯ ಸಾವನ್ನು ಮತ್ತು ಆಕೆ ತನ್ನಿಂದ ಬಚ್ಚಿಟ್ಟ ಸತ್ಯವೊಂದರ ಬಗ್ಗೆ ನಾಯಕನ ದುಖಃವನ್ನು ಪ್ರೇಕ್ಷಕರು ಇನ್ನೂ ಅರಗಿಸಿಕೊಳ್ಳುತ್ತಿರುತ್ತಾರೆ. ನಾಯಕ ತಾನು ಹಲವು ದಿನಗಳಿಂದ ಕಾಯುತ್ತಿದ್ದ ತನ್ನ ಕನಸಿನ ಹುಡುಗಿಯ ಮೊದಲ ನೋಟಕ್ಕಾಗಿ ಕಾತುರದಿಂದ, ಆತಂಕದಿಂದ ಕಾಯುತ್ತಿರುತ್ತಾನೆ. ಆದರೆ, ಅಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧಿಸದೇ ಇರದ, ನಾಯಕಿ ದೊಡ್ಡ ಮೊತ್ತದ ಬಿಲ್ ಕೊಡದೆ ಎದ್ದು ಹೋದ ಹಾಸ್ಯ ದೃಶ್ಯವೊಂದು ತೆರೆಯ ಮೇಲೆ ಬರುತ್ತದೆ. ಎರಡು ಭಾವ ತೀವ್ರ ದೃಶ್ಯಗಳ ಮಧ್ಯೆ ಸ್ಯಾಂಡ್‌ವಿಚ್ ಆಗಿರುವ ಈ ಹಾಸ್ಯ ಎಲ್ಲದರ ಸ್ವಾದವನ್ನೂ ಕೆಡಿಸುತ್ತದೆ.
ಇನ್ನು ದ್ವಿತೀಯಾರ್ಧದಲ್ಲಿ ನಂಬಲು ಕಷ್ಟವಾಗುವ ಹಲವಾರು ಕಾಕತಾಳೀಯ ಘಟನೆಗಳು ಕತೆಯ ಅನುಕೂಲಕ್ಕಾಗಿಯೇ ಸಂಭವಿಸುತ್ತವೆ. ಇವು ನಂಬಲು ಕಷ್ಟವಾದರೂ, ಕತೆ ಸಾಗುತ್ತಿರುವ ದಾರಿಯಿಂದಾಗಿ ಮೊದಲೇ ಊಹಿಸಬಹುದಾದ ತಿರುವುಗಳಿಗೆ ಕಾರಣವಾಗುತ್ತವೆ. ಜೊತೆಗೆ, ಸಾಕಷ್ಟು ಅತಾರ್ಕಿಕ ವಿಷಯಗಳು ನುಸುಳುತ್ತವೆ. ಅಮಲಿನಲ್ಲಿ ತೇಲುತ್ತಿರುವ ನಾಯಕ ಅಪಘಾತಕ್ಕೆ ಒಳಗಾದವಳನ್ನು ಆಸ್ಪತ್ರೆಗೆ ಸಾಗಿಸುವಷ್ಟು ಎಚ್ಚರಿಕೆ ಪ್ರದರ್ಶಿಸುತ್ತಾನೆ. ಆದರೆ, ಆಕೆ ಯಾರು ಎಂಬುದು ಮಾತ್ರ ಅವನಿಗೆ ಗೊತ್ತಾಗುವುದಿಲ್ಲ ಎಂಬುದು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಒಮ್ಮೆಯೂ ಮದುವೆಯ ಪ್ರಸ್ತಾಪವನ್ನೇ ಎತ್ತದ ನಾಯಕನ ಮನೆಯವರು, ಏಕಾಏಕಿ ತರಾತುರಿಯಲ್ಲಿ ಮದುವೆ ಮಾಡಿಸುವುದೇಕೆ ಎನ್ನುವುದು ಅರ್ಥವಾಗುವುದಿಲ್ಲ. ತಾನು ಅಷ್ಟು ಅಪಾರವಾಗಿ ಮೆಚ್ಚಿ ಹೃದಯವನ್ನೇ ಧಾರೆ ಎರೆದ ದನಿಯನ್ನು ನಾಯಕನೇ ಸರಿಯಾಗಿ ಗುರುತಿಸುವುದಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತದೆ.
ಸಂಗೀತ, ಪ್ರಧಾನ ಪಾತ್ರವಹಿಸುವ ಮತ್ತು ಸಂಗೀತಮಯ ಚಿತ್ರ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡಾಗ, ವೀರ್ ಸಮರ್ಥ್ ಅವರ ಸಂಗೀತ ಮತ್ತು ಹಾಡುಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನಿಸುತ್ತದೆ. ಮೂಕನಾಗಬೇಕು ಹಾಡು ಸಿನಿಮಾದಲ್ಲಿ ಒಂದು ಪಾತ್ರವೇ ಆಗಿದೆ ಮತ್ತು ಮೊದಲಿನಿಂದ ಕೊನೆಯವರೆಗೂ ಸಿನಿಮಾದೊಂದಿಗೆ ಸಾಗುತ್ತದೆ. ಪ್ರೇಕ್ಷಕರ ನೆನಪಿನಲ್ಲಿಯೂ ಉಳಿಯುತ್ತದೆ. ಸಿನಿಮಟೋಗ್ರಫಿ ಮತ್ತು ಸಂಕಲನ ತಕ್ಕಮಟ್ಟಿಗಿದೆ. ಚಿತ್ರರಂಗದವರೇ ತುಂಬಿರುವ ಕುಟುಂಬದಿಂದ ಬಂದಿರುವ ವಿನಯ್ ರಾಜಕುಮಾರ್ ಚಿತ್ರದ ಆಯ್ಕೆ ಗಮನ ಸೆಳೆಯುವಂಥದ್ದು. ಅವರು ಸ್ಟಾರ್ ಆಗುವ ಬದಲು ನಟನಾಗುವ ಯತ್ನ ನಡೆಸಿದ್ದಾರೆ ಮತ್ತು ಆ ನಿಟ್ಟಿನಲ್ಲಿ ತಮ್ಮ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ ಎಂಬುದು ಮೆಚ್ಚುಗೆ ಮೂಡಿಸುವಂಥದ್ದು.
‘ರಾಧಾಕೃಷ್ಣ’ ಖ್ಯಾತಿ ಮಲ್ಲಿಕಾ ಸಿಂಗ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದರೂ, ಚಿತ್ರದುದ್ದಕ್ಕೂ ಮಿಂಚುವುದು, ಮನಸ್ಸನ್ನು ಗೆಲ್ಲುವುದು ಸ್ವಾದಿಷ್ಟ ಕೃಷ್ಣನ್. ಅವರು ಸರಳ ಮತ್ತು ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ನಟಿಸಿದ್ದಾರೆ. ರಾಜೇಶ್ ನಟರಂಗ ಅವರದ್ದು ಎಂದಿನಂತೆ ಉತ್ತಮ ಅಭಿನಯ. ಅರುಣಾ ಬಾಲರಾಜ್ ಅಲ್ಲಿ ಇಲ್ಲಿ ಮಾತ್ರ ಕಾಣಿಸಿಕೊಂಡು ಮರೆಯಾಗುತ್ತಾರೆ. ಚಿತ್ರದ ಮೊದಲಾರ್ಧದಲ್ಲಿ ಕಂಡುಬರುವ ಲವಲವಿಕೆ ದ್ವಿತೀಯಾರ್ಧದಲ್ಲೂ ಮುಂದುವರಿದಿದ್ದರೆ, ಇದು ಮತ್ತೊಂದು ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಆಗುತ್ತಿತ್ತೇನೋ. ಆದರೆ, ದುರ್ಬಲ ದ್ವಿತೀಯಾರ್ಧದಿಂದಾಗಿ ನಿರೀಕ್ಷಿತ ಮಟ್ಟ ತಲುಪುವುದಿಲ್ಲ. ಆದರೂ, ಸಿಂಪಲ್ ಸುನಿ ಅವರ ಶೈಲಿಯನ್ನು ಇಷ್ಟಪಡುವವರು, ಲಘು ಮನರಂಜನೆ ಬಯಸುವವರು, ಕುಟುಂಬದವರ ಜೊತೆ ನೋಡಿ ಖುಶಿ ಪಡುವುದಕ್ಕೆ ಅಡ್ಡಿಯಿಲ್ಲ.