ಸಂದೀಪ್‌ ಸುಂಕದ್‌ ನಿರ್ದೇಶನದ ‘ಶಾಖಾಹಾರಿ’ ತಂಡದಿಂದ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಅವರಿಗೆ ‘ಅಭಿನಯಾಸುರ’ ಬಿರುದು ನೀಡಲಾಗಿದೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್‌ ಕತೆಯುಳ್ಳ ಸಿನಿಮಾ ಮುಂದಿನ ವಾರ ಫೆಬ್ರವರಿ 16ರಂದು ಥಿಯೇಟರ್‌ಗೆ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಚಿತ್ರಗಳ ಪೈಕಿ ‘ಶಾಖಾಹಾರಿ’ ಚಿತ್ರವೂ ಒಂದು. ಚಿತ್ರದಲ್ಲಿ ರಂಗಾಯಣ ರಘು ಅವರೇ ಪ್ರಮುಖ ಪಾತ್ರಧಾರಿ ಎನ್ನುವುದು ವಿಶೇಷ. ಮೊನ್ನೆ ನಡೆದ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ರಂಗಾಯಣ ರಘು ಅವರಿಗೆ ಚಿತ್ರತಂಡ ‘ಅಭಿನಯಾಸುರ’ ಬಿರುದು ನೀಡಿ ಗೌರವಿಸಿದೆ. ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌, ನಿರ್ದೇಶಕ ಸೂರಿ ಅವರು ಅತಿಥಿಗಳಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸಿನಿಮಾ ಮುಂದಿನ ವಾರ ಫೆಬ್ರವರಿ 16ರಂದು ತೆರೆಕಾಣಲಿದೆ.

ಸಂದೀಪ್ ಸುಂಕದ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಮಲೆನಾಡಿನ ಹಿನ್ನೆಲೆಯಲ್ಲಿ ಹೆಣೆದಿರುವ ಥ್ರಿಲ್ಲರ್‌. ನಿರ್ದೇಶಕ ಸೂರಿ ಅವರು ಮಾತನಾಡಿ, ‘ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಎಂದು ಕರೆಯುತ್ತಾರೆ. ಈ ಹಿಂದೆ ನಾನು, ಯೋಗರಾಜ್ ಅವರು ‘ಮಣಿ’ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲ್ಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ಅವರದ್ದೂ ದೊಡ್ಡ ಪಾಲು ಇದೆ. ನಮ್ಮ ಬರವಣಿಗೆಯನ್ನು ಸ್ಕ್ರೀನ್‌ಗೆ ತರುವುದು ಇದೆಯಲ್ಲ, ಅದಕ್ಕೆ ಕಲಾವಿದ ಜೀವ ತುಂಬಬೇಕು. ನಟ ರಘು ಸರ್ ಅವರನ್ನು ನಾವು ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ’ ಎಂದರು.

ರಂಗಾಯಣ ರಘು ಮಾತನಾಡಿ, ‘ನನ್ನ ಒಟ್ಟು ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂಥವರು ಸೂರಿ ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರಿಗೆ ಬಂದು ಸುಮಾರು 35 ವರ್ಷವಾಯ್ತು. ನಾನು ಒಂದು ಸಿನಿಮಾಗೋಸ್ಕರ ಬಂದವನು. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೂ ಸಾಲದು. ನನ್ನದು 350 ಸಿನಿಮಾಗಳಾಗಿವೆ. ಈ ರೀತಿ ಪಾತ್ರ ಮಾಡಬೇಕು ಎಂದು ಯೋಚಿಸಿಲ್ಲ. ಅಪ್ಪು ಸರ್ ಋಣ ಜಾಸ್ತಿ ಇದೆ, ಮೇಡಂ ಬಂದಿರುವುದು ಅಷ್ಟೇ ಖುಷಿಯಾಗುತ್ತಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ. ಇಡೀ ಇಂಡಸ್ಟ್ರಿಯ ಎಲ್ಲಾ ನಟರ ಜೊತೆ ಕೆಲಸ ಮಾಡಿದ್ದೇನೆ. ಹೊಸಬರ ಚಿತ್ರಗಳಲ್ಲೂ ನಟಿಸಿದ್ದೇನೆ. ಹೊಸಬರು ಮತ್ತಷ್ಟು ಬರಲಿ’ ಎಂದು ತಮಗೆ ಬಿರುದು ನೀಡಿ ಗೌರವಿಸಿದ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು.

ನಿರ್ದೇಶಕ ಸಂದೀಪ್ ಸುಂಕದ್ ಅವರಿಗೆ ಇದು ಮೊದಲ ಸಿನಿಮಾ. ‘ಈ ರೀತಿ ಕಥೆಯನ್ನು ಪ್ರೊಡ್ಯೂಸ್‌ ಮಾಡೋದಕ್ಕೆ ಧೈರ್ಯ ಬೇಕು. ಒಂದು ಸಾಹಿತ್ಯದ ಹಿನ್ನೆಲೆ ಬೇಕು. ನಮ್ಮ ನಿರ್ಮಾಪಕರು ಎಲ್ಲಾ ರೀತಿಯ ಅನುಕೂಲ ಕಲ್ಪಿಸಿಕೊಟ್ಟು, ಅಷ್ಟೇ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಸಿನಿಮಾ ರೆಡಿಯಾಗುವವರೆಗೂ ಅದೊಂದು ಆರ್ಟ್. ರೆಡಿಯಾದ್ಮೇಲೆ ಅದೊಂದು ಪ್ರಾಡೆಕ್ಟ್. ಪ್ರಾಡೆಕ್ಟ್ ಬಳಿಕ ಬ್ಯುಸಿನೆಸ್ ಆಗುತ್ತದೆ. ಬ್ಯುಸಿನೆಸ್ ಬಳಿಕ ಮಾರ್ಕೆಟ್‌ಗೆ ಬರುತ್ತದೆ. ಒಂದೊಳ್ಳೆ ಪ್ರಾಡೆಕ್ಟ್‌ಗೆ ಒಂದೊಳ್ಳೆ ಬ್ಯುಸಿನೆಸ್ ಆಗುತ್ತದೆ ಎನ್ನುವ ನಂಬಿಕೆ ಇದೆ. ಇದೇ ನಂಬಿಕೆಯಿಂದ ಸಿನಿಮಾ ತೆರೆಗೆ ಬರುತ್ತಿದೆ’ ಎನ್ನುತ್ತಾರೆ ಸಂದೀಪ್‌.

ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಕಥೆ. ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಚಿತ್ರಕಥೆ ಹೆಣೆಯಲಾಗಿದೆ. ರಂಗಾಯಣ ರಘು ಅಡುಗೆ ಭಟ್ಟನಾಗಿ, ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು ಜೆ, ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು. ವಿಶ್ವಜಿತ್ ರಾವ್ ಕ್ಯಾಮರಾ, ಶಶಾಂಕ್ ನಾರಾಯಣ ಎಡಿಟಿಂಗ್, ಮಯೂರ್ ಅಂಬೆಕಲ್ಲು ಸಂಗೀತ ಸಿನಿಮಾಗಿದೆ. ಮುಂದಿನ ವಾರ ಫೆಬ್ರವರಿ 16ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here