2025ರ ಸುಮಾರಿಗೆ ಪ್ರಾದೇಶಿಕ ಭಾಷೆಯ ಓಟಿಟಿ ಪಾಲು ಒಟ್ಟು ಓಟಿಟಿ ವೇದಿಕೆಯ 50% ದಾಟಬಹುದು ಎಂದು FICCI-PwC ವರದಿ ಹೇಳುತ್ತದೆ. ಇದೇ ವರದಿಯ ಪ್ರಕಾರ ಭಾರತ ಈ ವೇದಿಕೆಗಳ ಮಟ್ಟಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ. 2024ರ ಹೊತ್ತಿಗೆ ಇದರ ವಾರ್ಷಿಕ ಬೆಳವಣಿಗೆ 28.6% ಆಗಲಿದ್ದು, ಇದು ಆರನೆಯ ಅತ್ಯಂತ ವಿಶಾಲ ಮಾರುಕಟ್ಟೆ ಆಗಲಿದೆ. ಹಾಗಾದರೆ ಈ ಮಾರುಕಟ್ಟೆಯಲ್ಲಿ ಕನ್ನಡದ ವೇದಿಕೆಗಳ ಪಾಲು ಎಷ್ಟು? ಮೊದಲಿಗೆ ಇಂತಹ ವೇದಿಕೆಗಳಿಂದ ಪ್ರಾದೇಶಿಕ ಮಟ್ಟದಲ್ಲಿ ಆಗುವ ಉಪಯೋಗ ಏನು? ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ, ಈ ಮಾರುಕಟ್ಟೆಯಲ್ಲಿ ತನ್ನ ಭಾಗವನ್ನು ಅಂದಾಜು ಮಾಡಿರುವುದೇ? ಆ ದಿಕ್ಕಿನಲ್ಲಿ ಪ್ರಯತ್ನಗಳಾಗಿವೆಯೇ? ಇವೆಲ್ಲಾ ಚರ್ಚೆಯ ವಿಷಯಗಳು.

‘ಕೋವಿಡ್ ಮತ್ತು ಓಟಿಟಿ’ ಎಂದು ಬರೆದರೆ ಮೊದಲ ನೋಟಕ್ಕೆ ಎಲ್ಲಿಂದೆಲ್ಲಿಯ ಸಂಬಂಧ ಎನ್ನಿಸುತ್ತದೆ. ಆದರೆ ಎಲ್ಲೋ ಒಂದೆಡೆ ಚಿಟ್ಟೆ ರೆಕ್ಕೆ ಬಡಿದರೆ ಅದರ ಪರಿಣಾಮ ಇನ್ನೆಲ್ಲೋ ಊಹಿಸಲಾರದ ಮಟ್ಟದಲ್ಲಿ ಆಗುವುದಂತೆ. ಕೋವಿಡ್ ತನ್ನ ಆಗಮನದಿಂದ ಉತ್ಪಾದನೆ ಮತ್ತು ವಿತರಣೆಯ ನಾನಾ ಕ್ಷೇತ್ರಗಳಲ್ಲಿ, ಆರ್ಥಿಕ ರಂಗದಲ್ಲಿ, ಮನುಷ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ, ವಲಸೆ ಕಾರ್ಮಿಕರ ಬದುಕಿನಲ್ಲಿ ಉಂಟು ಮಾಡಿದ ಪರಿಣಾಮಗಳನ್ನು ಅರಿಯಲು ನಾವಿನ್ನೂ ಅದಕ್ಕೆ ಬಹುಸಮೀಪ ಇದ್ದೇವೆ. ಇನ್ನೂ ಕೆಲವು ವರ್ಷಗಳ ನಂತರ ನಮಗೆ ಇದರ ಸರಿಯಾದ ಅಂದಾಜು ಸಿಗಬಹುದು. ಅನೇಕ ಉದ್ಯಮಗಳು ಇನ್ನಿಲ್ಲದ ನಷ್ಟ ಅನುಭವಿಸಿದವು, ಹಲವು ನೆಲಕಚ್ಚಿದವು. ಪ್ರವಾಸ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳಂತೂ ಅಲ್ಲಾಡಿ ಹೋದವು. ಜಗತ್ತು ಮನೆಯೊಳಗೆ ಸೇರಿ, ಬಾಗಿಲು ಜಡಿದು ಕುಳಿತುಕೊಂಡು ಬಿಟ್ಟಿತ್ತು. ಆದರೆ ಈ ದುರಿತ ಕಾಲದಲ್ಲಿ ಊಹಿಸಲೂ ಅಸಾಧ್ಯವಾದ ಲಾಭ ಗಳಿಸಿದ್ದು ಮತ್ತು ವಿಸ್ತರಣೆ ಕಂಡಿದ್ದು ಓಟಿಟಿ ಉದ್ಯಮ. 2020ನ್ನು ಈ ಉದ್ಯಮದ ಮೈಲುಗಲ್ಲಿನ ವರ್ಷ ಎಂದು ಕರೆಯಬಹುದು. ಒಂದು ಅಂದಾಜಿನ ಪ್ರಕಾರ 2020ರಲ್ಲಿ ಜಾಗತಿಕ ಓಟಿಟಿ ಮಾರುಕಟ್ಟೆಯ ಮೌಲ್ಯ 161.37 ಬಿಲಿಯನ್ ಡಾಲರ್‌ಗಳು! 2019ಕ್ಕೆ ಹೋಲಿಸಿದರೆ ಈ ಮಾರುಕಟ್ಟೆ 2020ರಲ್ಲಿ 55% ಬೆಳವಣಿಗೆಯನ್ನು ಕಂಡಿತ್ತು.

2025ರ ಸುಮಾರಿಗೆ ಪ್ರಾದೇಶಿಕ ಭಾಷೆಯ ಓಟಿಟಿ ಪಾಲು ಒಟ್ಟು ಓಟಿಟಿ ವೇದಿಕೆಯ 50% ದಾಟಬಹುದು ಎಂದು FICCI-PwC ವರದಿ ಹೇಳುತ್ತದೆ. ಇದೇ ವರದಿಯ ಪ್ರಕಾರ ಭಾರತ ಈ ವೇದಿಕೆಗಳ ಮಟ್ಟಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ. 2024ರ ಹೊತ್ತಿಗೆ ಇದರ ವಾರ್ಷಿಕ ಬೆಳವಣಿಗೆ 28.6% ಆಗಲಿದ್ದು, ಇದು ಆರನೆಯ ಅತ್ಯಂತ ವಿಶಾಲ ಮಾರುಕಟ್ಟೆ ಆಗಲಿದೆ. ಹಾಗಾದರೆ ಈ ಮಾರುಕಟ್ಟೆಯಲ್ಲಿ ಕನ್ನಡದ ವೇದಿಕೆಗಳ ಪಾಲು ಎಷ್ಟು? ಮೊದಲಿಗೆ ಇಂತಹ ವೇದಿಕೆಗಳಿಂದ ಪ್ರಾದೇಶಿಕ ಮಟ್ಟದಲ್ಲಿ ಆಗುವ ಉಪಯೋಗ ಏನು? ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ, ಈ ಮಾರುಕಟ್ಟೆಯಲ್ಲಿ ತನ್ನ ಭಾಗವನ್ನು ಅಂದಾಜು ಮಾಡಿರುವುದೇ? ಆ ದಿಕ್ಕಿನಲ್ಲಿ ಪ್ರಯತ್ನಗಳಾಗಿವೆಯೇ? ಇವೆಲ್ಲಾ ಚರ್ಚೆಯ ವಿಷಯಗಳು.

ಮೊದಲ ನೋಟಕ್ಕೆ ನಮಗೆ ಕಾಣುವುದು ನಮ್ಮದೇ ಭಾಷೆಯ ಓಟಿಟಿ ವೇದಿಕೆ ಇದ್ದರೆ ನಮ್ಮ ಭಾಷೆ, ನಮ್ಮಲ್ಲಿನ ಕಲಾವಿದರು, ತಂತ್ರಜ್ಞರು, ಬರಹಗಾರರು, ಸ್ಟುಡಿಯೋಗಳು, ಅಲ್ಲಿ ಕೆಲಸ ಮಾಡುವವರು ಮತ್ತು ಇದರ ಸಹಾಯಕ ಮತ್ತು ಪೂರಕ ಉದ್ಯಮಗಳಿಗೆ ದೊರೆಯುವ ವಿಫುಲವಾದ ಕೆಲಸದ ಅವಕಾಶ. ಈ ವೇದಿಕೆಗಳ ವ್ಯಾಪ್ತಿ ಪ್ರಾದೇಶಿಕ ಎಲ್ಲೆಗಳನ್ನು ಮೀರಿ ಜಗತ್ತಿಗೇ ಚಾಚಿಕೊಳ್ಳುವುದರಿಂದ ಪ್ರತಿಭೆಗೆ ಇಲ್ಲಿ ದೊರೆಯುವ ವೇದಿಕೆಯ ತಾಕತ್ತು ನಮ್ಮ ಅಂದಾಜಿಗೆ ನಿಲುಕದ್ದು. ಈ ವೇದಿಕೆಗಳು ಅಂತರ್ಜಾಲವನ್ನು ಅವಲಂಭಿಸಿರುವುದರಿಂದ ಆ ಜಾಲದ ಬಲೆಯ ಕಟ್ಟಕಡೆಯ ಎಳೆಯವರೆಗೂ ಅದು ಹಬ್ಬಿಕೊಂಡಿರುತ್ತದೆ. ಇದು ಮನರಂಜನಾ ಕ್ಷೇತ್ರದ ಕ್ರಾಂತಿ ಎಂದೇ ಹೇಳಬಹುದು.

ಇನ್ನೊಂದು ವಿಷಯ ಎಂದರೆ ಸಾಂಪ್ರದಾಯಿಕ ಚಲನಚಿತ್ರಗಳ ನಿರ್ಮಾಣದಲ್ಲಿ ಹೂಡಿಕೆಯಾಗುವ ಹಣದ ಬೃಹತ್ ಮೊತ್ತ. ಮತ್ತು ಆ ಕಾರಣದಿಂದಲೇ ಅದು ಹಿಡಿಯುವ ‘ಸೇಫ್’ ಹಾದಿ. ಸಧ್ಯದ ಪರಿಸ್ಥಿತಿಯಲ್ಲಿ ಅಲ್ಲಿ ಪ್ರಯೋಗಗಳಿಗೆ ಅವಕಾಶ ಕಮ್ಮಿ. ಕೆಲವು ವಿಶೇಷವಾದ ಆದರೆ ಸೀಮಿತ ಮಾರುಕಟ್ಟೆ ಇರುವಂತಹ ಜಾನರ್ ಚಿತ್ರಗಳಿಗೆ ಅಲ್ಲಿ ಸ್ಥಳ ಸಿಗುವುದು ಕಷ್ಟ. ಕನ್ನಡದಲ್ಲಿ ಹಾಗೆ ಈ ಓಟೀಟಿ ವೇದಿಕೆಯ ಕಾರಣಕ್ಕೆ ಭಿನ್ನ ವಿನ್ಯಾಸದ ಚಿತ್ರಗಳಿಗೆ ವೇದಿಕೆ ಪಡೆದವರು ಡ್ಯಾನಿಶ್ ಸೇಟ್. ದೊಡ್ಡ ತಾರೆಗಳಂತೆ ಹಿಂಡುಹಿಂಡು ಜನರನ್ನು ಚಿತ್ರಮಂದಿರಗಳಿಗೆ ಬರುವಂತೆ ಮಾಡಲಾಗದವರಿಗೆ ಈ ವೇದಿಕೆ ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದರ ಜೊತೆಜೊತೆಗೆ ಕಣ್ಣಿಗೆ ಕಾಣದ ಆದರೆ ಅಂತಸ್ಥವಾಗಿರುವ ಇನ್ನೊಂದು ವಿಷಯ ಎಂದರೆ ಈ ನೆಲದ ಭಾಷೆ, ಸಂಸ್ಕೃತಿ, ಇಲ್ಲಿನ ಪದ್ಧತಿ, ಭಾಷಾ ವೈವಿಧ್ಯ, ಆಹಾರ ವೈವಿಧ್ಯ ಇವುಗಳೆಲ್ಲಕ್ಕೂ ಇಲ್ಲಿ ಸಿಗುವ ಜಾಗ. ಇದು ಕಣ್ಣಿಗೆ ಕಾಣದಿದ್ದರೂ ಇವುಗಳ ಉಳಿಯುವಿಕೆ, ಮುಂದುವರೆಯುವಿಕೆ, ದಾಖಲಾತಿ ಇವೆಲ್ಲಾ ಸಮಾಜ ವಿಜ್ಞಾನದ ನೆಲೆಯಲ್ಲಿ ಮಹತ್ವವನ್ನು ಪಡೆದಿವೆ. ”ಆದರೆ ಕಡೆಗೂ ಮುಖ್ಯವಾಗುವುದು ಈ ಓಟೀಟಿಗಳನ್ನು ಯಾರು ಹೊಂದಿದ್ದಾರೆ ಮತ್ತು ಅವರು ಯಾವುದನ್ನು ತೋರಿಸಲು ಇಷ್ಟಪಡುತ್ತಾರೆ ಎನ್ನುವುದು. ಬಹುಶಃ ಭಿನ್ನ ಚಿತ್ರಗಳಿಗೆ ಮೀಸಲಾದ ವೇದಿಕೆ ನಿಜಕ್ಕೂ ಆಶಾದಾಯಕವಾಗುತ್ತದೆ” ಎಂದು ಇಂತಹ ಭಿನ್ನ ಚಿತ್ರಗಳ ನಿರ್ಮಾಣದಲ್ಲಿ ತೊಡಗಿರುವ ಯುವನಿರ್ದೇಶಕರೊಬ್ಬರು ಹೇಳುತ್ತಾರೆ.

ದಕ್ಷಿಣದ ಮಟ್ಟಿಗೆ ಹೇಳುವುದಾದರೆ ಈ ಓಟಿಟಿ ಓಟದಲ್ಲಿ ಮೊದಲಿಗೆ ತನ್ನ ಛಾಪು ಮೂಡಿಸಿದ್ದು ಮಲಯಾಳಂ ಕಂಟೆಂಟ್. ಕೆಲವು ವರ್ಷಗಳಿಂದೀಚೆಗೆ ತನ್ನ ವಸ್ತು, ನಿರೂಪಣೆ, ಕಥಾತಂತ್ರ, ಚಿತ್ರ ವ್ಯಾಕರಣದ ಕಾರಣಕ್ಕೆ ಇಡೀ ದೇಶದ ಗಮನ ಸೆಳೆದದ್ದು ಮಲಯಾಳಂ ಚಿತ್ರರಂಗ. ತನ್ನ ಪಾಡಿಗೆ ತಾನು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಹೋದ ಕಾರಣಕ್ಕೆ ನೋಡುಗರೇ ಅದರ ಪ್ರಚಾರಕರಾದರು. ಚಲನಚಿತ್ರಗಳಿಗೆ ಸಂಬಂಧಿಸಿದ ಗುಂಪುಗಳಲ್ಲಿ, ಸೊಸೈಟಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಆ ಭಾಷೆಯ ಕಂಟೆಂಟ್‌ಗೆ ಸಿಕ್ಕ ಪ್ರಚಾರ ಅಲ್ಲಿನ ಸ್ಥಳೀಯ ವೇದಿಕೆಗಳ ಅಗತ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜಾಗತಿಕ ಓಟೀಟಿ ವೇದಿಕೆಗಳಲ್ಲಿ ಆ ಭಾಷೆಯ ಕಂಟೆಂಟ್‌ಗೆ ಸ್ಥಳ ಒದಗಿಸಿಕೊಟ್ಟಿತು.

ಹಾಗೆ ನೋಡಿದರೆ ತಮಿಳಿನಲ್ಲಿ ಅವರದೇ ಆದ ವೇದಿಕೆ ಇದೆ. ಅಲ್ಲದೆ ಇದೇ ಸಮಯದಲ್ಲಿ ತಮಿಳಿನಲ್ಲಿ ಒಂದು ಕ್ರಾಂತಿಯಂತೆ ಬಂದ ಅಂಚಿಗೆ ತಳ್ಳಲ್ಪಟ್ಟವರ ಚಿತ್ರಗಳು, ಅವರ ಧ್ವನಿಗೆ ಅಲ್ಲಿ ಸಿಕ್ಕ ಬೆಲೆ ಮತ್ತು ಆ ಧ್ವನಿಯ ಚಿತ್ರಗಳಿಗೆ ಸಿಕ್ಕ ಮಾರುಕಟ್ಟೆ ಅವರಿಗೆ ಆ ಮಟ್ಟಿಗೆ ಬೇಡಿಕೆಯನ್ನೂ ತಂದುಕೊಟ್ಟಿತು. ಭಿನ್ನಭಾಷೆ ಮತ್ತು ವ್ಯಾಕರಣದ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರ ಪರಂಪರೆಯೇ ಅಲ್ಲಿ ಇದೆ. ತೆಲುಗಿನಲ್ಲಿ ‘aha’ ತನ್ನ ವೇದಿಕೆಯನ್ನು ಪ್ರಾರಂಭಿಸಿದಾಗ ಅದರ ಹಿಂದೆ ತೆಲುಗು ಚಿತ್ರರಂಗದ ಅನೇಕ ಕರಗಳಿದ್ದವು. ಅದರ ಮುಖವಾಣಿಯಾಗಿ ಅಲ್ಲು ಅರವಿಂದ್ ಇರುವುದು ಹೌದಾದರೂ ಇಡೀ ಚಿತ್ರರಂಗದ ಒತ್ತಾಸೆ ಅವರ ಜೊತೆಗಿದೆ. ಚಿರಂಜೀವಿ ಬಣಕ್ಕೆ ಸೇರಿದ ಅಲ್ಲು ಅರವಿಂದ್ ಅವರ ‘aha’ದಲ್ಲಿ ಆ ಬಣದಿಂದ, ಯಾವುದೇ ಬಣದಿಂದ ಬೇರೆಯಾಗಿ ನಿಂತಂತಹ ಬಾಲಯ್ಯ ಒಂದು ಟಾಕ್ ಶೋ ನಡೆಸಿಕೊಟ್ಟಿದ್ದು ಮತ್ತು ಆ ಬಣಕ್ಕೆ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿರುವ ಮೋಹನ್ ಬಾಬು ಆ ಸರಣಿಯ ಮೊದಲ ಅತಿಥಿಯಾಗಿ ಬಂದದ್ದು ಈ ವೇದಿಕೆಗೆ ವ್ಯವಹಾರ ಮತ್ತು ವ್ಯಾಪಾರ ಮಾತ್ರ ಮುಖ್ಯ ಎನ್ನುವ ಸಂದೇಶವನ್ನು ರವಾನಿಸಿತ್ತು.

‘aha’ಕ್ಕೆ ಹೊರತಾಗಿಯೂ ತೆಲುಗು ಭಾಷೆಯಲ್ಲಿ ಅಪಾರ ಪ್ರಮಾಣದ ಕಂಟೆಂಟ್ ಬೇರೆ ಬೇರೆ ಚಾನಲ್‌ಗಳಿಗಾಗಿ ತಯಾರಾಯಿತು. ಅಲ್ಲಿ ಇರುವ ಸ್ಟುಡಿಯೋ ವ್ಯವಸ್ಥೆ ಮತ್ತು ಅದರ ಹಿಂದೆ ಇರುವ ತಲೆಮಾರುಗಳಿಂದ ಚಿತ್ರರಂಗದಲ್ಲಿ ಕಳೆದ ಕುಟುಂಬಗಳು ನಿರಂತರವಾಗಿ ಆ ಭಾಷೆಯಲ್ಲಿ ಚಿತ್ರಗಳು, ವೆಬ್ ಸರಣಿಗಳು ತಯಾರಾಗುವಂತೆ ನೋಡಿಕೊಳ್ಳುತ್ತಲೇ ಬಂದಿವೆ. ಒಂದೆಡೆಯಲ್ಲಿ ಅತ್ಯಂತ ಹೆಚ್ಚು ಹೀರೋ ಆರಾಧನೆ ನಡೆಯುವ ಅಲ್ಲಿ ಸಣ್ಣ ಸಣ್ಣ ಬಡ್ಜೆಟ್ ಚಿತ್ರಗಳಿಗೆ ಸಹ ಸ್ಥಳ ಇದೆ. ಈ ಮೂರೂ ಭಾಷೆಯ ಚಿತ್ರಗಳು ಹಾಗು ವೆಬ್ ಸರಣಿಗಳು ಪ್ಯಾಂಡಮಿಕ್‌ನ ಕಾಲಘಟ್ಟದಲ್ಲಿ ತಮ್ಮ ತಮ್ಮ ಪ್ರಾದೇಶಿಕ ಸೀಮೆಗಳನ್ನೂ ಮೀರಿ ತಮ್ಮ ವ್ಯಾಪಾರದ ಎಲ್ಲೆಗಳನ್ನು ವಿಸ್ತರಿಸಿಕೊಂಡಿವೆ. ಹಾಗಾದರೆ ಈ ರೇಸಿನಲ್ಲಿ ಕನ್ನಡ ಎಲ್ಲಿದೆ, ಏಕೆ ಅದು ಇನ್ನೂ ಈ ಮಾರುಕಟ್ಟೆಯಲ್ಲಿ ತನ್ನ ಕಾಲೂರಲು ಒದ್ದಾಡುತ್ತಿದೆ ಎನ್ನುವುದು ಯೋಚಿಸಬೇಕಾದ ವಿಷಯ. ಕೆಲವು ಕನ್ನಡ ಚಿತ್ರಗಳು ಈ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸುವುದು ಹೌದಾದರೂ ಅದನ್ನು ಪ್ರಾತಿನಿಧಿಕ ಗೆಲುವು ಎನ್ನಲಾಗುವುದಿಲ್ಲ.

‘ಹಿಂದೂಸ್ತಾನ್ ಟೈಮ್ಸ್’ನಲ್ಲಿ ಈ ಕುರಿತು ಅರುಣ್ ದೇವ್ ಅವರು ವಿಸ್ತೃತವಾದ ಲೇಖನ ಬರೆದಿದ್ದಾರೆ. ಇಲ್ಲಿ ಮಾತನಾಡಿರುವ ಕನ್ನಡ ನಿರ್ದೇಶಕ ಹೇಮಂತ್ ರಾವ್ ಅವರು ಹೇಗೆ ಕನ್ನಡದ ಒಂದು ಅತ್ಯಂತ ಯಶಸ್ವಿ ಕಿರುಚಿತ್ರ ಸಹ ಅಬ್ಬಬ್ಬಾ ಎಂದರೆ ಒಂದು ಮಿಲಿಯನ್ ವ್ಯೂಗಳನ್ನು ಮಾತ್ರ ಹೊಂದಿರುತ್ತದೆ ಎಂದು ಹೇಳುತ್ತಾ ಓಟೀಟಿ ಉದ್ಯಮ ನಿಂತಿರುವುದೇ ಎಷ್ಟು ಜನ ಅದನ್ನು ನೋಡಿದರು, ಎಷ್ಟು ಹೊತ್ತು ನೋಡಿದರು ಎನ್ನುವ ಲೆಕ್ಕಾಚಾರದ ಮೇಲೆ, ಕನ್ನಡದ ಕಂಟೆಂಟ್‌ಗೆ ಸಿಗುವ ಈ ರೀತಿಯ ಸ್ವಾಗತ ಸಹ ಮಾರುಕಟ್ಟೆಯ ಹೂಡಿಕೆಯನ್ನು ನಿರ್ಧರಿಸುತ್ತದೆ ಎಂದು ಗಮನ ಸೆಳೆಯುತ್ತಾರೆ.

ಕರ್ನಾಟಕದಲ್ಲಿ ಓಟೀಟಿ ಚಂದಾದಾರಿಕೆ ಬೆಂಗಳೂರು ಸೇರಿದಂತೆ ಮೆಟ್ರೋಪಾಲಿಟನ್ ನಗರಗಳನ್ನು ಬಿಟ್ಟು ಎರಡು ಮತ್ತು ಮೂರನೆಯ ಹಂತದ ಪಟ್ಟಣ ಮತ್ತು ಊರುಗಳಿಗೆ ವ್ಯಾಪಕವಾಗಿ ಹರಡಿಲ್ಲ. ಬೆಂಗಳೂರು ಕಾಸ್ಮೋಪಾಲಿಟನ್ ಪಟ್ಟಣವಾಗಿರುವುದರಿಂದ ಇಲ್ಲಿ ಸಕಲೆಂಟು ಭಾಷೆಯ ಚಿತ್ರ ಮತ್ತು ಕಂಟೆಂಟ್ ಅನ್ನು ವೀಕ್ಷಿಸುವುದರಿಂದ ಬೆಂಗಳೂರನ್ನು ಕನ್ನಡದ ಓಟೀಟಿಗೆ ಒಂದು ಮಾರುಕಟ್ಟೆ ಎಂದು ಪರಿಗಣಿಸಲೂ ಕಷ್ಟವಾಗುತ್ತದೆ. ಅರುಣ್ ದೇವ್ ಅವರು ಬರೆದಿರುವ ಅದೇ ಲೇಖನದಲ್ಲಿ ಸಂದರ್ಶಿಸುವ ಒಬ್ಬ ಚಾನೆಲ್ ಉದ್ಯೋಗಿ ಕನ್ನಡ ಚಿತ್ರಗಳು ಬಹುಮಟ್ಟಿಗೆ ‘ಈವೆಂಟ್ ಚಿತ್ರ’ಗಳು ಎನ್ನುವ ಹೊಸ ನುಡಿಗಟ್ಟನ್ನು ಬಳಸುತ್ತಾರೆ. ಇದು ಕುತೂಹಲಕಾರಿಯಾದ ಬಳಕೆ. ಬಹುಬೇಡಿಕೆ ಇರುವ ತಾರಾ ನಾಯಕ ನಟನೊಬ್ಬನನ್ನು ತೆಗೆದುಕೊಂಡು ಅವನನ್ನೇ ಒಂದು ಈವೆಂಟ್ ಆಗಿಸಿ, ಅವನ ಸುತ್ತಲೂ ಮತ್ತು ಅವನಿಗಾಗಿಯೇ ನಿರ್ಮಿಸುವ ಚಿತ್ರ ಈವೆಂಟ್ ಚಿತ್ರ. ಇಲ್ಲಿ ಆ ನಾಯಕನೇ ಈವೆಂಟ್. ಇದು ಆ ನಾಯಕನನ್ನು ಆರಾಧಿಸುವ ಕರ್ನಾಟಕದಲ್ಲಿ ನೋಡುಗರನ್ನು ಸೆಳೆಯಬಲ್ಲದೇ ಹೊರತು ಕರ್ನಾಟಕದ ಆಚೆಗೆ ಇದು ಸೋಲುತ್ತದೆ. ಅಲ್ಲಿ ಮುಖ್ಯವಾಗುವುದು ಕಂಟೆಂಟ್ ಮಾತ್ರ. ಹಾಗಾಗಿ ನಮಗೆ ಬೇಕಿರುವುದು ಕಂಟೆಂಟ್ ಓರಿಯೆಂಟೆಂಡ್ ಚಿತ್ರಗಳು ಮತ್ತು ವೆಬ್ ಸರಣಿಗಳು.

ಈ ದಿಸೆಯಲ್ಲಿ ಓಟೀಟಿ ವೇದಿಕೆಯಲ್ಲಿ ಮುಖ್ಯಸ್ಥಾನದಲ್ಲಿರುವ ಒಬ್ಬರು ಹೇಳುವುದು ಹೀಗೆ, ”ನಮಗೆ ಮೊದಲು ಮುಖ್ಯವಾಗುವುದು ಕಂಟೆಂಟ್. ಮೊದಲ ಭೇಟಿಯಲ್ಲಿ ಟೇಬಲ್ ಮೇಲೆ ಇಡಬೇಕಾದ್ದು ಕಥೆಯನ್ನು, ಮುಂದಿನದೆಲ್ಲಾ ಆಮೇಲೆ”. ಹಾಗಾದರೆ ಈಗ ಕನ್ನಡಕ್ಕೆ ಬೇಕಾಗಿರುವುದು ಸಿದ್ಧಸೂತ್ರ ಮತ್ತು ಮಾದರಿಗಳನ್ನು ಬಿಟ್ಟು ಭಿನ್ನವಾಗಿ ಯೋಚಿಸಬಲ್ಲ, ಭಿನ್ನವಾಗಿ ಬರೆಯಬಲ್ಲ, ಭಿನ್ನವಾಗಿ ಅದನ್ನು ಕಾರ್ಯರೂಪಕ್ಕೆ ತರಬಲ್ಲ ನಿರ್ದೇಶಕರು, ಬರಹಗಾರರು ಮತ್ತು ತಂತ್ರಜ್ಞರು. ಕನ್ನಡದಲ್ಲಿರುವ ಅಪಾರವಾದ ಸಾಹಿತ್ಯ ಸಂಪತ್ತನ್ನು ಬಳಸಿಕೊಳ್ಳಬಲ್ಲವರು ಇಲ್ಲಿ ಗೆಲ್ಲಬಲ್ಲರು. ಒಂದು ಕಾಲದಲ್ಲಿ ಕನ್ನಡ ಚಿತ್ರಗಳಲ್ಲಿ ಸಾಹಿತ್ಯ ಪ್ರಧಾನಪಾತ್ರ ವಹಿಸುತ್ತಿತ್ತು. ಮತ್ತೆ ಆ ದಿನಗಳು ಮರಳಿ ಬರಬೇಕೆಂದರೆ, ಇಲ್ಲಿನ ಭಾಷೆ, ಸಂಸ್ಕೃತಿ ಅರಿತವರು ನಿರ್ಣಾಯಕ ಸ್ಥಾನಗಳಲ್ಲಿ ಇರುವಂತಹ ಪರಿಸ್ಥಿತಿ ಬೇಕು. ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಕ್ಕೆ ಕನ್ನಡದ್ದೇ ಆದ ಓಟೀಟಿ ವೇದಿಕೆಯೊಂದರ ಅಗತ್ಯ ಇದೆ. ಈ ದಿಸೆಯಲ್ಲಿ ಹಲವು ಎನ್ನಲಾಗದಿದ್ದರೂ ಕೆಲವು ಪ್ರಯತ್ನಗಳಂತೂ ಆಗಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ನಮ್ಮ ಊರಿನ ರಸಿಕರು’ ಪುಸ್ತಕವನ್ನು ಚಿತ್ರಪಠ್ಯವಾಗಿಸಿದ ‘ಕಟ್ಟೆ’ ವೇದಿಕೆ ಇದಕ್ಕೊಂದು ಉದಾಹರಣೆ.

ಈಗ ಈ ದಿಸೆಯಲ್ಲಿನ ಹೊಸ ಹೆಜ್ಜೆ ‘Aneka Plus’. ಇದರ ಮುಖ್ಯಸ್ಥರಾದ ಅರವಿಂದ ಮೋತಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳುವುದು ಹೀಗೆ:

ಕನ್ನಡದ ಹೊಸ ಓಟೀಟಿ ವೇದಿಕೆ ‘Aneka Plus’ ಮುಖ್ಯಸ್ಥರಾಗಿ, ದಕ್ಷಿಣ ಭಾರತದ ಓಟೀಟಿ ವೇದಿಕೆಗಳ ಜೊತೆಗೆ ಕನ್ನಡ ಓಟೀಟಿಯನ್ನು ಇಟ್ಟು ನೋಡಿದಾಗ ನಿಮಗೇನನ್ನಿಸುತ್ತದೆ?

ಕನ್ನಡದ ಕಂಟೆಂಟ್ ತಯಾರಕರು ಇನ್ನೂ ಹೊಸತಿನ ಕಡೆಗೆ ಸಂಪೂರ್ಣವಾಗಿ ಹೊರಳಿಕೊಳ್ಳಬೇಕಾಗಿದೆ. ಹೊಸ creators ಶಾರ್ಟ್ ಫಿಲಂಗಳನ್ನು ಮಾಡುತ್ತಿದ್ದಾರೆ. ಆದರೆ ಅದನ್ನೊಂದು ಕ್ರಮಬದ್ಧವಾದ ವಿನ್ಯಾಸದಲ್ಲಿ, ಓಟೀಟಿ ವ್ಯಾಕರಣಕ್ಕೆ ಒಗ್ಗಿಸುವ ಪ್ರಯತ್ನ ಅವಶ್ಯಕತೆಯಿರುವಷ್ಟು ಆಗುತ್ತಿಲ್ಲ. ಅಂದರೆ ಈ ಕಿರುಚಿತ್ರಗಳನ್ನು ಕೇವಲ ಹವ್ಯಾಸವಾಗಿ ಮಾಡದೆ, ಅದನ್ನೊಂದು ಪ್ರಾಜೆಕ್ಟ್ ಎನ್ನುವಂತೆ ಕೈಗೆತ್ತಿಕೊಂಡು ಮಾಡುವ ಅಗತ್ಯ ಇದೆ. ಅವು ಸದ್ದು ಮಾಡಬೇಕು, ರೆಸೊನೇಟ್ ಆಗಬೇಕು. ನಮ್ಮಲ್ಲಿ ಹಲವಾರು ತುಂಬ ಒಳ್ಳೆಯ ಕಂಟೆಂಟ್ ತಯಾರಕರಿದ್ದಾರೆ, ಆದರೆ ಅವರು ಸಿನಿಮಾ ಮತ್ತು ಟೀವಿಗಳಾಚೆಗೆ ಹೊಸ ವ್ಯಾಕರಣವನ್ನು ರೂಢಿಸಿಕೊಳ್ಳಬೇಕಿದೆ. ನನ್ನ ಬಳಿ ಯಾರೇ ಬಂದರು ಅವರು ಮೊದಲು ಕೇಳುವ ಪ್ರಶ್ನೆ ‘ನಿರ್ಮಾಪಕರು ಇದ್ದಾರಾ?’ ಎನ್ನುವುದು. ಆದರೆ ನಿರ್ಮಾಪಕರು ನಿರ್ಲಕ್ಷಿಸಲಾಗದಷ್ಟು ತಯಾರಿ ಮತ್ತು ಸ್ಪಷ್ಟತೆ ಆ ತಯಾರಿಕರಿಗೂ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಒಳ್ಳೆಯ ಕಂಟೆಂಟಗಳಿಗೆ ಇಂದು ಎಂದಿಲ್ಲದಷ್ಟು ಬೇಡಿಕೆ ಇದೆ. ಅದಕ್ಕೆ ನಿರ್ಮಾಪಕರೂ ಇದ್ದಾರೆ.

ಅಂದರೆ ಎಂತಹ ಚಿತ್ರಗಳು ಬೇಕು?
ಓಟೀಟಿ ಹೊಸ ಸ್ಪೇಸ್ ಅನ್ನು ಕಂಟೆಂಟ್ ತಯಾರಿಕರಿಗೆ ಕೊಡುತ್ತದೆ. ಇಲ್ಲಿ ನಾನು ತೆಲುಗು ಚಿತ್ರ ‘ಶ್ಯಾಮ್ ಸಿಂಘಾ ರಾಯ್’ ಉದಾಹರಣೆಯನ್ನು ಕೊಡುತ್ತೇನೆ. ಇಂದಿನ ಯುವಜನಾಂಗಕ್ಕೆ ಗೊತ್ತೇ ಇರದ ದೇವದಾಸಿ ಪದ್ಧತಿಯನ್ನು ಅವರಿಗೆ ತಟ್ಟುವಂತೆ ಚಿತ್ರವಾಗಿಸಿರುವ ರೀತಿ ನೋಡಿ. ಸಾವಿರಾರು ಕಥೆಗಳು ಈಗಾಗಲೇ ಬಂದು ಹೋಗಿವೆ, ಯಾವುದೇ ಕಥೆಯಾಗಲಿ ಅದನ್ನು ಹೊಸದಾಗಿ ಪ್ರೆಸೆಂಟ್ ಮಾಡುವ ಪ್ರಯತ್ನವಾಗಬೇಕಿದೆ. ಇಂದಿನ ವೀಕ್ಷಕರನ್ನು ತಾಕುವ ಹಾಗೆ ಕಥೆ ಕಟ್ಟುವುದು ಇಂದಿನ ಅಗತ್ಯ.

‘Aneka Plus’ ಪ್ಲಾಟ್‌ಫಾರ್ಮ್‌ ಕಂಟೆಂಟ್ ತಯಾರಕರಲ್ಲಿ ಏನನ್ನು ಹುಡುಕುತ್ತದೆ?
Basically New Age content. ಬೇರೆ ಭಾಷೆಗಳಲ್ಲಿ ಸುಮಾರು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಆ ಟ್ರೆಂಡ್ ಇಲ್ಲಿಗೂ ಬರಬೇಕು. ಕೆಲವರ ಬಳಿ ಆ ಬಗೆಯ ಆಲೋಚನೆಗಳು, ವರ್ಕಿಂಗ್ ಪ್ಲಾನ್ ಇರಬಹುದು. ಅವರು ಹೂಡಿಕೆದಾರರನ್ನು ಹುಡುಕುತ್ತಿರಬಹುದು. ನಾವು ಅಂಥವರನ್ನು ಹುಡುಕುತ್ತಿದ್ದೇವೆ! ಏಕೆಂದರೆ ಹೊಸಬರು ಅಮೇಜಾನ್ ಅಥವಾ ನೆಟ್‌ಫ್ಲಿಕ್ಸ್‌ಗೆ ಹೋಗೋದು ಕಷ್ಟ. ಅವರಿಗೆ ಲಾಂಚ್ ಪ್ಯಾಡ್ ಒದಗಿಸುವುದು ನಮ್ಮ ಉದ್ದೇಶ. ಉದಾಹರಣೆಗೆ The Great Indian Kitchen, neem streamನಲ್ಲಿ ಮೊದಲು ಬಂತು, ಅದರ ಯಶಸ್ಸಿನಿಂದ ಬೇರೆ ವೇದಿಕೆ ಅದನ್ನು ಖರೀದಿಸಿತು.

ನಿಮ್ಮ ಮಾರ್ಕೆಟ್ ರೀಸರ್ಚ್ ಪ್ರಕಾರ ಓಟೀಟಿ 2 tier, 3 tier ಪಟ್ಟಣಗಳಿಗೆ ಊರುಗಳಿಗೆ ತಲುಪಿದೆಯಾ?
ಟಿಯರ್ 2 ಮತ್ತು ಟಿಯರ್ 3ನಲ್ಲಿ ಆಗಬೇಕಾದಷ್ಟು ನೋಂದಣಿ ಆಗಿಲ್ಲ. ಆದರೆ ನಾವು ಇದನ್ನು ಹಾಗೆ ನೋಡದೆ ಅಲ್ಲಿ ಇನ್ನೂ ಎಷ್ಟು ಪೊಟೆನ್ಸಿಯಲ್ ಇದೆ ಎಂದು ನೋಡಬೇಕು. ನೆಟ್‌ವರ್ಕ್‌ ಈಗ ದೂರದೂರಕ್ಕೆ ಚಾಚಿಕೊಂಡಿದೆ, ಹಾಗಾಗಿ ಅವೂ ಓಟೀಟಿ ತೆಕ್ಕೆಗೆ ಬರುವ ಕಾಲ ದೂರವಿಲ್ಲ. ಇನ್ನೊಂದು ಸಾಧ್ಯತೆಯನ್ನು ನಾವು ಹೇಳಲೇಬೇಕು. ಅದು 5G. ಈಗ ಚಿತ್ರಗಳು ಕೇವಲ ನೋಡುವ ಮತ್ತು ಕೇಳುವ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಅದೊಂದು ಅನುಭೂತಿ. ನೋಡುಗರನ್ನು ಸಹ ಅದು ಪಾತ್ರಧಾರಿಗಳನ್ನಾಗಿ ಮಾಡಿಕೊಳ್ಳುತ್ತದೆ. ನಾವು ಊಹಿಸಲೂ ಸಾಧ್ಯವಾಗದ ಸಾಧ್ಯತೆ ತಂದುಕೊಡಬಲ್ಲುದು.

ಸಿನಿಮಾ ಮತ್ತು ಓಟೀಟಿ ಈ ಎರಡೂ ಮಾಧ್ಯಮಗಳನ್ನೂ ನೀವು ಹೇಗೆ ನೋಡುತ್ತೀರಿ?
ಸಿನಿಮಾ ಎನ್ನುವುದು ಒಂದು ಸಾಮೂಹಿಕ ಅನುಭವ. ಓಟೀಟಿ ಅದನ್ನು ರೀಪ್ಲೇಸ್ ಮಾಡಲಾಗುವುದಿಲ್ಲ. ಅಲ್ಲಿ ಶಬ್ಧ, ರೂಪ, ಅನುಭವಗಳೇ ಬೇರೆ. ಅದೊಂದು ಪ್ರೀಮಿಯಂ ಅನುಭೂತಿ ಎನ್ನಬಹುದು. ಅದಕ್ಕೆ ಬೇಕಿರುವ ಮೇಕಿಂಗ್ ಬೇರೆ ಅಷ್ಟೇ. ಓಟೀಟಿಗೆ ಅದು ಬೇಕಿಲ್ಲ. ನಾವು ಅದನ್ನು ಸಣ್ಣ ತೆರೆಯಲ್ಲಿ ಕೂಡ ನೋಡುತ್ತೇವೆ. ಎರಡರ ನಿರ್ಮಾಣ ರೀತಿಗಳಲ್ಲೂ ಭಿನ್ನತೆಯಿದೆ. ಸಿನಿಮಾ ಕತೆಯನ್ನು experience create ಮಾಡುವ ಉದ್ದೇಶವಿಟ್ಟುಕೊಂಡು ಸಾವಕಾಶವಾಗಿ, ಹಲವಾರು ತಿಂಗಳು, ವರ್ಷ ಸಮಯ ತೆಗೆದುಕೊಂಡು ಹೆಣೆಯುವ ಅವಶ್ಯಕತೆ ಇರುತ್ತದೆ. ಆದರೆ ಓಟೀಟಿಗೆ content ಗೆ cinematic experience create ಮಾಡುವುದು ಮುಖ್ಯವಲ್ಲ. ಅಲ್ಲಿ ನೋಡುಗರನ್ನು ಮುಟ್ಟುವ content ಪ್ರಾಮುಖ್ಯತೆ ಪಡೆಯುತ್ತದೆ. ಅದನ್ನು ತೀವ್ರಗತಿಯಲ್ಲಿ ಒಂದಾದ ಮೇಲೊಂದರಂತೆ ನಿರ್ಮಿಸುತ್ತಾ ಹೋಗಬಹುದು, ಹೋಗಬೇಕು ಕೂಡ.

ಸಿನಿಮಾಗೆ ಓಟೀಟಿ ಪರ್ಯಾಯವಲ್ಲ. ಅವೆರಡೂ ಬೇರೆ ಬೇರೆ. ಪ್ರಯೋಗಾತ್ಮಕ ಚಿತ್ರಗಳಿಗೆ, ಭಿನ್ನ ಜಾನರ್ ಚಿತ್ರಗಳಿಗೆ ಓಟೀಟಿ ಒಳ್ಳೆಯ ‘Neish’ ಆಗಬಹುದು. ಈ ಚಿತ್ರಗಳಿಗೆ ಒಂದು ನಿಗದಿತ ಶೆಲ್ಫ್ ಲೈಫ್ ಇಲ್ಲ, ಎಕ್ಸ್‌ಪೈರಿ ದಿನಾಂಕ ಇಲ್ಲ. ಇದೊಂದು ವಾಲ್ಯೂಮ್ ಬ್ಯುಸಿನೆಸ್. ನಿಮ್ಮಲ್ಲಿ ಹೇಳಲು ತುಂಬಾ ಕಥೆಗಳಿರುವಾಗ ಓಟೀಟಿ ಒಂದು ಒಳ್ಳೆಯ ಮಾಧ್ಯಮವಾಗುತ್ತದೆ.

ಮೊದಲಿದ್ದ ಸ್ಟುಡಿಯೋ ವ್ಯವಸ್ಥೆಯ ಜಾಗದಲ್ಲಿ ಈಗ ಮೀಡಿಯಾ ಹೌಸ್‌ಗಳು ಬರಬಹುದು ಎನ್ನುತ್ತೀರಾ?
ಖಂಡಿತಾ! ನಾನಿಲ್ಲಿ ಸಮೀರ್ ನಾಯರ್ ಅವರ Applause Entertainment ಉದಾಹರಣೆಯನ್ನು ಕೊಡುತ್ತೇನೆ. ಕೆಲವೇ ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಆ ಮೀಡಿಯಾ ಹೌಸ್ ಈಗ ಬೆಳೆದು ನಿಂತಿರುವ ರೀತಿ ಅಚ್ಚರಿಯಾಗುತ್ತದೆ. ಇಂದು ಅವರು ಸೋನಿ ಲಿವ್, ಅಮೇಜಾನ್ ಮತ್ತು ನಟ್ ಫ್ಲಿಕ್ಸ್ ಗೆ ಲೀಡ್ ಪ್ರೊಡ್ಯೂಸರ್ಸ್. ಮೀಡಿಯಾ ಹೌಸಸ್, ಲೈನ್ ಪ್ರೊಡ್ಯೂಸರ್ಸ್ ಮತ್ತು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ಸ್ ಎಲ್ಲರಿಗೂ ಇಲ್ಲಿ ಅಪರಿಮಿತವಾದ ಬೆಳವಣಿಗೆಯ ಸಾಧ್ಯತೆ ಇದೆ. ಸ್ಟಾರ್ ಕೇಂದ್ರಿತ ನೆಲೆಯಿಂದ ಕಥಾಕೇಂದ್ರಿತ ನೆಲೆಗೆ ಇದೊಂದು ಶಿಫ್ಟ್ ಎಂದು ಹೇಳಬಹುದು.

‘Aneka Plus’ನ USP ಏನು?
ಮೊದಲನೆಯದಾಗಿ ‘Aneka Plus’ ನವ ಪ್ರತಿಭೆಗಳಿಗೆ ಮತ್ತು ಚಲನಚಿತ್ರ ಮತ್ತು ಟೀವಿಯಿಂದ ಈ ಹೊಸ ಮಾಧ್ಯಮಕ್ಕೆ ಬರುವವರಿಗೆ ಒಂದು ಲಾಂಚ್ ಪ್ಯಾಡ್. ಇನ್ನೊಂದು ದಿಕ್ಕಿನಿಂದ ಅಮೇಜಾನ್, ನೆಟ್ ಫ್ಲಿಕ್ಸ್ ಮುಂತಾದ ವೇದಿಕೆಗಳಿಗೆ ಕನ್ನಡ ಮೂಲದ ಕಂಟೆಂಟ್ ಕೊಡುವ ವೇದಿಕೆ ಸಹ ಹೌದು. ಈ ಮೂಲಕ ‘ಅನೇಕ ಪ್ಲಸ್’ content creators ಮತ್ತು web content productionಗಳಿಗೆ ಒಂದು eco system ಆಗಬೇಕೆನ್ನುವ ಪ್ರಯತ್ನವಿದು. ಜಾಗತಿಕ ವೇದಿಕೆಯಲ್ಲಿ ಕನ್ನಡದ ಕಥೆ ಹೇಳುವುದು ನಮ್ಮ ಉದ್ದೇಶ.

ಬರಲಿರುವ ದಿನಗಳಲ್ಲಿ ಕನ್ನಡದ ಭಿನ್ನ ಚಿತ್ರಗಳು ಓಟೀಟಿ ವೇದಿಕೆಯಲ್ಲಿ ಕಾಣಸಿಗಲಿ ಎನ್ನುವುದನ್ನು ಹಾರೈಸುತ್ತಾ…

LEAVE A REPLY

Connect with

Please enter your comment!
Please enter your name here