ವಿನಯ್‌ ಕೃಷ್ಣ ನಿರ್ದೇಶನದಲ್ಲಿ ನಟ ಉಪೇಂದ್ರರ ಅಣ್ಣನ ಪುತ್ರ ನಿರಂಜನ್‌ ಸುಧೀಂದ್ರ ಅಭಿನಯದ ‘ಹಂಟರ್‌’ ಸಿನಿಮಾ ಸೆಟ್ಟೇರಿದೆ. ಸೌಮ್ಯ ಮೆನನ್‌ ನಾಯಕಿಯಾಗಿ ನಟಿಸುತ್ತಿದ್ದು, ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ.

“ಎಲ್ಲಾ ಗೊತ್ತು ಅನ್ನುವವರಿಗೆ ಏನೂ ಗೊತ್ತಿರಲ್ಲ. ಏನೂ ಗೊತ್ತಿಲ್ಲ ಅನ್ನುವವರಿಗೆ ಎಲ್ಲಾ ಗೊತ್ತಿರುತ್ತದೆ. ನಿರ್ದೇಶಕರಾದಿಯಾಗಿ ಇಡೀ ತಂಡದಲ್ಲಿ ಉತ್ಸಾಹವಿದೆ. ನಿರಂಜನ್ ಬಗ್ಗೆ ಹೇಳುವುದಾದರೆ ಅವನು ಚಿಕ್ಕ ವಯಸ್ಸಿನಲ್ಲೇ ನಟ. ನನ್ನ ‘A’ ಚಿತ್ರದಲ್ಲಿ ಪುಟ್ಟ ಮಗು ಮಲಗಿರುವ ದೃಶ್ಯವಿದೆ. ಆ ಮಗು ನಮ್ಮ ನಿರಂಜನ್. ಮುಂದೆ ನಾಟಕ, ಸಿನಿಮಾ ಇದರ ಮೇಲೆ ಅವನ ಆಸಕ್ತಿ ಬೆಳೆಯಿತು. ಅಷ್ಟೇ ಶ್ರಮ ಪಡುತ್ತಾನೆ. ಅವನಿಗೆ ಒಳ್ಳೆಯದಾಗಲಿ” ಎಂದರು ಉಪೇಂದ್ರ. ಅವರ ಹಿರಿಯ ಸಹೋದರ ಸುಧೀಂದ್ರ ಅವರ ಪುತ್ರ ನಿರಂಜನ್‌ ನಾಯಕನಾಗಿ ನಟಿಸುತ್ತಿರುವ ‘ಹಂಟರ್’ ಸಿನಿಮಾ ಸೆಟ್ಟೇರಿದೆ. ತಾರಾ ದಂಪತಿ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಇದೊಂದು ಆಕ್ಷನ್‌ – ಥ್ರಿಲ್ಲರ್‌ ಕತೆಯಾಗಿದ್ದು ಸಿನಿಮಾಗಾಗಿ ಹೀರೋ ನಿರಂಜನ್‌ ಕಳೆದ ಆರು ತಿಂಗಳಿಂದ ತಯಾರಿ ನಡೆಸಿದ್ದಾರೆ. ಕೇರಳ ಮೂಲದ ಸೌಮ್ಯ ಮೆನನ್‌ ಚಿತ್ರದ ಹಿರೋಯಿನ್‌. ಕನ್ನಡದಲ್ಲಿದು ಅವರಿಗೆ ಮೊದಲ ಸಿನಿಮಾ. ಈ ಹಿಂದೆ ‘ಪರಿ’ ಮತ್ತು ‘ಸೀಜರ್‌’ ಸಿನಿಮಾಗಳನ್ನು ನಿರ್ಮಿಸಿದ್ದ ತ್ರಿವಿಕ್ರಮ್‌ ಸಾಪಲ್ಯ ನಿರ್ಮಿಸುತ್ತಿರುವ ‘ಹಂಟರ್‌’ ಚಿತ್ರವನ್ನು ವಿನಯ್‌ ಕೃಷ್ಣ ನಿರ್ದೇಶಿಸುತ್ತಿದ್ದಾರೆ. “ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸುವಂತಹ ಥ್ರಿಲ್ಲರ್‌ ಇದು. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜನೆ, ಮಹೇಶ್ ಛಾಯಾಗ್ರಹಣ, KGF ಸಿನಿಮಾ ಖ್ಯಾತಿಯ ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ” ಎಂದು ನಿರ್ದೇಶಕ ವಿನಯ್ ಕೃಷ್ಣ ಮಾಹಿತಿ ನೀಡಿದರು.

ಹೀರೋ ನಿರಂಜನ್‌ ಮಾತನಾಡಿ, “ಚಿಕ್ಕಪ್ಪ ಉಪೇಂದ್ರ ಮತ್ತು ಚಿಕ್ಕಮ್ಮ ಪ್ರಿಯಾಂಕಾ ಅವರು ನನ್ನ ಎಲ್ಲಾ ಚಿತ್ರಗಳಿಗೂ ನೀಡುತ್ತಿರುವ ಪ್ರೋತ್ಸಾಹ ಮರೆಯುವಂತಿಲ್ಲ. ನಾನು ನಾಯಕನಾಗಿ ನಟಿಸಿರುವ ಯಾವುದೇ ಚಿತ್ರ ತೆರೆಕಂಡಿಲ್ಲ. ಆದರೂ ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿರುವ‌ ನಿರ್ಮಾಪಕ ತ್ರಿವಿಕ್ರಮ್‌ ಅವರಿಗೆ ನಾನು ಆಭಾರಿ. ನಿರ್ದೇಶಕ ವಿನಯ್ ಕೃಷ್ಣ ಅವರ ಕೆಲಸದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನಾಯಕಿ ಸೌಮ್ಯ ಅವರು ಉತ್ತಮ ಕಲಾವಿದೆ. ಅವರಿಗೆ ಸಿನಿಮಾ ಮುಗಿಯುವಷ್ಟರಲ್ಲಿ ಕನ್ನಡ ಕಲಿಸುತ್ತೇನೆ. ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದರು. ಜಯಂತ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ರಚನೆಯ ಹಾಡುಗಳಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here