ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ‘ಕಾಟೇರ’ ಪ್ರದರ್ಶನಗೊಳ್ಳಲಿ ಎಂದು ‘ಮನುಜಮತ ಸಿನಿಯಾನ’ ಹಾಗೂ ‘ಸಿನಿಮಾ ಓದು’ ಬಳಗದವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಕನ್ನಡ ನಾಡಿನ ಜನಸಮುದಾಯದ ಮೌಲ್ಯಗಳನ್ನು ಹೇಳುವ ಇದು ಉದ್ಘಾಟನಾ ಚಿತ್ರವಾಗಲು ಅರ್ಹವಾದದ್ದು ಎನ್ನುವುದು ಅವರ ಅಭಿಪ್ರಾಯ.

ಪ್ರತಿಷ್ಠಿತ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಫೆಬ್ರವರಿ 29ರಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳು ಹಾಗೂ ವಿದೇಶಗಳ ನೂರಾರು ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಜನಸಮುದಾಯಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೊಂದನ್ನು ಉದ್ಘಾಟನಾ ಚಿತ್ರವನ್ನಾಗಿ ಆಯ್ಕೆ ಮಾಡುವುದು ಎಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಅದರಂತೆ ಈ ಬಾರಿ ಉದ್ಘಾಟನಾ ಚಿತ್ರವಾಗಿ ‘ಕಾಟೇರ’ ಪ್ರದರ್ಶನಗೊಳ್ಳಲಿ ಎಂದು ‘ಮನುಜಮತ ಸಿನಿಯಾನ’ ಹಾಗೂ ‘ಸಿನಿಮಾ ಓದು’ ಬಳಗದವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಈ ಸಂಬಂಧ ಅವರು ಸರ್ಕಾರಕ್ಕೆ ಸಲ್ಲಿಸುತ್ತಿರುವ ಮನವಿ ಪತ್ರದ ಒಕ್ಕಣಿ ಈ ಕೆಳಕಂಡಂತಿದೆ…

‘ಮಾನ್ಯ ಮುಖ್ಯಮಂತ್ರಿಗಳು ಫೆಬ್ರವರಿ 29ರಿಂದ ಮಾರ್ಚ್ 7ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಹಬ್ಬ ನಡೆಯುವುದಾಗಿ ಘೋಷಿಸಿರುವುದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಹಾಗೆಯೇ, ಸಿನಿಮಾ ಜ್ಞಾನಿಗಳ ಆಯ್ಕೆ ಸಮಿತಿಯನ್ನು ರಚಿಸಿರುವುದು ಮತ್ತು ಶಾಂತಿ, ಸೌಹಾರ್ದ, ಸಮಾನತೆಗಳನ್ನು ಎತ್ತಿ ಹಿಡಿಯುವಂತಹ ಸಿನಿಮಾಗಳಿಗೆ ಈ ಹಬ್ಬವು ವೇದಿಕೆಯಾಗಲಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿರುವುದೂ ಕೂಡ ಸಂತಸದ ಸಂಗತಿಯಾಗಿದೆ. ತಜ್ಞರ ಸಮಿತಿಯು ಘೋಷಿತ ಆಶಯಗಳನ್ನುಳ್ಳ ಉತ್ತಮ ಅಂತರಾಷ್ಟ್ರೀಯ ಸಿನಿಮಾಗಳನ್ನು ಪ್ರದರ್ಶನಕ್ಕೆ ಆಯ್ದು ತರುವರೆಂಬ ವಿಶ್ವಾಸವು ನಮಗಿದೆ. ಇದಕ್ಕೆ ಪೂರಕವಾಗಿ, ಶಾಂತಿ ಸಮಾನತೆಗಳನ್ನು ಸೃಜನಶೀಲವಾಗಿ ಅಭಿವ್ಯಕ್ತಿಸುವ ‘ಕಾಟೇರ’ ಕನ್ನಡ ಸಿನಿಮಾವು ಬಿಡುಗಡೆಗೊಂಡು ಭಾರಿ ಜನಮನ್ನಣೆಗೆ ಪಾತ್ರವಾಗಿದೆ. ಕನ್ನಡ ನಾಡಿನ ಜನಸಮುದಾಯದ ಜೀವಂತ ಮೌಲ್ಯಗಳನ್ನು ಎದೆಯಲ್ಲಿಟ್ಟುಕೊಂಡಿರುವ ‘ಕಾಟೇರ’ ಸಿನಿಮಾವನ್ನು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಹಬ್ಬದ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶಿಸುವುದು ಅತ್ಯಂತ ಸೂಕ್ತವಾಗಿದ್ದು, ಆಯ್ಕೆ ಸಮಿತಿಯು ನಮ್ಮ ಈ ಸೂಚನೆಯನ್ನು ಮನ್ನಿಸಿ ಈಡೇರಿಸಬೇಕು ಎಂದು ನಾವು ಕೋರುತ್ತೇವೆ’
– ‘ಮನುಜಮತ ಸಿನಿಯಾನ’ ಹಾಗು ‘ಸಿನಿಮಾ ಓದು’ ಬಳಗ, ಕರ್ನಾಟಕ

LEAVE A REPLY

Connect with

Please enter your comment!
Please enter your name here