ಸರಣಿಯ ಆರಂಭ ಚೆನ್ನಾಗಿದ್ದರೂ ಹೋಗುತ್ತಾ ಹೋಗುತ್ತಾ ಕಥೆ ದಿಕ್ಕು ತಪ್ಪುತ್ತಾ ಮೊನಚು ಕಳೆದುಕೊಂಡಿದೆ. ಒಟ್ಟಾರೆಯಾಗಿ ಒಂದು ಪತ್ತೇದಾರಿ ಸರಣಿಯಲ್ಲಿ ಇರಬೇಕಾದ ಆಸಕ್ತಿ ಮತ್ತು ಕುತೂಹಲ ಎರಡೂ ಈ ಸರಣಿಯಲ್ಲಿ ಇಲ್ಲ ಎನ್ನುವುದು ಬೇಸರದ ವಿಷಯ. ‘ಪಿ. ಐ. ಮೀನಾ’ ಸರಣಿ ಆಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಪತ್ತೇದಾರಿ ಕಥೆಗಳು ಯಶಸ್ವಿಯಾಗಬೇಕಾದರೆ ಎರಡು ವಿಚಾರಗಳು ಬಹಳ ಮುಖ್ಯವಾಗುತ್ತವೆ. ಮೊದಲನೇ ಅಂಶ ಎಂದರೆ ಮುಖ್ಯಪಾತ್ರಧಾರಿಯ ಪಾತ್ರ ತನ್ನ ಕೆಲಸವನ್ನು ಆಸಕ್ತಿಕರವಾಗಿ ನಿರ್ವಹಿಸಿಕೊಂಡು ಹೋಗುತ್ತಿದೆ ಎಂದು ವೀಕ್ಷಕರಿಗೆ ಭಾಸವಾಗಬೇಕು. ಎರಡನೆಯದಾಗಿ ಮುಖ್ಯ ಪಾತ್ರಧಾರಿಗೆ ಕಥೆಯಲ್ಲಿ ಎದುರಾಗುವ ಸವಾಲುಗಳು ನೋಡುಗರಲ್ಲೂ ದಿಗಿಲು ಹುಟ್ಟಿಸಬೇಕು. ಇದು ನಿರ್ದೇಶಕರಿಗೆ ಪಾತ್ರಪೋಷಣೆಗೆ ಮತ್ತು ಕಥಾನಿರೂಪಣೆಗೆ ಎಷ್ಟು ಒತ್ತು ಕೊಟ್ಟು ಕಥೆ ಮಾಡಿರುತ್ತಾರೆ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ.
ಇತ್ತೀಚಿಗೆ ಬಿಡುಗಡೆಯಾದ ಕೆಲವು ಪತ್ತೇದಾರಿ ಸಿನಿಮಾ ಮತ್ತು ಸರಣಿಗಳನ್ನು ನೋಡಿದಾಗ ಈ ಅಂಶಗಳು ಪ್ರೇಕ್ಷಕರ ಗಮನಕ್ಕೆ ಬಂದಿರುತ್ತದೆ. ಇಷ್ಟೆಲ್ಲ ಪೀಠಿಕೆ ಏತಕ್ಕಾಗಿ ಎಂದರೆ ನಾವು ಈಗ ಹೇಳಲು ಹೊರಟಿರುವುದು ಹೊಸದಾಗಿ ಬಿಡುಗಡೆಯಾಗಿರುವ ಪತ್ತೇದಾರಿ ಸರಣಿ ‘ಪಿ. ಐ. ಮೀನಾ’ ಬಗ್ಗೆ. ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಬೀರದೇ ಪಿ ಐ ಮೀನಾ ಬಹಳ ನಿರಾಸೆ ಮೂಡಿಸಿದೆ ಎಂದೇ ಹೇಳಬೇಕು. ಈ ಥರದ ಕಥೆಗಳಲ್ಲಿ ಸ್ಥಳ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಕೊಲ್ಕೋತಾ ನಗರದ ಹಿನ್ನೆಲೆಯಲ್ಲಿ ಕಥೆ ಮಾಡಲಾಗಿದ್ದರೂ ನಗರವನ್ನು ಕಥೆಯ ಒಂದು ಪ್ರಮುಖ ಪಾತ್ರವನ್ನಾಗಿ ಮಾಡುವ ಎಲ್ಲ ಅವಕಾಶವನ್ನು ನಿರ್ದೇಶಕರು ಕಳೆದುಕೊಂಡಿದ್ದಾರೆ ಮತ್ತು ಮುಖ್ಯ ಪಾತ್ರಧಾರಿ ಮೀನಾ ಕೂಡ ಅಷ್ಟೇ ನಿರಾಸಕ್ತಿಯಿಂದ ಪಾತ್ರ ನಿರ್ವಹಿಸಿದಂತೆ ತೋರುತ್ತಾರೆ.
ಶೀರ್ಷಿಕೆಯೇ ಹೇಳುವಂತೆ ಸರಣಿಯಲ್ಲಿ ತಾನ್ಯಾ ಅವರು ಮೀನಾ ಪಾತ್ರಧಾರಿಯಾಗಿ ಪ್ರೈವೇಟ್ ಡಿಟೆಕ್ಟಿವ್ ಪಾತ್ರ ನಿರ್ವಹಿಸಿದ್ದಾರೆ. ಕೋಮಾದಲ್ಲಿ ಇರುವ ಆಕೆಯ ಸಹೋದರ ಜಾಯ್ ಮತ್ತು ಅವರಿಗೆ ಸಂಬಂಧಿಸಿದಂತೆ ಆಘಾತಕಾರಿ ಘಟನೆಯೊಂದು ಆಕೆಯನ್ನು ಬಾಧಿಸುತ್ತಿರುತ್ತದೆ. ಅನೇಕ ಸನ್ನಿವೇಶಗಳಲ್ಲಿ ಮೀನಾ ತನ್ನ ಕೋಪವನ್ನು ತನ್ನ ಸಹೋದರನ ಮೇಲೆ ತೋರುವುದನ್ನು ಕಾಣಬಹುದು. ಮೀನಾ ವೃತ್ತಿಯಲ್ಲಿ ಪ್ರೈವೇಟ್ ಡಿಟೆಕ್ಟಿವ್ ಆದರೂ ಕಥೆಯ ತುಂಬಾ ಬರೀ ಅನೈತಿಕ ಸಂಬಂಧಗಳು ಮತ್ತು ಮುರಿದ ಮನಸ್ಸುಗಳೇ ತುಂಬಿವೆ.
ಪ್ರೀತಮ್ ಸೇನ್ ಆಕೆಯ ಬಾಸ್. ಆತನಿಗೆ ಬಹಳ ಉನ್ನತ ಅಧಿಕಾರಿಗಳ ಜೊತೆ ಸಂಪರ್ಕ ಇರುತ್ತದೆ ಮತ್ತು ಬಹಳ ಪ್ರಭಾವಿ ವ್ಯಕ್ತಿಯಾಗಿರುತ್ತಾನೆ. ಆದರೆ ಆತನ ಕಂಪನಿಗೆ ದೊರಕುವ ಕೇಸುಗಳನ್ನು ನೋಡಿದರೆ ಆತನ ಆಫೀಸಿನ ಚರ್ಯೆಗೂ, ಅವಕ್ಕೂ ಪರಸ್ಪರ ಹೊಂದಾಣಿಕೆಯೇ ಗೋಚರಿಸುವುದಿಲ್ಲ. ಶುಭೋ ರಾಯ್ ಮೀನಾಳ ಸಹೋದ್ಯೋಗಿ ಮತ್ತು ಆಕೆಯ ಬಗ್ಗೆ ವಿಶೇಷವಾದ ಆಸಕ್ತಿಯನ್ನೂ ಇಟ್ಟುಕೊಂಡಿರುತ್ತಾನೆ. ಆತನಿಗೆ ರಾಜಕೀಯಕ್ಕೆ ಧುಮುಕಬೇಕೆಂದು ಅಸೆ ಇರುತ್ತದೆ. ಆದರೆ ದೇಶಕ್ಕೆ ಸೇವೆ ಮಾಡುವ ಮನೋಭಾವವೇನೂ ಅಷ್ಟಾಗಿ ಕಾಣುವುದಿಲ್ಲ. ಆಚಾನಕ್ಕಾಗಿ ಕಥೆಯಲ್ಲಿ ಹೊಸ ತಿರುವು ಬರುತ್ತದೆ. ಪಾರ್ಥೋ ಡೇ ಪಾತ್ರ ಒಂದು ಟ್ರಕ್ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗುತ್ತದೆ. ವೇಗವಾಗಿ ಹೊರಟ ಟ್ರಕ್ಕಿನ ಫೋಟೋ ತೆಗೆದಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನ ಮೀನಾ ಪಾತ್ರಕ್ಕೆ ಇಲ್ಲವಾಗಿ ಹೋಯ್ತಲ್ಲ ಎನ್ನುವುದು ಆಶ್ಚರ್ಯ. ಮೀನಾ ಪಾರ್ಥೋವನ್ನು ಆಸ್ಪತ್ರೆಗೆ ಸೇರಿಸಿ ಪೋಲೀಸರಿಗೆ ದೂರು ನೀಡುತ್ತಾಳೆ.
ಪಾರ್ಥೋ ತಾಯಿಗೆ ಮಾತ್ರ ಇದು ಅಪಘಾತವಲ್ಲ, ತನ್ನ ಮಗನ ಮೇಲೆ ಕೊಲೆ ಯತ್ನ ನಡೆದಿದೆ ಎಂಬ ಸಂಶಯ ಬರುತ್ತದೆ. ಮೀನಾಳಿಗೆ ಈ ಕೇಸಲ್ಲಿ ಆಸಕ್ತಿ ಬಂದು ಮತ್ತಷ್ಟು ತನಿಖೆ ಮಾಡಲು ನಿರ್ಧರಿಸಿ ಲಿಟನಾಂಗಿಗೆ ಹೊರಡುತ್ತಾಳೆ. ಅಲ್ಲಿ ಆಕೆಗೆ ಡಾ ಆಂಡ್ರೆ ರಕ್ಷಾ ಎನ್ನುವವರ ಪರಿಚಯವಾಗುತ್ತದೆ. ಈ ಕಥೆಯ ಜೊತೆಜೊತೆಗೆ ವೈರಸ್ ಹಾವಳಿಯ ಕಥಾನಕ ಕೂಡ ಪರ್ಯಾಯವಾಗಿ ಸಾಗುತ್ತದೆ. ಮುಖ್ಯ ಪಾತ್ರಧಾರಿ ತಾನ್ಯಾಗೆ ಹೋಲಿಸಿದರೆ ಪರಂಬ್ರತ ಅವರ ಅಭಿನಯ ಬಹಳ ಉತ್ತಮವಾಗಿದೆ. ಅವರ ನಟನೆಯಲ್ಲಿ ಲವಲವಿಕೆ ಇದೆ.
ಶುಭೋ ರಾಯ್ ಪಾತ್ರ ಒಳ್ಳೆಯದೂ ಅಲ್ಲದ, ಕೆಟ್ಟದ್ದೂ ಅಲ್ಲದ ಮಿಶ್ರಭಾವದ ಪಾತ್ರವಾಗಿದೆ. ಆ ಪಾತ್ರಕ್ಕೆ ಬೇಕಾದ ಸಣ್ಣ ಸಣ್ಣ ಸೂಕ್ಷ್ಮಗಳನ್ನೆಲ್ಲ ಪರಂಬ್ರತ ಚೆನ್ನಾಗಿ ಅಭಿನಯಿಸಿದ್ದಾರೆ. ಜಿಶನು ಸೇನ್‌ಗುಪ್ತ ಪಾತ್ರ ಬಹಳ ನಿಗೂಢವಾಗಿದ್ದು ಕಥೆಯಲ್ಲಿ ಆಸಕ್ತಿ ಉಳಿಯುವಂತೆ ಮಾಡುತ್ತದೆ. ಮೀನಾ ಪಾತ್ರ ತನ್ನ ಗೊಂದಲಗಳಲ್ಲಿ ಕಳೆದು ಹೋದಾಗ ಸರಿಯಾದ ದಾರಿಯಲ್ಲಿ ಹುಡುಕುವಂತೆ ಸೂಚ್ಯವಾಗಿ ಸಲಹೆ ನೀಡುತ್ತದೆ. ಆತನ ಪಾತ್ರ ಎಷ್ಟು ನಿಗೂಢವಾಗಿದೆಯೆಂದರೆ ಆತನ ನಿಜವಾದ ಉದ್ದೇಶ ಏನು, ಆತನ ಮನಸ್ಸಲ್ಲಿ ಏನಿದೆ ಎನ್ನುವುದನ್ನು ತಿಳಿಯಲು ವೀಕ್ಷಕರು ಕಾತುರದಿಂದ ಕಾಯುವಂತೆ ಮಾಡುತ್ತದೆ.
ಈ ಸರಣಿಯ ಬಹಳ ದೊಡ್ಡ ಹಿನ್ನಡೆ ಎಂದರೆ ಮುಖ್ಯ ಪಾತ್ರಧಾರಿ ಮೀನಾಳೇ. ಆಕೆಯ ಪಾತ್ರ ಬಹಳ ಗೋಜಲು ಗೋಜಲಾಗಿದೆ. ಆಕೆಗೆ ಒಂದು ದುರಂತದ ಹಿನ್ನೆಲೆ ಇದೆ ಎಂದು ಒಪ್ಪಬಹುದಾದರೂ ಯಾವಾಗಲೂ ಎಲ್ಲರ ಬಗ್ಗೆಯೂ ಒಂದು ಅಸಹನೆ ಇಟ್ಟುಕೊಂಡೇ ವರ್ತಿಸುವ ಮೀನಾ ಪಾತ್ರ ಒಂದು ಹಂತದಲ್ಲಿ ಬಹಳ ಕಿರಿಕಿರಿ ಉಂಟುಮಾಡುತ್ತದೆ. ಆಕೆಗೆ ತನ್ನ ಕೆಲಸದಲ್ಲಿ ಆಸಕ್ತಿಯೇ ಇಲ್ಲವೇನೋ ಎನಿಸುವಂತೆ ಭಾಸವಾಗುತ್ತದೆ. ಪಾತ್ರ ತೀಕ್ಷ್ಣವಾಗಿರಬೇಕು ಎನ್ನುವ ಉದ್ದೇಶ ನಿರ್ದೇಶಕರಿಗಿದ್ದರೂ ಇಲ್ಲಿ ತೀಕ್ಷ್ಣತೆಗಿಂತ ಅಸಹನೆ ಎದ್ದು ಕಾಣುವುದು ನಿರ್ದೇಶಕರ ವೈಫಲ್ಯ ಎಂದೇ ಹೇಳಬಹುದು. ಈ ನಿಟ್ಟಿನಲ್ಲಿ ನಿರ್ದೇಶಕ ದೇಬ್ಲಾಯ್ ಭಟ್ಟಾಚಾರ್ಯ ಮತ್ತು ಮುಖ್ಯನಟಿ ತಾನ್ಯ ಇನ್ನಷ್ಟು ಪರಿಶ್ರಮ ಹಾಕಬೇಕಿತ್ತು.
ವಿನಯ್ ಪಾಠಕ್, ಜರೀನಾ ವಹಾಬ್ ಮೊದಲಾದ ಅದ್ಭುತ ನಟರು ಇದ್ದರೂ ಅವರನ್ನು ಸದುಪಯೋಗ ಪಡಿಸಿಕೊಂಡಿಲ್ಲ. ಕೊಲ್ಕೋತಾ ನಗರದಲ್ಲಿ ನಡೆಯುವ ಈ ಕಥೆಯಲ್ಲಿ ಕೊಲ್ಕೋತಾ ನಗರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಥೆಯಲ್ಲಿ ಅಳವಡಿಸಿಕೊಳ್ಳಬಹುದಿತ್ತು. ಆ ಊರಿನ ಸೊಗಡು ಎಲ್ಲಿಯೂ ಕಾಣುವುದಿಲ್ಲ. ಸಂಕಲನ ಬಹಳವೇ ಗೋಜಲಾಗಿದೆ. ಎಂಟು ಸಂಚಿಕೆಗಳು ಬಹಳ ಉದ್ದವಾದಂತೆ ಭಾಸವಾಗುತ್ತವೆ. ಸಂಕಲನ ಬಹಳವೇ ಚುರುಕಾಗಿರಬೇಕಿತ್ತು. ಸರಣಿಯ ಆರಂಭ ಚೆನ್ನಾಗಿದ್ದರೂ ಹೋಗುತ್ತಾ ಹೋಗುತ್ತಾ ಕಥೆ ದಿಕ್ಕು ತಪ್ಪುತ್ತಾ ಮೊನಚು ಕಳೆದುಕೊಂಡಿದೆ. ಒಟ್ಟಾರೆಯಾಗಿ ಒಂದು ಪತ್ತೇದಾರಿ ಸರಣಿಯಲ್ಲಿ ಇರಬೇಕಾದ ಆಸಕ್ತಿ ಮತ್ತು ಕುತೂಹಲ ಎರಡೂ ಈ ಸರಣಿಯಲ್ಲಿ ಇಲ್ಲ ಎನ್ನುವುದು ಬೇಸರದ ವಿಷಯ. ‘ಪಿ. ಐ. ಮೀನಾ’ ಸರಣಿ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.