ವಿಶಾಲ್ ಫುರಿಯಾ ನಿರ್ದೇಶನದ ‘ಚೋರಿ’ ಹಿಂದಿ ಹಾರರ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಯಶಸ್ವೀ ಮರಾಠಿ ಸಿನಿಮಾ ‘ಲಪಚ್ಚಪಿ’ ಹಿಂದಿ ರೀಮೇಕಿದು. ನುಸ್ರತ್‌ ಭರೂಚಾಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ನವೆಂಬರ್‌ 26ರಿಂದ ಸ್ಟ್ರೀಮ್ ಆಗಲಿದೆ.

ಕೆಲ ದಿನಗಳ ಹಿಂದೆ ನಟಿ ನುಸ್ರತ್‌ ಭರೂಚಾ ತಾವು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಚೋರಿ’ ಹಾರರ್‌ ಹಿಂದಿ ಸಿನಿಮಾದ ಟೀಸರ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬೆಚ್ಚಿ ಬೀಳಿಸುವ ಹಾರರ್‌ ಸೀನ್‌ಗಳೊಂದಿಗೆ ವೀಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಹೊಸ ಜಾಗಕ್ಕೆ ಹೊಂದಿಕೊಳ್ಳಲು ಯತ್ನಿಸುವ ತುಂಬು ಗರ್ಭಿಣಿ ಸಾಕ್ಷಿಗೆ (ನುಸ್ರತ್‌) ಪ್ರಸ್ತುತ ಜೀವಿಸಿಲ್ಲದ ಇಲ್ಲವೇ ಇಹಲೋಕ ತ್ಯಜಿಸಿ ವರ್ಷಗಳೇ ಆದ ಆತ್ಮಗಳು ಎದುರಾಗಿ ಭಯಪಡಿಸುತ್ತವೆ. ಟೀ ಸೀರೀಸ್‌ನ ಭೂಷಣ್ ಕುಮಾರ್‌, ವಿಕ್ರಮ್ ಮಲ್ಹೊತ್ರಾ ಮತ್ತು ಜಾಕ್ ಡೇವಿಸ್‌ ನಿರ್ಮಿಸಿರುವ ಚಿತ್ರವನ್ನು ವಿಶಾಲ್ ಫುರಿಯಾ ನಿರ್ದೇಶಿಸಿದ್ದಾರೆ.

ಟ್ರೈಲರ್ ವೀಕ್ಷಿಸಿದರೆ ನಿರ್ದೇಶಕ ವಿಶಾಲ್ ಫುರಿಯಾ ಅವರು ಚಿತ್ರದಲ್ಲಿ ವೀಕ್ಷಕರನ್ನು ಭಯಪಡಿಸುವ ಸೀನ್‌ಗಳನ್ನು ಕಟ್ಟಿರುವುದು ಕಾಣಿಸುತ್ತದೆ. ದಟ್ಟ ಕಬ್ಬಿನ ಗದ್ದೆಯ ಮಧ್ಯೆಯ ಹಳೇ ಮನೆ, ಕತ್ತಲೆಯನ್ನು ಸೀಳುವ ಗೋಡೆಯ ಗಾಢ ವರ್ಣಗಳು ಹಾರರ್‌ಗೆ ಅಗತ್ಯವಿರುವ ವೇದಿಕೆಯನ್ನು ಸೃಷ್ಟಿಸಿವೆ. “ಈ ಚಿತ್ರದೊಂದಿಗೆ ದೊಡ್ಡ ಪ್ರೇಕ್ಷಕ ವರ್ಗವನ್ನು ತಲುಪುವುದು ನಮ್ಮ ಉದ್ದೇಶ. ಪ್ರೇಕ್ಷಕರು ಇಲ್ಲಿ ಹಿಂದೆಂದೂ ನೋಡಿರದ ಹಾರರ್‌ ಅನುಭವ ಪಡೆಯಲಿದ್ದಾರೆ” ಎಂದಿದ್ದಾರೆ ನಿರ್ದೇಶಕ ವಿಶಾಲ್ ಫುರಿಯಾ. ಮಿತಾ ವಶಿಷ್ಠ, ರಾಜೇಶ್ ಜೈಸ್‌, ಸೌರಭ್ ಗೋಯಲ್‌, ಯಾನಿ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Previous articleಸಂಗಾತಿ ಕುರಿತು ಗೋಪ್ಯತೆ ಕಾಪಾಡುವುದು ಅಗೌರವ; ಬಾಯ್‌ಫ್ರೆಂಡ್ ಕುರಿತು ಹೇಳಿಕೊಂಡ ಶ್ರುತಿ ಹಾಸನ್
Next articleವೀಡಿಯೊ | ಅಪ್ಪು ಸಮಾಧಿ ಎದುರು ‘ಬನಾರಸ್’ ಮೋಷನ್ ಪೋಸ್ಟರ್ ಬಿಡುಗಡೆ; ಜಯತೀರ್ಥ ಸಿನಿಮಾ

LEAVE A REPLY

Connect with

Please enter your comment!
Please enter your name here