ಸತ್ಯಜಿತ್ ರೇ ನಿರ್ದೇಶನದ ಮಹತ್ವದ ‘ಪಥೇರ್ ಪಾಂಚಾಲಿ’ ಬೆಂಗಾಲಿ ಸಿನಿಮಾದ ದುರ್ಗಾ ಪಾತ್ರಧಾರಿ ಉಮಾ ದಾಸ್ ಗುಪ್ತಾ ಅಗಲಿದ್ದಾರೆ. ಈ ಸಿನಿಮಾ ತೆರೆಕಂಡು ಈ ಹೊತ್ತಿಗೆ ಏಳು ದಶಕ. ಚಿತ್ರದಲ್ಲಿನ, ದುರ್ಗಾ ಮತ್ತು ಅಪು ದೂರದಲ್ಲಿ ಹಾದು ಹೋಗುತ್ತಿರುವ ರೈಲನ್ನು ಮೊದಲ ಬಾರಿಗೆ ನೋಡುವ ದೃಶ್ಯ ಇಂದಿಗೂ ಸಿನಿಪ್ರಿಯರ ಕಣ್ಣಿಗೆ ಕಟ್ಟಿದಂತಿದೆ.
ಭಾರತೀಯ ಚಿತ್ರರಂಗದ ಕ್ಲಾಸಿಕ್ ಸಿನಿಮಾ, ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ಯ ದುರ್ಗಾ ನೆನಪಿದೆಯೇ? ಹಳ್ಳಿಯ ಮುಗ್ದ ಹುಡುಗಿ ಆಕೆ, ಅಪುವಿನ ಅಕ್ಕ. ಸಿನಿಮಾದಲ್ಲಿ ದುರ್ಗಾ ಪಾತ್ರಕ್ಕೆ ಜೀವ ತುಂಬಿದವರು ನಟಿ ಉಮಾ ದಾಸ್ ಗುಪ್ತಾ. ಹಲವು ವರ್ಷಗಳಿಂದ ಕ್ಯಾನ್ಸರ್ ಬಾಧಿತರಾಗಿದ್ದ ಉಮಾ (84) ನವೆಂಬರ್ 18ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.
1929ರಲ್ಲಿ ಬಿಭೂತಿಭೂಷಣ್ ಬಂಡೋಪಾಧ್ಯಾಯ ಅವರು ಬರೆದ ಕಾದಂಬರಿ ಆಧಾರಿಸಿ ರೇ ನಿರ್ದೇಶಿಸಿದ ಸಿನಿಮಾ ‘ಪಥೇರ್ ಪಾಂಚಾಲಿ’. 1955ರಲ್ಲಿ ತೆರೆಕಂಡ ‘ಪಥೇರ್ ಪಾಂಚಾಲಿ’ಯಲ್ಲಿ ಉಮಾ ನಿರ್ವಹಿಸಿದ ದುರ್ಗಾ ಚಿತ್ರಣವು ಭಾರತೀಯ ಚಿತ್ರರಂಗದಲ್ಲಿ ನೆನಪಿನಲ್ಲಿ ಉಳಿಯುವಂಥದ್ದು. ಸುಬೀರ್ ಬ್ಯಾನರ್ಜಿ ಅಪು ಪಾತ್ರದಲ್ಲಿದ್ದು ಆತನ ಅಕ್ಕ ದುರ್ಗಾ ಪಾತ್ರದಲ್ಲಿ ಉಮಾ ಪ್ರೇಕ್ಷಕರನ್ನು ನಿಬ್ಬೆರರಾಗಿಸಿದ್ದರು. ಏಳು ದಶಕಗಳ ನಂತರವೂ ‘ಪಥೇರ್ ಪಾಂಚಾಲಿ’ಯಲ್ಲಿ ದುರ್ಗಾ ಮತ್ತು ಅಪು ದೂರದಲ್ಲಿ ಹಾದು ಹೋಗುತ್ತಿರುವ ರೈಲನ್ನು ಮೊದಲ ಬಾರಿಗೆ ನೋಡುವ ದೃಶ್ಯ ಮರೆಯುವುದಂಟೆ?
ರೇ ಹುಡುಕಿ ತೆಗೆದ ನಟಿ ಉಮಾ | ಉಮಾ ಅಚಾನಕ್ ಆಗಿ ಚಿತ್ರರಂಗಕ್ಕೆ ಬಂದವರು. ಬಾಲನಟಿಗಾಗಿ ನಿರ್ದೇಶಕ ಸತ್ಯಜಿತ್ ರೇ ಅವರು ಹುಡುಕಾಟ ನಡೆಸುತ್ತಿದ್ದಾಗ ಶಾಲೆಯ ಕಾರ್ಯಕ್ರಮವೊಂದರಲ್ಲಿ ಉಮಾ ಅವರನ್ನು ನೋಡಿ ಸತ್ಯಜೀತ್ ಸಿನಿಮಾಕ್ಕೆ ಕರೆತಂದಿದ್ದರು, ಆಕೆ ಮೊದಲ ಬಾರಿ ನಟಿಸಿದ ‘ಪಥೇರ್ ಪಾಂಚಾಲಿ’ ಸಿನಿಮಾ ಜಗತ್ತಿನಾದ್ಯಂತ ಮನ್ನಣೆ ಗಳಿಸಿತ್ತು. ಸಿನಿಮಾಕ್ಕೆ ಪ್ರಶಂಸೆಗಳು ಸಿಕ್ಕರೂ ಉಮಾ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದರು. ಹೀಗೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ ಉಮಾ, ಆ ಸಿನಿಮಾದ ಪಾತ್ರದಿಂದಲೇ ಜನಪ್ರಿಯರಾದರು.
‘ಪಥೇರ್ ಪಾಂಚಾಲಿ’ (1955) ಬಗ್ಗೆ ಹೇಳುವುದಾದರೆ ಅದು ಕೇವಲ ಚಲನಚಿತ್ರ ಮಾತ್ರವಲ್ಲ, ಸಾಂಸ್ಕೃತಿಕ ಹೆಗ್ಗುರುತು ಎಂದೇ ಹೇಳಬಹುದು. ಇದು ರೇ ಅವರ ಪ್ರಸಿದ್ಧ ಅಪು ಟ್ರಯಾಲಜಿಯಲ್ಲಿ ‘ಅಪರಾಜಿತೋ’ ಮತ್ತು ‘ದಿ ವರ್ಲ್ಡ್ ಆಫ್ ಅಪು’ ಎಂಬ ಸಿನಿಮಾಗಳ ಮೊದಲ ಭಾಗವಾಗಿತ್ತು. ‘ಪಥೇರ್ ಪಾಂಚಾಲಿ’ಗೆ ಸಂಗೀತ ಸಂಯೋಜನೆ ಮಾಡಿದ್ದು ಪಂಡಿತ್ ರವಿಶಂಕರ್. ಈ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದ್ದಲ್ಲದೆ, ಭಾರತದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಪ್ರಶಂಸಿಸಲಾಗಿದೆ.
ಸೈಟ್ ಆಂಡ್ ಸೌಂಡ್‌ನ ಸಾರ್ವಕಾಲಿಕ 100 ಶ್ರೇಷ್ಠ ಚಲನಚಿತ್ರಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಚಲನಚಿತ್ರ ‘ಪಥೇರ್ ಪಾಂಚಾಲಿ’. ಟೈಮ್ ಮ್ಯಾಗಜೀನ್‌ನ ಕಳೆದ 10 ದಶಕಗಳ 100 ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲೂ ಇದು ಸ್ಥಾನ ಪಡೆದುಕೊಂಡಿದೆ.