ವರುಣ್ ಅಗರ್‌ವಾಲ್‌ ಅವರ ‘ಹೌ ಐ ಬ್ರೇವ್ಡ್ ಅನು ಆಂಟಿ’ ಬೆಸ್ಟ್ ಸೆಲ್ಲರ್ ಪುಸ್ತಕ ಆಧರಿಸಿ ಚಿತ್ರಕಥೆ ಹೆಣೆದಿರುವ ಚಿತ್ರವಿದು. ಜನರೇಶನ್ Z ಸಿನಿಮಾ. ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್, ಆ್ಯಪ್, ಕೋಡಿಂಗ್.. ಬೋರಿಂಗ್ ಕೆಲಸ ಬಿಟ್ಟು ಸ್ಟಾರ್ಟ್ ಅಪ್ ಮಾಡುವ ಹುಮ್ಮಸ್ಸಿನ ಯುವಕರ ಕತೆ. ‘ತುಮ್ ಸೇ ನಾ ಹೋ ಪಾಯೇಗಾ’ ಹಿಂದಿ ಸಿನಿಮಾ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ತುಮ್ ಸೇ ನಾ ಹೋ ಪಾಯೇಗಾ’ ಸಿನಿಮಾದ ಹೆಸರು ನೋಡಿದಾಗ ಸ್ವಲ್ಪ ಹಿಂಟ್ ಸಿಗುತ್ತೆ ಆದರೂ ಸಿನಿಮಾದ ಆರಂಭಿಕ ನಿಮಿಷಗಳಲ್ಲೇ ಇದೊಂದು ಸ್ಪೂರ್ತಿ ತುಂಬುವ ಕತೆ ಇರುವ ಸಿನಿಮಾ ಎಂದು ಗೊತ್ತಾಗುತ್ತವೆ. ವರುಣ್ ಅಗರ್‌ವಾಲ್‌ ಅವರ ‘ಹೌ ಐ ಬ್ರೇವ್ಡ್ ಅನು ಆಂಟಿ’ ಬೆಸ್ಟ್ ಸೆಲ್ಲರ್ ಪುಸ್ತಕ ಆಧಾರಿತ ಈ ಚಿತ್ರ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ಜನರೇಶನ್ Z ಸಿನಿಮಾ. ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್, ಆ್ಯಪ್, ಕೋಡಿಂಗ್.. ಬೋರಿಂಗ್ ಕೆಲಸ ಬಿಟ್ಟು ಸ್ಟಾರ್ಟ್ ಅಪ್ ಮಾಡುವ ಹುಮ್ಮಸ್ಸಿನ ಯುವಕರ ಕತೆ. ‘ತುಮ್ ಸೇ ನಾ ಹೋ ಪಾಯೇಗಾ ಅಂದರೆ ನಿನ್ನಿಂದ ಆಗಲ್ಲ. ಹಾಗೇ ಯಾರಾದರೂ ನಮ್ಮಲ್ಲಿ ಹೇಳಿದರೆ ಹಾಗಲ್ಲ ಎಂದು ತೋರಿಸುವ ಛಲ ಇದ್ದೇ ಇರುತ್ತದೆ. ಈ ಛಲ ಮತ್ತು ಕನಸು, ಆ ಕನಸಿಗೆ ನೀರೆರೆಯುವ ಆಪ್ತರು ಇದ್ದರೆ ಏನಾಗುತ್ತದೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ನಿತೇಶ್ ತಿವಾರಿ ಮತ್ತು ನಿಖಿಲ್ ಮೆಹ್ರೋತ್ರಾ ಅವರ ಚಿತ್ರಕಥೆಯನ್ನು ಮೊದಲ ಬಾರಿಗೆ ಅಭಿಷೇಕ್ ಸಿನ್ಹಾ ನಿರ್ದೇಶಿಸಿದ್ದಾರೆ.

ಸಿನಿಮಾ ಶುರುವಾಗುವುದೇ ವಾಯ್ಸ್ ಓವರ್ ಮೂಲಕ. ಸಿನಿಮಾದ ಹೀರೋ ಗೌರವ್ (ಇಶ್ವಕ್ ಸಿಂಗ್) ಪ್ರೇಕ್ಷಕರಿಗೆ ಒಂದೊಂದು ಪಾತ್ರಗಳ ಪರಿಚಯ ಮತ್ತು ತಾನು ಬದುಕುತ್ತಿರುವ ಕಾರ್ಪೊರೇಟ್ ಜಗತ್ತಿನಲ್ಲಿ ತಾನು ಖುಷಿಯಾಗಿಲ್ಲ ಎಂಬುದನ್ನು ಹೇಳುತ್ತಾನೆ. ಗೌರವ್‌ನ ದೊಡ್ಡ ಸಮಸ್ಯೆಯೆಂದರೆ ಅನು ಆಂಟಿ (ಮೇಘನಾ ಮಲಿಕ್), ಅವರ ಮಗ ಅರ್ಜುನ್ (ಕರಣ್ ಜೋತ್ವಾನಿ). ಅರ್ಜುನ್ ಚಿಕ್ಕಂದಿನಿಂದಲೇ ಎಲ್ಲದರಲ್ಲೂ ಫಸ್ಟ್ ಬರುತ್ತಾ, ಒಳ್ಳೆಯ ಉದ್ಯೋಗ ಪಡೆದು ಬಡ್ತಿ ಪಡೆದುಕೊಂಡೇ ಮೇಲೇರುತ್ತಿರುವ ಯಶಸ್ವೀ ಯುವಕ. ಗೌರವ್‌ನ ತಾಯಿ ಪೂಜಾ (ಅಮಲಾ ಅಕ್ಕಿನೇನಿ) ಗೆಳತಿಯಾಗಿರುವ ಅನು, ತನ್ನ ಮಗನನ್ನು ಹೊಗಳುತ್ತಾ, ಗೌರವ್ ಏನಕ್ಕೂ ಆಗದವನು ಎಂದು ಎಲ್ಲದಕ್ಕೂ ಮೂಗು ತೂರಿಸುವ ಹೆಂಗಸು. ಗೌರವ್‌ಗೆ ದೇವಿಕಾ (ಮಹಿಮಾ ಮಕ್ವಾನಾ) ಮೇಲೆ ಪ್ರೀತಿ. ಶಾಲಾ ದಿನಗಳಿಂದಲೇ ಆಕೆ ಮೇಲೆ ಕ್ರಶ್. ಗೌರವ್‌ನ ಧೈರ್ಯ ಮತ್ತು ವೀಕ್‌ನೆಸ್‌ ಎಂದರೆ ಅವನ ಸ್ನೇಹಿತರಾದ ಶರದ್ ಮಲ್ಹೋತ್ರಾ ಅಕಾ ಮಾಲ್ (ಗೌರವ್ ಪಾಂಡೆ) ಮತ್ತು ವಘೇಲಾ (ಗುರ್‌ಪ್ರೀತ್ ಸಲಿನಿ). ಈ ಮೂವರು ಸದಾ ಜೊತೆಗಿರುತ್ತಾರೆ.

ಕಾರ್ಪೋರೇಟ್ ಕಚೇರಿಯಲ್ಲಿನ ಏಕತಾನತೆಯಿಂದ ರೋಸಿ ಹೋಗಿ ಗೌರವ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿರುತ್ತಾನೆ. ತನಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ತನ್ನ ಬಾಸ್‌ನಲ್ಲಿ ಹೇಳಿದಾಗ ಬಾಸ್, ಆತನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಇದ್ದ ಕೆಲಸ ಹೋಯ್ತು. ಮುಂದೇನು ಎಂಬುದರ ಚಿಂತೆಯಲ್ಲಿರುವಾಗಲೇ ಹೊಳೆಯುವ ಐಡಿಯಾ, ಲಂಚ್ ಬಾಕ್ಸ್ ಡೆಲಿವರಿ. ಕ್ಯಾಂಟೀನ್‌ನಲ್ಲಿ ಸಿಗುವ ಊಟ ತಿಂದು ನಾಲಿಗೆ ಕೆಟ್ಟಿರುವ ತನ್ನ ಸಹೋದ್ಯೋಗಿಗಳು ಮನೆಯಿಂದ ತಂದ ಲಂಚ್ ಬಾಕ್ಸ್‌ಗೆ ಮುಗಿ ಬೀಳುವುದನ್ನು ನೋಡಿದ್ದ ಗೌರವ್‌ಗೆ , ಕಾರ್ಪೋರೇಟ್ ಹಬ್‌ಗಳಲ್ಲಿ ಕೆಲಸ ಮಾಡುತ್ತಿರುವ ಬ್ಯಾಚುಲರ್‌ಗಳಿಗೆ ಮಧ್ಯಾಹ್ನದ ಊಟ ತಲುಪಿಸಿದರೆ ಹೇಗೆ ಎಂಬ ಯೋಚನೆ ಹುಟ್ಟಿ ಕಾರ್ಯಪ್ರವೃತ್ತನಾಗುತ್ತಾನೆ. ಆದೇ Maa’s Magic. ತಮ್ಮ ಬಡಾವಣೆಯಲ್ಲಿರುವ ಅಮ್ಮಂದಿರು ಮಾಡುವ ಊಟವನ್ನು ಬೇರೆ ಬೇರೆ ಕಂಪನಿಗೆ ತಲುಪಿಸುವ ಕೆಲಸ ಶುರು ಆಗುತ್ತದೆ. ಗೌರವ್ ಜತೆಗೆ ಗೆಳೆಯ ಶರದ್ ಮಲ್ಹೋತ್ರಾ ಕೂಡಾ ಕೈ ಜೋಡಿಸಿದಾಗ ಈ ಸ್ಟಾರ್ಟ್ ಅಪ್ ಮತ್ತಷ್ಟು ಬೆಳೆಯುತ್ತದೆ. ಮನೆಯ ಊಟ ಜನರ ತಟ್ಟೆ ಮಾತ್ರವಲ್ಲ ಮನಸ್ಸನ್ನೂ ಮುಟ್ಟುತ್ತದೆ.

ಸ್ಟಾರ್ಟ್ ಅಪ್ ಬೆಳೆಯುತ್ತಿದ್ದಂತೆ ಅದರಲ್ಲಿ ಹೂಡಿಕೆ ಮಾಡಲು ಬೇರೆ ಕಂಪನಿಗಳು ಮುಂದೆ ಬರುತ್ತವೆ. ಹಾಗೆ ಹೂಡಿಕೆ ಮಾಡಿದ ಮೇಲೆ ಅವರು ಹೇಳುವ ನಿಬಂಧನೆಗಳನ್ನೂ ಒಪ್ಪಲೇಬೇಕಲ್ಲವೇ. ಅಮ್ಮಂದಿರು ಮಾಡುವ ಅಡುಗೆ ವಿವಿಧ ನಗರಗಳನ್ನು ವ್ಯಾಪಿಸಿದಾಗ ಇಷ್ಟು ಸಾಲದು, ಅದನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸೋಣ ಎಂಬ ಹೂಡಿಕೆ ದಾರ (ಪರ್ಮೀಥ್ ಸೇಥಿ) ಹೇಳಿದಾಗ ಲಾಭದ ಆಸೆಯಿಂದ ಗೌರವ್ ಮತ್ತು ಮಾಲ್ ಒಪ್ಪಿ ಬಿಡುತ್ತಾರೆ. ಕಮ್ಯುನಿಟಿ ಕಿಚನ್ ಬಂದು ಅಮ್ಮಂದಿರ ಜಾಗವನ್ನು ಶೆಫ್‌ಗಳು ಅತಿಕ್ರಮಿಸಿರುತ್ತಾರೆ. ಅಮ್ಮಂದಿರ ಕೈ ರುಚಿ ತಪ್ಪಿ ಹೋಗಿ ಕಂಪನಿಯ ಲಾಭ ಕುಸಿಯುತ್ತದೆ. ಹೀಗಾಗಬಾರದು ಎಂದು ಈ ಯುವಕರು ನಿರ್ಧರಿಸಿದಾಗ ಹೂಡಿಕೆದಾರನ ಜತೆ ವಾಗ್ವಾದ ನಡೆದುಬಿಡುತ್ತದೆ. ಮೋಸದಾಟಕ್ಕೆ ಮುಂದಾದ ಹೂಡಿಕೆದಾರ ಸುಳ್ಳು ಆರೋಪ ಹೊರಿಸಿ ಈ ಹುಡುಗರು ಹಣ ವಂಚನೆ ಮಾಡಿದ್ದಾರೆ ಎಂದು ಬಂಧನಕ್ಕೊಳಗಾಗುವಂತೆ ಮಾಡುತ್ತಾನೆ. ಜಾಮೀನು ಪಡೆದು ಹೊರಬಂದರೂ ಮುಂದೇನು ಎಂಬ ದೊಡ್ಡ ಪ್ರಶ್ನಾರ್ತಕ ಚಿಹ್ನೆ ಕಾಡುತ್ತದೆ. ಕನಸಿನ ಕಂಪನಿ ಕಣ್ಣೆದುರೇ ಕುಸಿದು ಬೀಳುತ್ತದೆ ಎಂದಾಗ ಅಮ್ಮ ಸಹಾಯಕ್ಕೆ ಬರುತ್ತಾಳೆ. ತಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಪಿಎಫ್, ಗ್ರ್ಯಾಚುವಿಟಿ ಹಣವನ್ನು ತನ್ನ ಮಗನ ಕೈಗಿಡುತ್ತಾಳೆ. ಒಮ್ಮೆ ನೆಲ ಕಚ್ಚಿದ ಕಂಪನಿ ಮತ್ತೆ ಎದ್ದು ನಿಲ್ಲುತ್ತದೆ. ಅಮ್ಮನೂ ಮಗನೊಂದಿಗೆ ಕೈ ಜೋಡಿಸುತ್ತಾಳೆ. ಪಮ್ಮಿ ಆಂಟಿ (ಫರಿದಾ ದಾದಿ), ಚಹಾ ಮಾರಾಟಗಾರ (ಓಂಕಾರ್ ದಾಸ್ ಮಾಣಿಕ್ಪುರಿ) ಸದಾ ಜತೆಯಾಗಿ ನಿಲ್ಲುತ್ತಾರೆ.

ಎಲ್ಲದಕ್ಕೂ ಮೂಗು ತೂರಿಸುವ ಅನು ಆಂಟಿಗೆ ಗೌರವ್ ಮುಖಕ್ಕೆ ಹೊಡೆದಂತೆ ಹೇಳಿ ತಮ್ಮ ಕುಟುಂಬದಿಂದ ದೂರ ಇರುವಂತೆ ಹೇಳುತ್ತಾನೆ. ಇತ್ತ ಅರ್ಜುನ್ ಜತೆ ಡೇಟ್ ಮಾಡುತ್ತಿದ್ದ ದೇವಿಕಾ, ಗೌರವ್‌ ಪ್ರೇಮ ನಿವೇದನೆ ಒಪ್ಪಿಕೊಳ್ಳುತ್ತಾಳೆ. ಅದೇ ವೇಳೆ ಇನ್ನೊಂದು ಕಂಪನಿ ಗೌರವ್‌ನ ಸ್ಟಾರ್ಟ್ ಅಪ್‌ನಲ್ಲಿ ಹೂಡಿಕೆ ಮಾಡಲು ಒಪ್ಪಿಕೊಳ್ಳುತ್ತದೆ. ಏರು ಪೇರುಗಳಲ್ಲಿ ಧೈರ್ಯ ಕಳೆದುಕೊಳ್ಳದೆ ಮುನ್ನುಗ್ಗುವ ಛಲಗಾರನಾಗಿ ಗೌರವ್ ಕಂಡರೆ, ಅಮ್ಮ ಪೂಜಾ ತುಂಬಾ ವಿನಯವಂತಿಕೆಯ ಗಟ್ಟಿ ಹೆಂಗಸು. ಮಗ ಸೋತು ಹೋದಾಗ ಏನೂ ಆಗಲ್ಲ ಎಂದು ಆತನ ಜತೆಗೆ ನಿಲ್ಲುವ ಅಮ್ಮ, ಎಲ್ಲವೂ ಸರಿ ಹೋಗುತ್ತದೆ ಎಂದು ನಂಬಿಕೆ ಇರಿಸುವ ಪಮ್ಮಿ ಆಂಟಿ, ಸೋಷಿಯಲ್‌ ಮೀಡಿಯಾಗಳನ್ನು ಹ್ಯಾಂಡಲ್ ಮಾಡುವ ಕೆಲಸ ಮಾಡುವ ದೇವಿಕಾ – ಈ ಹೆಣ್ಣು ಪಾತ್ರಗಳೆಲ್ಲವೂ ಧೈರ್ಯಶಾಲಿಗಳೇ. ಈಗಿನ ಜನರೇಷನ್‌ನ ತಾಕಲಾಟ, ದ್ವಂದ್ವ, ಬದುಕಿನ ಓಟ ಎಲ್ಲವನ್ನೂ ಫ್ರೇಮ್‌ನಲ್ಲಿ ತುಂಬಿಸಿದ ‘ತುಮ್ ಸೇ ನಾ ಹೋ ಪಾಯೇಗಾ’ ಒಂದು ರುಚಿಕರವಾದ ಸಿನಿಮಾ ಎಂದು ಹೇಳಲು ಅಡ್ಡಿಯಿಲ್ಲ.

LEAVE A REPLY

Connect with

Please enter your comment!
Please enter your name here