ಕುತೂಹಲಕಾರಿ ಕತೆ ಮಾಡಿಕೊಂಡು ಸಿನಿಮ್ಯಾಟಿಕ್‌ ಶೈಲಿಯಲ್ಲಿ ಸಾಮಾಜಿಕ ಸಂದೇಶವನ್ನು ದಾಟಿಸಿದ್ದಾರೆ ನಿರ್ದೇಶಕ ಪವನ್‌ ಕುಮಾರ್‌. ನಿರೂಪಣೆಯಲ್ಲಿ ಇನ್ನಷ್ಟು ಬಿಗುವು ಇರಬೇಕಿತ್ತು ಎಂದುಕೊಳ್ಳುತ್ತಲೇ ಮೆಚ್ಚಬಹುದಾದ ಪ್ರಯೋಗ ‘ಧೂಮಂ’. ಈ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ಕನ್ನಡ ನೆಲೆದವರು. ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ಚಿತ್ರಿಸಬಹುದಿತ್ತಲ್ಲವೇ? ಎನ್ನುವುದು ಕನ್ನಡ ಸಿನಿಪ್ರಿಯರ ಪ್ರಶ್ನೆ.

‘ಲೂಸಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಿರ್ದೇಶಕ ಪವನ್‌ ಕುಮಾರ್‌. ಈ ಸೈಕಲಾಜಿಕಲ್‌ ಥ್ರಿಲ್ಲರ್‌ ವಸ್ತುವನ್ನು ಅವರು ಯಶಸ್ವಿಯಾಗಿ ತೆರೆಗೆ ಅಳವಡಿಸಿದ್ದರು. ಮುಂದೆ ಅವರ ನಿರ್ದೇಶನದ ‘ಯೂ ಟರ್ನ್‌’ ಕೂಡ ಜನರಿಗೆ ಇಷ್ಟವಾಗಿತ್ತು. ಸಹಜವಾಗಿಯೇ ‘ಧೂಮಂ’ ನಿರೀಕ್ಷೆ ಮೂಡಿಸಿತ್ತು. ಹಾಗೆ ನೋಡಿದರೆ ‘ಧೂಮಂ’ ಚಿತ್ರವನ್ನು ಅವರು ಊಹಿಸಿದ್ದು ಬಹು ಹಿಂದೆ. ಕಾರಣಾಂತರಗಳಿಂದ ಸೆಟ್ಟೇರದ ಸಿನಿಮಾ ಈಗ ತೆರೆಗೆ ಬಂದಿದೆ. ನಿಜಕ್ಕೂ ಉತ್ತಮ ಕಥಾವಸ್ತು. ಜೊತೆಗೆ ಈ ಹೊತ್ತಿಗೆ ಕೊಂಚ ಔಟ್‌ಡೇಟೆಡ್‌ ಎನಿಸುವುದೂ ಇದೆ! ಬಹುಶಃ ಅವರು ಕೊಂಚ ಮಾರ್ಪಾಡುಗಳೊಂದಿಗೆ ಕತೆ ನಿರೂಪಿಸಿದ್ದಾರೆ. ಕುತೂಹಲಕಾರಿ ಕತೆ ಮಾಡಿಕೊಂಡು ಸಿನಿಮ್ಯಾಟಿಕ್‌ ಶೈಲಿಯಲ್ಲಿ ಸಾಮಾಜಿಕ ಸಂದೇಶವನ್ನು ದಾಟಿಸಿದ್ದಾರೆ. ನಿರೂಪಣೆಯಲ್ಲಿ ಇನ್ನಷ್ಟು ಬಿಗುವು ಇರಬೇಕಿತ್ತು ಎಂದುಕೊಳ್ಳುತ್ತಲೇ ಮೆಚ್ಚಬಹುದಾದ ಪ್ರಯೋಗ ‘ಧೂಮಂ’.

ಸಿಗರೇಟು ಸೇದದ ಅವಿನಾಶ್‌ ಸಿಗರೇಟು ಕಂಪನಿಯೊಂದರ ಮಾರ್ಕೆಟಿಂಗ್‌ ಮುಖ್ಯಸ್ಥ. ಈ ಸಿಗರೇಟು ಸೇದದ ಮತ್ತು ಇತರರನ್ನು ಸಿಗರೇಟು ಸೇದುವಂತೆ ಪ್ರಚೋದಿಸುವ ಮಾರ್ಕೆಟಿಂಗ್‌ ಕೆಲಸದ ವೈರುಧ್ಯ ಚಿತ್ರದುದ್ದಕ್ಕೂ ಹಲವು ಸನ್ನಿವೇಶಗಳಲ್ಲಿ ಕಾಣಿಸುತ್ತದೆ. ಸಿಗರೇಟು ಕಂಪನಿ ಮಾಲೀಕ ಸಿದ್ದಾರ್ಥ್‌ಗೆ ಅವಿನಾಶ್‌ ಬುದ್ಧಿವಂತಿಕೆ, ಮಾರ್ಕೆಟಿಂಗ್‌ ಸ್ಟ್ರ್ಯಾಟಜಿ ಮೇಲೆ ವಿಪರೀತ ನಂಬಿಕೆ. ಕಂಪನಿ ಬೆಳೆಸುವ, ಹೆಚ್ಚು ಲಾಭ ಮಾಡುವ ಹಪಹಪಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಬೆಲೆ ಎಲ್ಲಿ? ಕಂಪನಿ ಪ್ರಾಡೆಕ್ಟ್‌ ರೀಚ್‌ ಮಾಡಿಸುವ ಹಾದಿಯಲ್ಲಿ ಅವಿನಾಶ್‌ಗೆ ಕುತ್ಸಿತ ಐಡಿಯಾಗಳು ಹೊಳೆಯುತ್ತವೆ. ಇದರಿಂದಾಗುವ ಸಾರ್ವಜನಿಕ ಹಾನಿಯನ್ನು ಅವಿನಾಶ್‌ ವೈಯಕ್ತಿಕ ಬದುಕಿಗೆ ಬೆಸೆಯುವ ಕತೆ ಮಾಡಿ ಥ್ರಿಲ್ಲಿಂಗ್‌ ಆಗಿ ನಿರೂಪಿಸುತ್ತಾರೆ ನಿರ್ದೇಶಕರು.

ಕ್ರೈಂ – ಥ್ರಿಲ್ಲರ್‌ ಕತೆಗಳಿಗೆ ವೇಗದ ನಿರೂಪಣೆ ಬೇಕು. ನಿರ್ದೇಶಕ ಪವನ್‌ ಕುಮಾರ್‌ ‘ಧೂಮಂ’ ಮೊದಲಾರ್ಧವನ್ನು ನಿಧಾನಗತಿಯಲ್ಲಿ ಕಟ್ಟಿದ್ದಾರೆ. ಅವಿನಾಶ್‌ ಮತ್ತು ಆತನ ಪತ್ನಿಯ ಎರಡು ಪಾತ್ರಗಳಷ್ಟೇ ಇಲ್ಲಿ ಹೆಚ್ಚು ಕಾಣಿಸುವುದು. ಹೆಚ್ಚು ಪಾತ್ರಗಳಿಲ್ಲದ, ವೇಗದ ನಿರೂಪಣೆಯೂ ಇಲ್ಲದ ಮೊದಲಾರ್ಧದ ಸ್ಕ್ರೀನಿಂಗ್‌ ಸ್ಪೇಸ್‌ 15 ನಿಮಿಷಗಳಷ್ಟು ಕಡಿತಗೊಳ್ಳಬಹುದಾಗಿತ್ತು. ಇಂಟರ್‌ವೆಲ್‌ ನಂತರ ಚಿತ್ರಕಥೆಗೆ ಹೆಚ್ಚು ಪಾತ್ರಗಳು ಸೇರ್ಪಡೆಗೊಂಡು ವೇಗವೂ ಹೆಚ್ಚುತ್ತದೆ. ಧೂಮಪಾನದ ಹಾನಿಗಳು, ರಾಜಕಾರಣ – ಕಾರ್ಪೋರೇಟ್‌ ಹಿತಾಸಕ್ತಿಗಳನ್ನು ಹೇಳುತ್ತಾ ಅಷ್ಟಾಗಿ ಎಲ್ಲರಿಗೂ ಪರಿಚಯವಿಲ್ಲದ ‘Crib death’ ಬಗ್ಗೆ ನಿರ್ದೇಶಕರು ಪ್ರಸ್ತಾಪಿಸುತ್ತಾರೆ. ದ್ವಿತಿಯಾರ್ಧದ ಚಿತ್ರಕಥೆಯಲ್ಲಿನ ಟ್ವಿಸ್ಟ್‌ & ಟರ್ನ್‌ಗಳು ಚಿತ್ರವನ್ನು ಎಂಗೇಜಿಂಗ್‌ ಆಗಿಸುತ್ತವೆ. ಇದೇ ವೇಗ ಚಿತ್ರದ ಆರಂಭದಿಂದಲೂ ಇದ್ದಿದ್ದರೆ ಕ್ಲೈಮ್ಯಾಕ್ಸ್‌ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು.

ಇಮೇಜಿನ ಹಂಗಿಲ್ಲದ, ಪ್ರಯೋಗಗಳಿಗೆ ಒಡ್ಡಿಕೊಳ್ಳುವ ನಟ ಫಹಾದ್‌ ಫಾಸಿಲ್‌ ಅವರಿಗೆ ಅತ್ಯಂತ ಸೂಕ್ತವಾದ ಕತೆಯಿದು. ಮಾರ್ಕೆಂಟಿಂಗ್‌ ತಂತ್ರಗಳನ್ನು ಹೆಣೆಯುವ ಉತ್ಸಾಹಿ ಉದ್ಯೋಗಿಯಾಗಿ, ವೃತ್ತಿಧರ್ಮದ ಇತಿಮಿತಿಗಳ ಅರಿವಿಲ್ಲದೆ ತೊಳಲಾಡುವ – ಪಶ್ಚಾತ್ತಾಪ ಪಡುವ ವ್ಯಕ್ತಿಯಾಗಿ, ತಂದೆಯಾದ ಸುದ್ದಿಯನ್ನು ಸಂಭ್ರಮಿಸುವ ಅಸಹಾಯಕ ಪತಿಯಾಗಿ ಪಾತ್ರಪೋಷಣೆಗಿರುವ ಸವಾಲುಗಳನ್ನು ಅವರು ಎಂದಿನಂತೆ ತಣ್ಣಗೆ ನಿಭಾಯಿಸಿದ್ದಾರೆ. ಪತ್ನಿಯಾಗಿ ಅಪರ್ಣ ಬಾಲಮುರಳಿ ಪಾತ್ರವೂ ಕನ್ವಿನ್ಸಿಂಗ್‌ ಆಗಿದೆ. ಫಹಾದ್‌ ಮತ್ತು ಅಪರ್ಣ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದ್ದು, ಚಿತ್ರದ ಹಲವೆಡೆಯ ಸಡಿಲ ನಿರೂಪಣೆಯಲ್ಲಿನ ದೋಷಗಳನ್ನು ಮರೆಮಾಚಿದೆ. ‘ಸಿದ್‌’ ಪಾತ್ರದಲ್ಲಿ ನಟ ರೋಷನ್‌ ಮ್ಯಾಥ್ಯೂ ಅವರದ್ದು ಸಮಯೋಚಿತ ಅಭಿನಯ. ಅಚ್ಯುತ್‌ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇಲ್ಲದಿರುವುದು ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಬಹುದು. ಒಟ್ಟಾರೆ ಹೇಳಬಹುದಾದರೆ ನಿರ್ದೇಶಕ ಪವನ್‌ ಕುಮಾರ್‌ ಅವರು ತಮ್ಮ ಮೇಲಿನ ಸಿನಿಪ್ರೇಮಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಹಳೆಯ ಕತೆ, ‘ಕಾಲ’ದ ಸವಾಲುಗಳ ಮಧ್ಯೆ ಸಂಯಮದ ಸಿನಿಮಾ ಮಾಡಿದ್ದಾರೆ.

ಕನ್ನಡ ಡಬ್ಬಿಂಗ್‌ ವರ್ಷನ್‌ : ‘ಧೂಮಂ’ ಚಿತ್ರೀಕರಣಗೊಂಡಿರುವುದು ಮಲಯಾಳಂನಲ್ಲಿ. 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡದ ಡಬ್ಬಿಂಗ್‌ ಅವತರಣಿಕೆಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದ್ದಾರೆ. ಕನ್ನಡ ಡಬ್ಬಿಂಗ್‌ ತಕ್ಕಮಟ್ಟಿಗೆ ಚೆನ್ನಾಗಿ ಆಗಿದ್ದರೂ ಥ್ರಿಲ್ಲರ್‌ ಕತೆ – ನಿರೂಪಣೆಗೆ ಡಬ್ಬಿಂಗ್‌ ಎಂದಿಗೂ ಅಡ್ಡಿಯೇ. ಇದೇ ಕಾರಣಕ್ಕೆ ಕನ್ನಡ ಡಬ್ಬಿಂಗ್‌ ವರ್ಷನ್‌ ವೀಕ್ಷಿಸುವಾಗ ಚಿತ್ರದ ಮೊದಲಾರ್ಧ ತೀರಾ ನಿಧಾನ ಎನಿಸುವುದು. ಬಹುಶಃ ಮೂಲ ಭಾಷೆಯಲ್ಲಿ ಸಿನಿಮಾ ನೋಡುವವರಿಗೆ ಈ ಕೊರತೆ ಹೆಚ್ಚು ಕಾಡಲಿಕ್ಕಿಲ್ಲ. ಈ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ಕನ್ನಡ ನೆಲೆದವರು. ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ಚಿತ್ರಿಸಬಹುದಿತ್ತಲ್ಲವೇ? ಎನ್ನುವುದು ಕನ್ನಡ ಸಿನಿಪ್ರಿಯರ ಪ್ರಶ್ನೆ.

LEAVE A REPLY

Connect with

Please enter your comment!
Please enter your name here