ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದ ‘ಪೆದ್ರೊ’ ಸಿನಿಮಾಗೆ Biffes ನಲ್ಲಿ ಸ್ಥಾನವಿಲ್ಲ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಚಿತ್ರದ ನಿರ್ಮಾಪಕ ರಿಷಬ್‌ ಶೆಟ್ಟಿ Biffes ನಡೆ ಖಂಡಿಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ.

ರಿಷಬ್‌ ನಿರ್ಮಿಸಿ, ನಟೇಶ್‌ ಹೆಗ್ಡೆ ನಿರ್ದೇಶಿಸಿರುವ ‘ಪೆದ್ರೊ’ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಗೌರವ ಲಭಿಸಿತ್ತು. ಅತ್ಯುತ್ತಮ ನಿರ್ದೇಶನಕ್ಕಾಗಿ ನಟೇಶ್‌ ಹೆಗ್ಡೆ ಪ್ರಶಸ್ತಿ ಪಡೆದಿದ್ದರು. ಸಿನಿಮಾ ವೀಕ್ಷಿಸಿ ಪ್ರಭಾವಿತರಾದ ಖ್ಯಾತ ತಮಿಳು ಚಿತ್ರನಿರ್ದೇಶಕ ವೆಟ್ರಿಮಾರನ್‌ ಈ ಚಿತ್ರವನ್ನು ಪ್ರಸೆಂಟ್‌ ಮಾಡಿದ್ದಾರೆ. ಮೊನ್ನೆಯಷ್ಟೇ ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರು ಚಿತ್ರದ ಟ್ರೈಲರ್‌ ರಿಲೀಸ್‌ ಮಾಡಿ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದರು. ಇತ್ತೀಚೆಗೆ ನಡೆದ ಪ್ರೈವೇಟ್‌ ಸ್ಕ್ರೀನಿಂಗ್‌ನಲ್ಲಿ ಚಿತ್ರನಿರ್ದೇಶಕರು, ವಿಮರ್ಶಕರು ಸಿನಿಮಾ ವೀಕ್ಷಿಸಿ ಈ ಪ್ರಯತ್ನವನ್ನು ಮೆಚ್ಚಿ ತಲೆದೂಗಿದ್ದಾರೆ. ಜಾಗತಿಕ ಮನ್ನಣೆ ಪಡೆದ ಕನ್ನಡ ಸಿನಿಮಾ ಬೆಂಗಳೂರು ಸಿನಿಮೋತ್ಸವಕ್ಕೆ ಆಯ್ಕೆಯಾಗದಿರುವ ಬಗ್ಗೆ ಸಿನಿಮಾಸಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ರಿಷಬ್‌ ಶೆಟ್ಟಿ ಪತ್ರದ ಮುಖೇನ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ Biffes ನಿರ್ದೇಶಕರಾದ ಸುನೀಲ್‌ ಪುರಾಣಿಕ್‌ ಹೇಳುವುದು ಹೀಗೆ – “ಸಿನಿಮಾಗಳ ಆಯ್ಕೆ ಜ್ಯೂರಿಗಳಿಗೆ ಸಂಬಂಧಿಸಿದ ವಿಚಾರ. ಒಂದು ಸಿನಿಮಾ ಯಾಕೆ ಆಯ್ಕೆ ಆಗಿದೆ ಎಂದರೆ ಕಾರಣಗಳನ್ನು ಕೊಡಬಹುದು. ಆದರೆ ಯಾಕೆ ಆಯ್ಕೆಯಾಗಿಲ್ಲ ಎನ್ನುವುದಕ್ಕೆ ಏನು ಹೇಳಲು ಸಾಧ್ಯ?”

ಈ ಚಿತ್ರದ ಪ್ರಮುಖ ಪಾತ್ರದಲ್ಲಿ (ಪೆದ್ರೊ) ನಟೇಶ್ ಹೆಗ್ಡೆ ಅವರ ತಂದೆ ಗೋಪಾಲ್ ಹೆಗ್ಡೆ ಅಭಿನಯಿಸಿದ್ದಾರೆ. ನಟ ರಾಜ್‌ ಬಿ. ಶೆಟ್ಟಿ, ರಾಮಕೃಷ್ಣಭಟ್ ದುಂಡಿ, ಮೇದಿನಿ ಕೆಳಮನೆ, ನಾಗರಾಜ್ ಹೆಗ್ಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಕುರ್ಲಿ’, ‘ನಮಗೆ ನಾವು ಗೋಡೆಗೆ ಮಣ್ಣು’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ನಟೇಶ್‌ ಹೆಗ್ಡೆ ಅವರಿಗೆ ‘ಪೆದ್ರೊ’ ಮೊದಲ ಫೀಚರ್ ಫಿಲ್ಮ್‌. ಕ್ರಿಶ್ಚಿಯನ್ ಧರ್ಮದ ಎಲೆಕ್ಟ್ರೀಷಿನ್‌ ಆಕಸ್ಮಿಕವೊಂದರಲ್ಲಿ ಗೋವಿನ ಸಾವಿಗೆ ಕಾರಣನಾಗುತ್ತಾನೆ. ಈ ಘಟನೆಯ ನಂತರ ಸುತ್ತಲಿನ ಸಮಾಜ ಅವನನ್ನು ನೋಡುವ ಬಗೆ, ಆತನ ತಳಮಳಗಳನ್ನು ನೂರಾ ಎಂಟು ನಿಮಿಷಗಳ ಸಿನಿಮಾದಲ್ಲಿ ಹಿಡಿದಿಟ್ಟಿದ್ದಾರೆ ನಟೇಶ್‌. ಕತೆ, ಚಿತ್ರಕಥೆ ರಚನೆ ನಟೇಶ್ ಹೆಗ್ಡೆ ಅವರದೆ. ಶ್ರೇಯಾಂಕ್ ನಂಜಪ್ಪ ಧ್ವನಿ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ವಿಕಾಸ್ ಅರಸ್‌ ಛಾಯಾಗ್ರಹಣ ಇದ್ದು, ಪರೇಶ್ ಕಾಮದಾರ್ ಮತ್ತು ನಟೇಶ್ ಹೆಗ್ಡೆ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here