ಮಾಲು ವಾಸಮಾಡುತ್ತಿರುವ ಮನೆಯೇ ಒಂದು ರಂಗಮಂದಿರದ ವೇದಿಕೆಯಂತೆ ಇದೆ ಎಂದು ಭಾವಿಸಬಹುದು. ಈ ಸಿನಿಮಾದಲ್ಲಿ ಪೀಳಿಗೆಯ ನಡುವಿನ ಅಂತರ ಹಾಗೂ ಸಂಬಂಧಗಳ ಏರುಪೇರುಗಳನ್ನು ದಾಟಿಸಲಾಗಿದೆ. ಇಲ್ಲಿ ಸಿಟ್ಟು, ಸೆಡವು, ದುಃಖ, ದುಮ್ಮಾನ, ಬೇಸರ, ನಲಿವು, ನಗು ಎಲ್ಲವೂ ಮಿಳಿತಗೊಂಡಿವೆ.
Pedro Freire ನಿರ್ದೇಶನದ, ಬ್ರೆಝಿಲ್ ದೇಶದ, ಪೋರ್ಚುಗೀಸ್ ಭಾಷೆಯ ‘ಮಾಲು’ ಸಿನಿಮಾದ ಪ್ರಾರಂಭದ ಶಾಟ್ ಒಂದು ಲಾಂಗ್ ಟೇಕ್ ಹೊಂದಿದೆ. ಅಲುಗಾಟವಿರುವ ಈ ಶಾಟ್‌ನಲ್ಲಿ ಸಿನಿಮಾದ ಮಧ್ಯವಯಸ್ಸಿನ ಪ್ರೊಟೋಗಾನಿಸ್ಟ್ ಮಾಲು, ಶೇಕ್ಸ್‌ಪೀಯರ್‌ನ ಕೃತಿಯೊಂದರ ಸಾಲುಗಳನ್ನು ಉಚ್ಛರಿಸುತ್ತಾಳೆ. ಆಕೆಯ ಹಾವಭಾವದಲ್ಲಿ ಏನೋ ಒಂದು ತೆರನಾದ ಚೈತನ್ಯ ಕಂಡು ಬರುತ್ತದೆ. ಆದರೆ ಆಕೆಯ ನಗು ‘ಏಕೆ ಹೀಗೆ?’ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ!
ಮುಂದಿನ ಶಾಟ್‌ಗಳಲ್ಲಿ ಮಾಲು ತನ್ನ ಮಗಳು ಜುಓನ (Joana)ಳನ್ನು ಏರ್ ಪೋರ್ಟ್‌ನಲ್ಲಿ ಭೇಟಿ ಮಾಡುತ್ತಾಳೆ. ಮಗಳು ಶಿಕ್ಷಣವನ್ನು ಮುಗಿಸಿ ಫ್ರಾನ್ಸ್‌ನಿಂದ ಹಿಂದಿರುಗಿರುತ್ತಾಳೆ. ಆಗ ಮಾಲುವಿನ ನಗುವಿನಲ್ಲಿ ಲವಲವಿಕೆಯಿರುತ್ತದೆ. ಮಾತೃಭಾವ ಉಕ್ಕಿ ಹರಿಯುತ್ತದೆ! ಜುಓನ ಸಾಓ ಪಾಲೋನಲ್ಲಿ ನೆಲೆಸಲು
ಉದ್ದೇಶಿಸಿರುತ್ತಾಳೆ. ಬ್ರೆಝಿಲ್‌ನ ರಿಯೋ ಡಿ ಜನೇರಿಯೋದ ಹೊರಪ್ರದೇಶದ ಒಂದು ಸ್ಲಮ್ಮಿನ ಪಕ್ಕ ಒಂದು ಸಾಧಾರಣ ಮನೆಯಲ್ಲಿ ಮಾಲು ತನ್ನ ತಾಯಿ ಲಿಲಿಯೊಡನೆ ವಾಸಮಾಡುತ್ತಿರುತ್ತಾಳೆ. ಹಿಂದೆ ನಟಿಯಾಗಿ ಒಂದಿಷ್ಟು ಹೆಸರು ಮಾಡಿರುತ್ತಾಳೆ ಮಾಲು. ತನ್ನ ಶಿಕ್ಷಣದ ಸಮಯದಲ್ಲಿ ಆಕೆ ಬಂಡುಕೋರಳೂ ಅಗಿರುತ್ತಾಳೆ. ತನ್ನ ದೇಶದಲ್ಲಿ ಸರ್ವಾಧಿಕಾರ ಇದ್ದಾಗಿನ ಅನುಭವಗಳು ಕೂಡ ಆಕೆಯ ಸ್ಮೃತಿಯ ಭಾಗವಾಗಿರುತ್ತದೆ. ಇವುಗಳ ಗುಂಗಿನಲ್ಲಿ ಇರುತ್ತಾಳೆ. ತನ್ನ ಗತಕಾಲದ ಲಹರಿಯಲ್ಲಿ ಆಗಾಗ್ಗೆ ಕಳೆದುಹೋಗುತ್ತಿರುತ್ತಾಳೆ. ಗಂಡನಿಂದ ಬೇರ್ಪಟ್ಟಿರುವ ಮಾಲು, ಮಾದಕ ವಸ್ತುಗಳ ವ್ಯಸನಿಯೂ ಆಗಿರುತ್ತಾಳೆ. ತನಗೆ ಸರಿ ಎನಿಸುವಂತಹ ರೀತಿಯಲ್ಲಿ ಬೊಹೀಮಿಯನ್ ಬಾಳನ್ನು ಬಾಳುತ್ತಿರುತ್ತಾಳೆ.
ಫ್ಯಾಮಿಲಿ ಡೈನಮಿಕ್ಸ್ ಇರುವ ಈ ಚೇಂಬರ್ ಡ್ರಾಮ ಸಿನಿಮಾದಲ್ಲಿ ಒಂದು ದೃಶ್ಯ ನಗುವಿನ ಅಲೆಯನ್ನು ಹುಟ್ಟಿಸುತ್ತದೆ. ತನ್ನ ಮಗಳು ಮಾಲುವಿನ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಯಿ ಲಿಲಿ ಒಬ್ಬ ಪಾದ್ರಿಯನ್ನು ಮನೆಗೆ ಆಹ್ವಾನಿಸಿರುತ್ತಾಳೆ. ಒಂದಿಷ್ಟು ಮಾತುಕತೆಯ ನಂತರ, ಮಾಲು ಪಾದ್ರಿಯನ್ನು ಉದ್ದೇಶಿಸಿ, ‘ನೀನು ಒಬ್ಬ ಶಿಶುಕಾಮಿ… ಜೀಸಸ್ ಒಬ್ಬ ಕಮ್ಯುನಿಸ್ಟ್ ಆಗಿದ್ದ…’ ಎಂಬಿತ್ಯಾದಿ ಮಾತುಗಳನ್ನು ಆಡುತ್ತಾಳೆ. ಪಾದ್ರಿ ತಬ್ಬಿಬಾಗಿ ಜಾಗವನ್ನು ಖಾಲಿ ಮಾಡುತ್ತಾನೆ!
ಮಗಳು ಹಿಂದಿರುಗಿದ ಸ್ವಲ್ಪ ಸಮುಯದ ತರುವಾಯ ಮಾಲು ಮತ್ತು ಆಕೆಯ ಸಂಬಂಧದಲ್ಲಿ ವಿರಸ ತಲೆದೋರುತ್ತದೆ. ಮಾಲು ಮತ್ತು ಆಕೆಯ ತಾಯಿಯ ನಡುವೆ ಜೋರಾದ ಘರ್ಷಣೆ ಜರುಗಿ, ತಾಯಿ ಮನೆಯಿಂದ ಹೊರಹೋಗಲು ನಿರ್ಧರಿಸುತ್ತಾಳೆ. ಹೀಗೆ ಈ ಸಿನಿಮಾದಲ್ಲಿ ಪೀಳಿಗೆಯ ನಡುವಿನ ಅಂತರ ಹಾಗೂ ಸಂಬಂಧಗಳ ಏರುಪೇರುಗಳನ್ನು ದಾಟಿಸಲಾಗಿದೆ. ಇಲ್ಲಿ ಸಿಟ್ಟು, ಸೆಡವು, ದುಃಖ, ದುಮ್ಮಾನ, ಬೇಸರ, ನಲಿವು, ನಗು ಎಲ್ಲವೂ ಮಿಳಿತಗೊಂಡಿವೆ.
ಮಾಲು ವಾಸಮಾಡುತ್ತಿರುವ ಮನೆಯೇ ಒಂದು ರಂಗಮಂದಿರದ ವೇದಿಕೆಯಂತೆ ಇದೆ ಎಂದು ಭಾವಿಸಬಹುದು. ಆ ಮನೆಯ ಛಾವಣಿ ಸೋರುತ್ತಿರುತ್ತದೆ. ಹಳೆಯ ಕಿಟಕಿಗಳಿಂದ ಬೆಳಕು ಒಳಬರುತ್ತಿರುತ್ತದೆ. ಇದರೊಳಗೆ ಮಾಲು ಒಬ್ಬ ಮಗಳು, ತಾಯಿ, ಮಾಸಿದ ಅಭಿನೇತ್ರಿ, ಮಾದಕ ವಸ್ತುಗಳ ವ್ಯಸನಿಯಾಗಿ ಪಾತ್ರವನ್ನು ಮಾಡುತ್ತಿರುತ್ತಾಳೆ. ಜೊತೆಯಲ್ಲಿ ಲಿಲಿ ಮತ್ತು ಜೊಓನ ಕೂಡ ಮಾಲುವಿನ ಪಾತ್ರದ ಜೊತೆ ಬೇರೆ ಬೇರೆ ಸ್ತರಗಳಲ್ಲಿ ಸ್ಪಂದಿಸುತ್ತಿರುತ್ತಾರೆ.
ಅವರ ಮನೆಯಲ್ಲಿ ಒಬ್ಬ ಬಾಡಿಗೆದಾರನಾಗಿ ಸಲಿಂಗಕಾಮಿ ಟಿಬಿರಾ ಎಂಬ ಕಪ್ಪು ಜನಾಂಗದ ಕಲಾವಿದನಾಗಿರುತ್ತಾನೆ. ಡ್ರ್ಯಾಗ್ ಕ್ವೀನ್ (ಒಬ್ಬ ಪುರುಷ ಮಹಿಳೆಯರ ಉಡುಪುಗಳನ್ನು ಧರಿಸಿ, ಮನೋರಂಜನೆಯ ಭಾಗವಾಗಿ ಸ್ತ್ರೀಸೂಚಕ ಭಾವಗಳನ್ನು ಉತ್ಪ್ರೇಕ್ಷಿತ ರೀತಿಯಲ್ಲಿ ಪ್ರದರ್ಶಿಸುವಾತ) ಆತನ ಒಂದು ಉದ್ಗಾರ ‘ಬ್ರೆಝಿಲ್‌ನಲ್ಲಿ ಒಬ್ಬ ಕಲಾವಿದನಾಗಿ ಉಳಿಯಲು ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ…’ ಅನೇಕ ಕಥೆ -ವ್ಯಥೆಗಳನ್ನು ತಿಳಿಸುತ್ತದೆ! ಮಾಲುವಿನ ಜೊತೆಗಿನ ಟಿಬಿರಾನ ಸಂಬಂಧ ಲಿಲಿಗೆ ಹಿಡಿಸದ ವಿಷಯವಾಗಿರುತ್ತದೆ. ಲಿಲಿ ಒಬ್ಬ ಜನಾಂಗವಾದಿ ಮತ್ತು ಸಂಪ್ರದಾಯವಾದಿ ನಿಲುವಿನ ಮಹಿಳೆಯಾಗಿರುತ್ತಾಳೆ. ಆ ನಕಾರಾತ್ಮಕ ನೆಲೆಯಿಂದಲೇ ಆಕೆ ಟಿಬಿರಾನ ಜೊತೆ ನಡೆದುಕೊಳ್ಳುತ್ತಿರುತ್ತಾಳೆ. ಆದರೆ ಸಿನಿಮಾದಲ್ಲಿ ಟಿಬಿರಾನ ಹಠಾತ್ ಕಣ್ಮರೆಯಾಗುವಿಕೆ ಸಮಸ್ಯಾತ್ಮಕವಾಗಿ ಕಾಣುತ್ತದೆ!
ಈ ಸಿನಿಮಾದ ಮೂರನೇ ಅಂಕದ ಮೆಲೋಡ್ರಾಮ ಎಂದಿನ ಜಾಡನ್ನು ಹಿಡಿದಿದೆ ಎಂದೆನಿಸಿತು. ಮಾಲುವಿಗೆ ತನ್ನ ಮನೆಯ ಮೇಲೆ ಒಂದು ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಉದ್ದೇಶವಿರುತ್ತದೆ. ಆದರೆ ಅದರ ತಾರ್ಕಿಕ ಅಂತ್ಯದ ಬಗೆಗೆ ಸಿನಿಮಾದಲ್ಲಿ ಸುಳಿವಿಲ್ಲ! ಸಂಬಂಧಗಳ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಪದರುಗಳಿವೆ. ಶಿಥಿಲತೆ ಇದೆ; ಗಾಢತೆ ಕೂಡ. ಇಡೀ ಸಿನಿಮಾವನ್ನು 1.33 : 1 Aspect Ratioದಲ್ಲಿ ಸೆರೆಹಿಡಿಯಲಾಗಿದೆ. ಕಥನ 1990 ದಶಕಕ್ಕೆ ಸಂಬಂಧಿಸಿದೆ. ನಿರ್ದೇಶಕ ಪೆಡ್ರೊ ಫ್ರೈರಿಯ ತಾಯಿ ಮಾಲು ರೋಚ ಬೆಝಿಲ್‌ನ ಸಿನಿಮಾ ಮತ್ತು ಟೀವಿರಂಗದ ನಟಿಯಾಗಿದ್ದರು. ಅವರ ವ್ಯಕ್ತಿತ್ವವನ್ನು ಆಧರಿಸಿದೆ ಈ ಸಿನಿಮಾ. ‘ಮಾಲು’ ಫ್ರೈರಿ ಅವರ ಚೊಚ್ಚಲ ಚಲನಚಿತ್ರ. ಮಾಲು ಪಾತ್ರವನ್ನು ನಿರ್ವಹಿಸಿರುವ ಯಾರಾ ದೆ ನೊವೈಸ್ (Yara De Noveas) ಆ ಪಾತ್ರದ ಸಂಕೀರ್ಣತೆಗಳನ್ನು ದಾಟಿಸುವುದರಲ್ಲಿ ಸಫಲರಾಗಿದ್ದಾರೆ.
ಈಗಾಗಲೇ ಪ್ರಸ್ತಾಪಿಸಿರುವ ಅಜ್ಜಿ- ಮಗಳು – ಮೊಮ್ಮಗಳ ನಡುವಿನ ಸಂಕೀರ್ಣ ಸಂಬಂಧಗಳ ಜೊತೆಗೆ ಈ ಸಿನಿಮಾ ಅಂಚಿನಲ್ಲಿರುವ ಜನರ – ಕಲಾವಿದರ ವಸತಿ, ಬಡತನ ಮುಂತಾದ ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುತ್ತದೆ. ಹಾಗೆಯೇ 1990ರ ದಶಕದ ರಾಜಕೀಯ ಪರಿಸ್ಥಿತಿಯ ಸೂಕ್ಷ್ಮ ಅಭಿವ್ಯಕ್ತಿಯೂ ಇಲ್ಲಿದೆ. ಈ ಸಿನಿಮಾ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.