ಪೇರಿಲ್ಲೂರಿನಲ್ಲಿ ಕಥೆಗಳು ಮತ್ತು ಉಪಕಥೆಗಳು ಹೇರಳವಾಗಿದ್ದು, ವೆಬ್ ಸರಣಿಯಲ್ಲಿ ಈ ಕತೆಗಳನ್ನು ಅಂದವಾಗಿ ಹೆಣೆಯಲಾಗಿದೆ. ‘ಕುಂಞಿರಾಮಾಯಣಂ’ ಚಿತ್ರಕಥೆ ಬರೆದ ದೀಪು ಪ್ರದೀಪ್ ಅವರೇ ‘ಪೇರಿಲ್ಲೂರ್ ಪ್ರೀಮಿಯರ್ ಲೀಗ್’ ಕತೆ ಬರೆದಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ‘ಪೇರಿಲ್ಲೂರ್ ಪ್ರೀಮಿಯಂ ಲೀಗ್’ ಸ್ಟ್ರೀಮ್‌ ಆಗುತ್ತಿದ್ದು, ಇದು 30 ರಿಂದ 45 ನಿಮಿಷಗಳ ಅವಧಿಯ ಏಳು ಸಂಚಿಕೆಗಳನ್ನು ಒಳಗೊಂಡಿದೆ.

ಹೆಸರೇ ಸೂಚಿಸುವಂತೆ, ‘ಪೇರಿಲ್ಲೂರ್ ಪ್ರೀಮಿಯಂ ಲೀಗ್’, ಪೇರಿಲ್ಲೂರ್ ಎಂಬ ಹಳ್ಳಿಯ ಕಥೆಯನ್ನು ಹೇಳುತ್ತದೆ. ಆ ಗ್ರಾಮದ ಒಬ್ಬೊಬ್ಬ ವ್ಯಕ್ತಿಯ ಸ್ವಭಾವಗಳ ಸ್ಥೂಲ ಚಿತ್ರಣದೊಂದಿಗೆ ಶುರುವಾಗುತ್ತದೆ ಈ ವೆಬ್ ಸರಣಿ. ಈ ಗ್ರಾಮ ಅಷ್ಟೇನೂ ಅಭಿವೃದ್ಧಿ ಹೊಂದಿಲ್ಲ. ಶಾಲೆಯಲ್ಲಿ ಶ್ರೀಕುಟ್ಟನ್ ಎಂಬ ಹುಡುಗನನ್ನು ಪ್ರೀತಿಸುವ ಮಾಳವಿಕಾ, ತನ್ನ ಹುಟ್ಟುಹಬ್ಬದಂದು ಪ್ರೇಮ ನಿವೇದನೆ ಮಾಡುತ್ತಾಳೆ. ಒನ್ ಸೈಡ್ ಲವ್ ಇರುವ ಮಾಳವಿಕಾ ಒಂದು ದುಂಬಿಯ ಚಿತ್ರವನ್ನೂ ಗಿಫ್ಟ್ ನೀಡುತ್ತಾಳೆ. ಅದನ್ನು ನೋಡಿದ ಕೂಡಲೇ ಪ್ರೇಮ ನಿರಾಕರಿಸಿದ ಶ್ರೀಕುಟ್ಟನ್, ಮಾಳವಿಕಾ ಕೆನ್ನೆಗೊಂದು ಏಟು ಬಿಗಿಯುತ್ತಾನೆ! ದುಂಬಿ (ಮಲಯಾಳಂನಲ್ಲಿ ತುಂಬಿ)ಗೂ ಶ್ರೀಕುಟ್ಟನ್ ಗೂ ಏನು ಸಂಬಂಧ? ಅದರಲ್ಲಿಯೂ ಒಂದು ಕತೆ ಇದೆ. ಅಷ್ಟೇನೂ ಅಭಿವೃದ್ಧಿ ಹೊಂದದ ಪೇರಿಲ್ಲೂರ್ ಗ್ರಾಮದಲ್ಲಿ ಫ್ಲೆಕ್ಸ್ ಪ್ರಿಂಟಿಂಗ್ ಇದೆ. ಇಂಟರ್ನೆಟ್ ಇದೆ. ಆದರೆ ಊರಿಗೆ ಇನ್ನೂ ಬಸ್ ಸೌಕರ್ಯವಿಲ್ಲ.

ಈ ಮಾಳವಿಕಾ (ನಿಖಿಲಾ ವಿಮಲ್) – ಶ್ರೀಕುಟ್ಟನ್ ಮತ್ತೊಮ್ಮೆ ಭೇಟಿಯಾಗುತ್ತಾರೆ. ಶ್ರೀಕುಟ್ಟನ್ (ಸನ್ನಿ ವೈನ್) ಗಲ್ಫ್‌ಗೆ ಹೋಗಿ ಬಂದಿದ್ದಾನೆ. ಅವನಿಗಾಗಿ ವಧು ಅನ್ವೇಷಣೆ ನಡೆಯುತ್ತಿರುತ್ತದೆ. ಹಾಗೆ ಅವನು ಬಂದಿದ್ದು ಮಾಳವಿಕಾ ಮನೆಗೆ. ಶಾಲಾದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸಿದ್ದೆ, ಈಗಲೂ ಆ ಪ್ರೀತಿ ಕಡಿಮೆ ಆಗಿಲ್ಲ ಎಂದು ಹೇಳುತ್ತಾಳೆ ಮಾಳವಿಕಾ. ಆಯ್ತು, ಇನ್ನೇನು ಮದುವೆ ಸೆಟ್ ಆಗಿ ಬಿಡುತ್ತದೆ ಎನ್ನುವಾಗ ಕತೆಯಲ್ಲಿ ಇನ್ನೊಂದು ಟ್ವಿಸ್ಟ್ ಬಂದು ಬಿಡುತ್ತದೆ. ಪೇರಿಲ್ಲೂರ್‌ನಲ್ಲಿ ಪಂಚಾಯತ್ ಚುನಾವಣೆಯ ಗೌಜಿ. ಮಾಳವಿಕಾಳ ಮಾವ ಪೀತಾಂಬರನ್ (ವಿಜಯ ರಾಘವನ್) ಆ ಪಂಚಾಯತ್ ಅಧ್ಯಕ್ಷರಾಗಿದ್ದವರು. ಆದರೆ ಈ ಬಾರಿ ಅವರಿಗೆ ಚುನಾವಣೆ ಸ್ಪರ್ಧಿಸಲು ಆಗುವುದಿಲ್ಲ. ಅವರ ಪ್ರತಿಸ್ಪರ್ಧಿ ಕೇಮನ್ ಸೋಮನ್ (ಅಶೋಕನ್), ಈ ಬಾರಿ ಅದು ಹೇಗೆ ಚುನಾವಣೆಗೆ ಸ್ಪರ್ಧಿಸುತ್ತೀರಿ ನೋಡುತ್ತೇನೆ ಎಂದು ಸವಾಲು ಹಾಕುತ್ತಾನೆ. ಹೇಗಾದರೂ ಮಾಡಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಅದೂ ತಮ್ಮದೇ ಕುಟುಂಬದವರು ಆದರೆ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿರುವ ಪೀತಾಂಬರನ್ ತನ್ನ ಹೆಂಡ್ತಿಯ ಮನವೊಲಿಸಲು ನೋಡುತ್ತಾನೆ. ಆದರೆ ಇದಕ್ಕೆ ಆಕೆ ಒಪ್ಪದೇ ಇರುವಾಗ ತನ್ನ ಸೊಸೆಯನ್ನು ಕಣಕ್ಕಿಳಿಸಲು ಪೀತಾಂಬರನ್ ನಿರ್ಧರಿಸುತ್ತಾನೆ. ತನ್ನ ಶಾಲಾದಿನಗಳನ್ನು ಪೇರಿಲ್ಲೂರ್‌ನಲ್ಲಿ ಕಳೆದಿದ್ದ ಮಾಳವಿಕಾ ಮತ್ತೆ ಚುನಾವಣೆ ಸ್ಪರ್ಧಿಸಲು ಮಾವನ ಮನೆಗೆ ಬರುತ್ತಾಳೆ.

ನೀನ್ಯಾಕೆ ಚುನಾವಣೆ ಸ್ಪರ್ಧಿಸಲು ಒಪ್ಪಿಕೊಂಡೆ ಎಂದು ಕೇಳುವ ಪೀತಾಂಬರನ್ ಅವರ ಹೆಂಡ್ತಿ ಗೋಮತಿ, ಸೊಸೆಗೆ ಆ ಊರಿನ ರಾಜಕೀಯದ ಬಗ್ಗೆ, ತನ್ನ ಮಾವನ ಲೆಕ್ಕಾಚಾರಗಳ ಬಗ್ಗೆ ವಿವರಿಸಿ ಹೇಳುತ್ತಾರೆ. ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಂಡ ಮಾಳವಿಕಾ ಅತ್ತೆಯ ಮಾತುಗಳನ್ನು ಕೇಳಿದ ನಂತರ ಹೇಗಾದರೂ ಚುನಾವಣೆ ಸೋಲಬೇಕು. ಮಾವನಿಗೆ ಅಧ್ಯಕ್ಷಪಟ್ಟ ಕೈ ತಪ್ಪಬೇಕು ಅದಕ್ಕಾಗಿ ಪ್ಲಾನ್ ಮಾಡುತ್ತಾರೆ. ಚುನಾವಣಾ ಪ್ರಚಾರಕ್ಕಾಗಿ ಸೊಸೆ ಜತೆ ಅತ್ತೆಯೂ ಬರುತ್ತಾರೆ. ಮತ ಕೇಳುವ ಬದಲು ನಮಗೆ ಮತ ನೀಡಬೇಡಿ ಎಂದು ಇವರು ಜನರಲ್ಲಿ ಹೇಳುತ್ತಾರೆ. ಶ್ರೀಕುಟ್ಟನ್ ಮೇಲೆ ಮಾಳವಿಕಾಗೆ ಸಿಟ್ಟು ಕಡಿಮೆ ಆಗಿಲ್ಲ. ಮೊದಲು ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ, ನಂತರ ಹುಡುಗಿ ನೋಡಲು ಬಂದು ಕೊನೇ ಗಳಿಗೆಯಲ್ಲಿ ಕೈಕೊಟ್ಟ. ಇಂತಿರುವಾಗ ಅವನ ಮುಂದೆ ಗೌರವದಿಂದ ತಲೆ ಎತ್ತಿ ನಡೆಯಬೇಕು ಎಂಬ ಆಸೆ ಇರುತ್ತದೆ. ಮಾಳವಿಕಾ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಎಲ್ಲಡೆ ಆಕೆಯದ್ದೇ ಕಟೌಟ್ , ಫ್ಲೆಕ್ಸ್ ರಾರಾಜಿಸುತ್ತಿರುತ್ತದೆ. ಇದನ್ನೆಲ್ಲ ನೋಡಿದ ಶ್ರೀಕುಟ್ಟನ್‌ಗೆ ಒಳಗೊಳಗೇ ಅಸೂಯೆ. ಈತ ಪೀತಾಂಬರನ್ ಪ್ರತಿಸ್ಪರ್ಧಿ ಕೇಮನ್ ಸೋಮನ್ ಕಡೆಯವರ ಪೋಸ್ಟರ್ ಪ್ರಿಂಟಿಂಗ್ ಕೆಲಸ ಕೈಗೆತ್ತಿಕೊಳ್ಳುತ್ತಾನೆ.

ಇತ್ತ ಅತ್ತೆ – ಸೊಸೆ ಸೇರಿ ಚುನಾವಣೆಯಲ್ಲಿ ಸೋಲುವ ತಯಾರಿ ನಡೆಸುವಾಗ ಸಿಕ್ಕಿದವನೇ ಸೈಕೋ ಬಾಲಚಂದ್ರನ್ (ಅಜು ವರ್ಗೀಸ್). ಹೆಸರೇ ಹೇಳುವಂತೆ ಈತ ಕಿರಿಕ್ ಪಾರ್ಟಿ. ಯಾವ ಕಾರ್ಯಕ್ರಮವನ್ನು ಬೇಕಾದರೂ ಹಾಳು ಮಾಡಬಲ್ಲವ. ಇಂತಿರುವಾಗ ಅವನೇ ನಮಗೆ ಬೇಕಾದ ವ್ಯಕ್ತಿ ಎಂದು ಮಾಳವಿಕಾ, ಅತ್ತೆಯಲ್ಲಿ ಹೇಳುತ್ತಾಳೆ. ಚುನಾವಣೆಯ ಕೊನೆಯ ಪ್ರಚಾರ ಕಾರ್ಯಕ್ರಮದಲ್ಲಿ ಏನಾದರೊಂದು ಮಾಡಿ ಅದನ್ನು ಹಾಳು ಮಾಡಬೇಕು. ಕೇಮನ್ ಸೋಮನ್ ಮೇಲೆ ಜನರಿಗೆ ಪ್ರೀತಿ ಹುಟ್ಟಬೇಕು, ಎಲ್ಲರೂ ಪೀತಾಂಬರನ್ ಅವರಿಗೆ ಹಿಡಿಶಾಪ ಹಾಕಬೇಕು ಅಂಥದ್ದೇನಾದರೂ ಮಾಡು ಎಂದು ಮಾಳವಿಕಾ ಮತ್ತು ಅತ್ತೆ ಸೈಕೋ ಬಾಲಚಂದ್ರನ್‌ಗೆ ಕೆಲಸ ಒಪ್ಪಿಸುತ್ತಾರೆ. ಆ ಕಾರ್ಯಕ್ರಮದಲ್ಲಿ ಸೈಕೋ ಬಾಲಚಂದ್ರನ್ ತನ್ನ ಕೋಣದ ಹಗ್ಗ ಕೈಯಿಂದ ಬಿಟ್ಟು ಕೋಲಾಹಲ ಸೃಷ್ಟಿಸುತ್ತಾನೆ. ಪರಿಣಾಮ ಮಾಳವಿಕಾಗೆ ಗಾಯವಾಗುತ್ತದೆ. ಈ ಕೆಲಸ ಮಾಡಿಸಿದ್ದು ಕೇಮನ್ ಸೋಮನ್ ಎಂದು ಪೀತಾಂಬರನ್ ಆರೋಪಿಸುತ್ತಾರೆ. ಅನುಕಂಪದ ಮೇರೆಗೆ ಮತ್ತೆ ಮತಗಿಟ್ಟಿಸುವ ಯೋಜನೆ ಪೀತಾಂಬರನದ್ದು.

ಇಂತಿರುವಾಗ ಊರಹಬ್ಬದಲ್ಲಿ ಮಾಳವಿಕಾ, ಶ್ರೀಕುಟ್ಟನ್ ಅಮ್ಮನನ್ನು ಕಂಡು ನಿಮ್ಮ ಮನೆಯವರಿಗೆ ಯಾರಿಗೂ ನಾನು ಇಷ್ಟವಾಗಿಲ್ಲ. ಆದರೆ ಅಮ್ಮ, ಈ ಚುನಾವಣೆಯಲ್ಲಿ ಒಂದು ಮತ ನನಗೆ ಬೇಕು ಅಂತಾಳೆ. ಅಲ್ಲಿಯವರೆಗೆ ತನಗೆ ಮತ ಹಾಕಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದ ಮಾಳವಿಕಾ, ಇಲ್ಲಿ ಮತಬೇಕು ಅಂತಾಳೆ. ಅಂತೂ ಇಂತೂ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುವ ಸಮಯ. ಆ ಹೊತ್ತು ಬಂದೇ ಬಿಟ್ಟಿತು. ಪೇರಿಲ್ಲೂರ್ ಗ್ರಾಮದ 5ನೇ ನಂಬರ್ ವಾರ್ಡ್‌ನಿಂದ ಮಾಳವಿಕಾ ಒಂದು ಮತದ ಅಂತರದಿಂದ ಗೆಲ್ಲುತ್ತಾಳೆ. ಪೀತಾಂಬರನ ಖುಷಿಗೆ ಪಾರವೇ ಇಲ್ಲ. ತನ್ನ ಸೊಸೆ ಚುನಾವಣೆ ಗೆದ್ದಿದ್ದಾಳೆ!. ಆಕೆ ಕೇಳಿದ ಆ ಒಂದು ಮತ ಅಮೂಲ್ಯ ಆಗಿತ್ತು. ಚುನಾವಣೆ ಗೆದ್ದ ಆಕೆಗೆ ಅಧ್ಯಕ್ಷ ಪಟ್ಟ. ಅಲ್ಲಿಂದ ಕತೆಗೆ ಮತ್ತೊಂದು ತಿರುವು.

ಪೆರುವಣ್ಣಾಪುರತ್ತೆ ವಿಶೇಷಂಙಳ್, ಪೊನ್ಮುಟ್ಟಯಿಡುನ್ನ ತಾರಾವ್‌ನಿಂದ ಹಿಡಿದು ಕುಂಞಿರಾಮಾಯಣಂವರೆಗಿನ ಚಲನಚಿತ್ರಗಳಲ್ಲಿ ನಾವು ನೋಡಿರುವ ಚಂದದ ಹಳ್ಳಿಯ ವಾತಾವರಣವನ್ನೇ ಪೇರಿಲ್ಲೂರ್ ಪ್ರೀಮಿಯಂ ಲೀಗ್ ಕ್ಯಾಮೆರಾದಲ್ಲಿ ತೋರಿಸಲಾಗಿದೆ. ತ್ರಿಶಂಕು ಸ್ವರ್ಗದಲ್ಲಿರುವ ಮಾಳವಿಕಾ ಪಾತ್ರದಲ್ಲಿ ನಿಖಿಲಾ, ಪಾತ್ರದ ಮನಸ್ಥಿತಿ ಮತ್ತು ಸಂದಿಗ್ಧತೆಯನ್ನು ಸೂಕ್ಷ್ಮವಾದ ಅಭಿವ್ಯಕ್ತಿಗಳ ಮೂಲಕ ಪ್ರೇಕ್ಷಕರಿಗೆ ತಿಳಿಸಲು ಸಮರ್ಥರಾಗಿದ್ದಾರೆ. ಶ್ರೀಕುಟ್ಟನ್ ಕುಂಞಿರಾಮಾಯಣಂನ ಲಾಲು ಮತ್ತು ಕುಂಞಿರಾಮನ್‌ರ ಮಿಶ್ರಣ ಎಂದು ಹೇಳಬಹುದು. ಇಲ್ಲಿ ಶ್ರೀಕುಟ್ಟನ್ ಏನು ಮುಟ್ಟಿದರೂ ಏನಾದರೊಂದು ಆಗಿಯೇ ಆಗುತ್ತದೆ. ಹಾಗಾಗಿ ಸನ್ನಿ ವೇನ್ ಸರಣಿಯ ಉದ್ದಕ್ಕೂ ಅವರಿಗಾಗುವ ಎಡವಟ್ಟುಗಳಿಂದ ನಗು ಹುಟ್ಟಿಸುತ್ತಾರೆ.

ಪೇರಿಲ್ಲೂರಿನ ರಾಜಕಾರಣಿ ಭೀಷ್ಮಾಚಾರ್ಯ ಪೀತಾಂಬರನ್ ಪಾತ್ರದಲ್ಲಿ ವಿಜಯರಾಘವನ್ ಸಮರ್ಥವಾಗಿ ನಟಿಸಿದ್ದಾರೆ. ಅಶೋಕನ್ ನಿರ್ವಹಿಸಿರುವ ಕೇಮನ್ ಸೋಮನ್ ವಿಜಯರಾಘವನ್ ಅವರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಪಾತ್ರ. ಚುನಾವಣೆಯಲ್ಲಿ ಹೀನಾಯವಾಗಿ ಸೋತಾಗಲೂ ಸೋಮನ್ ಕುಗ್ಗುವುದಿಲ್ಲ. ಪ್ರತೀ ಬಾರಿ ಸೋತರೂ ಅವರು ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮನುಷ್ಯ. ಅದೇ ವೇಳೆ ಸೈಕೋ ಬಾಲಚಂದ್ರನ್ ಆಗಿ ನಟಿಸಿರುವ ಅಜು ವರ್ಗೀಸ್ ಪ್ರತಿ ಬಾರಿ ತೆರೆಗೆ ಬಂದರೆ ಮುಂದೇನು ಎಂಬ ಕುತೂಹಲ ಮೂಡುತ್ತದೆ. ಮಾಳವಿಕಾ, ಶ್ರೀಕುಟ್ಟನ್, ಪೀತಾಂಬರನ್, ಕೇಮನ್ ಸೋಮನ್ ಮತ್ತು ಅಮ್ಮಾಯಿ (ಅತ್ತೆ) ಮುಖ್ಯ ಪಾತ್ರಗಳಾಗಿದ್ದರೂ, ಪೇರಿಲ್ಲೂರ್ ಅವರ ಸಾಮ್ರಾಜ್ಯವಲ್ಲ. ತೆರೆಯ ಮೇಲೆ ಬಂದು ಹೋಗುವ ಪೆರಿಲ್ಲೂರು ಗ್ರಾಮದ ಪ್ರತಿಯೊಂದು ಸಣ್ಣ ಪಾತ್ರವೂ ಒಂದೊಂದು ಕಥೆಯನ್ನು ಹೇಳುತ್ತದೆ. ತೆರೆಯ ಮೇಲೆ ಬರುವ ಎಲ್ಲಾ ಚಿರಪರಿಚಿತ ಮತ್ತು ಹೊಸ ಮುಖಗಳು ಸರಣಿಯುದ್ದಕ್ಕೂ ಪಾತ್ರಗಳಾಗಿ ಬದುಕುತ್ತವೆ.

ಒಮ್ಮೆ ನಾಪತ್ತೆಯಾದ ಕಾರಣ ಸ್ಥಳೀಯರ ಮುಂದೆ ‘ಕಾಣಾದಾಯ ಕುಂಞಿಪ್ಪ’ ಎಂಬ ಅಡ್ಡಹೆಸರಿನೊಂದಿಗೆ ಇಂದಿಗೂ ಬದುಕುತ್ತಿರುವ ಕುಂಞಿಪ್ಪ, ಒಂದೇ ಒಂದು ಕಳ್ಳತನದಲ್ಲಿ ಯಶಸ್ವಿಯಾಗದಿದ್ದರೂ ಭಯಂಕರ ಕಳ್ಳನೆಂದು ಹೇಳುವ ಕಳ್ಳ ಸತ್ಯರಾಜ್, ಸತ್ಯರಾಜ್‌ಗಿಂತ ಕಳ್ಳತನ ಬಲ್ಲ ಪತ್ನಿ ಶೀಲಾವತಿ, ಪಟಾಕಿ ಸಿಡಿದರೂ ಉಲ್ಕಾಪಾತ ಎಂಬ ತೀರ್ಮಾನಕ್ಕೆ ಬರುವ ವಾರಿಯರ್, ಅನ್ಯಗ್ರಹ ಜೀವಿಗಳಿಗೂ ಬೇಡವಾದ ದಿಲ್ಕುಶ್, ಹೀಗೆ ಪೇರಿಲ್ಲೂರಿನಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ.

ಪೇರಿಲ್ಲೂರಿನಲ್ಲಿ ಕಥೆಗಳು ಮತ್ತು ಉಪಕಥೆಗಳು ಹೇರಳವಾಗಿದ್ದು, ವೆಬ್ ಸರಣಿಯಲ್ಲಿ ಈ ಕತೆಗಳನ್ನು ಅಂದವಾಗಿ ಹೆಣೆಯಲಾಗಿದೆ. ‘ಕುಂಞಿರಾಮಾಯಣಂ’ ಚಿತ್ರಕಥೆ ಬರೆದ ದೀಪು ಪ್ರದೀಪ್ ಅವರೇ ‘ಪೇರಿಲ್ಲೂರ್ ಪ್ರೀಮಿಯರ್ ಲೀಗ್’ ಕತೆ ಬರೆದಿದ್ದಾರೆ. ಈ ವೆಬ್ ಸರಣಿಯು ಗ್ರಾಮೀಣ ಕಥೆಗಳನ್ನು ಹೇಳುವ ದೀಪು ಅವರ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ಪ್ರಸ್ತುತ ವೆಬ್ ಸರಣಿಯನ್ನು ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಆರ್ ಮೆಹ್ತಾ ಮತ್ತು ಸಿವಿ ಸಾರಥಿ ನಿರ್ಮಿಸಿದ್ದಾರೆ. ಮುಜೀಬ್ ಮಜೀದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೂಪ್ ವಿ ಶೈಲಜಾ ಮತ್ತು ಅಮೀಲ್ ಅವರ ಛಾಯಾಗ್ರಹಣ ಪೇರಿಲ್ಲೂರ್ ಗ್ರಾಮಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ‘ಪೇರಿಲ್ಲೂರ್ ಪ್ರೀಮಿಯಂ ಲೀಗ್’ ಸ್ಟ್ರೀಮ್‌ ಆಗುತ್ತಿದ್ದು, ಇದು 30 ರಿಂದ 45 ನಿಮಿಷಗಳ ಅವಧಿಯ ಏಳು ಸಂಚಿಕೆಗಳನ್ನು ಒಳಗೊಂಡಿದೆ. ಮೊದಲ ಮೂರು ಭಾಗದ ನಂತರ ‘ಪೆರಲ್ಲೂರ್ ಪ್ರೀಮಿಯಂ ಲೀಗ್’ ತನ್ನ ಆರಂಭಿಕ ಹಿಡಿತವನ್ನು ಕಳೆದುಕೊಂಡು ಕೆಲವೊಮ್ಮೆ ನೀರಸವಾಗುತ್ತದೆ. ಆದರೆ ಅದು ಕ್ಲೈಮ್ಯಾಕ್ಸ್ ಸಮೀಪಿಸುತ್ತಿದ್ದಂತೆ ಹೆಚ್ಚು ಕುತೂಹಲ ಹುಟ್ಟಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಪೇರಿಲ್ಲೂರ್ ಪ್ರೀಮಿಯಂ ಲೀಗ್’ ತನ್ನ ಸಹಜ ಹಾಸ್ಯದ ಕ್ಷಣಗಳು, ಪಾತ್ರಗಳ ತಮಾಷೆಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸುತ್ತದೆ. ‘ಪೇರಿಲ್ಲೂರ್ ಪ್ರೀಮಿಯರ್ ಲೀಗ್’ ಅನ್ನು ಒಂದೇ ಸಿಟ್ಟಿಂಗ್‌ನಲ್ಲಿ ನೋಡಬಹುದಾದ ಆಕರ್ಷಕ ರೀತಿಯಲ್ಲಿ ತೋರಿಸಿದ್ದಕ್ಕೆ ನಿರ್ದೇಶಕರಿಗೆ ಹ್ಯಾಟ್ಸ್ ಆಫ್.

LEAVE A REPLY

Connect with

Please enter your comment!
Please enter your name here