ಕಿರುತೆರೆ ಜನಪ್ರಿಯ ನಟ ಕಿರಣ್‌ ರಾಜ್‌ ಈಗ ಬಿಡುವಿಲ್ಲದ ಸಿನಿಮಾ ಹೀರೋ. ‘ಬಡ್ಡೀಸ್‌’ ಸಿನಿಮಾ ತೆರೆಕಂಡ ನಂತರ ಅವರೀಗ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ. ಅವರ ಆಕ್ಷನ್‌ – ಥ್ರಿಲ್ಲರ್‌ ‘ರಾನಿ’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ.

ಕನ್ನಡ ಕಿರುತೆರೆಯ ಜನಪ್ರಿಯ ನಟರ ಸಾಲಿನಲ್ಲಿ ಕಿರಣ್‌ ರಾಜ್‌ ಮುಂಚೂಣಿಯಲ್ಲಿದ್ದಾರೆ. ಹಿಂದಿ ಸೀರಿಯಲ್‌ ಮೂಲಕ ಕಿರುತೆರೆಗೆ ಪರಿಚಯವಾದ ಅವರು ನಂತರ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಆಪ್ತರಾದರು. ‘ಕನ್ನಡತಿ’ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ‘ಬಡ್ಡೀಸ್‌’ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾದರು. ಗುರುತೇಜ್‌ ಶೆಟ್ಟಿ ನಿರ್ದೇಶನದ ಈ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಇದೀಗ ಗುರುತೇಜ್‌ ಅವರೇ ಕಿರಣ್‌ ರಾಜ್‌ರಿಗೆ ‘ರಾನಿ’ ನಿರ್ದೇಶಿಸುತ್ತಿದ್ದಾರೆ. ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದೆ. ಇದೊಂದು ಆಕ್ಷನ್‌ – ಥ್ರಿಲ್ಲರ್‌ ಪ್ಯಾಕೇಜ್‌. ಇದೀಗ ಕಿರಣ್‌ ರಾಜ್‌ ಮಾಸ್‌ ಲುಕ್‌ನ ಚಿತ್ರದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಮುಂದಿನ ದಿನಗಳಲ್ಲಿ ನಾಯಕಿಯರ ಬಗ್ಗೆ ಮಾಹಿತಿ ನೀಡುವುದು ನಿರ್ದೇಶಕರ ಯೋಜನೆ. ‘ಸೂಕ್ಷ್ಮ ಕತೆಯ ಪಕ್ಕಾ ಆಕ್ಷನ್‌ ಚಿತ್ರವಿದು’ ಎನ್ನುತ್ತಾರೆ ನಿರ್ದೇಶಕ ಗುರುತೇಜ್‌ ಶೆಟ್ಟಿ.

‘ರಾನಿ’ ಟೈಟಲ್‌ ಅನೌನ್ಸ್‌ಮೆಂಟ್‌ನಲ್ಲೂ ಕಿರಣ್‌ ರಾಜ್‌ ಭಿನ್ನತೆ ಮೆರೆದಿದ್ದರು. ಪ್ಯಾರಾಚ್ಯೂಟ್‌ನಲ್ಲಿ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ಘೋಷಿಸುವ ಸಾಹಸ ಅವರ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇನ್ನು ‘ರಾನಿ’ ಚಿತ್ರದಲ್ಲಿ ಕಿರಣ್‌ ಭರ್ಜರಿ ಫೈಟ್ಸ್‌ ಮಾಡಿದ್ದಾರೆ. ಆರು ಸಾಹಸ ಸನ್ನಿವೇಶಗಳಿವೆಯಂತೆ. ಚಿತ್ರಕ್ಕಾಗಿ ಏಳು ಸೆಟ್‌ಗಳನ್ನು ಹಾಕಲಾಗಿದ್ದು, ಐದು ಸೆಟ್‌ಗಳಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದೆ. ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ.ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಚಿತ್ರದ ಇತರೆ ಕಲಾವಿದರು. ‘ಸಿಂಗಾರ ಸಿರಿಯೆ’ ಗೀತೆ ರಚನೆಕಾರ ಪ್ರಮೋದ್ ಮರವಂತೆ ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. ಸಂಗೀತ ಸಂಯೋಜನೆ ಮಣಿಕಾಂತ್ ಕದ್ರಿ ಅವರದು. ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಕನ್ನಡ ಭಾಷೆಯಲ್ಲೇ ಇತರೆ ರಾಜ್ಯಗಳಲ್ಲೂ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

LEAVE A REPLY

Connect with

Please enter your comment!
Please enter your name here