ಕನ್ನಡತಿ ಖುಷಿ ರವಿ ನಾಯಕಿಯಾಗಿ ಅಭಿನಯಿಸಿರುವ ‘ಪಿಂಡಂ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಶ್ರೀರಾಮ್‌ ಹೀರೋ ಆಗಿ ನಟಿಸಿರುವ ಹಾರರ್‌ ಚಿತ್ರವಿದು. ಸಾಯಿಕಿರಣ್‌ ದೈದಾ ನಿರ್ದೇಶಿಸಿರುವ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

‘ರೋಜಾ ಪೂಲು’, ‘ಒಕರಿಕಿ ಒಕರು’ ಸಿನಿಮಾ ಖ್ಯಾತಿಯ ಶ್ರೀರಾಮ್ ಮತ್ತು ಕನ್ನಡತಿ ಖುಷಿ ರವಿ (ದಿಯಾ) ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ʼಪಿಂಡಮ್ʼ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸಾಯಿಕಿರಣ್ ದೈದಾ ಚೊಚ್ಚಲ ನಿರ್ದೇಶನದ ಚಿತ್ರವಿದು. ಶ್ರೀನಿವಾಸ್ ಅವಸರಾಳ, ಈಶ್ವರಿ ರಾವ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಶ್ವರಿ ರಾವ್ ಮತ್ತು ಶ್ರೀನಿವಾಸ್ ಅವಸರಾಳ ಒಂದು ಪಾಳು ಮನೆಯ ಮುಂದೆ ಆತ್ಮ ಮತ್ತು ಪ್ರೇತಗಳ ಕುರಿತು ಸಂಭಾಷಣೆ ನಡೆಸುವುದರೊಂದಿಗೆ ಟೀಸರ್‌ ಆರಂಭವಾಗುತ್ತದೆ. ಆ ಪಾಳು ಮನೆಗೆ ವಾಸಿಸಲೆಂದು ಬರುವ ಒಂದು ಮಧ್ಯಮ ಕುಟುಂಬದ ದಂಪತಿಯ ಮಗುವಿನ ದೇಹದೊಳಗೆ ಒಂದು ಆತ್ಮ ಬಂದು ಸೇರಿಕೊಳ್ಳುತ್ತದೆ. ಇದರಿಂದ ಅವರು ನಾನಾ ರೀತಿಯ ಸಮಸ್ಯೆಗಳನ್ನುಎದುರಿಸುತ್ತಾರೆ.

ಈ ತೊಂದರೆಯಿಂದ ಹೊರಬರಲು ಅನೇಕ ಮಾರ್ಗಗಳನ್ನು ಕಂಡುಹಿಡಿಯುವ ದಂಪತಿಗಳಿಗೆ ಆ ಮನೆಯಲ್ಲಿದ್ದ ಆತ್ಮ ಹೇಗೆ ತೊಂದರೆ ಕೊಡುತ್ತದೆ? ಇದರಿಂದ ಅವರು ಹೇಗೆ ಭಯಭೀತರಾಗುತ್ತಾರೆ ಮತ್ತು ಈ ಸನ್ನಿವೇಶವನ್ನು ಯಾವ ರೀತಿ ಎದುರಿಸುತ್ತಾರೆ ಎಂಬುದನ್ನು ಟೀಸರ್‌ ತೋರಿಸಿದೆ. Kalaahi Media ಬ್ಯಾನರ್‌ ಅಡಿಯಲ್ಲಿ ಯಶವಂತ ದಗ್ಗುಮಟಿ ಸಿನಿಮಾ ನಿರ್ಮಿಸಿದ್ದಾರೆ. ಸಾಯಿಕಿರಣ್ ದೈದಾ, ಕವಿ ಸಿದ್ಧಾರ್ಥ ಮತ್ತು ಟೋಬಿ ಓಸ್ಬೋರ್ನ್ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ರವಿವರ್ಮ, ಮಾಣಿಕ್ ರೆಡ್ಡಿ, ಬೇಬಿ ಚೈತ್ರ, ಬೇಬಿ ಇಶಾ, ವಿಜಯಲಕ್ಷ್ಮಿ ಮತ್ತು ಶ್ರೀಲತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೃಷ್ಣ ಸೌರಭ್ ಸೂರಂಪಳ್ಳಿ ಸಂಗೀತ ಸಂಯೋಜಿಸಿದ್ದು, ಸತೀಶ್ ಮನೋಹರನ್ ಛಾಯಾಗ್ರಹಣ ಮತ್ತು ಸಿರೀಶ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ.

LEAVE A REPLY

Connect with

Please enter your comment!
Please enter your name here