ನಾಗೇಶ್‌ ಕುಕನೂರ್‌ ನಿರ್ದೇಶನದಲ್ಲಿ ಕೀರ್ತಿ ಸುರೇಶ್‌ ಅಭಿನಯದ ‘ಗುಡ್‌ಲಕ್‌ ಸಖಿ’ ತೆಲುಗು ಸಿನಿಮಾ ಫೆಬ್ರವರಿ 12ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಕಳೆದ ತಿಂಗಳು ಥಿಯೇಟರ್‌ಗಳಲ್ಲಿ ತೆರೆಕಂಡಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ನಟನೆಯ ನಾಯಕಿಪ್ರಧಾನ ಸಿನಿಮಾ ‘ಗುಡ್‌ಲಕ್‌ ಸಖಿ’ ತೆಲುಗು ಸಿನಿಮಾ ಜನವರಿ 28ರಂದು ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು. ಮೂಲ ತೆಲುಗು ಜೊತೆ ತಮಿಳು ಮತ್ತು ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳೂ ತೆರೆಗೆ ಬಂದಿದ್ದವು. ಆದರೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಕಲಾವಿದರ ಉತ್ತಮ ನಟನೆಯ ಹೊರತಾಗಿಯೂ ಇದು ಸೋಲುಂಡಿತು. ಸುಲಭವಾಗಿ ಊಹಿಸಬಹುದಾದ ಕತೆ, ಅಷ್ಟೇನೂ ಆಕರ್ಷಕವಲ್ಲದ ನಿರೂಪಣೆಯಿಂದಾಗಿ ಸಿನಿಮಾ ಸೊರಗಿತು. ವಿಮರ್ಶಕರಿಂದಲೂ ಸಿನಿಮಾಗೆ ಉತ್ತಮ ಅಂಕ ಸಿಗಲಿಲ್ಲ. ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾದ ಹದಿನೈದೇ ದಿನಕ್ಕೆ ಸಿನಿಮಾ ಓಟಿಟಿಗೆ ಬರುತ್ತಿದ್ದು, ಫೆಬ್ರವರಿ 12ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘ಗುಡ್‌ಲಕ್‌ ಸಖಿ’ ಕ್ರೀಡಾಪ್ರಧಾನ ರೊಮ್ಯಾಂಟಿಕ್‌ ಡ್ರಾಮಾ. ಆದಿ ಪಿನಿಸೆಟ್ಟಿ ಮತ್ತು ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯ ಯುವತಿಯೊಬ್ಬಳು ಶೂಟರ್‌ ಆಗುವ ಕಥಾನಕ. ತೆರೆಯ ಮೇಲೆ ಜಗಪತಿ ಬಾಬು ನಾಯಕನಟಿಗೆ ಮೆಂಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜನೆ, ಚಿರಂತನ್‌ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ನಟಿ ಕೀರ್ತಿ ಸುರೇಶ್‌ ಅವರು ಮಹೇಶ್‌ ಬಾಬು ಜೊತೆಗೆ ತಾವು ನಟಿಸಿರುವ ‘ಸರ್ಕಾರು ವಾರಿ ಪಾಟ’ ತೆಲುಗು ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಫೆಬ್ರವರಿ ಚಿತ್ರದ ವೀಡಿಯೋ ಹಾಡೊಂದು ಬಿಡುಗಡೆಯಾಗಲಿದೆ. ‘ಭೋಳಾ ಶಂಕರ್‌’ ತೆಲುಗು ಚಿತ್ರದಲ್ಲಿ ಅವರು ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Previous article‘KGF’ ಚಾಪ್ಟರ್‌ 2 ಡಬ್ಬಿಂಗ್‌ ಪೂರ್ಣಗೊಳಿಸಿದ ನಟಿ ರವೀನಾ ಟಂಡನ್‌
Next articleಪುನೀತ್‌ ರಾಜಕುಮಾರ್‌ ಹಾಡಿದ್ದ ‘YELLOW ಬೋರ್ಡ್‌’ ಸಾಂಗ್‌ನ ಲಿರಿಕಲ್‌ ವೀಡಿಯೊ ಬಿಡುಗಡೆ

LEAVE A REPLY

Connect with

Please enter your comment!
Please enter your name here