ಈಚಿನ ದಿನಗಳಲ್ಲಿ ಬಂದಿರುವ ಯುದ್ಧಕ್ಕೆ ಸಂಬಂಧಿಸಿದ ಚಿತ್ರಗಳಲ್ಲಿ ‘ಪಿಪ್ಪಾ’ ಪ್ರಶಂಸನೀಯ ಚಿತ್ರ. ಭಾರತ ಎಂದಿಗೂ ಮಾನವತೆಯ ಪರ ನಿಲ್ಲುವ ರಾಷ್ಟ್ರ ಎಂದು ಸಾಬೀತು ಮಾಡುವ ಸುಂದರ ಚಿತ್ರಣವನ್ನು ಚಿತ್ರದಲ್ಲಿ ಕಾಣಬಹುದು. ಕುಟುಂಬ ಸಮೇತ ಕೂತು ನೋಡಬೇಕಾದ ಚಿತ್ರವಿದು. Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ಪಿಪ್ಪಾ’.

ಯುದ್ಧದ ಕುರಿತಾದ ಅನೇಕ ಚಿತ್ರಗಳು ಬಂದಿವೆ. ಒಂದೊಂದು ಸಿನಿಮಾ ನೋಡೋವಾಗಲೂ ಚಿತ್ರ ಬೇರೆಯಾದರೂ ಭಾವುಕತೆಯ ತೀವ್ರತೆ ಒಂದೇ ಆಗಿರುತ್ತೆ. ಇದೀಗ ‘ಪಿಪ್ಪಾ’ ಬಿಡುಗಡೆ ಆಗಿದೆ. 1971ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಪೂರ್ವ ದಿಕ್ಕಿನ ಪಡೆಯಲ್ಲಿ ನಿಂತು ಗರೀಬ್ಪುರ ಯುದ್ಧದಲ್ಲಿ ವೀರೋಚಿತವಾಗಿ ಕಾದಾಡಿದ ಭಾರತದ 45ನೆಯ ಕ್ಯಾವಲ್ರಿ ರಿಜಿಮೆಂಟ್ ಕ್ಯಾಪ್ಟನ್ ಬಲರಾಮ್ ಸಿಂಗ್ ಮೆಹತಾ ಮತ್ತವರ ಸಹೋದರರ ಕಥೆಯೇ ‘ಪಿಪ್ಪಾ’.

ಚರಿತ್ರೆಯಲ್ಲಿ ಘಟಿಸಿದ ಯುದ್ಧದ ಚಿತ್ರಗಳ ವಿಷಯ ಬಂದಾಗ ತೆರೆಗೆ ತಕ್ಕಂತೆ ಸಾಕಷ್ಟು ಭಾವುಕತೆ ಮತ್ತು ದೇಶಭಕ್ತಿಯ ಉನ್ಮಾದ, ಯುದ್ಧದಲ್ಲಿ ಹೋರಾಡಿದ ಒಬ್ಬ ಸೈನಿಕನ ಕುರಿತಾದ ಹೊಗಳಿಕೆ, ವೈಭವೀಕರಣ ಇವೆಲ್ಲವನ್ನೂ ನಿರೀಕ್ಷೆ ಮಾಡಬಹುದು. ಆದರೆ ರಾಜಾ ಕೃಷ್ಣ ಮೆನನ್‌ರ ಈ ಚಿತ್ರದಲ್ಲಿ ಇವೆಲ್ಲಕ್ಕಿಂತ ಹೊರತಾದ ತುಸು ಭಿನ್ನ ಎನಿಸುವ ಅನುಭವವನ್ನು ನಿರೀಕ್ಷಿಸಬಹುದು. 1971ರ ಬಾಂಗ್ಲಾದೇಶದ ಸ್ವಾತಂತ್ರ್ಯದ ಯುದ್ಧದ ಸಂದರ್ಭದಲ್ಲಿ ಭಾರತ ಎಷ್ಟು ಆದರ್ಶಪ್ರಾಯವಾಗಿ ಮತ್ತು ಉದಾರಿಯಾಗಿ ನಡೆದುಕೊಂಡಿತು ಎಂಬುದರ ಮನೋಜ್ಞ ಚಿತ್ರಣವನ್ನು ಈ ಚಿತ್ರದಲ್ಲಿ ನೋಡಬಹುದು. ಯುದ್ಧದ ಸಂದರ್ಭದಲ್ಲಿ ಕೇಂದ್ರಬಿಂದುವಾಗಿದ್ದ 45ನೆಯ ಕ್ಯಾವಲ್ರಿ ರಿಜಿಮೆಂಟ್ ಕ್ಯಾಪ್ಟನ್ ಬಲರಾಮ್ ಬಲ್ಲಿ ಸಿಂಗ್ ಮೆಹತಾ ಹೇಗೆ ತಮ್ಮ ಉನ್ನತಾಧಿಕಾರಿಗಳ ಆಜ್ಞೆಗೆ ವಿರುದ್ಧವಾಗಿ ನಡೆದು ದಾರ್ಷ್ಟ್ಯ ಪ್ರದರ್ಶಿಸಿದರು ಎನ್ನುವ ಚಿತ್ರಣ ಕಾಣಬಹುದು.

ಕ್ಯಾಪ್ಟನ್ ಬಲ್ಲಿ ಅವರ ಪಿ ಟಿ 76 ಟ್ಯಾಂಕರ್ ಹೆಸರನ್ನೇ ಚಿತ್ರದ ಶೀರ್ಷಿಕೆ ಮಾಡಲಾಗಿದ್ದರೂ, ಅವರಿಗೆ ಆ ಟ್ಯಾಂಕರ್ ಮೇಲೆ ಎಷ್ಟು ಒಲವು ಇತ್ತು ಎನ್ನುವುದಾದರೂ ಚಿತ್ರದಲ್ಲಿ ಯೋಧ ಮತ್ತು ಯಂತ್ರದ ನಡುವಿನ ಸಂಬಂಧವನ್ನು ಅಷ್ಟೇನೂ ವಿಸ್ತರಿಸಿ ತೋರಿಸಲಾಗಿಲ್ಲ. ಆ ಆಯಾಮ ಜಾಸ್ತಿ ಇದ್ದಿದ್ದರೆ ಕಥೆ ಇನ್ನೂ ಪರಿಣಾಮಕಾರಿಯಾಗಿ ಇರುತ್ತಿತ್ತೇನೋ. ಆದರೂ ನೆರೆಯ ದೇಶ ಸಹಾಯ ಬೇಡಿದಾಗ ಭಾರತ ಮುನ್ನುಗ್ಗಿ ಸಹಾಯಹಸ್ತ ಚಾಚಿದ ಪರಿ, ತನ್ನ ಉದಾರ ಮನೋಭಾವವನ್ನು ಪ್ರದರ್ಶಿಸಿದ ರೀತಿ, ಯುವ ಯೋಧ ಕ್ಯಾಪ್ಟನ್ ಬಲ್ಲಿಯ ಕರ್ತವ್ಯಪರತೆ ಇವೆಲ್ಲದರ ಅದ್ಭುತ ನಿರೂಪಣೆಯನ್ನು ಚಿತ್ರ ಕಟ್ಟಿಕೊಟ್ಟಿದೆ.

ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವಿನ ಕಲಹದ ಕುರಿತು ಚಿಕ್ಕದಾದ ಹಿನ್ನೆಲೆಯನ್ನು ಕಟ್ಟಿಕೊಟ್ಟ ನಂತರ ಹೇಗೆ ಭಾರತ ಅನ್ಯಾಯದ ವಿರುದ್ಧ ಮತ್ತು ಮನುಷ್ಯತ್ವದ ಪರ ನಿಂತು ಬಾಂಗ್ಲಾದೇಶದ ಪರ ಸಹಾಯಹಸ್ತ ಚಾಚಿತು ಎನ್ನುವುದರ ಚಿತ್ರಣವಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಚಿತ್ರ ಕ್ಯಾಪ್ಟನ್ ಬಲ್ಲಿಯವರ ಬಗ್ಗೆಯಾದರೂ ಸಂಪೂರ್ಣ ಅವರ ಸುತ್ತವೇ ಸುತ್ತುವುದಿಲ್ಲ. ಅವರ ಅಣ್ಣ ಮೇಜರ್ ರಾಮ್ ಮತ್ತು ಸಹೋದರಿ ರಾಧಾ ಅವರು ಹೇಗೆ ಸಂದೇಶಗಳನ್ನು ಡೀಕೋಡ್ ಮಾಡುವುದರ ಮೂಲಕ 1971ರ ಇಂಡಿಯಾ ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನುವುದನ್ನು ಹೈಲೈಟ್ ಮಾಡಿ ತೋರಿಸುತ್ತದೆ.

ರವೀಂದರ್‌ ರಾಂಧವ, ತನ್ಮಯ್ ಮೋಹನ್ ಮತ್ತು ಮೆನನ್ ಅವರ ತೀಕ್ಷ್ಣ ಬರವಣಿಗೆಯಲ್ಲಿ ಕ್ಯಾಪ್ಟನ್ ಬಲ್ಲಿಯವರ ಕುಟುಂಬದ ಹಿನ್ನೆಲೆ, ವ್ಯಕ್ತಿತ್ವ ಹೇಗೆ ಅವರ ವೃತ್ತಿಜೀವನ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತು ಎನ್ನುವುದರ ಮನೋಜ್ಞ ಚಿತ್ರಣವಿದೆ. ಎಲ್ಲಕ್ಕಿಂತ ಮೆಚ್ಚುಗೆಯಾಗುವುದು ಎಂದರೆ ಚಿತ್ರದ ನಿರೂಪಣೆಯಲ್ಲಿನ ಪ್ರಾಮಾಣಿಕತೆ ಮತ್ತು ವಿಧೇಯತೆ. ಪೂರ್ವದಿಕ್ಕಿನ ಯುದ್ಧದ ಸನ್ನಿವೇಶಗಳು ಮತ್ತು ಯುದ್ಧಭೂಮಿಯ ಸನ್ನಿವೇಶಗಳು ಅತ್ಯಂತ ನೈಜವಾಗಿ ಮೂಡಿಬಂದಿದ್ದು ಅತಿಯಾದ ಹಿಂಸೆ ಅಥವಾ ಕ್ರೂರತೆಯನ್ನು ಎಲ್ಲೂ ಅನಗತ್ಯವಾಗಿ ತೆರೆಯ ಮೇಲೆ ತೋರಿಸದೆ ಇರುವುದು ಶ್ಲಾಘನೀಯ. ಯುದ್ಧಕ್ಕೆ ಮುಂಚಿನ ಕೆಲ ದೃಶ್ಯಗಳು ತುಸು ನಿಧಾನಗತಿಯಂತೆ ಭಾಸವಾದರೂ ನಿರೂಪಣೆಯಲ್ಲಿನ ಲವಲವಿಕೆ ಆ ಕೊರತೆಯನ್ನು ಮುಚ್ಚಿಹಾಕಿದೆ. ಎ ಆರ್ ರೆಹಮಾನ್ ಅವರ ಸಂಗೀತ ಚಿತ್ರವೀಕ್ಷಣೆಯ ಅನುಭವವನ್ನು ಇನ್ನೂ ಎತ್ತರಕ್ಕೆ ಏರಿಸಿರುವುದು ಹೌದು.

ಒಬ್ಬ ಉತ್ಸಾಹಿ ಯುವ ಯೋಧನ ಪಾತ್ರದಲ್ಲಿ ಸಮಯಕ್ಕೆ ತಕ್ಕಂತೆ ದಾರ್ಷ್ಟ್ಯ ಮತ್ತು ವೀರತೆಯನ್ನು ಪ್ರದರ್ಶಿಸುವ ನಿಪುಣ ಯೋಧನ ಪಾತ್ರದಲ್ಲಿ ಇಶಾನ್ ಖತ್ತರ್ ಮಿಂಚಿದ್ದಾರೆ. ಶಿಸ್ತಿನ ಸಿಪಾಯಿಯಾದ ಮೇಜರ್ ರಾಮ್ ಮೆಹತಾ ಪಾತ್ರದಲ್ಲಿ ಪ್ರಿಯಾಂಶು ಪೈನ್ಯುಲಿ ಸೊಗಸಾಗಿ ಅಭಿನಯಿಸಿದ್ದಾರೆ. ಆರಂಭದಲ್ಲಿ ಅಣ್ಣ ತಮ್ಮನ ನಡುವೆ ಸಂಘರ್ಷ ಬಂದರೂ ನಂತರ ಅದು ಬದಲಾಗುವ ಪಯಣದಲ್ಲಿ ಸಹೋದರರ ಒಡನಾಟದ ಚಿತ್ರಣ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಮೃಣಾಲ್ ಠಾಕುರ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಅವಕಾಶ ಆ ಪಾತ್ರಕ್ಕೂ ಇರಬಹುದಿತ್ತು.

ಒಟ್ಟಾರೆ ಹೇಳಬೇಕು ಎಂದರೆ ಈಚಿನ ದಿನಗಳಲ್ಲಿ ಬಂದಿರುವ ಯುದ್ಧಕ್ಕೆ ಸಂಬಂಧಿಸಿದ ಚಿತ್ರಗಳಲ್ಲಿ ‘ಪಿಪ್ಪಾ’ ಪ್ರಶಂಸನೀಯ ಚಿತ್ರ. ನೆರೆಯ ರಾಷ್ಟ್ರಗಳ ಬಗ್ಗೆ ಭಾರತಕ್ಕೆ ಎಷ್ಟು ಅಭಿಮಾನ ಮತ್ತು ಸಹಾಯ ಮಾಡುವ ಮನೋಭಾವ ಇದೆಯೆಂದು ತಿಳಿಸಿಕೊಡುವ ಮತ್ತು ಭಾರತ ಎಂದಿಗೂ ಮಾನವತೆಯ ಪರ ನಿಲ್ಲುವ ರಾಷ್ಟ್ರ ಎಂದು ಸಾಬೀತು ಮಾಡುವ ಸುಂದರ ಚಿತ್ರಣವನ್ನು ಚಿತ್ರದಲ್ಲಿ ಕಾಣಬಹುದು. ಕುಟುಂಬ ಸಮೇತ ಕೂತು ನೋಡಬೇಕಾದ ಚಿತ್ರವಿದು. Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ಪಿಪ್ಪಾ’.

LEAVE A REPLY

Connect with

Please enter your comment!
Please enter your name here