‘ಪೌಡರ್‌’ ಸಿನಿಮಾದ ‘ಪರಪಂಚವೇ ಘಮ ಘಮ’ ಸಾಂಗ್‌ ರಿಲೀಸ್‌ ಆಗಿದೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆಯ ಹಾಡಿಗೆ ಜನಪ್ರಿಯ ಗಾಯಕ ಆಂಟೋನಿ ದಾಸನ್‌ ಈ ಹಾಡಿಗೆ ದನಿಯಾಗಿದ್ದಾರೆ. ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ಈ ಸಿನಿಮಾ ಇದೇ ಆಗಸ್ಟ್‌ 15ರಂದು ತೆರೆಕಾಣಲಿದೆ.

ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ‘ಪೌಡರ್‌’ ಸಿನಿಮಾದ ‘ಪರಪಂಚವೇ ಘಮ ಘಮ’ ಸಾಂಗ್‌ ಬಿಡುಗಡೆಯಾಗಿದೆ. ಖ್ಯಾತ ಜನಪದ ಗಾಯಕ, ‘ಟಗರು ಬಂತು ಟಗರು’, ‘ಸೂರಿ ಅಣ್ಣಾ’ ಖ್ಯಾತಿಯ ಆಂಟೋನಿ ದಾಸನ್ ಈ ಹಾಡಿಗೆ ದನಿಯಾಗಿದ್ದಾರೆ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆಂಟೋನಿ ಮೊದಲ ಬಾರಿಗೆ ‘ಪೌಡರ್’ ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿದ್ದಾರೆ. ‘ಇದೊಂದು ಒಂದು ಹಾಸ್ಯಭರಿತ ಚಿತ್ರ. ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕತೆಯೇ ‘ಪೌಡರ್’. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ‘ಪೌಡರ್’ ಹಿಂದಿನ ‘ಪವರ್’ ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ.

ದಿಗಂತ್, ಧನ್ಯ ರಾಮ್‌ಕುಮಾರ್, ಅನಿರುದ್ಧ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ ಆರ್ ಜಿ ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ ವಿ ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಜೊತೆಗೂಡಿ ಸಿನಿಮಾ ನಿರ್ಮಿಸಿದ್ದಾರೆ. ಇದೇ ಆಗಸ್ಟ್ 15ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here