ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ‘ಪೌಡರ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಎರಡೂವರೆ ನಿಮಿಷಗಳ ಟ್ರೇಲರ್‌ನಲ್ಲಿ ಚಿತ್ರದಲ್ಲಿರುವ ಎಲ್ಲಾ ಪಾತ್ರಗಳ ಪರಿಚಯವೂ ಇದೆ. ಕನ್ನಡಕ್ಕೆ ಇದೊಂದು ಹೊಸ ರೀತಿಯ ಕತೆ ಎಂದು ಭಾಸವಾಗುತ್ತಿದ್ದು, ಚಿತ್ರದಲ್ಲಿ ಭರಪೂರ ಕಾಮಿಡಿ ಇರುವ ಸೂಚನೆ ಸಿಗುತ್ತದೆ.

ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಬಿಚ್ಚಿಡುವ ಕತೆ ‘ಪೌಡರ್’.‌ ಈ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ‘ಪೌಡರ್’‌ ಹಿಂದಿನ ‘ಪವರ್’‌ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ ಸಿನಿಮಾ. ನಿನ್ನೆ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಚಿತ್ರದಲ್ಲಿನ ಎಲ್ಲಾ ಪಾತ್ರಗಳ ಪರಿಚಯವಿದೆ. ಟೀಸರ್‌ನಲ್ಲೇ ಕಾಮಿಡಿ – ಥ್ರಿಲ್ಲರ್‌ ಕತೆ ಹೇಳಿದ್ದ ಸಿನಿಮಾ ಇದೀಗ ಟ್ರೇಲರ್‌ನಲ್ಲಿ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ ಎನ್ನುವುದನ್ನು ಖಾತ್ರಿ ಮಾಡಿದೆ.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಾಹಣ, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಚಿತ್ರಕ್ಕಿದೆ. ಕೆ ಆರ್ ಜಿ ಸ್ಟೂಡಿಯೋಸ್ ಮತ್ತು ಟಿ ವಿ ಎಫ್ ಮೋಷನ್ ಪಿಕ್ಚರ್ಸ್ ಚೊಚ್ಚಲ ಸಹಯೋಗವಾದ ಈ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌ ಆರ್ ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ ವಿ ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದೇ ಆಗಸ್ಟ್ 23ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here