ಅಕಾಲಿಕವಾಗಿ ಅಗಲಿದ ಚಿತ್ರನಿರ್ಮಾಪಕ ರಾಮು ನಿರ್ಮಾಣದ ಕೊನೆಯ ಸಿನಿಮಾ ‘ಅರ್ಜುನ್‌ ಗೌಡ’ ಮುಂದಿನ ವಾರ ತೆರೆಕಾಣುತ್ತಿದೆ. ಶಂಕರ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಜ್ವಲ್‌ ದೇವರಾಜ್‌ ಮತ್ತು ಪ್ರಿಯಾಂಕಾ ತಿಮ್ಮೇಶ್‌ ಅಭಿನಯಿಸಿದ್ದಾರೆ.

“ರಾಮು ಅಂಕಲ್ ನನಗೆ ಚಿತ್ರನಿರ್ಮಾಪಕರಷ್ಟೇ ಅಲ್ಲ, ನಮ್ಮ ಕುಟುಂಬದ ಸದಸ್ಯರಂತೆ ಇದ್ದವರು. ಚಿಕ್ಕವನಿರುವಾಗ ನಮ್ಮ ತಂದೆಯವರ ಜೊತೆ ನಾನು ಅವರ‌ ನಿರ್ಮಾಣದ ಚಿತ್ರಗಳ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ಸಹ ‘ಗುಲಾಮ’ ಚಿತ್ರದಿಂದ ಆರಂಭಿಸಿ ಅವರ ನಿರ್ಮಾಣದ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ‘ಅರ್ಜುನ್ ಗೌಡ’ ಆದ ಮೇಲೆ ಮತ್ತೊಂದು ಚಿತ್ರ ಆರಂಭಿಸೋಣ ಎಂದು ಹೇಳಿದ್ದರು.‌ ಅವರ ಸಾವಿನ ನೋವು ನಮಗಿದೆ. ಇದರ ನಡುವೆ ನಮ್ಮ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಆಕ್ಷನ್ ಚಿತ್ರಗಳ ನಿರ್ಮಾಣಕ್ಕೆ ಹೆಸರಾದ‌ ರಾಮು ಅವರ ಈ ಚಿತ್ರದಲ್ಲೂ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ” ಎಂದರು ನಾಯಕನಟ ಪ್ರಜ್ವಲ್ ದೇವರಾಜ್. ಈ ಸಿನಿಮಾ ರಾಮು ಫಿಲಂಸ್‌ನ 39ನೇ ಸಿನಿಮಾ.

ಚಿತ್ರದ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್‌ ಇದ್ದಾರೆ. “ಜಾಹ್ನವಿ ಎಂಬ ಪಾತ್ರ ನನ್ನದು. ನಾಯಕನಿಗೆ ಉತ್ತಮ ಗೆಳತಿ. ಆತನನ್ನು ತುಂಬಾ ಪ್ರೀತಿಸುವ ಯುವತಿ.‌ ಪ್ರೀತಿ ಮೂಡಿದ ನಂತರ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು. ‌ಚಿತ್ರ ಬಿಡುಗಡೆಗೆ ಕಾತುರದಲ್ಲಿದ್ದೇನೆ” ಎಂದರು ಪ್ರಿಯಾಂಕಾ. ಚಿತ್ರದ ನಿರ್ದೇಶಕ ಶಂಕರ್‌ ಮಾತನಾಡಿ, “ಇದೊಂದು ಕುಟುಂಬ ಸಮೇತ ನೋಡಬಹುದಾದ ಆಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಲ್ಲಿ ಮನಸೂರೆಗೊಳ್ಳುವ ಸಾಹಸ ಸನ್ನಿವೇಶಗಳಿದೆ. ‘ಅರ್ಜುನ್ ಗೌಡ’ ನೇರ ಸ್ವಭಾವದ ವ್ಯಕ್ತಿ. ಸಮಾಜದಲ್ಲಿನ ಕೆಲವು ತೊಡಕುಗಳನ್ನು ಸರಿಪಡಿಸಲು ಹೋರಾಡಲು ಸದಾ ಸಿದ್ದವಿರುವಾತ. ಬರೀ ಮನೋರಂಜನೆ ಅಷ್ಟೇ ಅಲ್ಲ. ಈ ಚಿತ್ರದಲ್ಲಿ ಯುವಜನತೆಗೆ ಒಂದು ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ” ಎಂದರು ನಿರ್ದೇಶಕ ಶಂಕರ್‌. ಧರ್ಮವಿಶ್‌ ಸಂಗೀತ ಸಂಯೋಜನೆ, ಜೈ ಆನಂದ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ ಚಿತ್ರಕ್ಕಿದೆ.

Previous articleಕಾಲಿವುಡ್‌ – 2021 ರೌಂಡ್‌ಅಪ್‌; OTT ಪ್ಲಾಟ್‌ಫಾರ್ಮ್‌ಗೆ ಭದ್ರ ಬುನಾದಿ
Next articleವಿಡಿಯೋ ಆಲ್ಬಂ | ರಾಜ್‌ ಶೆಟ್ಟಿ ಅಭಿನಯದ ‘ALLA ನವೀನಾ’; ದುನಿಯಾ ವಿಜಯ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here