ನಾಗಾರ್ಜುನ್‌ ಶರ್ಮಾ ಗೀತೆ ರಚಿಸಿ ನಿರ್ದೇಶಿಸಿರುವ ‘ALLA ನವೀನಾ’ ವೀಡಿಯೋ ಸಾಂಗ್‌ ರಿಲೀಸ್‌ ಆಗಿದೆ. ಖ್ಯಾತ ಗಾಯಕ ಆಂಥೋನಿ ದಾಸನ್‌ ಹಾಡಿರುವ ಗೀತೆಗೆ ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ಮತ್ತು ಅಥರ್ವ ಹೆಜ್ಜೆ ಹಾಕಿದ್ದಾರೆ.

ಮಾತಿನ ಮಧ್ಯೆ ‘ALLA ಹೀಗೇಕೆ, ALLA ನೀನೇನು ಮಾಡಿದೆ’ ಹೀಗೆ ‘ಅಲ್ಲಾ’ ಪದವನ್ನು ಬಳಸುವುದಿದೆ. ಇದನ್ನೇ ಶೀರ್ಷಿಕೆಯಾಗಿಸಿ ಯುವ ಪ್ರತಿಭೆಗಳ ತಂಡವೊಂದು ‘ALLA ನವೀನಾ’ ಎನ್ನುವ ನಾಲ್ಕು ನಿಮಿಷದ ವಿಡಿಯೋ ಆಲ್ಬಂ ಸಿದ್ದಪಡಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’, ‘ಸಲಗ’ ಚಿತ್ರಗಳಿಗೆ ಹಾಡುಗಳನ್ನು ಬರೆದಿರುವ ನಾಗಾರ್ಜುನ್‌ ಶರ್ಮಾ ಸಾಹಿತ್ಯ ಬರೆದು ಆಲ್ಬಂ ನಿರ್ದೇಶಿಸಿದ್ದಾರೆ. ಆಲ್ಬಂ ಬಿಡುಗಡೆ ಮಾಡಿ ಮಾತನಾಡಿದ ನಟ ದುನಿಯಾ ವಿಜಯ್‌, “ಮುಂದೆ ನಾಗಾರ್ಜುನ್ ಶರ್ಮಾ ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳು ಇವೆ. ‘ಬೇಕಾ ಪ್ರೀತಿ ಬೇಡ್ವಾ’ ಗೀತೆ ನೋಡಲು, ಕೇಳಲು ತುಂಬಾ ಚೆನ್ನಾಗಿದೆ. ಸಿನಿಮಾಗೆ ಬಂದ ಹೊಸದರಲ್ಲಿ ನಾನು ಸರ್ಕಸ್ ಹೊಡೀಬೇಕಾದಾಗ ಇಂತಹ ಯಾವುದು ಗೊತ್ತಿರಲಿಲ್ಲ. ಈಗ ಹಾಗಲ್ಲ, ನಾವು ಒಂದು ಹಾಡಿನ ಮೂಲಕ ನಮ್ಮ ಪ್ರತಿಭೆ ತೋರಿಸಬಹುದು. ‌ನಮ್ಮ ಪ್ರತಿಭೆ ಸಾಬೀತು ಪಡಿಸಲು ಹಾಡು, ಕಿರುಚಿತ್ರ ಹೀಗೆ ಅನೇಕ ದಾರಿಗಳಿವೆ. ಪತ್ರಿಕೆ, ದೃಶ್ಯ ಮಾದ್ಯಮಗಳಿಂದ ಪ್ರೋತ್ಸಾಹವೂ ಸಿಗುತ್ತದೆ. ಇದೇ ರೀತಿ ಮುಂದುವರೆಯಲಿ” ಎಂದು ಯುವ ತಂಡಕ್ಕೆ ಶುಭ ಹಾರೈಸಿದರು.

ತಮ್ಮ ಚೊಚ್ಚಲ ನಿರ್ದೇಶನದ ವೀಡಿಯೋ ಆಲ್ಬಂ ಕುರಿತು ಮಾಹಿತಿ ನೀಡಿದ ನಿರ್ದೇಶಕ ನಾಗಾರ್ಜುನ ಶರ್ಮಾ, “ನಾವು ಹೆಚ್ಚು ಬಳಸುವ ಪದವನ್ನು ತೆಗೆದುಕೊಂಡು ಹಾಡು ಮಾಡಿದ್ದೇವೆ. ಹಾಡಿನಲ್ಲಿ ಹಾಸ್ಯದ ಜೊತೆ ವಿಷಾದವೂ ಇದೆ. ನೋಡುವವರಿಗೆ ಬೇಜಾರು ಮಾಡದೆ, ನಗಿಸಿಕೊಂಡು ತತ್ವಗಳನ್ನು ಹೇಳಲು ಪ್ರಯತ್ನಿಸಿದ್ದೇವೆ. ಇಂದಿನ ಯುವ ಜನಾಂಗಕ್ಕೆ ಬುದ್ದಿವಾದ ಹೇಳುವ ಪಾತ್ರದಲ್ಲಿ ರಾಜ್.ಬಿ.ಶೆಟ್ಟಿ ಚೆನ್ನಾಗಿ ನಟಿಸುವ ಜತೆಗೆ ಹೆಜ್ಜೆ ಹಾಕಿದ್ದಾರೆ. ಅಭಿನಯ ತರಂಗ ವಿದ್ಯಾರ್ಥಿ ಅಥರ್ವ ನಾಯಕನಾಗಿ, ಅವರೊಂದಿಗೆ ಸ್ಪೂರ್ತಿ ಉಡಿಮನೆ ಕಾಣಿಸಿಕೊಂಡಿದ್ದಾರೆ. ಮಾಡ್ರನ್ ಯುಗದಲ್ಲಿ ಲವ್ ಯಾವ ತರಹ ಇರುತ್ತದೆ ಎಂಬುದನ್ನು ತೋರಿಸಿದ್ದೇವೆ” ಎಂದರು. ಖ್ಯಾತ ಗಾಯಕ ಆಂಥೋನಿ ದಾಸನ್‌ ಹಾಡಿಗೆ ದನಿಯಾಗಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಹಾಡು ಮೂಡಿಬಂದಿದ್ದು ಕನ್ನಡದಲ್ಲಿ ಪರಂವಾ ಸ್ಟುಡಿಯೋದವರು ಬಿಡುಗಡೆ ಮಾಡಿದ್ದಾರೆ. ತಮಿಳಿನಲ್ಲಿ ಐರಾ ಮ್ಯೂಸಿಕ್ ಸಂಸ್ಥೆಯುವರು ಹಕ್ಕು ಪಡೆದಿದ್ದಾರೆ. ಆನಂದ್‌ ರಾಜ್‌ ವಿಕ್ರಂ ಸಂಗೀತ ನಿರ್ದೇಶನ, ವಿಶ್ವಾಸ್ ಛಾಯಾಗ್ರಹಣ, ಮುರುಗ ನೃತ್ಯ ಸಂಯೋಜನೆ ಮಾಡಿದ್ದಾರೆ. ಹೆಸರುಘಟ್ಟ ಬಳಿ ಇರುವ ಕಸಿಪು ಲಾಂಜ್‌ದಲ್ಲಿ ಚಿತ್ರೀಕರಣ ನಡೆಸಲಾಗಿದೆ.

LEAVE A REPLY

Connect with

Please enter your comment!
Please enter your name here