ಪ್ರಕಾಶ್ ಝಾ ನಿರ್ದೇಶನದ ‘ಆಶ್ರಮ್‌’ ವೆಬ್ ಸರಣಿ ಶೂಟಿಂಗ್ ಸೆಟ್‌ ಮೇಲೆ ನಿನ್ನೆ ದಾಳಿ ನಡೆದಿದೆ. ಸರಣಿಯ ಶೀರ್ಷಿಕೆ ಬದಲಿಸುವಂತೆ ಒತ್ತಾಯ ಮಾಡಿದ ದಾಳಿಕೋರರು ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿದಿದ್ದಾರೆ.

ಭೋಪಾಲ್‌ನ ಹಳೆಯ ಜೈಲಿನ ಆವರಣದಲ್ಲಿ ನಿನ್ನೆ ‘ಆಶ್ರಮ್‌’ ವೆಬ್ ಸರಣಿ ಶೂಟಿಂಗ್ ನಡೆದಿತ್ತು. ಆಗ ಭಜರಂಗದಳ ಕಾರ್ಯಕರ್ತರು ಸೆಟ್‌ ಮೇಲೆ ದಾಳಿ ನಡೆಸಿ ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬೆಳದಿದ್ದಾರೆ. ಸೆಟ್‌ನಲ್ಲಿದ್ದ ಪರಿಕರಗಳನ್ನು ಧ್ವಂಸಗೊಳಿಸಿರುವ ದಾಳಿಕೋರರು ಕೆಲವು ತಂತ್ರಜ್ಞರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಕೋರರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ನಟ ಬಾಬ್ಬಿ ಡಿಯೋಲ್‌ಗಾಗಿ ಹುಡುಕಾಟ ನಡೆಸಿದರು ಎನ್ನಲಾಗಿದೆ. ವೆಬ್ ಸರಣಿಯ ಶೀರ್ಷಿಕೆ ಬದಲಿಸುವಂತೆ ನಿರ್ದೇಶಕರಿಗೆ ಒತ್ತಾಯ ಮಾಡಿದ್ದಾರೆ.

ಖ್ಯಾತ ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ ನಿರ್ಮಾಣ, ನಿರ್ದೇಶನದಲ್ಲಿ ‘ಆಶ್ರಮ್‌’ ಕ್ರೈಂ-ಡ್ರಾಮಾ ಸರಣಿ ತಯಾರಾಗುತ್ತಿದೆ. ಬಾಬ್ಬಿ ಡಿಯೋಲ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಅದಿತಿ ಪೊಹಾಂಕರ್‌, ದರ್ಶನ್ ಕುಮಾರ್‌, ಚಂದನ್ ರಾಯ್‌ ಸನ್ಯಾಲ್‌, ತುಷಾರ್ ಪಾಂಡೆ ಇತರರು ನಟಿಸುತ್ತಿದ್ದಾರೆ. ಸರಣಿಯ ಮೊದಲ ಸೀಸನ್‌ ಎಂಎಕ್ಸ್ ಪ್ಲೇಯರ್ OTT ಪ್ಲಾಟ್‌ಫಾರ್ಮ್‌ನಲ್ಲಿ 2020ರ ಆಗಸ್ಟ್‌ 28ರಂದು ಸ್ಟ್ರೀಮ್ ಆಗಿತ್ತು. ಎರಡನೇ ಸೀಸನ್‌ 2020ರ ನವೆಂಬರ್‌ 11ರಂದು ಸ್ಟ್ರೀಮ್‌ ಆಗಿತ್ತು. ಇದೀಗ ಮೂರನೇ ಸೀಸನ್‌ಗಾಗಿ ನಡೆಯುತ್ತಿದ್ದ ಚಿತ್ರೀಕರಣದ ಸೆಟ್‌ ಮೇಲೆ ದಾಳಿಯಾಗಿದೆ. “ನಾವು ನಟ ಬಾಬ್ಬಿ ಡಿಯೋಲ್‌ಗಾಗಿ ಹುಡುಕಾಟ ನಡೆಸಿದ್ದೇವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವಂತಹ ಪಾತ್ರದಲ್ಲಿ ಆತ ನಟಿಸುತ್ತಿದ್ದಾರೆ. ಅವರ ಹಿರಿಯ ಸಹೋದರ ಸನ್ನಿ ಡಿಯೋಲ್‌ ದೇಶಭಕ್ತಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಾಬ್ಬಿ ಅವರನ್ನು ನೋಡಿ ಕಲಿಯಬೇಕು. ಸರಣಿಯ ಶೀರ್ಷಿಕೆ ಬದಲಿಸುವವರೆಗೂ ನಾವು ಹೋರಾಟ ಬಿಡುವುದಿಲ್ಲ” ಎಂದಿದ್ದಾರೆ ದಾಳಿಕೋರರು. ಹಾನಿ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here