ಪ್ರವೀಣ್ ತೇಜ್ ನಟನೆಯ ‘ಜಿಗರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಭೂಗತ ಜಗತ್ತಿನ ಹಿನ್ನೆಲೆಯ ಆಕ್ಷನ್ – ಲವ್ ಕತೆ ಹೇಳಿದ್ದಾರೆ ನಿರ್ದೇಶಕ ಸೂರಿ ಕುಂದರ್. ವಿಜಯಶ್ರೀ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಯಶ್ ಶೆಟ್ಟಿ ಇದ್ದಾರೆ. ಜುಲೈ 5ರಂದು ಸಿನಿಮಾ ತೆರೆಕಾಣಲಿದೆ.
‘ಪ್ರೇಮಕಥೆಗಳಿಗೆ ಸೀಮಿತನಾಗಿದ್ದ ನನ್ನನ್ನು ನಿರ್ದೇಶಕರು ಈ ಚಿತ್ರದ ಮೂಲಕ ಆಕ್ಷನ್ ಹೀರೋ ಮಾಡಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ಶಿಪ್ನಲ್ಲಿ ಭಾಗಿಯಾಗುತ್ತಾನೆ. ಆ ಮೂಲಕ ಭೂಗತಲೋಕಕ್ಕೆ ಕಾಲಿಡುತ್ತಾನೆ. ಅಲ್ಲಿ ಮೂರು ನಾಲ್ಕು ಸಂಘಗಳಿರುತ್ತದೆ. ಸಂಘಗಳ ನಡುವೆ ಸಂಘರ್ಷವೂ ಇರುತ್ತದೆ. ಇದು ಚಿತ್ರದ ಪ್ರಮುಖ ಕಥಾಹಂದರ. ಇದರೊಟ್ಟಿಗೆ ಲವ್, ಆಕ್ಷನ್, ಕಾಮಿಡಿ ಕೂಡ ನಮ್ಮ ಚಿತ್ರದಲ್ಲಿದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ನಟ ಪ್ರವೀಣ್ ತೇಜ್. ಟ್ರೇಲರ್ ಕೂಡ ಅವರ ಮಾತಿಗೆ ಸಾಕ್ಷ್ಯ ನುಡಿಯುತ್ತದೆ.
ಒಂದೂವರೆ ದಶಕಗಳ ಕಾಲ ಸ್ಯಾಂಡಲ್ವುಡ್ನ ಹಲವು ಚಿತ್ರನಿರ್ದೇಶಕರ ಜೊತೆ ಕೆಲಸ ಮಾಡಿರುವ ಸೂರಿ ಕುಂದರ್ ಅವರಿಗೆ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. ‘ಜಿಗರ್ ಎಂದರೆ ಎರಡು ಗುಂಡಿಗೆಯವನು ಎಂದರ್ಥ. ಸಾಮಾನ್ಯ ಯುವಕನೊಬ್ಬ ತನ್ನ ಸ್ವಾಭಿಮಾನ ಮತ್ತು ಪ್ರೀತಿಗಾಗಿ ಸಿಡಿದೇಳುವ ಕತೆಯಿದು’ ಎನ್ನುತ್ತಾರೆ ನಿರ್ದೇಶಕರು. ಮಲ್ಪೆ, ಉಡುಪಿ, ಕುಂದಾಪುರದಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ಪೂಜಾ ವಸಂತಕುಮಾರ್ ನಿರ್ಮಾಣದ ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ, ಗಣೇಶ್ ಗೀತರಚನೆ, ಶಿವಸೇನ ಚಾಯಾಗ್ರಹಣವಿದೆ.