ಬಾಲಿವುಡ್‌ ನಟಿ ಪ್ರೀತಿ ಝಿಂಟಾ ನೂತನ ಬಾಲಿವುಡ್‌ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅಮೀರ್‌ ಖಾನ್‌ ನಿರ್ಮಾಣದ ಸಿನಿಮಾದಲ್ಲಿ ನಟ ಸನ್ನಿ ಡಿಯೋಲ್‌ ಜತೆ ಪ್ರೀತಿ ಝಿಂಟಾ ಅಭಿನಯಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಡಿಂಪಲ್‌ ಸುಂದರಿ ಎಂದೇ ಖ್ಯಾತರಾಗಿದ್ದ ನಟಿ ಪ್ರೀತಿ ಝಿಂಟಾ. ತಮ್ಮ ಅಭಿನಯದಿಂದಲೇ ಅಭಿಮಾನಿಗಳ ಮನಸ್ಸು ಕದ್ದಿದ್ದ ಈ ಚೆಲುವೆ ವಿವಾಹವಾಗಿ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದರು. ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದ ಸಹ ಮಾಲೀಕರಾಗಿರುವ ಪ್ರೀತಿ ಐಪಿಎಲ್‌ ಸೀಸನ್‌ನಲ್ಲಿ ಪಂದ್ಯಗಳಿದ್ದಾಗ ಭಾರತಕ್ಕೆ ಬಂದು ಹೋಗುತ್ತಿರುತ್ತಾರೆ. ವಿವಾಹವಾದ ನಂತರ ಪ್ರೀತಿ ತುಂಬಾ ಸಮಯ ಬಾಲಿವುಡ್‌ನಿಂದ ದೂರ ಇದ್ದರು. 2018ರಲ್ಲಿ ‘ಭಯ್ಯಾಜಿ ಸೂಪರ್‌ ಹಿಟ್‌’ ಸಿನಿಮಾದ ಮೂಲಕ ನಾಯಕಿಯಾಗಿ ಕಮ್‌ಬ್ಯಾಕ್‌ ಮಾಡಿದ್ದರು. ಆದರೆ, ಆಗ ಅದೃಷ್ಟ ಕೈ ಹಿಡಿಯಲಿಲ್ಲ. ಹೀಗಾಗಿ ಪ್ರೀತಿ ಗಂಡ, ಮನೆ-ಮಕ್ಕಳ ಜವಾಬ್ದಾರಿ ಜೊತೆಗೆ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದರು.

6 ವರ್ಷಗಳ ಗ್ಯಾಪ್‌ ಬಳಿ ಪ್ರೀತಿ ಮತ್ತೆ ಬೆಳ್ಳಿತೆರೆಗೆ ಮರಳಲಿದ್ದಾರೆ. ಹೌದು, ಅಮೀರ್‌ ಖಾನ್‌ ನಿರ್ಮಾಣ ಮಾಡುತ್ತಿರುವ ‘ಲಾಹೋರ್‌ 1947’ ಸಿನಿಮಾದಲ್ಲಿ ಪ್ರೀತಿ ಅಭಿನಯಿಸುತ್ತಿದ್ದಾರೆ. ರಾಜ್‌ಕುಮಾರ್‌ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ಸಮಯದ ಹಿಂದೆ ಈ ಸಿನಿಮಾ ಅನೌನ್ಸ್‌ ಆಗಿ, ಪೋಸ್ಟರ್‌ ಸಹ ರಿಲೀಸ್‌ ಆಗಿತ್ತು. ಈಗ ಈ ಚಿತ್ರದ ಶೂಟಿಂಗ್‌ ಆರಂಭವಾಗಿದೆ. ಐಪಿಎಲ್‌ ಪಂದ್ಯಗಳ ನಡುವೆಯೇ ಪ್ರೀತಿ ಚಿತ್ರೀಕರಣದ ಸೆಟ್‌ ಸೇರಿಕೊಂಡಿದ್ದಾರೆ. ಶೂಟಿಂಗ್‌ ಸೆಟ್‌ನಲ್ಲಿ ತೆಗೆದ ಕೆಲವು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಹಾಗೂ ಸನ್ನಿ ಡಿಯೋಲ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ಈ ಹಿಂದೆ ಈ ಜೋಡಿ ‘ಹೀರೋ: ಲವ್ ಸ್ಟೋರಿ ಆಫ್ ಸ್ಪೈ’, ‘ಫರ್ಜ್’​ ಮತ್ತು ‘ಭಯ್ಯಾಜಿ ಸೂಪರ್​ಹಿಟ್’ ಸಿನಿಮಾಗಳಲ್ಲಿ ನಟಿಸಿತ್ತು. 2018ರಲ್ಲಿ ‘ಭಯ್ಯಾಜಿ ಸೂಪರ್​ಹಿಟ್’ ತೆರೆಕಂಡ ನಂತರ ಪ್ರೀತಿ ಬಣ್ಣದ ಲೋಕದಿಂದ ದೂರ ಇದ್ದರು. 6 ವರ್ಷಗಳ ಅಂತರದ ನಂತರ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಶಬಾನಾ ಅಜ್ಮಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಜಾವೇದ್‌ ಅಖ್ತರ್‌ ಅವರ ಸಾಹಿತ್ಯಕ್ಕೆ ಎ ಆರ್‌ ರೆಹಮಾನ್‌ ಅವರ ಸಂಗೀತ ಸಂಯೋಜನೆ ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here