‘ಆಡುಜೀವಿತಂ’ ನೈಜ ಘಟನೆಯನ್ನು ಆಧರಿಸಿದ ಆಧುನಿಕ ಗುಲಾಮಗಿರಿಯನ್ನು ಪರಿಶೋಧಿಸುವ ಕಥಾನಕ. ಬ್ಲೆಸ್ಸೀ ನಿರ್ದೇಶನದಲ್ಲಿ ಪೃಥ್ವಿರಾಜ್ ನಟಿಸಿರುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಈ realistic survival drama ನಿರೀಕ್ಷೆ ಹೆಚ್ಚಿಸಿದೆ.
ಬೆನ್ಯಮಿನ್ ರಚನೆಯ ಜನಪ್ರಿಯ ಕೃತಿ ‘The Goat Life’ ಆಧರಿಸಿ ಸಿದ್ಧವಾಗಿರುವ ಸಿನಿಮಾ ‘ಆಡುಜೀವಿತಂ’. ಬ್ಲೆಸ್ಸೀ ನಿರ್ದೇಶನದಲ್ಲಿ ಪೃಥ್ವಿರಾಜ್ ನಟಿಸಿರುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಟ್ರೈಲರ್ ಪ್ರತೀ ದೃಶ್ಯಗಳಲ್ಲಿ ಶೃದ್ಧೆ – ಪ್ರಾಮಾಣಿಕ ಪ್ರಯತ್ನ ಕಾಣಿಸುತ್ತದೆ. ತನ್ನ ಕುಟುಂಬ ಮತ್ತು ಹಳ್ಳಿಯನ್ನು ತೊರೆದು ಕೆಲಸ ಹುಡುಕುವ ಕೇರಳದ ವಲಸೆ ಕಾರ್ಮಿಕ ನಜೀಬನ (ಪೃಥ್ವಿರಾಜ್) ಕತೆ. ಜೀವನೋಪಾಯಕ್ಕಾಗಿ ಅವನು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಮೇಕೆಗಳನ್ನು ಮೇಯಿಸುತ್ತಾನೆ. ಅಲ್ಲಿ ಅವನಿಗೆ ಜೀನ್ ಲೂಯಿಸ್, ಇಬ್ರಾಹಿಂದ ಜೊತೆಯಾಗುತ್ತಾರೆ. ಈ ಪಾತ್ರಕ್ಕಾಗಿ ಪೃಥ್ವಿರಾಜ್ 24 ಕೆಜಿ ತೂಕ ಇಳಿಸಿಕೊಂಡಿದ್ದು, ಪಾತ್ರದ ಔಚಿತ್ಯ ಅರಿತು ಅಭಿನಯಿಸಿದ್ದಾರೆ.
ಚಿತ್ರವು ಅಲ್ಜೀರಿಯಾ, ಜೊರ್ಡಾನ್ ಮತ್ತು ಭಾರತದಲ್ಲಿ ಚಿತ್ರೀಕರಣಗೊಂಡಿದೆ. ನಟ ಪೃಥ್ವಿರಾಜ್, ಚಿತ್ರದ ಸೆಟ್‌ಗಳಿಂದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, “ಹಲವು ವರ್ಷಗಳು, ಸಾವಿರ ಅಡೆತಡೆಗಳು, ಒಂದು ಮಿಲಿಯನ್ ಸವಾಲುಗಳು, ಒಂದು ಸಾಂಕ್ರಾಮಿಕದ ಮೂರು ಅಲೆಗಳು, ಒಂದು ಅದ್ಭುತ ದೃಷ್ಟಿ” ಎಂದು ಬರೆದಿದ್ದಾರೆ. ಚಿತ್ರದ ನಿರ್ಮಾಣಕ್ಕೆ covid-19 ಏಕಾಏಕಿ ಅಡ್ಡಿಯಾಗಿತ್ತು. ಕೋವಿಡ್ ವಿಶ್ವವ್ಯಾಪಿ ಹರಡಿ ಲಾಕ್‌ಡೌನ್ ಆಗುತ್ತಿದಂತೆ ಕಲಾವಿದರು ವಿದೇಶದಲ್ಲಿ ಸಂಕಷ್ಟ ಅನುಭವಿಸಿದರು. ಅವರು ಮಾತೃಭೂಮಿಗೆ ಮರಳಲು ಎಲ್ಲಾ ಮಾರ್ಗಗಳು ಬಂದಾಗಿದ್ದವು. 2020ರಲ್ಲಿ ಪೃಥ್ವಿರಾಜ್ ಹಾಗೂ ಸಿಬ್ಬಂದಿ ಭಾರತ ಸರ್ಕಾರವು ಆಯೋಜಿಸಿದ್ದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳಿದ್ದರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಬ್ಲೆಸ್ಸೀ, “ಕೇವಲ ಇದು ಚಲನಚಿತ್ರವಲ್ಲ. ಒಂದು ನೈಜ ಕತೆಯೆಂದು ತಿಳಿಸಲು ಇಚ್ಚಿಸುತ್ತೇನೆ” ಎನ್ನುತ್ತಾರೆ. ಅಮಲಾ ಪೌಲ್ ಚಿತ್ರದ ನಾಯಕಿಯಾಗಿ ನಟಿಸಿದ್ದು, ಮ್ಯೂಸಿಕಲ್ ಸೆನ್ಸೇಷನ್ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.