‘ಬಿಸ್ಕೆಟ್‌ ಕಿಂಗ್‌’ ಎಂದೇ ಕರೆಸಿಕೊಂಡಿದ್ದ ರಾಜನ್ ಪಿಳ್ಳೈ ಬದುಕು ಹಿಂದಿ ವೆಬ್ ಸರಣಿಯಾಗಿ ಮೂಡಿಬರಲಿದೆ. ಮಲಯಾಳಂ ನಟ ಪೃಥ್ವಿರಾಜ್‌ ಸರಣಿಯ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಇದು ಅವರ ಮೊದಲ ಹಿಂದಿ ಪ್ರಾಜೆಕ್ಟ್‌.

ಮಲಯಾಳಂ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ ಹಿಂದಿ ವೆಬ್‌ ಸರಣಿಯಲ್ಲಿ ನಟಿಸಿ, ನಿರ್ದೇಶಿಸಲಿದ್ದಾರೆ. ‘ಬಿಸ್ಕೆಟ್‌ ಕಿಂಗ್‌’ ಎಂದೇ ಕರೆಸಿಕೊಂಡಿದ್ದ ರಾಜನ್ ಪಿಳ್ಳೈ ಬದುಕಿನ ಕತೆಯನ್ನು ಪೃಥ್ವಿರಾಜ್‌ ವೆಬ್‌ ಸರಣಿಗೆ ಅಳವಡಿಸುತ್ತಿದ್ದಾರೆ. ಸರಣಿ ನಿರ್ಮಿಸುತ್ತಿರುವ ಯೋಡ್ಲಿ ಫಿಲ್ಮ್ಸ್‌ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಅಧಿಕೃತವಾಗಿ ಪ್ರಾಜೆಕ್ಟ್‌ ಘೋಷಿಸಿದ್ದು ಫಸ್ಟ್‌ಲುಕ್‌ ಟ್ವೀಟ್ ಮಾಡಿದೆ. ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಪೃಥ್ವಿರಾಜ್‌ ಹೆಲಿಕಾಪ್ಟರ್‌ನೊಳಗೆ ಕುಳಿತಿರುವಂತೆ ತೋರುತ್ತದೆ.

ಬ್ಯುಸಿನೆಸ್‌ಮ್ಯಾನ್‌ ರಾಜನ್ ಪಿಳ್ಳೈ ಬ್ರಿಟಾನಿಯಾ ಇಂಡಸ್ಟ್ರೀಸ್‌ನಲ್ಲಿ ಶೇರ್ ಹೋಲ್ಡರ್ ಆಗಿದ್ದರು. 70ರ ದಶಕದ ಮಧ್ಯ ಭಾಗದಲ್ಲಿ ಸಿಂಗಾಪೂರ್‌ನಲ್ಲಿ ನೆಲೆಸಿದ್ದ ಅವರು ಅಲ್ಲಿಂದಲೇ ವ್ಯವಹಾರ ಹ್ಯಾಂಡಲ್‌ ಮಾಡುತ್ತಿದ್ದರು. ನಬಿಸ್ಕೊ, ಹಂಟ್ಲೇ ಅಂಡ್‌ ಪಾಮರ್‌, ಬ್ರಿಟಾನಿಯಾ ಸೇರಿದಂತೆ ಇತರೆ ಕಂಪನಿಗಳಲ್ಲಿ ಅವರ ಶೇರ್‌ಗಳಿದ್ದವು. 1993ರಲ್ಲಿ ಸಿಂಗಾಪೂರದ ಕಮರ್ಷಿಯಲ್ ಅಫೇರ್ಸ್ ಡಿಪಾರ್ಟ್‌ಮೆಂಟ್‌ ಅವರನ್ನು ತನಿಖೆಗೊಳಪಡಿಸಿತು. 1995ರ ಜುಲೈ 4ರಂದು ದಿಲ್ಲಿಯಲ್ಲಿ ಭಾರತೀಯ ಪೊಲೀಸರು ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕರೆದೊಯ್ದರು. ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಅವಕಾಶ ಕೋರಿ ರಾಜನ್ ಪಿಳ್ಳೈ ಸಲ್ಲಿಸಿದ್ದ ಮನವಿಗೆ ಸ್ಪಂದನೆ ಸಿಗಲಿಲ್ಲ. ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದ ಅವರು ಮರುದಿನವೇ ಅಸುನೀಗಿದರು. ರಾಜನ್ ಪಿಳ್ಳೈ ಬದುಕಿನ ಏರಿಳಿತಗಳ ಕತೆ ವೆಬ್‌ ಸರಣಿಯಲ್ಲಿ ಅನಾವರಣಗೊಳ್ಳಲಿದೆ.

LEAVE A REPLY

Connect with

Please enter your comment!
Please enter your name here