ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೊನಾಸ್‌ ದಂಪತಿ ಪೋಷಕರಾಗಿದ್ದಾರೆ. ಸರೋಗೆಸಿ ಮೂಲಕ ಮಗು ಪಡೆದಿರುವ ಸುದ್ದಿಯನ್ನು ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದು ತಮಗೆ ವಿಶೇಷ ಸಮಯ ಎಂದು ಸಂಭ್ರಮಿಸಿದ್ದಾರೆ.

ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ ನಟಿ ಪ್ರಿಯಾಂಕಾ ಕೆಲವು ವರ್ಷಗಳಿಂದ ಹಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2018ರಲ್ಲಿ ಅವರು ಅಮೆರಿಕದ ನಟ, ಗಾಯಕ ನಿಕ್‌ ಜೊನಾಸ್‌ರನ್ನು ವರಿಸಿದ್ದರು. ಕಳೆದ ರಾತ್ರಿ ತಮ್ಮ ಮೊದಲ ಮಗುವಿನ ಕುರಿತು ಅವರು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸರೊಗೆಸಿ ಮೂಲಕ ಅವರು ಮಗುವನ್ನು ಬರಮಾಡಿಕೊಂಡಿದ್ದು ಈ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. “ನಾವು ಸರೋಗೆಸಿ ಮೂಲಕ ಮಗುವಿನ ಪೋಷಕರಾಗಿದ್ದು, ಇದು ಖುಷಿಯನ್ನು ಹೆಚ್ಚಿಸಿದೆ. ಈ ವಿಶೇಷ ಸಂದರ್ಭದಲ್ಲಿ ಫ್ಯಾಮಿಲಿ ಕುರಿತು ಫೋಕಸ್‌ ಮಾಡಲು ನಾವು ಏಕಾಂತ ಬೇಡುತ್ತಿದ್ದೇವೆ, ಧನ್ಯವಾದ” ಎಂದು ಪ್ರಿಯಾಂಕಾ ಮತ್ತು ನಿಕ್‌ ಜೊನಾಸ್‌ ಸಂದೇಶ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಒಪ್ರಾಹ್‌ ವಿನ್‌ಫ್ರೇ ಅವರು ಪ್ರಿಯಾಂಕಾ ಚೋಪ್ರಾರನ್ನು ಸಂದರ್ಶಿಸಿದ್ದರು. ಆಗ ಫ್ಯಾಮಿಲಿ ಆರಂಭಿಸುವ ಕುರಿತು ಒಪ್ರಾಹ್‌ ಪ್ರಶ್ನಿಸಿದಾಗ ಪ್ರಿಯಾಂಕಾ, “ದೇವರಲ್ಲಿ ಅಭಿಲಾಷೆಯನ್ನು ಹೇಳಿಕೊಳ್ಳುವವರ ಪಟ್ಟಿಯಲ್ಲಿ ನಾನಿಲ್ಲ. ಸರಿಯಾದ ಸಮಯದಲ್ಲಿ ನಮಗೆ ಅಗತ್ಯವೆನಿಸಿದರೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ” ಎಂದಿದ್ದರು. ಮತ್ತೊಮ್ಮೆ ವ್ಯಾನಿಟಿ ಫೇರ್‌ ಸಂದರ್ಶನದಲ್ಲಿ, “ಮುಂದಿನ ನಮ್ಮ ಭವಿಷ್ಯ ಖುಷಿಖುಷಿಯಾಗಿರಲು ಮಕ್ಕಳು ಅವಶ್ಯ. ದೇವರ ದಯೆಯಿಂದ ಅದು ಕೈಗೂಡಲಿ. ತಾಯಿಯಾದರೆ ವೃತ್ತಿಬದುಕಿಗೆ ಹಿನ್ನೆಡೆಯಾಗುತ್ತದೆ ಎನ್ನುವ ಬಗ್ಗೆ ಆತಂಕವಿಲ್ಲ. ನಾನು ಮತ್ತು ನಿಕ್‌ ಆ ತ್ಯಾಗಕ್ಕೆ ಸಿದ್ಧರಿದ್ದೇವೆ” ಎಂದಿದ್ದರು.

LEAVE A REPLY

Connect with

Please enter your comment!
Please enter your name here