ಲೋಹಿತ್ ಎಚ್ ನಿರ್ದೇಶನದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿರುವ ನೂತನ ಹಾರರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಿಯಾಂಕಾ ಅವರಿಗೆ ಲೋಹಿತ್ ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿನಿಮಾದ ಶೀರ್ಷಿಕೆ ರಿವೀಲ್ ಆಗಲಿದೆ.
ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಲೋಹಿತ್ H ಅವರೊಂದಿಗೆ ಪ್ರಿಯಾಂಕಾರ ಮೂರನೇ ಸಿನಿಮಾ ಇದು. ಈ ಹಿಂದೆ ‘ದೇವಕಿ’, ‘ಮಮ್ಮಿ’ ಸಿನಿಮಾಗಳನ್ನು ಮಾಡಿದ್ದರು. ಸದ್ದಿಲ್ಲದೇ ಶುರುವಾಗಿದ್ದ ಈ ಚಿತ್ರದ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪ್ರಿಯಾಂಕಾ ಅವರ ಮುಖದಲ್ಲಿ ರಕ್ತ ಅಂಟಿಕೊಂಡಿದ್ದು, ಅವರು ತೀಕ್ಷ್ಣ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಕುತೂಹಲ ಹುಟ್ಟಿಸುವಂತಿದೆ. ಲೋಹಿತ್ ಅವರು ‘ಸಿಸಿಟಿವಿ ವೀವ್ ಪಾಯಿಂಟ್’ ಎಂದು ಈ ಸಿನಿಮಾವನ್ನು ಕರೆದಿದ್ದು, ‘ಒಂದು ಸಿಸಿಟಿವಿ ನೋಟ ಹೇಗೆಲ್ಲ ಇರುತ್ತದೆಯೋ ಅದೇ ರೀತಿಯಲ್ಲಿಯೇ ಸಿನಿಮಾ ಪ್ರೇಕ್ಷಕರಿಗೂ ಕಾಣಿಸುತ್ತದೆ’ ಎಂದಿದ್ದಾರೆ.
ಸಿನಿಮಾದ ಸಂಪೂರ್ಣ ಚಿತ್ರೀಕರಣ ಗೋವಾದಲ್ಲಿ ನಡೆದಿದೆ. ಮುಂದಿನ ಕೆಲವೇ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ. ‘ಸೆನ್ಸಾರ್ ಮಂಡಳಿಗೂ ಚಿತ್ರವನ್ನು ಕಳಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸೆನ್ಸಾರ್ ಆದ ಮೇಲೆ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ. ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂದು ನಿರ್ದೇಶಕರು ಮಾಹಿತಿ ನೀಡುತ್ತಾರೆ. ಈ ಚಿತ್ರದ ಮೂಲಕ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರು ಶ್ರೀದುರ್ಗ ಪರಮೇಶ್ವರಿ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.